ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ


1949ರಲ್ಲಿ  ಅಂದಿನ ಮದ್ರಾಸ್ ಸರ್ಕಾರದಿಂದ 'ರಾಷ್ಟ್ರಕವಿ' ಎಂದು ಸನ್ಮಾನಿಸಲ್ಪಟ್ಟ ಮಂಜೇಶ್ವರ ಗೋವಿಂದ ಪೈರವರು 23/3/1883ರಂದು ಮಂಜೇಶ್ವರದಲ್ಲಿ ಜನಿಸಿದರು. ಅವರ ತಂದೆ ತಿಮ್ಮಪ್ಪ ಪೈ ತಾಯಿ ಜಾನಕಿ ಪೈ.

ಇವರ ಮೊದಲ ಕವಿತೆ 'ಸುವಾಸಿನಿ' ಸುಮಾರು 1900ರಲ್ಲಿ ಪ್ರಕಟವಾಗಿದೆ. 'ವೈಶಾಖ' ಮತ್ತು 'ಗೊಲ್ಗೊಥಾ' - ಪೈಯವರು ರಚಿಸಿರುವ ಎರಡು ಖಂಡ ಕಾವ್ಯಗಳು. ಇವರು ನವೀನ್ ಚಂದ್ರಸೇನ್ ರ ಬಂಗಾಳಿ 'ಕೃಷ್ಣ ಚರಿತೆ' ಯ ಗದ್ಯಅನುವಾದವನ್ನು 1909ರಲ್ಲಿ ಪ್ರಕಟಿಸಿದರು. 1911ರಲ್ಲಿ ಬೌದ್ಧಸೂತ್ರಗಳ ಕನ್ನಡ ಅನುವಾದವನ್ನು ಪ್ರಕಟಿಸಿದರು. 'ಗಿಳಿವಿಂಡು', 'ಚಿತ್ರಭಾನು ಅಥವಾ 1942', 'ನಂದಾದೀಪ' ಇವು ಪೈಗಳ ಕೆಲವು ಕವನ ಸಂಕಲನಗಳು.

ಪೈಗಳು ಪ್ರಸಿದ್ಧ ಉರ್ದುಕವಿ 'ಉಮರ್ ಖಯ್ಯಂ'ನ ರುಬಾಯಿಗಳನ್ನು ಭಾಷಾಂತರಿಸಿದ್ದರು. ಜಪಾನಿನ 'ನೋ' ನಾಟಕಗಳ ಸವಿಯನ್ನು ತಮ್ಮ ಅನುವಾದಗಳ ಮೂಲಕ ಕನ್ನಡ ಓದುಗರಿಗೆ ಉಣಬಡಿಸಿದ್ದಾರೆ. ಮಹಮದ್ ಇಕ್ಬಾಲರ ಒಂದು ಪದವನ್ನು ಪ್ರಕಟಿಸಿದ್ದಾರೆ.

ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಕೇಶ್ವರ ಚರಿತೆ, ಭಗವಾನ್ ಬುದ್ಧ ಮಹಾಸಂತರನ್ನು ಕುರಿತು ಅವರು ರಚಿಸಿರುವ ಕೃತಿಗಳು. 'ಕನ್ನಡದ ಮೊರೆ' ವ್ಯಕ್ತಿಚಿತ್ರಗಳ ಸಂಕಲನ. ಪೈಗಳು ತಮ್ಮ ಆತ್ಮಕಥೆಯನ್ನು ಸಹಾ ಬರೆದಿದ್ದಾರೆ. ಅವರು ಸಂಪಾದಿಸಿದ ಕೃತಿ 'ಭಕ್ತಿವಾಣಿ'.

ರಾಷ್ಟ್ರಕವಿ ಎಂದು ಗೌರವಿಸಲ್ಪಟ್ಟ ಮೊದಲ ಕವಿ ಮಂಜೇಶ್ವರ ಗೋವಿಂದ ಪೈ1950ರಲ್ಲಿ ಮುಂಬೈಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಒಪ್ಪಲಿಲ್ಲ. ಇವರನ್ನು ಶಿವರಾಮ ಕಾರಂತರು, ಎಂ.ಆರ್.ಶ್ರೀನಿವಾಸ ಮೂರ್ತಿಗಳು ಮತ್ತು ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿ ಶ್ರೀಮಂಜಯ್ಯ ಹೆಗ್ಗಡೆಯವರು ಸಾಕಷ್ಟು ಒತ್ತಡವನ್ನು ಹೇರಿ ಒಪ್ಪಿಸಬೇಕಾಯಿತಂತೆ.

ಇವರ ಕಟ್ಟಕಡೆಯ ಲೇಖನವು 1962ರಲ್ಲಿ ಪ್ರಕಟವಾಯಿತು. ಗೋವಿಂದ ಪೈಗಳು ಸೆಪ್ಟೆಂಬರ್9 1963ರಲ್ಲಿ ಪಂಚಭೂತಗಳಲ್ಲಿ ಲೀನವಾದರು.


- ಸೀಮಾ ಕಂಚೀಬೈಲು

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ದೀಪಾವಳಿ










ಅಪ್ಪನ ಜೇಬಿನ ದುಡ್ಡುಗಳೆಲ್ಲ
ಚಟಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಟ್ಟನೆ ದಾರಿಯ ಹಿಡಿಯುವುವು

ಬಗೆ ಬಗೆ ಬಣ್ಣದ ಹೂಗಳ ರೂಪದಿ
ಹಾರುತ ಬುಸು ಬುಸುಗುಟ್ಟುವುವು
ಉರಿಯನು ಸುರಿಸುತ ಮೊರೆಯುತ ತಿರುಗುತ
ಸರಸರನೆಲ್ಲೆಡೆ ಹರಿಯುವುವು

ಸರುವರ ಕಿವಿಗಳ ಕೊರೆಯುವುವು
ಮೂಗಿನ ಸೆಲೆಗಳನೊಡೆಯುವುವು
ಸಾರವ ತೆರೆಯುತ ಕಡೆಯಲಿ ಕಪ್ಪಗೆ
ನೆಲದಲಿ ದೊಪ್ಪನೆ ಕೆಡೆಯುವುವು

ಅಜ್ಜನ ಮಡಿಯನು ತೊಡೆಯುವುವು
ಅಪ್ಪನ ಜೇಬುಗಳೊಡೆಯುವುವು
ಸಿಡಿಯುವುವು ಸಿಡಿಯುವುವು
ಹರಿಯಿತು ಹರ್ಷವು ದೇಶದಿ

ದೀಪಾವಳಿ ಹಬ್ಬವು ತಾ ಬರುತಿರಲು
ಹೊರಲಾರದೆ ಸಾಹಸದಿ ಪಟಾಕಿಯ
ಹೊರೆಗಳ ಮೆಲ್ಲನೆ ತರುತಿರಲು
ಸಿಡಿವ ಚಟಾಕಿಯ ತರುತಿರಲು

ಹುಡುಗರು ನಲಿಯುತ ಕುಣಿಕುಣಿದಾಡುತ
ಹಿಡಿದು ಚಟಾಕಿಯ ಸುಡುತಿಹರು
ಸಿಡಿದು ಚಟಾಕಿಯು ಮೇಲಕೆ ಹಾರಲು
ನಿಲ್ಲದೆ ಚಪ್ಪಾಳೆ ತಟ್ಟುವರು

ಸಡಗರಗೊಳ್ಳುತ ದೂರದಿ ನೋಡುತ
ಲಲನೆಯರೆಲ್ಲರು ನಗುತಿಹರು
ಸಿಡಿಯೆ ಚಟಾಕಿಯು ನಗುತಿಹರು

ಅಪ್ಪನ ಜೇಬಿನ ದುಡ್ಡುಗಳೆಲ್ಲ
ಚಟಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಟ್ಟನೆ ದಾರಿಯ ಹಿಡಿಯುವುವು
(ಕವಿ : ಎಲ್. ಗುಂಡಪ್ಪ )

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ


 
  ಈ ಗಾದೆಯು ನಮ್ಮ ದೃಷ್ಟಿಕೋನವು ಹೇಗಿರಬೇಕೆಂದು ತಿಳಿಸುತ್ತದೆ. ದೂರದಲ್ಲಿ ಕಾಣುವ ಬೆಟ್ಟಗುಡ್ಡಗಳೆಲ್ಲ ನಾವು ನಿಂತ ಜಾಗದಿಂದ ಚಂದಾಗಿ ನುಣ್ಣಗಿರುವಂತೆ ಕಾಣುತ್ತದೆ. ನಾವಿರುವ ಜಾಗ ಕಲ್ಲುಮುಳ್ಳುಗಳಿಂದ ಕೂಡಿ ಬಲು ಕಠಿಣವಾಗಿರುವಂತೆ ಭಾಸವಾಗುತ್ತದೆ. ಈ ಜಾಗವೂ ಬೆಟ್ಟದ ರೀತಿ ಇದ್ದರೆ ಒಳ್ಳೆಯದು ಎಂದುಕೊಳ್ಳುತ್ತೇವೆ. ಆದರೆ ಬೆಟ್ಟದ ಹತ್ತಿರ ಹೋಗಿ ನೋಡಿದರೆ ಅಲ್ಲಿನ ವಾಸ್ತವದ ಪರಿಚಯವಾಗುತ್ತದೆ. ನಾವಿರುವ ಜಾಗಕ್ಕಿಂತ ಅಲ್ಲಿ ಕಲ್ಲುಗಳು, ದೊಡ್ಡ ದೊಡ್ಡ ಕಡಿದಾದ ಬಂಡೆಗಳು, ಮುಳ್ಳುಕಂಟಿಗಳು, ಹುಲ್ಲು ಪೊದೆಗಳು ಕಂಡು ನಮ್ಮ ಜಾಗವೇ ಒಳ್ಳೆಯದಿತ್ತೆಂಬ ಸತ್ಯದ ಅರಿವಾಗುತ್ತದೆ. 

  ಹಾಗೆಯೇ ನಮ್ಮ ಬದುಕಿಗಿಂತ ಬೇರೆಯವರ ಬದುಕು ಸುಖವಾಗಿ ಕಾಣುತ್ತದೆ. ಆದರೆ ವಾಸ್ತವವಾಗಿ ಅನ್ಯರ ಬದುಕಿನ ಒಳಹೊಕ್ಕಾಗ ಅವರ ಕಷ್ಟದ ಅರಿವು ನಮಗಾಗುತ್ತದೆ. ಆಗ ನಮ್ಮ ಜೀವನವೇ ಒಳ್ಳೆಯದೆಂದುಕೊಳ್ಳುತ್ತೇವೆ. ಒಟ್ಟಾರೆ ಈ ಗಾದೆಯ ಆಶಯವೆಂದರೆ, ಅನ್ಯರಿಗೆ ನಮ್ಮನ್ನು ಹೋಲಿಸುವುದಕ್ಕಿಂತ ನಮ್ಮ ಜೀವನಕ್ಕೆ ಹೊಂದಿಕೊಂಡು ಒಳ್ಳೆಯ ಬಾಳು ನಡೆಸಬೇಕು.

- ಸೀಮಾ ಕಂಚೀಬೈಲು

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು 

ಹಾಸಿಗೆ ಇದ್ದಷ್ಟು ಕಾಲು ಚಾಚು


     ಇದೊಂದು ಬಹು ಜನಪ್ರಿಯ ಗಾದೆ. ಹಾಸಿಗೆ ಇದ್ದಷ್ಟೇ ಏಕೆಕಾಲು  ಚಾಚಬೇಕೆಂದರೆ ಕಾಲು ನೆಲಕ್ಕೆ ತಾಗಿ ತಣ್ಣನೆ ಅನುಭವ ಆಗಿ ನಿದ್ದೆ ಬರದಿರಬಹುದು. ಇದೊಂದು ಉಪಮೇಯವಷ್ಟೇ. ಈ ಗಾದೆಯ ಒಳಾರ್ಥವೇನೆಂದರೆ, ನಮ್ಮ ದುಡಿಮೆಯಷ್ಟೇ ನಮ್ಮ ಖರ್ಚು ಇರಬೇಕೆಂಬುದು. ಇಲ್ಲದೇ ಹೋದಲ್ಲಿ ಚಿಂತೆಯಿಂದ ನಿದ್ದೆ ಬರದೇ ಇರಬಹುದು. ನಮ್ಮಲ್ಲಿ ಇರುವಷ್ಟರಲ್ಲೇ ತೃಪ್ತಿಕರ ಜೀವನ ನಡೆಸಬೇಕು. ಸುಂದರವಾಗಿ, ಸರಾಗವಾಗಿ ನಡೆಯುತ್ತಿರುವ ನಮ್ಮ ಜೀವನ ಹಳಿ ತಪ್ಪಿದ ಗಾಡಿಯಂತಾಗುತ್ತದೆ. 

    ಈ ಗಾದೆಯಲ್ಲಿ ಕೊಟ್ಟಿರುವ ಹಾಸಿಗೆ ಎಂದರೆ ನಮ್ಮ ಸಂಪಾದನೆಯೇ ಆಗಿರಬಹುದು ಅಥವಾ ನಮ್ಮ ಬಳಿ ಇರುವಂತಹ ಸವಲತ್ತುಗಳೇ ಆಗಿರಬಹುದು. ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳುವುದನ್ನೇ ಕಾಲುಚಾಚು ಎಂದು ನಮ್ಮ ಹಿರಿಯರು ಸಾಂಕೇತಿಕವಾಗಿ ಗಾದೆಯ ಮೂಲಕ ತಿಳಿಸಿದ್ದಾರೆ.


- ಸೀಮಾ ಕಂಚೀಬೈಲು 

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ಕನ್ನಡ ರಾಜ್ಯೋತ್ಸವ


ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1ರಂದು  ಆಚರಿಸಲಾಗಿತ್ತದೆ. 1956ರ ನವೆಂಬರ್ 1ರಂದು ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವಂತಹ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಕನ್ನಡ ರಾಜ್ಯದ ಘೋಷಣೆ ಮಾಡಿದರು.

ಕನ್ನಡದ ಕುಲಪುರೋಹಿತರು ಎಂದು ಪ್ರಖ್ಯಾತರಾದ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯನ್ನು 1905ರಲ್ಲಿ ಪ್ರಾರಂಭಿಸಿದರು. ಈ ಏಕೀಕರಣ ಚಳುವಳಿಯಲ್ಲಿ   ಪ್ರಮುಖ ಪಾತ್ರ ವಹಿಸಿದವರೆಂದರೆ - ಅ.ನ.ಕೃಷ್ಣರಾಯರು, ಕೆ.ಶಿವತಾಮ ಕಾರಂತರು, ಕುವೆಂಪುರವರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ ಹಾಗೂ ಇತರರು.

1956ರಲ್ಲಿ ರಾಜ್ಯದ ಘೋಷಣೆ ಮಾಡಿದಾಗ ಮೈಸೂರು ರಾಜ್ಯ ಎಂದು ಹೆಸರಿಟ್ಟರು. ಆಗ ನಮ್ಮ ರಾಜ್ಯದಲ್ಲಿ ಒಡೆಯರ್ ರಾಜರ ಆಳ್ವಿಕೆ ಇತ್ತು. ಅವರನ್ನು ಒಪ್ಪಿಸಿ ಕನ್ನಡ ರಾಜ್ಯ ಸ್ಥಾಪನೆ ಮಾಡಿ ರಾಜರನ್ನು ಮೊದಲ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. 
ಮೈಸೂರು ರಾಜ್ಯ ಎಂದರೆ ಬರೀ ದಕ್ಷಿಣ ಕರ್ನಾಟಕದ ಜನರಿಗೆ ಮನ್ನಣೆ ಕೊಟ್ಟಂತಾಗುತ್ತದೆ ಎಂದು ಉತ್ತರ ಕರ್ನಾಟಕದ ಜನರ ಮಾನ್ಯತೆಗಾಗಿ ಮೈಸೂರು ಎಂಬ ರಾಜ್ಯದ ಹೆಸರನ್ನು ನವೆಂಬರ್ 1, 1973ರಂದು "ಕರ್ನಾಟಕ" ಎಂದು ಬದಲಾಯಿಸಲಾಯಿತು. ಆಗ ದೇವರಾಜ ಅರಸ್ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದರು.

ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬವನ್ನಾಗಿ ಆಚರಿಸುತ್ತೇವೆ. ಅಂದು   ರಾಷ್ಟ್ರಕವಿ ಕುವೆಂಪು ವಿರಚಿತ "ಜಯ ಭಾರತ ಜನನಿಯ ತನುಜಾತೆ"ಯನ್ನು ನಾಡಗೀತೆಯನ್ನಾಗಿ ಹಾಡುತ್ತಾರೆ. ಕರ್ನಾಟಕದ ಧ್ವಜವನ್ನು ಹಾರಿಸಲಾಗುತ್ತದೆ.   ನಮ್ಮ ನಾಡಿನ ಧ್ವಜವು ಹಳದಿ ಹಾಗೂ ಕೆಂಪು ಬಣ್ಣವನ್ನು ಹೊಂದಿದೆ. ಇದು ಅರಿಶಿಣ ಹಾಗೂ ಕುಂಕುಮದ ಬಣ್ಣ ಎನ್ನುತ್ತಾರೆ. ಹಳದಿ ಬಣ್ಣವು ಮಂಗಳಕರ ಹಾಗೂ ಸಕಾರಾತ್ಮಕತೆಯ ಸಂಕೇತವಾದರೆ ಕೆಂಪು ಶುಭ ಹಾಗೂ ಧೈರ್ಯದ ಸಂಕೇತವಾಗಿದೆ.   ಕನ್ನಡ ರಾಜ್ಯೋತ್ಸವದಂದು ಕನ್ನಡಕ್ಕೆ ಸೇವೆ ಸಲ್ಲಿಸಿದ ಕವಿ , ಸಾಹಿತಿಗಳಿಗೆ "ರಾಜ್ಯೋತ್ಸವ ಪ್ರಶಸ್ತಿ" ಪ್ರದಾನ ಮಾಡಲಾಗುತ್ತದೆ

 ನಮ್ಮ ನಾಡಷ್ಟೇ ಅಲ್ಲದೆ ಮುಂಬಯಿ, ದೆಹಲಿ ಮುಂತಾದ ರಾಜ್ಯಗಳಲ್ಲಿರುವ ಕನ್ನಡ ಸಂಘಟನೆಗಳು ಕೂಡ ಆಚರಿಸುತ್ತವೆ. ಅಷ್ಟೇ ಅಲ್ಲದೇ ಹೊರ ದೇಶಗಳಲ್ಲಿರುವ ಕನ್ನಡಿಗರು ಸಹ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.


ಒಟ್ಟಿನಲ್ಲಿ ಹೇಳುವುದಾದರೆ ನವೆಂಬರ್ ತಿಂಗಳು ನಾಡಿನಾದ್ಯಂತ ಕನ್ನಡಮಯವಾಗಿರುತ್ತದೆ. ಆದರೆ ಇದು ಬರೀ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ಇಡೀ ವರ್ಷಪೂರ್ತಿ ಮುಂದುವರಿಯಲಿ ಎಂಬುದು ಪ್ರತಿಯೊಬ್ಬ ಕನ್ನಡಿಗನ ಆಶಯ.

ರಚನೆ : ಸೀಮಾ ಕಂಚೀಬೈಲು

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು 

ಹಚ್ಚೇವು ಕನ್ನಡದ ದೀಪ



ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ


ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ


ಕವಿ :  ಡಿ. ಎಸ್. ಕರ್ಕಿ

ಬಾರಿಸು ಕನ್ನಡ ಡಿಂಡಿಮವ




ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಕ್ಷಯಿಸಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಕವಿ : ಕುವೆಂಪು 

ಬಾರ್ಡೋಲಿಯ ಸರ್ದಾರ್

 
  ಹರಿದು ಹಂಚಿಹೋಗಿದ್ದ ಭಾರತದ ಸುಮಾರು 500 ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತಕ್ಕೆ ಒಂದು ದೇಶದ ಸ್ವರೂಪ ನೀಡಿದ ದೇಶದ ಮೊದಲ ಉಪಪ್ರಧಾನಿ, ಧೀಮಂತ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲರು. ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಪಟೇಲರು ಸದೃಢ ಭಾರತ ನಿರ್ಮಾಣಕ್ಕೆ ಜೀವನವನ್ನು ಮುಡಿಪಾಗಿಟ್ಟವರು.

ವಲ್ಲಭಭಾಯ್  ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ್ ಎಂಬಲ್ಲಿ. ಪಟೇಲರು ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದರು. ಅವರ ವಿದ್ಯಾಭ್ಯಾಸ ನಡಿಯಾದ್, ಪೇಟ್ಲಾಡ್, ಹಾಗೂ  ಬೋರ್ಸಾಡ್ ಎಂಬಲ್ಲಿ  ಮುಂದುವರಿಯಿತು.ತಮ್ಮ 36ನೆಯ ವಯಸ್ಸಿನಲ್ಲಿ ಇಂಗ್ಲೆಂಡ್ ಪ್ರಯಾಣ ಬೆಳೆಸಿದ ವಲ್ಲಭಭಾಯ್ ಲಂಡನ್ನಿನ ಮಿಡ್ಲ್ ಟೆಂಪಲ್ ಇನ್ನ್ ನಲ್ಲಿ ಪ್ರವೇಶ ಪಡೆದುಕೊಂಡರು. ಮೂವತ್ತಾರು ತಿಂಗಳುಗಳ ಕೋರ್ಸನ್ನು ಮೂವತ್ತೇ ತಿಂಗಳಲ್ಲಿ ಮುಗಿಸಿದರು. 

ಪಟೇಲರು 1918ರ ಸುಮಾರಿಗೆ ಕಾಂಗ್ರೆಸ್ ಪಕ್ಷ ಸೇರಿದರು. ನಂತರ ತಮ್ಮ ವಕೀಲಿ ವೃತ್ತಿ, ಮನೆ,ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಖೇಡಾ, ಬರ್ಸಾಡ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳೊಂದಿಗೆ ಪಟೇಲರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಬಾರ್ಡೋಲಿಯ ಸತ್ಯಾಗ್ರಹದಿಂದ ಪಟೇಲರಿಗೆ ಸರದಾರ್ ಎಂಬ ಬಿರುದು ಪ್ರಾಪ್ತವಾಯಿತು.

ಭಾರತವು ಸ್ವತಂತ್ರವಾದ ನಂತರ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಸರ್ದಾರ್ ಪಟೇಲ್‌ರವರೇ ಆಯ್ಕೆಯಾಗಿದ್ದರು. ಆದರೆ ಗಾಂಧೀಜಿಯವರ ಒತ್ತಾಯದ ಮೇಲೆ ಇವರು ಪ್ರಧಾನಿ ಹುದ್ದೆಯಿಂದ ಹಿಂದಕ್ಕೆ ಸರಿದು ಜವಾಹರ್ ಲಾಲ್ ನೆಹರುರವರಿಗೆ ದಾರಿ ಮಾಡಿಕೊಟ್ಟರು.ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ಸುಮಾರು 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ ಒಂದು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ  ಗುರುತರ ಕಾರ್ಯವನ್ನು ಯಶಸ್ವಿಯಾಗಿ ಪಟೇಲರು ಪೂರ್ಣಗೊಳಿಸಿದರು. 

ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಸಂಸ್ಥಾನಿಕ ರಾಜರನ್ನು ಮಾತುಕತೆಯ ಮೂಲಕ ಚಾಣಾಕ್ಷತನದಿಂದ ಒಲಿಸಿದರು. ವಿಲೀನಗೊಳಿಸಲು ಸಿದ್ಧರಿಲ್ಲದ ಸಂಸ್ಥಾನಗಳಿಗೆ   ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ,  ಭಾರತದ ಭಾಗವಾಗಿಸಿದರು.ಈ ಸಂಕೀರ್ಣವಾದ ಕಾರ್ಯವನ್ನು ಕೈಗೂಡಿಸುವ ಮನಃ ಸ್ಥೈರ್ಯ ,  ಹಾಗೂ ಅಚಲತೆ ಇದ್ದವರು ಪಟೇಲರು ಮಾತ್ರ. 

ಭಾರತದಲ್ಲಿದ್ದ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು 'ಉಕ್ಕಿನ ಮನುಷ್ಯ' ರೆಂದೇ ಅಮರರಾದರು. ಸರ್ದಾರ್ ಪಟೇಲರಿಗೆ ೧೯೯೧ ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪಟೇಲ್ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಆಚರಿಸ ಲಾಗುತ್ತಿದೆ. ಅಕ್ಟೋಬರ್‌ 31, 2018,  ಸರ್ದಾರ್ ಪಟೇಲ್ ಅವರ 142ನೇ ಜನ್ಮದಿನಾಚರಣೆಯಂದು ನರ್ಮದಾತೀರದಲ್ಲಿ ಪಟೇಲರ  182 ಮೀಟರ್‌ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈ ಪ್ರತಿಮೆಯು ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಿದೆ. 

ಭಾರತವನ್ನು ಒಟ್ಟುಗೂಡಿಸುವ ಅಸಾಧ್ಯ  ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸಿದ ಈ ಹಿರಿಯ  ಮುತ್ಸದ್ದಿಯನ್ನು ಭಾರತದ ಬಿಸ್ಮಾರ್ಕ್ ಎಂದರೆ ಸರಿ. 







ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ವಾಯು ಮಾಲಿನ್ಯ; ಕಾರಣಗಳು, ಪರಿಣಾಮಗಳು ಹಾಗೂ ನಿಯಂತ್ರಣ

ನಮ್ಮ ವಾತಾವರಣದಲ್ಲಿನ ನಮ್ಮ ಉಸಿರಾಟಕ್ಕೆ ಬೇಕಾಗುವಂತಹ ಆಮ್ಲಜನಕ, ಜಲಜನಕ ಹಾಗೂ ಇನ್ನಿತರ ಅನಿಲಗಳು ಕೆಲವು ವಿಷಯುಕ್ತ ಹಾಗೂ ಹಾನಿಕಾರಕ ಅನಿಲದೊಡನೆ ಬೆರೆತು ಮಾಲಿನವಾಗುತ್ತವೆ, ಇದನ್ನೇ ವಾಯು ಮಾಲಿನ್ಯ ಎನ್ನುತ್ತಾರೆ. 

ವಾಯು ಮಾಲಿನ್ಯದ ಕಾರಣಗಳು :-
  •  ಇಂತಹ ಹಾನಿಕಾರಕವಾದ ಕೆಲವು ಅನಿಲಗಳೆಂದರೆ, ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಕ್ಲೋರೋ ಫ್ಲೋರೋ ಕಾರ್ಬನ್, ನೈಟ್ರೋಜನ್ ಆಕ್ಸೈಡ್ ಇತ್ಯಾದಿ.


  •  ಮತ್ತೊಂದು ಅತಿ ಹಾನಿಕಾರಕ ಅಂಶವಾದ ಸೀಸವು ವಾಹನಗಳ ಹೊಗೆಯಿಂದ ವಾತಾವರಣಕ್ಕೆ ಬಿಡುಗಡೆ ಆಗುತ್ತದೆ. ಇದೊಂದು ಬಹು ವಿಷಕಾರಿ ಲೋಹ. ಮನೆಗಳಿಗೆ ಹಚ್ಚುವ ಬಣ್ಣಗಳು, ಸೀಸದ ಬ್ಯಾಟರಿಗಳು, ಕೂದಲಿಗೆ ಹಚ್ಚುವ ಕೆಲವು ಬಣ್ಣಗಳು ಹೀಗೆ ಅನೇಕ ವಸ್ತುಗಳ ಬಳಕೆಯ ಮೂಲಕ ಹೆಚ್ಚಿನ ಅಂಶದಲ್ಲಿ ಪರಿಸರಕ್ಕೆ ಸೇರ್ಪಡೆಯಾಗುತ್ತಿದೆ. 


  •  ಅತಿ ಮುಂದುವರಿದ ದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯವಾಗುತ್ತಿದೆ. ವಾಹನಗಳಿಂದ ಸೀಸದ ಅಂಶವಲ್ಲದೆ ನೈಟ್ರೋಜನ್ ಆಕ್ಸೈಡ್ ಎಂಬ ವಿಷಕಾರಿ ಅನಿಲ ಕೂಡ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ದೊಡ್ಡ ಕಾರ್ಖಾನೆಗಳು ಹಾಗೂ ವಿದ್ಯುತ್ ಉತ್ಪಾದನಾ ಸ್ಥಾವರಗಳಿಂದ ನೈಟ್ರೋಜನ್ ಅಲ್ಲದೆ, ಸಲ್ಫರ್ ಡೈ ಆಕ್ಸೈಡ್ ಕೂಡ ಬಿಡುಗಡೆಯಾಗುತ್ತಿದೆ. ಈ ವಿಷಕಾರಿ ಅನಿಲವು ಕಾಗದ ತಯಾರಿಸುವ ಕಾರ್ಖಾನೆಗಳಲ್ಲಿ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಉರಿಸುವಿಕೆಯಿಂದ ಹಾಗೂ ಲೋಹಗಳನ್ನು ಕರಗಿಸುವ ಕಾರ್ಖಾನೆಗಳಲ್ಲಿ ಹೆಚ್ಚು ಬಿಡುಗಡೆಯಾಗುತ್ತದೆ. 


  • ಅಡುಗೆ ಮಾಡಲು ಉರಿಸುವ ಕಟ್ಟಿಗೆಗಳಿಂದ ಬರುವ ಹೊಗೆಯಿಂದ ಕೂಡ ವಾತಾವರಣ ಮಾಲಿನ್ಯಗೊಳ್ಳುತ್ತಿದೆ. ಹಾಗೆಯೇ ಕೆಲವು ರಾಸಾಯನಿಕ ಸಿಂಪಡನೆಗಳಿಂದ ಕೂಡ ಮಾಲಿನ್ಯ ಹೆಚ್ಚುತ್ತಿದೆ. ಗಿಡಗಳಿಗೆ ಕೀಟನಾಶಕ ಸಿಂಪಡಣೆ ಮಾಡುವುದರಿಂದ ಕೀಟಗಳು ನಾಶವಾಗಬಹುದು ಆದರೆ ನಾವು ಉಸಿರಾಡುವ ಗಾಳಿಯ ಶುದ್ಧತೆ ಕೂಡ ಅದೇ ಪ್ರಮಾಣದಲ್ಲಿ ನಾಶವಾಗುತ್ತಿದೆ.


  ಮೇಲಿನ ಅಂಶಗಳು ಮಾನವ ನಿರ್ಮಿತವಾದ ಮಾಲಿನ್ಯಗಳಾದರೆ ನೈಸರ್ಗಿಕವಾಗಿ ಕೂಡ ಕೆಲವು ಕಾರಣಗಳಿವೆ. ಅವುಗಳೆಂದರೆ, 
  • ಕಾಡ್ಗಿಚ್ಚು
  • ಬಿರುಗಾಳಿ
  • ಜ್ವಾಲಾಮುಖಿಯ ಸ್ಫೋಟದಿಂದ ಬರುವಂತಹ ಹೊಗೆ
  • ಬ್ಯಾಕ್ಟೀರಿಯಾಗಳ ಕೊಳೆಯುವಿಕೆಯಿಂದ ಬಿಡುಗಡೆಯಾಗುವ ಅನಿಲ.

ಮಾಲಿನ್ಯದ ಪರಿಣಾಮಗಳು : - 

  • ವಾಯು ಮಾಲಿನ್ಯದಿಂದ ಹಲವು ಗಂಭೀರ ಕಾಯಿಲೆಗಳು ಬರುತ್ತವೆ. ಅಷ್ಟೇ ಅಲ್ಲದೆ ಭೂಮಿಯ ಮೇಲಿನ ಜೈವಿಕ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.
  • ಕಾರ್ಬನ್ ಡೈ ಆಕ್ಸೈಡ್ ಅನಿಲದ ಪ್ರಮಾಣ ಹೆಚ್ಚಾದಂತೆಲ್ಲ ಹಸಿರು ಮನೆಯ ಪರಿಣಾಮ ಹೆಚ್ಚಾಗುತ್ತದೆ.
  • ಸಲ್ಫರ್ ಮತ್ತು ನೈಟ್ರೋಜನ್ ಆಕ್ಸೈಡ್ ಗಳ ಸಂಯುಕ್ತಗಳು ವಾತಾವರಣದ ನೀರಿನ ಆವಿಯ ಜೊತೆ ಸೇರಿ ಆಮ್ಲ ಮಳೆ ಸುರಿಸುತ್ತವೆ.  ಇದರಿಂದ ವಾಯು ಮಾಲಿನ್ಯವಲ್ಲದೆ ಜಲ ಮಾಲಿನ್ಯ ಕೂಡ ಉಂಟಾಗುತ್ತದೆ.
  • ರೇಫ್ರಿಜೆರೇಟರ್ ನಲ್ಲಿ ಬಳಸುವ ಕ್ಲೋರೋ ಫ್ಲೋರೋ ಕಾರ್ಬನ್ ನಮ್ಮ ಭೂಮಿಯನ್ನು ಅತಿನೇರಳೆ ಕಿರಣದಿಂದ ರಕ್ಷಿಸುತ್ತಿರುವ ಓಜೋನ್ ಪದರಕ್ಕೆ ಹಾನಿ ಮಾಡುತ್ತಿದೆ.
  • ಹಾಗೆಯೇ ವಾಹನಗಳು ಉಗುಳುವ ಹೊಗೆ ಮತ್ತು ಕಟ್ಟಿಗೆ ಒಲೆಯಿಂದ ಬರುವಂತಹ ಹೊಗೆ ಶ್ವಾಸಕೋಶದ ದೀರ್ಘಕಾಲಿನ ಕಾಯಿಲೆಗಳನ್ನು ತರುತ್ತವೆ.
  • ಅತಿ ಗಂಭೀರ ಕಾಯಿಲೆಗಳಾದ ಕ್ಯಾನ್ಸರ್, ಮೆದುಳು ಹಾಗೂ ನರ ಸಂಬಂಧಿ ಕಾಯಿಲೆಗಳು ಹಾಗೂ ಹಲವಾರು ಜನ್ಮಜಾತ ಕಾಯಿಲೆಗಳಿಗೆ ವಾಯು ಮಾಲಿನ್ಯ ಕಾರಣವಾಗುತ್ತಿದೆ. 

ಮಾಲಿನ್ಯದ ನಿಯಂತ್ರಣದ ಬಗೆ :-
  • ಮನೆಗಳಲ್ಲಿ ಅಡುಗೆ ಮಾಡಲು ಕಟ್ಟಿಗೆಯ ಒಲೆಗಳ ಬದಲು ಹೊಗೆ ಬಾರದಂತಹ ಜೈವಿಕ ಅಡುಗೆ ಅನಿಲದ ಬಳಕೆ.
  • ಹೊರಗೆ ಹೋಗುವಾಗ ಖಾಸಗಿ ವಾಹನದ ಬದಲು ಸಾರ್ವಜನಿಕ ವಾಹನಗಳಿಗೆ ಹೆಚ್ಚು ಒತ್ತು ಕೊಡುವುದು.
  • ಸೀಸ ರಹಿತ ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ
  • ಕ್ಲೋರೋ ಫ್ಲೋರೋ ಕಾರ್ಬನ್ ಉಪಯೋಗಿ ವಸ್ತುಗಳ ನಿರ್ಬಂಧ.
  • ಮಾಲಿನ್ಯ ನಿಯಂತ್ರಣ ಕಾಯ್ದೆ, 1986ರ ಪ್ರಕಾರ ವಾಹನಗಳ ಹೊಗೆ ಉಗುಳಿವಿಕೆಯನ್ನು ಕಾಲಾನುಸಾರ ಪರಿಶೀಲನೆಗೆ ಒಳಪಡಿಸುವುದು ಹಾಗೂ ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು.
  • ಅತಿ ಮುಖ್ಯವಾದ ಅಂಶವೆಂದರೆ ನಮ್ಮ ಸುತ್ತಮುತ್ತಲಿನ ಜನಗಳಿಗೆ ಮಾಲಿನ್ಯದ ಬಗ್ಗೆ ಮಾಹಿತಿ ನೀಡಿ ಅವರನ್ನು ಜಾಗೃತರನ್ನಾಗಿಸುವುದು.


ರಚನೆ: ಸೀಮಾ ಕಂಚೀಬೈಲು 

ನಿಮ್ಮ  ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ಬಾ ಬಾ ಗಿಳಿಯೆ, ಬಣ್ಣದ ಗಿಳಿಯೇ








ಬಾ ಬಾ ಗಿಳಿಯೆ, ಬಣ್ಣದ ಗಿಳಿಯೇ
ಹಣ್ಣನು ಕೊಡುವೆನು ಬಾ ಬಾ,
ಹಸಿರು ಪುಕ್ಕದ ಚಂದದ ಗಿಳಿಯೆ
ನನ್ನೊಡನಾಡಲು ಬಾ ಬಾ.

ಕೆಂಪು ಮೂಗಿನ ಮುದ್ದಿನ ಗಿಳಿಯೆ
ಹಾಡನು ಕಲಿಸುವೆ ಬಾ ಬಾ,
ಮರದಲಿ ಕುಳಿತು ನೋಡುವೆ ಏಕೆ
ಹಾರುತ ಹತ್ತಿರ ಬಾ ಬಾ.

ಠಕ್ಕಿನ ಕಾಮಿ ಮನೆಯೊಳಗಿಲ್ಲ
ಹೆದರುವೆ ಏಕೆ ಬಾ ಬಾ,
ಸೊಕ್ಕಿನ ಟಾಮಿ ಹತ್ತಿರವಿಲ್ಲ
ಕುಣಿಕುಣಿದಾಡುತ ಬಾ ಬಾ.

ಹಾಡುವುದನ್ನು ಕಲಿಸುವೆ ನಿನಗೆ
ಹಾರಲು ಕಲಿಸಲು ಬಾ ಬಾ,
ಹಣ್ಣನು ತಿಂದು, ಹಾಲನು ಕುಡಿದು
ಮುಗಿಲಿಗೆ ಹಾರುವ ಬಾ ಬಾ.


ರಚನೆ : ಶಂಕರಗೌಡ ಗುರುಗೌಡ ಬಿರಾದಾರ

ನಮ್ಮ ನಾಡಹಬ್ಬ - ನವರಾತ್ರಿ

 
 ನವರಾತ್ರಿಯು  ದೇವಿಯನ್ನು ಆರಾಧಿಸುವ ಹಬ್ಬವಾಗಿದೆ. ಇದನ್ನು ಭಾರತದ ಉದ್ದಗಲಕ್ಕೂ ವಿವಿಧ ರೀತಿಯಲ್ಲಿ ನವರಾತ್ರಿ ಅಥವಾ ದಸರಾ ಎಂದು ಆಚರಿಸಲಾಗುತ್ತದೆ. ಜಗನ್ಮಾತೆಯನ್ನು ನವವಿಧವಾಗಿ ಪೂಜಿಸುವುದು ಈ ನವರಾತ್ರಿ ಹಬ್ಬದ ವಿಶೇಷತೆಯಾಗಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ. ಮುಂದೆ ಒಂಭತ್ತು ದಿನವೂ ಕೂಡ ದೇವಿಯನ್ನು ಆರಾಧಿಸಲಾಗುತ್ತದೆ

   ಈ ಪರ್ವವನ್ನು ಕುರಿತು ಕಥೆಗಳು ನಮ್ಮ ಪುರಾಣದಲ್ಲಿ ಸಿಗುತ್ತವೆ. ವಿಜಯದಶಮಿಯಂದು ರಾವಣನ ಮೇಲೆ ಶ್ರೀರಾಮ ವಿಜಯ ಸಾಧಿಸಿದನೆನ್ನಲಾಗಿದೆ. ಇದಲ್ಲದೆ  ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯದಶಮಿಯಾಗಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ಜನರು ತಮ್ಮದೇ ವೈಖರಿಯಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. 

     ನವರಾತ್ರಿ  ಕರ್ನಾಟಕದ ನಾಡಹಬ್ಬ ಆಗಿದ್ದು ಹತ್ತು ದಿನಗಳ ನಡೆಯುವ ವಿಶೇಷ ಹಬ್ಬದಲ್ಲಿ ಒಂಭತ್ತು ದಿನಗಳ ಕಾಲ ದೇವಿಪೂಜೆಯನ್ನು ಮಾಡಲಾಗುತ್ತದೆ. ಹತ್ತನೇಯ ದಿನವೇ ವಿಜಯ ದಶಮಿ, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ ಅಥವಾ ಬನ್ನಿಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ.ಇಲ್ಲಿಯ ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಮೈಸೂರಿನಲ್ಲಿ ವಿಜಯದಶಮಿಯಂದು ಚಾಮುಂಡಿ ಬೆಟ್ಟದಲ್ಲಿರುವ  ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಬಂಗಾರದ ಪಲ್ಲಕ್ಕಿಯಲ್ಲಿ  ಸಕಲ ಸರ್ಕಾರಿ ಹಾಗೂ ರಾಜ ಮರ್ಯಾದೆಯ ಮೂಲಕ ನಡೆಯುತ್ತದೆ. 

   ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯನ್ನು ದುರ್ಗಾ ಪೂಜೆಯಾಗಿ ಆಚರಿಸಲಾಗುತ್ತದೆ. ರಾಜ್ಯದ ಎಲ್ಲೆಡೆ ಈ ಹಬ್ಬವನ್ನು ದುರ್ಗಾ ಪೂಜಾ ಪೆಂಡಾಲುಗಳನ್ನು ಹಾಕಿ ಆಚರಿಸಲಾಗುತ್ತದೆ.  ದುರ್ಗಾ ದೇವಿಯನ್ನು ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರೊಂದಿಗೆ ಪೂಜಿಸಲಾಗುತ್ತದೆ.  ವಿಜಯದಶಮಿಯಲ್ಲಿ, ಭವ್ಯವಾದ ಮೆರವಣಿಗೆ ಯೊಂದಿಗೆ ಪ್ರತಿಮೆಗಳನ್ನು ವಿದ್ಯುಕ್ತವಾಗಿ ನೀರಿನಲ್ಲಿ  ವಿಸರ್ಜಿಸಲಾಗುತ್ತದೆ. 

   ಉತ್ತರ ಭಾರತದಲ್ಲಿ ದಸರಾ ಸಂಭ್ರಮದ ಹತ್ತು ದಿನಗಳೂ ರಾಮಲೀಲಾ ನಡೆಯುತ್ತದೆ. ರಾಮಾಯಣದ ವಿವಿಧ ಘಟನೆಗಳನ್ನು ನಾಟಕದ ಮೂಲಕ ಜನರಿಗೆ ತಿಳಿಸುತ್ತಾರೆ. ಹತ್ತನೆಯ ದಿನ ರಾವಣನ ಪ್ರತಿಕೃತಿಯನ್ನು ಸುಡಲಾಗುತ್ತದೆ. 

  ಗುಜರಾತಿನಲ್ಲಿ  ಗರ್ಭಾ ಎಂಬ  ಮಣ್ಣಿನ ಪಾತ್ರೆಯನ್ನಿಟ್ಟು ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಗರ್ಭಾದ ಜಾನಪದ ಕೋಲಾಟದ ನೃತ್ಯವನ್ನು ಮಾಡಲಾಗುತ್ತದೆ.  ಇದನ್ನು ದಾಂಡಿಯಾ ಎಂದು ಕರೆಯಲಾಗುತ್ತದೆ. 

ಹೀಗೆ ದೇವಿಯನ್ನು ದುರ್ಗಾ, ಕಾತ್ಯಾಯಿನಿ, ಗೌರಿ, ಅಂಬಿಕಾ, ಪಾರ್ವತಿ, ಶರ್ವಾಣಿ, ಶಿವೆ, ಪರಮೇಶ್ವರಿ ಎಂದು ಸ್ತುತಿಸಿ ಸಂಭ್ರಮ ಉತ್ಸಾಹದಿಂದ ನವರಾತ್ರಿಯನ್ನು ಆಚರಿಸಲಾಗುತ್ತದೆ. 


ಕನ್ನಡದ ಮೊದಲುಗಳು - 3


1. ಕನ್ನಡದ ಮೊದಲ ವಚನಕಾರ ಯಾರು?
ದೇವರದಾಸಿಮಯ್ಯ

2. ಹೊಸಗನ್ನಡದ ಮೊದಲ ಮಹಾಕಾವ್ಯ ಯಾವುದು?
ಶ್ರೀರಾಮಾಯಣ ದರ್ಶನಂ

3. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಯಾವುದು?
ಇಂದಿರಾಬಾಯಿ

4. ಕನ್ನಡದ ಮೊದಲ ರಾಷ್ಟ್ರಕವಿ ಯಾರು?
ಮಂಜೇಶ್ವರ ಗೋವಿಂದ ಪೈ

5.   ಕನ್ನಡದ ಮೊದಲ ಹಾಸ್ಯ ಲೇಖಕಿ ಯಾರು?
 ಟಿ ಸುನಂದಮ್ಮ

6.ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ ಯಾರು?
ಕುವೆಂಪು

7.ಕನ್ನಡದ ಮೊದಲ ವಾಕ್ಚಿತ್ರ ಯಾವುದು?
ಸತಿ ಸುಲೋಚನ

8.ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?
ರಣಧೀರ ಕಂಠೀರವ

9. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಯಾರು?
ಹೆಚ್.ವಿ.ನಂಜುಂಡಯ್ಯ

10.ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಯಾವುದು?
ಬೆಂಗಳೂರು (1915)


ಮಕ್ಕಳ ಚುಟುಕುಗಳು


ಇಗೋ ಇಲ್ಲಿವೆ ಚಿಕ್ಕವರಿದ್ದಾಗ ನಾವೆಲ್ಲ ಹೇಳಿಕೊಳ್ಳುತ್ತಿದ್ದ ಚುಟುಕುಗಳು; ಇಂದಿನ ಮಕ್ಕಳಿಗಾಗಿ :-

PC: internet


ಗಣೇಶ ಬಂದ
ಕಾಯಿಕಡಬು ತಿಂದ
ದೊಡ್ಕೆರೇಲಿ ಬಿದ್ದ
ಚಿಕ್ಕೆರೇಲಿ ಎದ್ದ
*******

ಅವ್ವಾ ಅವ್ವಾ ಗೆಣಸs
ಗಡಿಗ್ಯಾಗ ಹಾಕಿ ಕುದಸs
ತುತ್ತ ಮಾಡಿ ಉಣಸs
ಬಾಲವಾಡಿಗ ಕಳಸs

*******

ಉಂಡಾಡಿ ಗುಂಡ
ಅಜ್ಜಿ ಮನೇಗೆ ಹೋದ
ಎಂಟು ಲಾಡು ತಿಂದ
ಹೊಟ್ಟೆ ನೋವು ಎಂದ
ಕೈ ಕಟ್ ಬಾಯ್ ಮುಚ್

*******
ಕಣ್ಣೇ ಮುಚ್ಚೇ ಕಾಡೇಗೂಡೆ
ಉದ್ದಿನ ಮೂಟೆ
ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡ್ದು ಕೊಳ್ಳಿ

******

ಅವಳ ಹೆಸರು ಪದ್ದು
ಬುದ್ಧಿಯಿಲ್ಲ ಪೆದ್ದು
ಮನೆಯಲೆಲ್ಲ ಮುದ್ದು
ತಿನ್ನೋದೆಲ್ಲ ಕದ್ದು
ಒಮ್ಮೆ ಸಿಕ್ಕಿ ಬಿದ್ದು
ಬಿತ್ತು ನಾಲ್ಕು ಗುದ್ದು !

*******

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು


ಸಾಧಾರಣವಾಗಿ ನೋಡಲು ಸಣ್ಣ ಇದ್ದವರು ಅಥವಾ ಸಣ್ಣ ಮಕ್ಕಳು ಅಸಾಧಾರಣ ಸಾಧನೆ ಮಾಡಿದಾಗ ಹೆಚ್ಚಾಗಿ ಈ ಗಾದೆಯನ್ನು ಬಳಸುತ್ತಾರೆ. ಪ್ರಕೃತಿಯ ಸೃಷ್ಟಿಯಲ್ಲಿ ಪ್ರತಿಯೊಂದು ಸಣ್ಣಪುಟ್ಟ ಸೃಷ್ಟಿಗೂ ಅದರದ್ದೇ ಆದ ಮಹತ್ವವಿದೆ. ಉದಾಹರಣೆಗೆ ನೆಲದ ಮೇಲಿನ ಕೀಟಗಳು ಜೈವಿಕ ಕರಗುವಿಕೆಯಲ್ಲಿ ಸಹಕಾರಿ. ಹಾರಾಡುವ ಸಣ್ಣ ಸಣ್ಣ ಕೀಟಗಳು ಹೂವಿನ ಪರಾಗಸ್ಪರ್ಶದಲ್ಲಿ ಸಹಕಾರಿ. ಬಾವಲಿ ಮುಂತಾದ ಪಕ್ಷಿಗಳು ಬೀಜ ಪ್ರಸರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗೆ ನಾವು ಯಾವುದೇ ಜೀವಿಯ ಆಕಾರ ನೋಡಿ ಅವುಗಳ ಶಕ್ತಿಯನ್ನು ನಿರ್ಧರಿಸಬಾರದು.

ಇನ್ನು ಮನುಷ್ಯನ ವಿಷಯಕ್ಕೆ ಬಂದರೆ ಈ ತರಹದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಕ್ರಿಕೆಟ್ ದಿಗ್ಗಜನಾದ ಸಚಿನ್ ತೆಂಡೂಲ್ಕರ್, ಭಾರತದ ಶ್ರೇಷ್ಠ ವಿಜ್ಞಾನಿ ಹಾಗೂ ರಾಷ್ಟ್ರಪತಿಗಳಾಗಿದ್ದ ದಿವಂಗತ ಅಬ್ದುಲ್ ಕಲಾಂ ಅವರು, ದೇಶದ ಅತ್ಯುತ್ತಮ ಪ್ರಧಾನ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇವರ್ಯಾರೂ ದೈಹಿಕವಾಗಿ ಹೆಚ್ಚು ಎತ್ತರವಿರಲಿಲ್ಲ. ಆದರೆ ಇವರು ಮಾಡಿದ ಸಾಧನೆ ಯಾರೂ ಮರೆಯುವಂತಿಲ್ಲ. ಅಷ್ಟೇ ಏಕೆ ನಮ್ಮ ಪುರಾಣ ಕತೆಗಳಲ್ಲಿ ಬರುವ ವಿಷ್ಣುವಿನ ಅವತಾರವಾದ ವಾಮನ ಕೂಡ ಎತ್ತರವಿರಲಿಲ್ಲ. ಅವನನ್ನು ನೋಡಿ ಅಪಹಾಸ್ಯ ಕೂಡ ಮಾಡಿದರು. ಆದರೆ ಅವನು ಬಲಿ ಚಕ್ರವರ್ತಿಯಂತಹ ಮಹಾನ್ ವೀರನನ್ನೇ ತುಳಿದನಲ್ಲ!! 

ಇದೆಲ್ಲದರ ಒಳಾರ್ಥ ಏನೆಂದರೆ ನಾವು ನೋಡಲು ಹೇಗೆ ಇರಲಿ ನಮ್ಮಲ್ಲಿ ಸಾಧಿಸಬೇಕೆಂಬ ಛಲ, ಆತ್ಮವಿಶ್ವಾಸ, ನಂಬಿಕೆ ಹಾಗೂ ದೃಢಸಂಕಲ್ಪ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ. ಸಣ್ಣ ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ದೃಢ ಮನಸ್ಸಿನಿಂದ ಮುಂದುವರೆದರೆ ಗುರಿ ಮುಟ್ಟುವುದು ಖಚಿತ.

ರಚನೆ : ಸೀಮಾ ಕಂಚೀಬೈಲು

ನಿನಿ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು 

ಪರಿಸರ ಮಾಲಿನ್ಯ- ಒಂದು ಪಿಡುಗು

ಪರಿಸರ ಎಂದರೆ ನಮ್ಮ ಸುತ್ತಮುತ್ತಲು ಕಾಣುವ ಕಾಡು, ಗುಡ್ಡಬೆಟ್ಟಗಳು, ಭೂಮಿ, ಆಕಾಶ. ಮಾನವ ಸೇರಿ ಉಳಿದ ಎಲ್ಲ ಜೀವಿಗಳೂ ಇಡೀ ಪರಿಸರದ ಒಂದು ಭಾಗ. ಆದರೆ ಮಾನವ ಬೇರೆಲ್ಲ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿದ್ದಾನೆ. ಇವನ ಅತಿಯಾದ ಬುದ್ಧಿವಂತಿಕೆ ಈಗ ಪರಿಸರಕ್ಕೆ ಮಾರಕವಾಗಿದೆ. ಹೇಗೆಂದು ನೋಡೋಣ.

ಮಾಲಿನ್ಯ ಎಂದರೆ ಅಪಾಯಕಾರಿ ಹಾಗೂ ವಿಷಕಾರಕವಾದ ವಸ್ತುಗಳು ಪರಿಸರಕ್ಕೆ ಸೇರುವುದು. ಈ ವಸ್ತುಗಳು ಭೂಮಿಯ ಮೇಲಿನ ಎಲ್ಲ ಜೀವಿಗಳ ಮೇಲೂ ಪರಿಣಾಮ ಉಂಟು ಮಾಡುತ್ತವೆ ಹಾಗೂ ನೈಸರ್ಗಿಕವಾಗಿ ನಡೆಯುವ ಜೈವಿಕ ಚಕ್ರದ ಮೇಲೂ ಪರಿಣಾಮ ಉಂಟು ಮಾಡುತ್ತದೆ. 

ಮಾಲಿನ್ಯದಲ್ಲಿ ನಾಲ್ಕು ವಿಧಗಳಿವೆ - ಭೂ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ. 

ಮಾನವನ ದುರಾಸೆ, ಸ್ವಾರ್ಥ, ಆಧುನಿಕ ತಂತ್ರಜ್ಞಾನ, ಕೈಗಾರಿಕೀಕರಣ, ನಗರೀಕರಣ ಹಾಗೂ ಆಧುನೀಕರಣದಿಂದ ಇಡೀ ಭೂಮಿಯೇ ನಾಶವಾಗುತ್ತಿದೆ. ಇದು ಬರೀ ನಮ್ಮ ದೇಶದ ಸಮಸ್ಯೆಯೊಂದೇ ಅಲ್ಲ ಎಲ್ಲಾ ದೇಶಗಳ ಜ್ವಲಂತ ಸಮಸ್ಯೆಯಾಗಿದೆ. ಹಾಗೂ ಇದೆಲ್ಲ ಅನರ್ಥಗಳಿಗೂ ಮಾನವನೆ ನೇರ ಹೊಣೆ.

ಮಾನವ ಬುದ್ಧಿಜೀವಿ. ಆದರೆ ತನ್ನ ಅತಿಯಾದ ಕುತೂಹಲ ಹಾಗೂ ಪ್ರಕೃತಿಯ ಸಹಜ ಪ್ರಕ್ರಿಯೆಯಲ್ಲಿ ತನ್ನ ಹಸ್ತಕ್ಷೇಪ ಮಾಡಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದಾನೆ. ಇದರಿಂದ ಬರೀ ಮಾನವ ಕುಲ ಮಾತ್ರವಲ್ಲ ಇಡೀ ಜೀವ ಸಂಕುಲವೇ ಅಸ್ವಸ್ಥವಾಗಿದೆ. ಮಾಲಿನ್ಯವು ಸಾಮಾಜಿಕ , ಆರ್ಥಿಕ, ದೈಹಿಕ, ಮಾನಸಿಕ ಹಾಗೂ ದೈನಂದಿನ ಕ್ರಿಯೆ ಹೀಗೆ ಪ್ರತಿಯೊಂದು ವಿಷಯಗಳಲ್ಲೂ ತನ್ನ ಪ್ರಭಾವ ಬೀರಿದೆ. ಇದರಿಂದಾಗಿ ಹೊಸ ಹೊಸ ಖಾಯಿಲೆ ಹುಟ್ಟಿಕೊಳ್ಳುತ್ತಿವೆ. 

ನಾವು ಈಗಲೇ ಎಚ್ಚೆತ್ತುಕೊಳ್ಳದೆ ಹೋದರೆ ಭಾರಿ ಅನಾಹುತವೇ ಸಂಭವಿಸಬಹುದು. ಆದ್ದರಿಂದ ಈಗಲಾದರೂ ನಾವು ನಮ್ಮ ಸ್ವಾರ್ಥ ಬಿಟ್ಟು ಪರಿಸರದ ಕಡೆ ಗಮನ ಹರಿಸಬೇಕಾಗಿದೆ.
  •  ನಮ್ಮ ಮನೆಯ ಆಸುಪಾಸು ಗಿಡ ಮರಗಳನ್ನು ನೆಡಬೇಕು. 
  • ರಾಸಾಯನಿಕ ವಸ್ತುಗಳ ಹಾಗೂ ಬಳಕೆ ಕಡಿಮೆ ಮಾಡಬೇಕು.
  •  ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. 
  • ಮುಖ್ಯವಾಗಿ ಈಗ ಸಾಕಷ್ಟು ಸಮಸ್ಯೆ ಉಂಟು ಮಾಡಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು.
  • ಅದರ ಬದಲಿಗೆ ಬಟ್ಟೆಯ ಚೀಲ, ಸೆಣಬಿನ ನಾರಿನಿಂದ ತಯಾರಾದ ಚೀಲ ಇತ್ಯಾದಿ ನೈಸರ್ಗಿಕವಾಗಿ ಕರಗುವಂತಹ ವಸ್ತುಗಳನ್ನು ಬಳಸಬೇಕು. 

ಈ ನಮ್ಮ ಭೂಮಿ ಮುಂದಿನ ಪೀಳಿಗೆಗೆ ಹಸಿರಾಗಿ, ಶುದ್ಧವಾದ ಗಾಳಿ, ನೀರು ಹೊಂದಿರಬೇಕೆಂದರೆ ಈಗಲೇ ನಾವು ಎಚ್ಚೆತ್ತುಕೊಂಡು ನಮ್ಮ ಸುತ್ತ ಮುತ್ತಲಿನವರಲ್ಲೂ ಜಾಗೃತಿ ಮೂಡಿಸುವುದು ಅನಿವಾರ್ಯ. ನಮ್ಮ ನಡಿಗೆ ಸ್ವಚ್ಛ ಪರಿಸರದೆಡೆಗೆ.


ರಚನೆ : ಸೀಮಾ ಕಂಚೀಬೈಲು


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ವಸಂತ ಬಂದ ಋತುಗಳ ರಾಜ



PC : Kirti Sharma 

ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !

ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ
ಇನಿಯರ ಬೇಟ ಬನದಲಿ ಬೆಳದಿಂಗಳೂಟ
ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !


ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !
ಬಂದ ವಸಂತ -ನಮ್ಮಾ
ರಾಜ ವಸಂತ !!

ಕವಿ: ಬಿ. ಎಂ.ಶ್ರೀ.


ಬೆಳೆಯುವ ಸಿರಿ ಮೊಳಕೆಯಲ್ಲಿ


ಯಾವುದೇ ಒಂದು ಬೀಜ ಒಡೆದು ಮೊಳಕೆ ಬರುತ್ತಿದ್ದರೆ ಅದನ್ನು ನೋಡಿದ ಕೂಡಲೇ ಇಂತಹ ಗಿಡ ಹುಟ್ಟಬಹುದು, ಉಪಯುಕ್ತವಾದುದೋ ಅಥವಾ ವಿಷದ ಗಿಡವೋ ಎಂದು ತಿಳಿಯುತ್ತದೆ. ಒಂದು ವೇಳೆ ಅದು ಅನುಪಯುಕ್ತ ಅಥವಾ ವಿಷದ ಗಿಡವಾಗಿದ್ದರೆ ಅದನ್ನು ಮೊಳಕೆಯಲ್ಲೇ ಚಿವುಟಿಬಿಡಬಹುದು. ಹಾಗೆಯೇ ಇದರ ಹೋಲಿಕೆಯನ್ನು ಹಿರಿಯರು ನಮ್ಮ ಬೆಳೆಯುತ್ತಿರುವ ಮಕ್ಕಳ ಕುರಿತು ಹೇಳಿದ್ದಾರೆ. ಬೆಳೆಯುತ್ತಿರುವ ಮಕ್ಕಳು ಯಾವುದರಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅದು ಅವರ ಏಳಿಗೆಗೆ ಪೂರಕವೋ ಅಥವಾ ಮಾರಕವೋ ಎಂದು ತಿಳಿದುಕೊಂಡರೆ ಮುಂದೆ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ. ಒಂದು ವೇಳೆ ಅವರು ದಾರಿ ತಪ್ಪುತ್ತಿದ್ದರೆ ತಕ್ಷಣವೇ ಸರಿ ದಾರಿಗೆ ತರಬಹುದು. ಅಥವಾ ಅವರಲ್ಲಿ ಯಾವುದಾದರೂ ಒಳ್ಳೆಯ ಕಲೆ ಇರಬಹುದು ಅದನ್ನು ಗುರುತಿಸಿ ಮುಂದೆ ಅದರಲ್ಲಿ ಸಾಧನೆ ಮಾಡಲು ಮಕ್ಕಳನ್ನು ಪ್ರೇರೇಪಿಸಬಹುದು.
 ಬೆಳೆಯುವ ಮಕ್ಕಳ ನಡತೆ  ಪೋಷಕರಾದವರು ಗುರುತಿಸಬೇಕಾದ ಬಹು ಮುಖ್ಯ ಅಂಶ. ಮಕ್ಕಳ ಭವಿಷ್ಯ ರೂಪಿಸಲು ಇದುವೇ ಸರಿಯಾದ ಸಮಯ ಎಂಬುದು ಈ ಗಾದೆಯ ಒಳಾರ್ಥ.


ರಚನೆ  : ಸೀಮಾ ಕಂಚೀಬೈಲು


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಎಳೆಯುತ ಗಾಡಿ ! ಎತ್ತಿನ ಜೋಡಿ



ಎಳೆಯುತ ಗಾಡಿ ! ಎತ್ತಿನ ಜೋಡಿ
ದಡ ಬಡ ಸದ್ದಿನ ನಮ್ಗಾಡಿ


ಕೊರಳಿಗೆ ಗ೦ಟೆ ! ಕ೦ಚಿನ ಗ೦ಟೆ
ಘಣ ! ಘಣ ! ಗ೦ಟೆ
ಝಣ ! ಝಣ ! ಝಣ ! ಗ೦ಟೆ

ಕೊ೦ಬಿನ ಕಳಸಕೆ ಕಟ್ಟಿದ ಗೆಜ್ಜೆ
ಕಡಾಣಿ ಕ೦ಬಿಗೆ ಹಾಕಿದ ಗೆಜ್ಜೆ
ಝಣ ! ಝಣ ! ಝಣ ! ಗೆಜ್ಜೆ

ತಾಳಕೆ ಇಡುತಿಹ ಎತ್ತಿನ ಹೆಜ್ಜೆ
ಘಲು ! ಘಲು ! ಘಲು ! ಗೆಜ್ಜೆ
ಘಲು ! ಘಲು ! ಘಲು ! ಗೆಜ್ಜೆ

ಗಾಲಿಯು ಉರುಳುವ ಕಟಕಟ ಸದ್ದು
ಗಾಡಿಯು ಓಡುವ ದಡ ಬಡ ಸದ್ದು
ದಡ ! ಬಡ ! ದಡ ! ಸದ್ದು

ಕನ್ನಡ ನಾಡಿನ ಹಣ್ಣುಗಳು








ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತಳೆ

ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು

ಕೊಳ್ಳಿರಿ ಹಿಗ್ಗನು ಹರಿಸುವವು
ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ

ಬೆಳಗಾವಿಯ ಸವಿ ಸಪೋಟ
ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು
ದೇಹದ ಬಲವನು ಬೆಳೆಸುವವು

ಗಂಜಾಮ್ ಅಂಜೀರ್
ತುಮಕೂರ್ ಹಲಸು

ಧಾರವಾಡದ ಆಪೂಸು
ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ ||

- ಕಯ್ಯಾರ ಕಿಞ್ಞಣ್ಣ ರೈ

ಕೈ ಕೆಸರಾದರೆ ಬಾಯಿ ಮೊಸರು

ಈ ಸಾರಿ ನಾವು ಹೊಸ ಅಂಕಣ ಪ್ರಾರಂಭಿಸುತ್ತಿದ್ದೇವೆ. ಅದು ಗಾದೆಗಳ ವಿಸ್ತರಣೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನುಡಿಗಟ್ಟು ಇದೆ. ನಮ್ಮ ಹಿರಿಯರು ತಮ್ಮ ಜೀವನಾನುಭವದಿಂದ ಸಾವಿರಾರು ಗಾದೆಗಳನ್ನು  ಬರೆದರು. ಇತ್ತೀಚಿನ ದಿನಗಳಲ್ಲಿ ಗಾದೆಗಳನ್ನು ಬಳಸುವುದನ್ನು ಎಲ್ಲರೂ ಕಡಿಮೆ ಮಾಡಿದ್ದೇವೆ. ಹೀಗಾಗಿ ನಮಗೆ ಗೊತ್ತಿರುವ ಗಾದೆಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. 

ಕೈ ಕೆಸರಾದರೆ ಬಾಯಿ ಮೊಸರು
ರೈತನು ಕೆಸರು ಗದ್ದೆಯಲ್ಲಿ ಇಡೀ ವರ್ಷ ಕಷ್ಟ ಪಟ್ಟು ದುಡಿದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯ. ಇದೊಂದು ಉದಾಹರಣೆ ಅಷ್ಟೇ. ಹೀಗೆ  ನಾವು ಯಾವುದೇ ಕೆಲಸ ಫಲ ಕೊಡಬೇಕೆಂದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಹೇಗೆ ಒಬ್ಬ ಶಿಲ್ಪಿ ತನ್ನ ಪರಿಶ್ರಮದಿಂದ ಒಂದು ಬಂಡೆಗಲ್ಲನ್ನು ಕೆತ್ತಿ ಸುಂದರ ಶಿಲ್ಪ ಕಲಾಕೃತಿಯನ್ನಾಗಿ ಮಾಡುವನೋ ಹಾಗೆಯೇ ನಮ್ಮ ಕೆಲಸವನ್ನು ಗಮನವಿಟ್ಟು ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳಿಗೂ ಈ ಮಾತು ಅನ್ವಯಿಸುತ್ತದೆ. ಶಿಕ್ಷಕರು ಮಾಡಿದ ಪಾಠಗಳನ್ನು ಗಮನ ಇಟ್ಟು ಓದಿದರೆ ಒಂದು ಒಳ್ಳೆಯ ಗುರಿ ಸಾಧಿಸಬಹುದು. ಆಲಸಿಗಳಾಗದೆ ಶ್ರಮದಿಂದ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡರೆ ಗಮನೀಯ ಸಾಧನೆಗೆ ನಾಂದಿಯಾಗುತ್ತದೆ ಎಂಬುದು ಈ ಗಾದೆಯ ಅರ್ಥ.


ರಚನೆ : ಸೀಮಾ ಕಂಚೀಬೈಲು


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ಗಣೇಶ ಚತುರ್ಥಿ

ಗಣೇಶ ಚತುರ್ಥಿಯು ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಹಾಗೂ ವೈಭವದಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜಿಸಲಾಗುತ್ತದೆ. 

    ಗಣೇಶ ಚತುರ್ಥಿಯ ಸಿದ್ಧತೆಗಳು ಒಂದು ತಿಂಗಳ ಮೊದಲಿನಿಂದಲೆ ಆರಂಭಗೊಳ್ಳುತ್ತವೆ. ಈ ಹಬ್ಬವು ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಸುಮಾರು ಹತ್ತು ದಿನಗಳ ಕಾಲ ನಡೆಯುತ್ತದೆ. ಮೊದಲನೆ ದಿನ ಮನೆ, ಮನೆಯಲ್ಲೂ ಸಂಭ್ರಮ ಕಳೆಗಟ್ಟುತ್ತದೆ. ವರ್ಣರಂಜಿತವಾಗಿ ಅಲಂಕೃತವಾದ   ಮಂಟಪಗಳಲ್ಲಿ ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ. ಮನೆಗಳನ್ನು ಅಲಂಕರಿಸಲಾಗುತ್ತದೆ. ಶಾಸ್ತ್ರೋಕ್ತವಾಗಿ ವಿನಾಯಕನ ಪೂಜಿಸಲಾಗುತ್ತದೆ.ಈ ಹಬ್ಬದ ಸಂದರ್ಭದಲ್ಲಿ ಹಲವಾರು ಅಡುಗೆಗಳನ್ನು ಮತ್ತು ಖಾದ್ಯಗಳನ್ನು ಮಾಡಲಾಗುತ್ತದೆ.  ಆದರೆ ಮೋದಕ ಅಥವಾ ಕಡುಬುಗಳ ನೈವೇದ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. 


    ಮೊದಲು ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. 1893ರಲ್ಲಿ ಸಮಾಜ ಸುಧಾರಕ ಮತ್ತು ಸ್ವಾತಂತ್ರ್ಯ ಯೋಧ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅದಕ್ಕೆ ಸಾರ್ವಜನಿಕ ಸ್ವರೂಪ ನೀಡಿದರು.ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಕಲೆಯುವ ತಾಣವಾಯಿತು. 


    ಹೀಗೆ ಗಣೇಶ ಉತ್ಸವ ಸಾರ್ವಜನಿಕ ಉತ್ಸವವಾಗಿ ಪರಿವರ್ತನೆಯಾಯಿತು. ಅದರಂತೆ ಈಗಲೂ ಸ್ಥಳೀಯ ಸಮೀತಿಗಳು ಪೆಂಡಾಲ್‌ಗಳನ್ನು ಹಾಕಿ ಬೃಹತ್ ಗಣಪತಿಯ ವಿಗ್ರಹಗಳನ್ನು ಇರಿಸುತ್ತಾರೆ. ಈ ಪೆಂಡಾಲ್‌ಗಳಲ್ಲಿ ಗಣಪತಿಯ ಉತ್ಸವವದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ.11ನೇ ದಿನ ವಿಗ್ರಹವನ್ನು  ನೃತ್ಯ, ಹಾಡು ಬಾಜಾಬಜಂತ್ರಿಯೊಂದಿಗೆ ಬೀದಿಗಳಲ್ಲಿ  ಮೆರವಣಿಗೆ ಮಾಡಲಾಗುತ್ತದೆ. ಜನರು ಸಹ ಉತ್ಸಾಹದಿಂದ ಅದರಲ್ಲಿ ಕುಣಿಯುತ್ತಾ ಮತ್ತು ಹಾಡುತ್ತ ಪಾಲ್ಗೊಳ್ಳುತ್ತಾರೆ. ನಂತರ ಗಣೇಶನ ವಿಗ್ರಹವನ್ನು ಕೊಂಡೊಯ್ದು ನದಿ, ಕೆರೆ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. 

    ಸಿದ್ಧಿ ದಾಯಕನಾದ, ಬುದ್ಧಿಗೆ ಅಧಿದೇವತೆಯೂ ಆದ, ವಿಘ್ನ ನಿವಾರಕನ ಆರಾಧನೆಯು ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬವಾಗಿದೆ. 



ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ಕರ್ನಾಟಕದ ಜಲ ಸಂಪನ್ಮೂಲ

ಕರ್ನಾಟಕದ ಪ್ರಮುಖ ನದಿಗಳು:

ತುಂಗಭದ್ರಾ, ಕೃಷ್ಣ, ಕಾವೇರಿ, ಗೋದಾವರಿ, ಘಟಪ್ರಭಾ, ಅರ್ಕಾವತಿ, ವೇದಾವತಿ, ಷಿಂಷಾ, ಕಬಿನಿ, ಮಹದಾಯಿ, ಕಾಳಿ, ಶರಾವತಿ, ವಾರಾಹಿ, ಭದ್ರಾ, ನೇತ್ರಾವತಿ, ತುಂಗಾ, ಅಘನಾಶಿನಿ, ಭೀಮಾ

ರಾಜ್ಯದ ಪ್ರಮುಖ ಜಲ ವಿದ್ಯುತ್ ಯೋಜನೆಗಳು :

  • ಶಿವನ ಸಮುದ್ರ - ಕಾವೇರಿ 
  • ಶಿಂಷಾ ಯೋಜನೆ – ಕಾವೇರಿ
  • ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಮತ್ತು
  • ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರ – ಶರಾವತಿ
  • ಸೂಪಾ ,ನಾಗಝರಿ, ಕದ್ರ ,ಕೊಡಪಳ್ಳಿ ಯೋಜನೆ –  ಕಾಳಿನದಿ
  •  ವಾರಾಹಿ ಯೋಜನೆ – ವಾರಾಹಿ ನದಿ
  • ಮಾರಿಕಣಿವೆ – ವೇದಾವತಿ
  • ಆಲಮಟ್ಟಿ – ಕೃಷ್ಣ ನದಿ
  • ಭದ್ರ ಜಲಾಶಯ - ತುಂಗಾಭದ್ರ ನದಿ
  • ಹೊಸಪೇಟೆ ಜಲಾಶಯ  – ತುಂಗಾಭದ್ರ ನದಿ


ರಾಜ್ಯದ  ಪ್ರಮುಖ ಜಲಪಾತಗಳು

  • ಜೋಗ ಜಲಪಾತ – ಶರಾವತಿ ನದಿ
  • ಗೊಕಾಕ್ ಜಲಪಾತ – ಘಟಪ್ರಭ ನದಿ
  • ಮಾಗೋಡು ಜಲಪಾತ – ಬೆಡ್ತಿ ನದಿ
  • ಬಂಡಾಜೆ ಜಲಪಾತ – ನೇತ್ರಾವತಿ ನದಿ
  • ಉಂಚಳ್ಳಿ ಜಲಪಾತ- ಅಘನಾಶಿನಿ ನದಿ
  • ಛಾಯಭಗವತಿ ಜಲಪಾತ – ದೋಣಿನದಿ
  • ಚುಂಚನಕಟ್ಟೆ, ಶಿಂಷಾ ಜಲಪಾತ - ಕಾವೇರಿ ನದಿ
  •  ಭರಚುಕ್ಕಿ,ಗಗನಚುಕ್ಕಿ ಜಲಪಾತ – ಕಾವೇರಿ ನದಿ

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು



ಬಣ್ಣದ ಗೊಂಬೆ









ಮರದಲಿ ಮಾಡಿದ ಚೆಲುವಿನ ಗೊಂಬೆ
ಕರಚಳಕದಿ ಕೊರೆ ಕೊರೆದಿಹ ಗೊಂಬೆ
ಗರ ಗರ ತಿರುಗುವ ಮಾಟದ ಗೊಂಬೆ
ಕಿರಿಯರು ಹಿರಿಯರು ಮೆಚ್ಚುವ ಗೊಂಬೆ

ಚೆನ್ನಪಟ್ಟಣದ ಬಣ್ಣದ ಗೊಂಬೆ
ಚಿನ್ನದ ಹಾಗೆ ಹೊಳೆಯುವ ಗೊಂಬೆ
ರನ್ನದ ಹಾಗೆ ಮಿನುಗುವ ಗೊಂಬೆ
ಕಣ್ಣನು ಮಿಟುಕಿಸಿ ಆಡುವ ಗೊಂಬೆ

ಪಿಂ ಪಿಂ ಪಿಂ ಪಿಂ ಎನ್ನುವ ಗೊಂಬೆ
ಕು೦ಯ ಕು೦ಯ ಕು೦ಯ ಕು೦ಯ ಎನ್ನುವ ಗೊಂಬೆ
ಕೊಳ್ಳಿರಿ ಮಕ್ಕಳು ಪೀಂ ಪೀಂ ಗೊಂಬೆ
ಕೊಳ್ಳಿರಿ ಕ್ಯುಮ್ ಕ್ಯುಮ್ ಎನ್ನುವ ಗೊಂಬೆ

ಬನ್ನಿರಿ ಬನ್ನಿರಿ ಮುಂದಕೆ ನುಗ್ಗಿ
ಚನ್ನಿಗ ಬಂದನು ಭರದಿಂ ನುಗ್ಗಿ
ಕಂದನಿಗೆನ್ನುತ ನೋಡಿದ ಬಾಗಿ
ಗೊಂಬೆಯ ಕೊಂಡನು ಹರ್ಷಿತನಾಗಿ

ಕವಿ:- ಶಾ೦ತಿರಾಂ


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಹತ್ತು ಹತ್ತು ಇಪ್ಪತ್ತು



ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು

ಇಪ್ಪತ್ತು ಹತ್ತು ಮೂವತ್ತು
ಕೈಯಲಿ ಒಂದು ಕಲ್ಲಿತ್ತು

ಮೂವತ್ತು ಹತ್ತು ನಲವತ್ತು
 ಎದುರಿಗೆ ಮಾವಿನ ಮರವಿತ್ತು

ನಲವತ್ತು ಹತ್ತು ಐವತ್ತು
ಮರದಲಿ ಕಾಯಿಯು ತುಂಬಿತ್ತು

ಐವತ್ತು ಹತ್ತು ಅರವತ್ತು
ಕಲ್ಲನು ಬೀರಿದ ಸಂಪತ್ತು

ಅರವತ್ತು ಹತ್ತು ಎಪ್ಪತ್ತು
ಕಾಯಿಯು ತಪತಪ ಉದುರಿತ್ತು

ಎಪ್ಪತ್ತು ಹತ್ತು ಎಂಭತ್ತು
ಮಾಲಿಯ ಕಂಡನು ಸಂಪತ್ತು

ಎಂಭತ್ತು ಹತ್ತು ತೊಂಭತ್ತು
ಕಾಲುಗಳೆರಡು ನಡುಗಿತ್ತು

ತೊಂಭತ್ತು ಹತ್ತು ನೂರು
ಮನೆಯನು ತಲುಪಿದ ಸಂಪತ್ತು



ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಕರುನಾಡನ್ನು ತಿಳಿಯೋಣ


ಮೈಸೂರು ರಾಜ್ಯದ ಸ್ಥಾಪನೆ: 1 ನವೆಂಬರ್ 1956
ನವೆಂಬರ್ 1,1973 ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
ರಾಜಧಾನಿ: ಬೆಂಗಳೂರು
ಭಾಷೆ : ಕನ್ನಡ
ಚಿಹ್ನೆ : ಗಂಡಬೇರುಂಡ
ನಾಡಗೀತ :ಜಯ ಭಾರತ ಜನನಿಯ ತನುಜಾತೆ (ಕವಿ:ಕುವೆಂಪು)
ಜಿಲ್ಲೆಗಳು : 30
ತಾಲ್ಲೂಕುಗಳು : ಸುಮಾರು 220
ಶಾಸಕಾಂಗ : ದ್ವಿಸಭೆ (224 + 75)
ವಿಸ್ತೀರ್ಣ : 1,91, 791 ಚದರ ಕಿಮಿ

ಪ್ರಮುಖ ನಗರಗಳು :
ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು,
ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಯಪುರ ಮತ್ತು ಬೆಳಗಾವಿ

ಸ್ವಾಭಾವಿಕ ವಿಭಾಗಗಳು :

1. ಕರಾವಳಿ
2. ಮಲೆನಾಡು
3. ಬಯಲು ಸೀಮೆ

ಕರ್ನಾಟಕ ಪ್ರಮುಖ ಅಭಯಾರಣ್ಯಗಳು :

  • ಬಂಡೀಪುರ ಅಭಯಾರಣ್ಯ, 
  • ಬನ್ನೇರುಘಟ್ಟ ಅಭಯಾರಣ್ಯ, 
  • ನಾಗರಹೊಳೆ ಅಭಯಾರಣ್ಯ, 
  •  ಕುದುರೆಮುಖ
  •  ಅಂಶಿ ಅಭಯಾರಣ್ಯ. 

ಕರ್ನಾಟಕ ವನ್ನು ಆಳಿದ ಪ್ರಮುಖ ರಾಜವಂಶಗಳು :

  • ಶಾತವಾಹನರು
  • ಕದಂಬರು
  • ಗಂಗರು
  • ಬಾದಾಮಿಯ ಚಾಳುಕ್ಯರು
  • ರಾಷ್ಟ್ರಕೂಟರು
  • ಕಲ್ಯಾಣದ ಚಾಳುಕ್ಯರು
  • ಹೊಯ್ಸಳರು
  • ಬಹಮನಿ ಸುಲ್ತಾನರು
  • ಮೈಸೂರಿನ ಒಡೆಯರು 


ಪ್ರಮುಖ ಐತಿಹಾಸಿಕ ಸ್ಥಳಗಳು:

  • ಬಾದಾಮಿ, ಐಹೊಳೆ, ಪಟ್ಟದಕಲ್ಲು
  • ಬೇಲೂರು, ಹಳೇಬೀಡು, 
  • ಶ್ರವಣಬೆಳಗೊಳ, ಸಕಲೇಶಪುರ
  • ಹಂಪೆ
  • ವಿಜಯಪುರ
  • ಮೈಸೂರು
  • ಶ್ರೀರಂಗಪಟ್ಟಣ, 
  • ಮೇಲುಕೋಟೆ, 
  • ಚಿತ್ರದುರ್ಗ
  • ಭದ್ರಾವತಿ
  • ಬೀದರ್
  • ಬನವಾಸಿ
  • ಉಡುಪಿ

ಕರ್ನಾಟಕದಲ್ಲಿ ಜನಿಸಿದ ಬ್ಯಾಂಕುಗಳು

  • ಕೆನರಾ ಬ್ಯಾಂಕ್
  • ಸಿಂಡಿಕೇಟ್ ಬ್ಯಾಂಕ್
  • ಕಾರ್ಪೊರೇಷನ್ ಬ್ಯಾಂಕ್
  • ವಿಜಯ ಬ್ಯಾಂಕ್
  • ವೈಶ್ಯಾ ಬ್ಯಾಂಕ್
  • ಕರ್ನಾಟಕ ಬ್ಯಾಂಕ್
  • ಸ್ಟೇಟ್ ಬ್ಯಾಂಕ್ ಆಫ್ ಮೈಸೂರು


ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳು :

  • ಮೈಸೂರು ವಿಶ್ವವಿದ್ಯಾಲಯ, ಮೈಸೂರು
  • ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
  • ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
  • ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ
  • ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ
  • ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು
  • ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ
  • ತುಮಕೂರು ವಿಶ್ವವಿದ್ಯಾಲಯ, ತುಮಕೂರು
  • ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
  • ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
  • ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು
  • ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ
  • ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
  • ಕೃಷಿ ವಿಶ್ವವಿದ್ಯಾಲಯ, ಧಾರವಾಡ
  • ಕೃಷಿ ವಿಶ್ವವಿದ್ಯಾಲಯ, ರಾಯಚೂರು
  • ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
  • ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ
  • ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ
  • ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
  • ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
  • ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು
  • ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು
  • ಕನ್ನಡ ವಿಶ್ವವಿದ್ಯಾಲಯ, ಹಂಪಿ
  • ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿ





ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಶಿಕ್ಷಕರ ದಿನಾಚರಣೆ


ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ 
ಗುರುಸಾಕ್ಷಾತ್ ಪರಃ ಬ್ರಹ್ಮ ತಸ್ಮೈಶ್ರೀ ಗುರವೇ ನಮಃ...

     
 ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ. ವಿದ್ಯಾರ್ಥಿ ಎಂಬ ಕಲ್ಲನ್ನು, ಕೆತ್ತಿ, ಅದರಿಂದ ಒಂದು ಹೊಸ ರೂಪವನ್ನು ಹೊರತಂದಾಗ ಮಾತ್ರ ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಹೀಗೆ ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು. ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ , ಶಿಕ್ಷಕರ ದಿನಾಚರಣೆ. ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ಆಚರಿಸಲಾಗುತ್ತಿದೆ. 


       ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಯೋಗದಾದ ನೀಡಿದ  ಭಾರತದ ಮೊದಲ ಉಪ ರಾಷ್ಟ್ರಪತಿ ಹಾಗೂ ದ್ವಿತೀಯ ರಾಷ್ಟ್ರಪತಿ,  ಶಿಕ್ಷಕ, ದಾರ್ಶನಿಕ  ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನವನ್ನು  ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತೇವೆ. 

     ಈ ದಿನದಂದು ಮಕ್ಕಳಿಗೆ ಎಲ್ಲಿಲ್ಲದ  ಹಬ್ಬದ ಸಂಭ್ರಮ. ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಚಿಕ್ಕ ಚಿತ್ರಗಳನ್ನು ಪುಸ್ತಕಗಳ ಮೇಲೆ ಅಂಟಿಸಿ ಸಂತಸಪಡುತ್ತಾರೆ. ಶಿಕ್ಷಕರ ಕುರಿತು  ಭಾಷಣ ಮಾಡಿ ಸಂತಸದಿಂದ ಬೀಗುತ್ತಾರೆ. ವಿದ್ಯಾರ್ಥಿಗಳು  ತಮ್ಮ ನೆಚ್ಚಿನ ಶಿಕ್ಷಕರಿಗಾಗಿ  ಶುಭಸಂದೇಶಗಳನ್ನೂ  ಗ್ರೀಟಿಂಗ್ ಕಾರ್ಡ್ಗಳನ್ನೂ  ತಮ್ಮ ಕೈಯಿಂದ ಮಾಡಿ ಕೊಡುತ್ತಾರೆ. .ಇಷ್ಟೇ ಅಲ್ಲದೆ  ವಿದ್ಯಾರ್ಥಿಗಳು  ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆ ನೀಡಿ ಮೆಚ್ಚುಗೆ ಪಡೆಯುವ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇದರಿಂದ ಶಿಕ್ಷಕರಿಗೂ ತಾವು ವಿದ್ಯಾರ್ಥಿಗಳ ವಲಯದಲ್ಲಿ ಎಷ್ಟು ಜನಪ್ರಿಯರಾಗಿದ್ದೇವೆ ಎಂಬ ಹೆಮ್ಮೆ .  ಎಲ್ಲಾ  ಶಾಲೆಗಳು ತಮ್ಮ ಹಿರಿಯ ವರ್ಗದ  ವಿದ್ಯಾರ್ಥಿಗಳಿಗೆ ಈ ಒಂದು ದಿನದ ಮಟ್ಟಿಗೆ ಶಿಕ್ಷಕನಾಗುವ ಅವಕಾಶವನ್ನು ಮಾಡಿಕೊಡುತ್ತವೆ. ಮಕ್ಕಳು ಕೂಡ ಈ ಜವಾಬ್ದಾರಿಯನ್ನು ತುಂಬಾ ಖುಷಿಯಿಂದ  ನಿರ್ವಹಿಸುತ್ತಾರೆ 

       ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿಗೆ ಶಿಕ್ಷಕರೇ ಮೊದಲ ಆದರ್ಶ. ಇಂಥ ಸ್ಥಿತಿಯಲ್ಲಿ ಶಿಕ್ಷಕನ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಹಸಿ ಮಣ್ಣಿನ ಮುದ್ದೆಯಂತೆ ಇರುವ ಮಗುವಿನ ಮನಸ್ಸನ್ನು ತಿದ್ದಿ ತೀಡಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು.


       ಗುರು ಎಂದರೆ  ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಬೆಳಕಿನ  ಕರೆದುಕೊಂಡು ಹೋಗುವ ಮಾರ್ಗದರ್ಶಕ . ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು .


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ

ಧನ್ಯವಾದಗಳು




ಗಾಳಿಪಟ








ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೊಸಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ

ದಾರವ ಜಗ್ಗಿ
ದೂರದ ನಗಿಸುವ ನನ್ನ ಪಟ


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಜ್ಞಾನಪೀಠ ಯಾರಿಗೆ? ಯಾವಾಗ?




ಕುವೆಂಪು
ಕೃತಿ : ಶ್ರೀ ರಾಮಾಯಣ ದರ್ಶನಂ
ವರ್ಷ :  1967

ದ. ರಾ. ಬೇಂದ್ರೆ
ಕೃತಿ : ನಾಕುತಂತಿ
ವರ್ಷ : 1973

ಶಿವರಾಮ ಕಾರಂತ
ಕೃತಿ : ಮೂಕಜ್ಜಿಯ ಕನಸುಗಳು
ವರ್ಷ :  1977

ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕೃತಿ : ಚಿಕವೀರ ರಾಜೇಂದ್ರ
ವರ್ಷ :1983

ವಿ. ಕೃ. ಗೋಕಾಕ
ಕೃತಿ : ಭಾರತ ಸಿಂಧುರಶ್ಮಿ
ವರ್ಷ :1990

ಯು. ಆರ್. ಅನಂತಮೂರ್ತಿ
ಕೃತಿ :  ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವರ್ಷ :  1994

ಗಿರೀಶ್ ಕಾರ್ನಾಡ್
ಕೃತಿ : ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವರ್ಷ :  1998

ಚಂದ್ರಶೇಖರ ಕಂಬಾರ
ಕೃತಿ :   ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವರ್ಷ :  2010


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ನಮ್ಮ ಶಾಲೆ



    ಶಾಲೆ ಎಂದರೆ ಶಿಸ್ತು, ಶಿಕ್ಷಣ, ಶಿಕ್ಷಕರು, ಗೆಳೆಯರು ಮುಂತಾದ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ ಅತ್ಯಂತ ದೊಡ್ಡದು. ಪ್ರತಿಯೊಂದು ಮಕ್ಕಳಿಗೂ ತಮ್ಮ ತಮ್ಮ ಶಾಲೆಯ ಬಗ್ಗೆ ಹೆಮ್ಮೆ.

    ನಮ್ಮ ಶಾಲೆಯಲ್ಲಿ ಒಳ್ಳೆಯ ಹಾಗೂ ನುರಿತ ಶಿಕ್ಷಕರಿದ್ದಾರೆ. ನಮಗೆ ಅರ್ಥವಾಗುವ ಹಾಗೆ ಉದಾಹರಣೆಯೊಂದಿಗೆ ಪಾಠ ಮಾಡುತ್ತಾರೆ. ನಮ್ಮ ಶಾಲೆಯ ಫಲಿತಾಂಶ ರಾಜ್ಯಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟಿದೆ. ರಸಪ್ರಶ್ನೆ, ಪ್ರತಿಭಾ ಕಾರಂಜಿ, ಹಾಡಿನ ಸ್ಪರ್ಧೆ ಹೀಗೆ ಮುಂತಾದ ಸ್ಫರ್ಧೆಗಳಲ್ಲಿ ನಮ್ಮ ಶಾಲೆಯ ಮಕ್ಕಳು ಬಹುಮಾನ ತಂದಿದ್ದಾರೆ.

    ನಮ್ಮ ಶಾಲೆಯಲ್ಲಿ ದೊಡ್ಡದಾದ ಕೊಠಡಿಗಳು, ಆಟದ ಮೈದಾನ, ಪ್ರಯೋಗಾಲಯ, ಸ್ವಚ್ಛವಾದ ಶೌಚಾಲಯ, ದೊಡ್ಡದಾದ ಗ್ರಂಥಾಲಯಗಳಿವೆ. ಪುಟ್ಟ ಮಕ್ಕಳಿಗೆ ಆಟಿಕೆಗಳು ಇವೆ. ಹಾಗೆಯೇ ದೊಡ್ಡ ಮಕ್ಕಳಿಗೆ ಆಡಲು ಕ್ರಿಕೆಟ್ ಕಿಟ್, ಫುಟ್ಬಾಲ್, ವಾಲಿಬಾಲ್ ಮುಂತಾದ ಕ್ರೀಡಾ ಸಾಮಗ್ರಿಗಳಿವೆ. ಕಬಡ್ಡಿ, ಖೋ ಖೋ ಮುಂತಾದ ಕ್ರೀಡೆಗಳನ್ನು ದೈಹಿಕ ಶಿಕ್ಷಕರು ಹೇಳಿಕೊಡುತ್ತಾರೆ. ಹೀಗೆ ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ ನಮ್ಮ ಶಾಲೆಯು ಓದಿನಲ್ಲಷ್ಟೇ ಅಲ್ಲ ಕ್ರೀಡೆಯಲ್ಲು ಮುಂದಿದೆ. ಹಲವಾರು ಅಂತರ ಶಾಲೆಯ ಮಧ್ಯೆ  ನಡೆಯುವ ಸ್ಪರ್ಧೆಯಲ್ಲಿ ಬಹುಮಾನ ಗೆದ್ದುಕೊಂಡಿದೆ.

    ಓದು, ಕ್ರೀಡೆ ಮಾತ್ರವಲ್ಲದೆ ಮಕ್ಕಳ ಕೌಶಲ ಅಭಿವೃದ್ಧಿಗೂ ಕೂಡ ಹಲವು ಚಟುವಟಿಕೆಗಳನ್ನು ಹೇಳಿಕೊಡುತ್ತಾರೆ. ಹಾಗೂ ಮಾನಸಿಕ ಧೃಢತೆಗಾಗಿ ಯೋಗ ಮತ್ತು ಧ್ಯಾನ ಮಾಡಿಸುತ್ತಾರೆ. ಇದರಿಂದ ಓದಿನಲ್ಲೂ ಏಕಾಗ್ರತೆ ಲಭ್ಯವಾಗುತ್ತದೆ ಹಾಗೂ ಆಟದಲ್ಲಿ ಮುಂದುವರಿಯಲು ದೈಹಿಕ ಸಧೃಢತೆ ಕೂಡ ಲಭ್ಯವಾಗಿತ್ತದೆ.

    ನಮ್ಮ ಕಲಿಕೆಯನ್ನು ಪರೀಕ್ಷಿಸಲು ವರ್ಷಕ್ಕೆ ನಾಲ್ಕು ಕಿರು ಪರೀಕ್ಷೆ ಹಾಗೂ ಎರಡು ದೊಡ್ಡ ಪರೀಕ್ಷೆಗಳು ನಡೆಯುತ್ತವೆ. ಇದರಿಂದ ನಾವು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ. ಹಾಗೂ ನಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವ ನಡೆಸುತ್ತಾರೆ. ನಾಟಕ, ನೃತ್ಯ, ಹಾಡು ಹೀಗೆ ನಮಗೆ ಆಸಕ್ತಿ ಇರುವ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹಾಗೂ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ ಮುಂತಾದ ಆಚರಣೆಗಳನ್ನು ನಡೆಸುತ್ತಾರೆ. ಇವುಗಳಲ್ಲಿಯೂ ನಾವು ಸಕ್ರಿಯವಾಗಿ ಭಾಗವಹಿಸುತ್ತೇವೆ.

      ನಮ್ಮ ಶಾಲೆಗೆ ಮಾದರಿ ಶಾಲೆ ಎಂಬ ಪ್ರಶಸ್ತಿ ಕೂಡ ಬಂದಿದೆ. ಆದ್ದರಿಂದ ನಮ್ಮ ಶಾಲೆಯೇ ನಮಗೆ ನೆಚ್ಚಿನ ತಾಣ. ಶಾಲೆಗೆ ಬರಲು ನಮಗೆ ಹೆಮ್ಮೆ.

ರಚನೆ: ಸೀಮಾ ಕಂಚೀಬೈಲು



ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ನೇಗಿಲ ಯೋಗಿ




ಇವನೇ ನೋಡು ಅನ್ನದಾತ
 ಹೊಲದಿ ದುಡಿದೇ ದುಡಿವನು
 ನಾಡ ಜನರು ಬದುಕಲೆಂದು
 ದವಸ ಧಾನ್ಯ ಬೆಳೆವನು

 ಮಳೆಯ ಗುಡುಗು ಚಳಿಯ ನಡುಗು
 ಬಿಸಿಲ ಬೇಗೆಯ ಸಹಿಸುತಾ
 ಬೆವರು ಸುರಿಸಿ ಕಷ್ಟ ಸಹಿಸಿ
 ಒಂದೇ ಸಮನೆ ದುಡಿಯುತಾ

 ಗಟ್ಟಿ ದೇಹ ದೊಡ್ಡ ಮನಸು
 ದೇವನಿಂದ ಪಡೆವನು
 ಯೋಗಿಯಾಗಿ ತ್ಯಾಗಿಯಾಗಿ
 ಅನ್ನ ನೀಡುತಿರುವನು

 ಎತ್ತು ಎರಡು ಅವನ ಜೋಡು
 ಕೂಡಿ ದುಡಿವ ಗೆಳೆಯರು
 ಹಿಗ್ಗು ಕುಗ್ಗು ಏನೇ ಬರಲಿ
 ಹೊಂದಿಕೊಂಡು ನಡೆವರು