ಗಣೇಶ ಚತುರ್ಥಿ

ಗಣೇಶ ಚತುರ್ಥಿಯು ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಹಾಗೂ ವೈಭವದಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜಿಸಲಾಗುತ್ತದೆ. 

    ಗಣೇಶ ಚತುರ್ಥಿಯ ಸಿದ್ಧತೆಗಳು ಒಂದು ತಿಂಗಳ ಮೊದಲಿನಿಂದಲೆ ಆರಂಭಗೊಳ್ಳುತ್ತವೆ. ಈ ಹಬ್ಬವು ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಸುಮಾರು ಹತ್ತು ದಿನಗಳ ಕಾಲ ನಡೆಯುತ್ತದೆ. ಮೊದಲನೆ ದಿನ ಮನೆ, ಮನೆಯಲ್ಲೂ ಸಂಭ್ರಮ ಕಳೆಗಟ್ಟುತ್ತದೆ. ವರ್ಣರಂಜಿತವಾಗಿ ಅಲಂಕೃತವಾದ   ಮಂಟಪಗಳಲ್ಲಿ ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ. ಮನೆಗಳನ್ನು ಅಲಂಕರಿಸಲಾಗುತ್ತದೆ. ಶಾಸ್ತ್ರೋಕ್ತವಾಗಿ ವಿನಾಯಕನ ಪೂಜಿಸಲಾಗುತ್ತದೆ.ಈ ಹಬ್ಬದ ಸಂದರ್ಭದಲ್ಲಿ ಹಲವಾರು ಅಡುಗೆಗಳನ್ನು ಮತ್ತು ಖಾದ್ಯಗಳನ್ನು ಮಾಡಲಾಗುತ್ತದೆ.  ಆದರೆ ಮೋದಕ ಅಥವಾ ಕಡುಬುಗಳ ನೈವೇದ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. 


    ಮೊದಲು ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. 1893ರಲ್ಲಿ ಸಮಾಜ ಸುಧಾರಕ ಮತ್ತು ಸ್ವಾತಂತ್ರ್ಯ ಯೋಧ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅದಕ್ಕೆ ಸಾರ್ವಜನಿಕ ಸ್ವರೂಪ ನೀಡಿದರು.ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಕಲೆಯುವ ತಾಣವಾಯಿತು. 


    ಹೀಗೆ ಗಣೇಶ ಉತ್ಸವ ಸಾರ್ವಜನಿಕ ಉತ್ಸವವಾಗಿ ಪರಿವರ್ತನೆಯಾಯಿತು. ಅದರಂತೆ ಈಗಲೂ ಸ್ಥಳೀಯ ಸಮೀತಿಗಳು ಪೆಂಡಾಲ್‌ಗಳನ್ನು ಹಾಕಿ ಬೃಹತ್ ಗಣಪತಿಯ ವಿಗ್ರಹಗಳನ್ನು ಇರಿಸುತ್ತಾರೆ. ಈ ಪೆಂಡಾಲ್‌ಗಳಲ್ಲಿ ಗಣಪತಿಯ ಉತ್ಸವವದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ.11ನೇ ದಿನ ವಿಗ್ರಹವನ್ನು  ನೃತ್ಯ, ಹಾಡು ಬಾಜಾಬಜಂತ್ರಿಯೊಂದಿಗೆ ಬೀದಿಗಳಲ್ಲಿ  ಮೆರವಣಿಗೆ ಮಾಡಲಾಗುತ್ತದೆ. ಜನರು ಸಹ ಉತ್ಸಾಹದಿಂದ ಅದರಲ್ಲಿ ಕುಣಿಯುತ್ತಾ ಮತ್ತು ಹಾಡುತ್ತ ಪಾಲ್ಗೊಳ್ಳುತ್ತಾರೆ. ನಂತರ ಗಣೇಶನ ವಿಗ್ರಹವನ್ನು ಕೊಂಡೊಯ್ದು ನದಿ, ಕೆರೆ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. 

    ಸಿದ್ಧಿ ದಾಯಕನಾದ, ಬುದ್ಧಿಗೆ ಅಧಿದೇವತೆಯೂ ಆದ, ವಿಘ್ನ ನಿವಾರಕನ ಆರಾಧನೆಯು ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬವಾಗಿದೆ. 



ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

No comments:

Post a Comment