Showing posts with label navratri. Show all posts
Showing posts with label navratri. Show all posts

ನಮ್ಮ ಹಬ್ಬಗಳು

 ನಮ್ಮ ನಾಡಹಬ್ಬ ದಸರಾ. ಕರ್ನಾಟಕದಲ್ಲಿ ಈ ಹಬ್ಬವನ್ನು ನವರಾತ್ರಿಯ ಒಂಬತ್ತು ದಿನಗಳು ಮತ್ತು ವಿಜಯದಶಮಿ ಹೀಗೆ ಅದ್ಧೂರಿಯಾಗಿ ಹತ್ತುದಿನ ಆಚರಿಸಲಾಗುತ್ತದೆ. ಮಹಾನವಮಿಯ ಆಯುಧಪೂಜೆ, ಮೈಸೂರಿನ ಜಂಬೂಸವಾರಿ, ವಿಜಯದಶಮಿಯ ಶಮಿ ಅಥವಾ ಬನ್ನಿಯ ಪೂಜೆ ಇವೆಲ್ಲ ಈ ಹಬ್ಬದ ವಿಶೇಷತೆಗಳು. ಉತ್ತರ ಕರ್ನಾಟಕದಲ್ಲಿ ಬನ್ನಿಯನ್ನು ಬಂಗಾರವೆಂದು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಾರೆ. 

ದುರ್ಗಾಮಾತೆಯಿಂದ ಮಹಿಷಾಸುರನ ವಧೆ , ಪಾಂಡವರ ಅಜ್ಞಾತವಾಸದ ಅಂತ್ಯ, ರಾವಣನ ವಧೆ ಹೀಗೆ ಹಲವಾರು ಪೌರಾಣಿಕ ಕಥೆಗಳು ದಸರಾ ಹಬ್ಬದ ಜೊತೆಗೆ ಹೆಣೆದುಕೊಂಡಿವೆ.

ನಮ್ಮ ದೇಶದ ಇತರ ರಾಜ್ಯಗಳ ಹಬ್ಬಗಳ ಬಗ್ಗೆ ತಿಳಿದುಕೊಳ್ಳೋಣ. 


1.ಗಣಗೌರ್ ಪೂಜಾ ಯಾವ ರಾಜ್ಯದಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತದೆ.?

ರಾಜಸ್ಥಾನ್

2. ಸೂರ್ಯನನ್ನು ಪೂಜಿಸುವ ಬಿಹಾರ್ ರಾಜ್ಯದ ಹಬ್ಬ ಯಾವುದು?

ಛಟ್ ಪೂಜಾ

3 ಲೋಹಡಿ ಯಾವ ರಾಜ್ಯದ ಹಬ್ಬವಾಗಿದೆ ?

ಪಂಜಾಬ್ 

4 ಹಾರ್ನ್ ಬಿಲ್ ಫೆಸ್ಟಿವಲ್ ಅನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?

ನಾಗಾಲ್ಯಾಂಡ್

5. ಪಂಜಾಬಿನ ಹೊಸ ವರ್ಷ ಮತ್ತು  ಸುಗ್ಗಿಯ ಹಬ್ಬ ಯಾವುದು?

ಬೈಸಾಖಿ

6. ಕಂಬಳ ಯಾವ ರಾಜ್ಯದ ವಿಶೇಷತೆ ಆಗಿದೆ?

ಕರ್ನಾಟಕ

7. ದೀಪಾವಳಿಯ ಪ್ರತಿಪದವನ್ನು ಉತ್ತರಪ್ರದೇಶದಲ್ಲಿ ಯಾವ ಹೆಸರಿನಿಂದ ಆಚರಿಸುವರು?

ಗೋವರ್ಧನ ಪೂಜಾ

8. ಮಹಾರಾಷ್ಟ್ರ ದಲ್ಲಿ ಹೊಸ ವರ್ಷವನ್ನು (ಯುಗಾದಿ) ಯಾವ ಹೆಸರಿನಿಂದ ಆಚರಿಸುತ್ತಾರೆ?

ಗುಡಿ ಪಾಡ್ವ

9. ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಜರಗುವ ಸೂರಜ್ ಕುಂಡ ಜಾತ್ರೆ ಯಾವ ರಾಜ್ಯದಲ್ಲಿ ನಡೆಯುತ್ತದೆ?

ಹರಿಯಾಣ

10.ಜಗನ್ನಾಥ್ ರಥಯಾತ್ರೆಯ ರಥಗಳನ್ನು ಮಾಡಲು ಪ್ರಾರಂಭಿಸುವ ದಿನ ಯಾವುದು?

ಅಕ್ಷಯ ತೃತೀಯ

11.ಬಂಗಾಳದಲ್ಲಿ ಜರಗುವ ದುರ್ಗಾಪೂಜೆ ಯಲ್ಲಿ ಸಿಂಧೂರಖೆಲಾ ಯಾವ ದಿನ ಇರುತ್ತದೆ?

ದಶಮಿ

12. ಬಿಹು ಯಾವ ರಾಜ್ಯದ ಹಬ್ಬವಾಗಿದೆ?

ಅಸ್ಸಾಂ

13. ಮಹಾಬಲಿ ಅಥವಾ ಬಲಿ ಚಕ್ರವರ್ತಿ ಗಾಗಿ ಆಚರಿಸಲ್ಪಡುವ ಹಬ್ಬ ಯಾವುದು?

ಓಣಂ

14. ಶ್ರಾವಣ ದಲ್ಲಿ ನಡೆಯುವ ಕಾವಡ್ ಯಾತ್ರಾ ದಲ್ಲಿ ಯಾವ ನದಿಯ ನೀರನ್ನು ತಂದು ಶಿವನಿಗೆ ಅಭಿಷಕ ಮಾಡುವರು?

ಗಂಗಾನದಿ

15. ತೆಲಂಗಾಣ ರಾಜ್ಯದ ನಾಡಹಬ್ಬ ಯಾವುದು?

ಬತುಕಮ್ಮ ಪಂಡುಗ

ನಮ್ಮ ನಾಡಹಬ್ಬ - ನವರಾತ್ರಿ

 
 ನವರಾತ್ರಿಯು  ದೇವಿಯನ್ನು ಆರಾಧಿಸುವ ಹಬ್ಬವಾಗಿದೆ. ಇದನ್ನು ಭಾರತದ ಉದ್ದಗಲಕ್ಕೂ ವಿವಿಧ ರೀತಿಯಲ್ಲಿ ನವರಾತ್ರಿ ಅಥವಾ ದಸರಾ ಎಂದು ಆಚರಿಸಲಾಗುತ್ತದೆ. ಜಗನ್ಮಾತೆಯನ್ನು ನವವಿಧವಾಗಿ ಪೂಜಿಸುವುದು ಈ ನವರಾತ್ರಿ ಹಬ್ಬದ ವಿಶೇಷತೆಯಾಗಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ. ಮುಂದೆ ಒಂಭತ್ತು ದಿನವೂ ಕೂಡ ದೇವಿಯನ್ನು ಆರಾಧಿಸಲಾಗುತ್ತದೆ

   ಈ ಪರ್ವವನ್ನು ಕುರಿತು ಕಥೆಗಳು ನಮ್ಮ ಪುರಾಣದಲ್ಲಿ ಸಿಗುತ್ತವೆ. ವಿಜಯದಶಮಿಯಂದು ರಾವಣನ ಮೇಲೆ ಶ್ರೀರಾಮ ವಿಜಯ ಸಾಧಿಸಿದನೆನ್ನಲಾಗಿದೆ. ಇದಲ್ಲದೆ  ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯದಶಮಿಯಾಗಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ಜನರು ತಮ್ಮದೇ ವೈಖರಿಯಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. 

     ನವರಾತ್ರಿ  ಕರ್ನಾಟಕದ ನಾಡಹಬ್ಬ ಆಗಿದ್ದು ಹತ್ತು ದಿನಗಳ ನಡೆಯುವ ವಿಶೇಷ ಹಬ್ಬದಲ್ಲಿ ಒಂಭತ್ತು ದಿನಗಳ ಕಾಲ ದೇವಿಪೂಜೆಯನ್ನು ಮಾಡಲಾಗುತ್ತದೆ. ಹತ್ತನೇಯ ದಿನವೇ ವಿಜಯ ದಶಮಿ, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ ಅಥವಾ ಬನ್ನಿಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ.ಇಲ್ಲಿಯ ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಮೈಸೂರಿನಲ್ಲಿ ವಿಜಯದಶಮಿಯಂದು ಚಾಮುಂಡಿ ಬೆಟ್ಟದಲ್ಲಿರುವ  ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಬಂಗಾರದ ಪಲ್ಲಕ್ಕಿಯಲ್ಲಿ  ಸಕಲ ಸರ್ಕಾರಿ ಹಾಗೂ ರಾಜ ಮರ್ಯಾದೆಯ ಮೂಲಕ ನಡೆಯುತ್ತದೆ. 

   ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯನ್ನು ದುರ್ಗಾ ಪೂಜೆಯಾಗಿ ಆಚರಿಸಲಾಗುತ್ತದೆ. ರಾಜ್ಯದ ಎಲ್ಲೆಡೆ ಈ ಹಬ್ಬವನ್ನು ದುರ್ಗಾ ಪೂಜಾ ಪೆಂಡಾಲುಗಳನ್ನು ಹಾಕಿ ಆಚರಿಸಲಾಗುತ್ತದೆ.  ದುರ್ಗಾ ದೇವಿಯನ್ನು ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರೊಂದಿಗೆ ಪೂಜಿಸಲಾಗುತ್ತದೆ.  ವಿಜಯದಶಮಿಯಲ್ಲಿ, ಭವ್ಯವಾದ ಮೆರವಣಿಗೆ ಯೊಂದಿಗೆ ಪ್ರತಿಮೆಗಳನ್ನು ವಿದ್ಯುಕ್ತವಾಗಿ ನೀರಿನಲ್ಲಿ  ವಿಸರ್ಜಿಸಲಾಗುತ್ತದೆ. 

   ಉತ್ತರ ಭಾರತದಲ್ಲಿ ದಸರಾ ಸಂಭ್ರಮದ ಹತ್ತು ದಿನಗಳೂ ರಾಮಲೀಲಾ ನಡೆಯುತ್ತದೆ. ರಾಮಾಯಣದ ವಿವಿಧ ಘಟನೆಗಳನ್ನು ನಾಟಕದ ಮೂಲಕ ಜನರಿಗೆ ತಿಳಿಸುತ್ತಾರೆ. ಹತ್ತನೆಯ ದಿನ ರಾವಣನ ಪ್ರತಿಕೃತಿಯನ್ನು ಸುಡಲಾಗುತ್ತದೆ. 

  ಗುಜರಾತಿನಲ್ಲಿ  ಗರ್ಭಾ ಎಂಬ  ಮಣ್ಣಿನ ಪಾತ್ರೆಯನ್ನಿಟ್ಟು ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಗರ್ಭಾದ ಜಾನಪದ ಕೋಲಾಟದ ನೃತ್ಯವನ್ನು ಮಾಡಲಾಗುತ್ತದೆ.  ಇದನ್ನು ದಾಂಡಿಯಾ ಎಂದು ಕರೆಯಲಾಗುತ್ತದೆ. 

ಹೀಗೆ ದೇವಿಯನ್ನು ದುರ್ಗಾ, ಕಾತ್ಯಾಯಿನಿ, ಗೌರಿ, ಅಂಬಿಕಾ, ಪಾರ್ವತಿ, ಶರ್ವಾಣಿ, ಶಿವೆ, ಪರಮೇಶ್ವರಿ ಎಂದು ಸ್ತುತಿಸಿ ಸಂಭ್ರಮ ಉತ್ಸಾಹದಿಂದ ನವರಾತ್ರಿಯನ್ನು ಆಚರಿಸಲಾಗುತ್ತದೆ.