ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1ರಂದು ಆಚರಿಸಲಾಗಿತ್ತದೆ. 1956ರ ನವೆಂಬರ್ 1ರಂದು ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವಂತಹ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಕನ್ನಡ ರಾಜ್ಯದ ಘೋಷಣೆ ಮಾಡಿದರು.
ಕನ್ನಡದ ಕುಲಪುರೋಹಿತರು ಎಂದು ಪ್ರಖ್ಯಾತರಾದ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯನ್ನು 1905ರಲ್ಲಿ ಪ್ರಾರಂಭಿಸಿದರು. ಈ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರೆಂದರೆ - ಅ.ನ.ಕೃಷ್ಣರಾಯರು, ಕೆ.ಶಿವತಾಮ ಕಾರಂತರು, ಕುವೆಂಪುರವರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ ಹಾಗೂ ಇತರರು.
1956ರಲ್ಲಿ ರಾಜ್ಯದ ಘೋಷಣೆ ಮಾಡಿದಾಗ ಮೈಸೂರು ರಾಜ್ಯ ಎಂದು ಹೆಸರಿಟ್ಟರು. ಆಗ ನಮ್ಮ ರಾಜ್ಯದಲ್ಲಿ ಒಡೆಯರ್ ರಾಜರ ಆಳ್ವಿಕೆ ಇತ್ತು. ಅವರನ್ನು ಒಪ್ಪಿಸಿ ಕನ್ನಡ ರಾಜ್ಯ ಸ್ಥಾಪನೆ ಮಾಡಿ ರಾಜರನ್ನು ಮೊದಲ ರಾಜ್ಯಪಾಲರನ್ನಾಗಿ ನೇಮಿಸಲಾಯಿತು.
ಮೈಸೂರು ರಾಜ್ಯ ಎಂದರೆ ಬರೀ ದಕ್ಷಿಣ ಕರ್ನಾಟಕದ ಜನರಿಗೆ ಮನ್ನಣೆ ಕೊಟ್ಟಂತಾಗುತ್ತದೆ ಎಂದು ಉತ್ತರ ಕರ್ನಾಟಕದ ಜನರ ಮಾನ್ಯತೆಗಾಗಿ ಮೈಸೂರು ಎಂಬ ರಾಜ್ಯದ ಹೆಸರನ್ನು ನವೆಂಬರ್ 1, 1973ರಂದು "ಕರ್ನಾಟಕ" ಎಂದು ಬದಲಾಯಿಸಲಾಯಿತು. ಆಗ ದೇವರಾಜ ಅರಸ್ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದರು.
ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬವನ್ನಾಗಿ ಆಚರಿಸುತ್ತೇವೆ. ಅಂದು ರಾಷ್ಟ್ರಕವಿ ಕುವೆಂಪು ವಿರಚಿತ "ಜಯ ಭಾರತ ಜನನಿಯ ತನುಜಾತೆ"ಯನ್ನು ನಾಡಗೀತೆಯನ್ನಾಗಿ ಹಾಡುತ್ತಾರೆ. ಕರ್ನಾಟಕದ ಧ್ವಜವನ್ನು ಹಾರಿಸಲಾಗುತ್ತದೆ. ನಮ್ಮ ನಾಡಿನ ಧ್ವಜವು ಹಳದಿ ಹಾಗೂ ಕೆಂಪು ಬಣ್ಣವನ್ನು ಹೊಂದಿದೆ. ಇದು ಅರಿಶಿಣ ಹಾಗೂ ಕುಂಕುಮದ ಬಣ್ಣ ಎನ್ನುತ್ತಾರೆ. ಹಳದಿ ಬಣ್ಣವು ಮಂಗಳಕರ ಹಾಗೂ ಸಕಾರಾತ್ಮಕತೆಯ ಸಂಕೇತವಾದರೆ ಕೆಂಪು ಶುಭ ಹಾಗೂ ಧೈರ್ಯದ ಸಂಕೇತವಾಗಿದೆ. ಕನ್ನಡ ರಾಜ್ಯೋತ್ಸವದಂದು ಕನ್ನಡಕ್ಕೆ ಸೇವೆ ಸಲ್ಲಿಸಿದ ಕವಿ , ಸಾಹಿತಿಗಳಿಗೆ "ರಾಜ್ಯೋತ್ಸವ ಪ್ರಶಸ್ತಿ" ಪ್ರದಾನ ಮಾಡಲಾಗುತ್ತದೆ
ನಮ್ಮ ನಾಡಷ್ಟೇ ಅಲ್ಲದೆ ಮುಂಬಯಿ, ದೆಹಲಿ ಮುಂತಾದ ರಾಜ್ಯಗಳಲ್ಲಿರುವ ಕನ್ನಡ ಸಂಘಟನೆಗಳು ಕೂಡ ಆಚರಿಸುತ್ತವೆ. ಅಷ್ಟೇ ಅಲ್ಲದೇ ಹೊರ ದೇಶಗಳಲ್ಲಿರುವ ಕನ್ನಡಿಗರು ಸಹ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ ನವೆಂಬರ್ ತಿಂಗಳು ನಾಡಿನಾದ್ಯಂತ ಕನ್ನಡಮಯವಾಗಿರುತ್ತದೆ. ಆದರೆ ಇದು ಬರೀ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ಇಡೀ ವರ್ಷಪೂರ್ತಿ ಮುಂದುವರಿಯಲಿ ಎಂಬುದು ಪ್ರತಿಯೊಬ್ಬ ಕನ್ನಡಿಗನ ಆಶಯ.
ರಚನೆ : ಸೀಮಾ ಕಂಚೀಬೈಲು
ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು
ರಚನೆ : ಸೀಮಾ ಕಂಚೀಬೈಲು
ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು
No comments:
Post a Comment