ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ


1949ರಲ್ಲಿ  ಅಂದಿನ ಮದ್ರಾಸ್ ಸರ್ಕಾರದಿಂದ 'ರಾಷ್ಟ್ರಕವಿ' ಎಂದು ಸನ್ಮಾನಿಸಲ್ಪಟ್ಟ ಮಂಜೇಶ್ವರ ಗೋವಿಂದ ಪೈರವರು 23/3/1883ರಂದು ಮಂಜೇಶ್ವರದಲ್ಲಿ ಜನಿಸಿದರು. ಅವರ ತಂದೆ ತಿಮ್ಮಪ್ಪ ಪೈ ತಾಯಿ ಜಾನಕಿ ಪೈ.

ಇವರ ಮೊದಲ ಕವಿತೆ 'ಸುವಾಸಿನಿ' ಸುಮಾರು 1900ರಲ್ಲಿ ಪ್ರಕಟವಾಗಿದೆ. 'ವೈಶಾಖ' ಮತ್ತು 'ಗೊಲ್ಗೊಥಾ' - ಪೈಯವರು ರಚಿಸಿರುವ ಎರಡು ಖಂಡ ಕಾವ್ಯಗಳು. ಇವರು ನವೀನ್ ಚಂದ್ರಸೇನ್ ರ ಬಂಗಾಳಿ 'ಕೃಷ್ಣ ಚರಿತೆ' ಯ ಗದ್ಯಅನುವಾದವನ್ನು 1909ರಲ್ಲಿ ಪ್ರಕಟಿಸಿದರು. 1911ರಲ್ಲಿ ಬೌದ್ಧಸೂತ್ರಗಳ ಕನ್ನಡ ಅನುವಾದವನ್ನು ಪ್ರಕಟಿಸಿದರು. 'ಗಿಳಿವಿಂಡು', 'ಚಿತ್ರಭಾನು ಅಥವಾ 1942', 'ನಂದಾದೀಪ' ಇವು ಪೈಗಳ ಕೆಲವು ಕವನ ಸಂಕಲನಗಳು.

ಪೈಗಳು ಪ್ರಸಿದ್ಧ ಉರ್ದುಕವಿ 'ಉಮರ್ ಖಯ್ಯಂ'ನ ರುಬಾಯಿಗಳನ್ನು ಭಾಷಾಂತರಿಸಿದ್ದರು. ಜಪಾನಿನ 'ನೋ' ನಾಟಕಗಳ ಸವಿಯನ್ನು ತಮ್ಮ ಅನುವಾದಗಳ ಮೂಲಕ ಕನ್ನಡ ಓದುಗರಿಗೆ ಉಣಬಡಿಸಿದ್ದಾರೆ. ಮಹಮದ್ ಇಕ್ಬಾಲರ ಒಂದು ಪದವನ್ನು ಪ್ರಕಟಿಸಿದ್ದಾರೆ.

ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಕೇಶ್ವರ ಚರಿತೆ, ಭಗವಾನ್ ಬುದ್ಧ ಮಹಾಸಂತರನ್ನು ಕುರಿತು ಅವರು ರಚಿಸಿರುವ ಕೃತಿಗಳು. 'ಕನ್ನಡದ ಮೊರೆ' ವ್ಯಕ್ತಿಚಿತ್ರಗಳ ಸಂಕಲನ. ಪೈಗಳು ತಮ್ಮ ಆತ್ಮಕಥೆಯನ್ನು ಸಹಾ ಬರೆದಿದ್ದಾರೆ. ಅವರು ಸಂಪಾದಿಸಿದ ಕೃತಿ 'ಭಕ್ತಿವಾಣಿ'.

ರಾಷ್ಟ್ರಕವಿ ಎಂದು ಗೌರವಿಸಲ್ಪಟ್ಟ ಮೊದಲ ಕವಿ ಮಂಜೇಶ್ವರ ಗೋವಿಂದ ಪೈ1950ರಲ್ಲಿ ಮುಂಬೈಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಒಪ್ಪಲಿಲ್ಲ. ಇವರನ್ನು ಶಿವರಾಮ ಕಾರಂತರು, ಎಂ.ಆರ್.ಶ್ರೀನಿವಾಸ ಮೂರ್ತಿಗಳು ಮತ್ತು ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿ ಶ್ರೀಮಂಜಯ್ಯ ಹೆಗ್ಗಡೆಯವರು ಸಾಕಷ್ಟು ಒತ್ತಡವನ್ನು ಹೇರಿ ಒಪ್ಪಿಸಬೇಕಾಯಿತಂತೆ.

ಇವರ ಕಟ್ಟಕಡೆಯ ಲೇಖನವು 1962ರಲ್ಲಿ ಪ್ರಕಟವಾಯಿತು. ಗೋವಿಂದ ಪೈಗಳು ಸೆಪ್ಟೆಂಬರ್9 1963ರಲ್ಲಿ ಪಂಚಭೂತಗಳಲ್ಲಿ ಲೀನವಾದರು.


- ಸೀಮಾ ಕಂಚೀಬೈಲು

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ದೀಪಾವಳಿ










ಅಪ್ಪನ ಜೇಬಿನ ದುಡ್ಡುಗಳೆಲ್ಲ
ಚಟಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಟ್ಟನೆ ದಾರಿಯ ಹಿಡಿಯುವುವು

ಬಗೆ ಬಗೆ ಬಣ್ಣದ ಹೂಗಳ ರೂಪದಿ
ಹಾರುತ ಬುಸು ಬುಸುಗುಟ್ಟುವುವು
ಉರಿಯನು ಸುರಿಸುತ ಮೊರೆಯುತ ತಿರುಗುತ
ಸರಸರನೆಲ್ಲೆಡೆ ಹರಿಯುವುವು

ಸರುವರ ಕಿವಿಗಳ ಕೊರೆಯುವುವು
ಮೂಗಿನ ಸೆಲೆಗಳನೊಡೆಯುವುವು
ಸಾರವ ತೆರೆಯುತ ಕಡೆಯಲಿ ಕಪ್ಪಗೆ
ನೆಲದಲಿ ದೊಪ್ಪನೆ ಕೆಡೆಯುವುವು

ಅಜ್ಜನ ಮಡಿಯನು ತೊಡೆಯುವುವು
ಅಪ್ಪನ ಜೇಬುಗಳೊಡೆಯುವುವು
ಸಿಡಿಯುವುವು ಸಿಡಿಯುವುವು
ಹರಿಯಿತು ಹರ್ಷವು ದೇಶದಿ

ದೀಪಾವಳಿ ಹಬ್ಬವು ತಾ ಬರುತಿರಲು
ಹೊರಲಾರದೆ ಸಾಹಸದಿ ಪಟಾಕಿಯ
ಹೊರೆಗಳ ಮೆಲ್ಲನೆ ತರುತಿರಲು
ಸಿಡಿವ ಚಟಾಕಿಯ ತರುತಿರಲು

ಹುಡುಗರು ನಲಿಯುತ ಕುಣಿಕುಣಿದಾಡುತ
ಹಿಡಿದು ಚಟಾಕಿಯ ಸುಡುತಿಹರು
ಸಿಡಿದು ಚಟಾಕಿಯು ಮೇಲಕೆ ಹಾರಲು
ನಿಲ್ಲದೆ ಚಪ್ಪಾಳೆ ತಟ್ಟುವರು

ಸಡಗರಗೊಳ್ಳುತ ದೂರದಿ ನೋಡುತ
ಲಲನೆಯರೆಲ್ಲರು ನಗುತಿಹರು
ಸಿಡಿಯೆ ಚಟಾಕಿಯು ನಗುತಿಹರು

ಅಪ್ಪನ ಜೇಬಿನ ದುಡ್ಡುಗಳೆಲ್ಲ
ಚಟಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಟ್ಟನೆ ದಾರಿಯ ಹಿಡಿಯುವುವು
(ಕವಿ : ಎಲ್. ಗುಂಡಪ್ಪ )

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ


 
  ಈ ಗಾದೆಯು ನಮ್ಮ ದೃಷ್ಟಿಕೋನವು ಹೇಗಿರಬೇಕೆಂದು ತಿಳಿಸುತ್ತದೆ. ದೂರದಲ್ಲಿ ಕಾಣುವ ಬೆಟ್ಟಗುಡ್ಡಗಳೆಲ್ಲ ನಾವು ನಿಂತ ಜಾಗದಿಂದ ಚಂದಾಗಿ ನುಣ್ಣಗಿರುವಂತೆ ಕಾಣುತ್ತದೆ. ನಾವಿರುವ ಜಾಗ ಕಲ್ಲುಮುಳ್ಳುಗಳಿಂದ ಕೂಡಿ ಬಲು ಕಠಿಣವಾಗಿರುವಂತೆ ಭಾಸವಾಗುತ್ತದೆ. ಈ ಜಾಗವೂ ಬೆಟ್ಟದ ರೀತಿ ಇದ್ದರೆ ಒಳ್ಳೆಯದು ಎಂದುಕೊಳ್ಳುತ್ತೇವೆ. ಆದರೆ ಬೆಟ್ಟದ ಹತ್ತಿರ ಹೋಗಿ ನೋಡಿದರೆ ಅಲ್ಲಿನ ವಾಸ್ತವದ ಪರಿಚಯವಾಗುತ್ತದೆ. ನಾವಿರುವ ಜಾಗಕ್ಕಿಂತ ಅಲ್ಲಿ ಕಲ್ಲುಗಳು, ದೊಡ್ಡ ದೊಡ್ಡ ಕಡಿದಾದ ಬಂಡೆಗಳು, ಮುಳ್ಳುಕಂಟಿಗಳು, ಹುಲ್ಲು ಪೊದೆಗಳು ಕಂಡು ನಮ್ಮ ಜಾಗವೇ ಒಳ್ಳೆಯದಿತ್ತೆಂಬ ಸತ್ಯದ ಅರಿವಾಗುತ್ತದೆ. 

  ಹಾಗೆಯೇ ನಮ್ಮ ಬದುಕಿಗಿಂತ ಬೇರೆಯವರ ಬದುಕು ಸುಖವಾಗಿ ಕಾಣುತ್ತದೆ. ಆದರೆ ವಾಸ್ತವವಾಗಿ ಅನ್ಯರ ಬದುಕಿನ ಒಳಹೊಕ್ಕಾಗ ಅವರ ಕಷ್ಟದ ಅರಿವು ನಮಗಾಗುತ್ತದೆ. ಆಗ ನಮ್ಮ ಜೀವನವೇ ಒಳ್ಳೆಯದೆಂದುಕೊಳ್ಳುತ್ತೇವೆ. ಒಟ್ಟಾರೆ ಈ ಗಾದೆಯ ಆಶಯವೆಂದರೆ, ಅನ್ಯರಿಗೆ ನಮ್ಮನ್ನು ಹೋಲಿಸುವುದಕ್ಕಿಂತ ನಮ್ಮ ಜೀವನಕ್ಕೆ ಹೊಂದಿಕೊಂಡು ಒಳ್ಳೆಯ ಬಾಳು ನಡೆಸಬೇಕು.

- ಸೀಮಾ ಕಂಚೀಬೈಲು

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು 

ಹಾಸಿಗೆ ಇದ್ದಷ್ಟು ಕಾಲು ಚಾಚು


     ಇದೊಂದು ಬಹು ಜನಪ್ರಿಯ ಗಾದೆ. ಹಾಸಿಗೆ ಇದ್ದಷ್ಟೇ ಏಕೆಕಾಲು  ಚಾಚಬೇಕೆಂದರೆ ಕಾಲು ನೆಲಕ್ಕೆ ತಾಗಿ ತಣ್ಣನೆ ಅನುಭವ ಆಗಿ ನಿದ್ದೆ ಬರದಿರಬಹುದು. ಇದೊಂದು ಉಪಮೇಯವಷ್ಟೇ. ಈ ಗಾದೆಯ ಒಳಾರ್ಥವೇನೆಂದರೆ, ನಮ್ಮ ದುಡಿಮೆಯಷ್ಟೇ ನಮ್ಮ ಖರ್ಚು ಇರಬೇಕೆಂಬುದು. ಇಲ್ಲದೇ ಹೋದಲ್ಲಿ ಚಿಂತೆಯಿಂದ ನಿದ್ದೆ ಬರದೇ ಇರಬಹುದು. ನಮ್ಮಲ್ಲಿ ಇರುವಷ್ಟರಲ್ಲೇ ತೃಪ್ತಿಕರ ಜೀವನ ನಡೆಸಬೇಕು. ಸುಂದರವಾಗಿ, ಸರಾಗವಾಗಿ ನಡೆಯುತ್ತಿರುವ ನಮ್ಮ ಜೀವನ ಹಳಿ ತಪ್ಪಿದ ಗಾಡಿಯಂತಾಗುತ್ತದೆ. 

    ಈ ಗಾದೆಯಲ್ಲಿ ಕೊಟ್ಟಿರುವ ಹಾಸಿಗೆ ಎಂದರೆ ನಮ್ಮ ಸಂಪಾದನೆಯೇ ಆಗಿರಬಹುದು ಅಥವಾ ನಮ್ಮ ಬಳಿ ಇರುವಂತಹ ಸವಲತ್ತುಗಳೇ ಆಗಿರಬಹುದು. ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳುವುದನ್ನೇ ಕಾಲುಚಾಚು ಎಂದು ನಮ್ಮ ಹಿರಿಯರು ಸಾಂಕೇತಿಕವಾಗಿ ಗಾದೆಯ ಮೂಲಕ ತಿಳಿಸಿದ್ದಾರೆ.


- ಸೀಮಾ ಕಂಚೀಬೈಲು 

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ಕನ್ನಡ ರಾಜ್ಯೋತ್ಸವ


ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1ರಂದು  ಆಚರಿಸಲಾಗಿತ್ತದೆ. 1956ರ ನವೆಂಬರ್ 1ರಂದು ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವಂತಹ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಕನ್ನಡ ರಾಜ್ಯದ ಘೋಷಣೆ ಮಾಡಿದರು.

ಕನ್ನಡದ ಕುಲಪುರೋಹಿತರು ಎಂದು ಪ್ರಖ್ಯಾತರಾದ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯನ್ನು 1905ರಲ್ಲಿ ಪ್ರಾರಂಭಿಸಿದರು. ಈ ಏಕೀಕರಣ ಚಳುವಳಿಯಲ್ಲಿ   ಪ್ರಮುಖ ಪಾತ್ರ ವಹಿಸಿದವರೆಂದರೆ - ಅ.ನ.ಕೃಷ್ಣರಾಯರು, ಕೆ.ಶಿವತಾಮ ಕಾರಂತರು, ಕುವೆಂಪುರವರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ ಹಾಗೂ ಇತರರು.

1956ರಲ್ಲಿ ರಾಜ್ಯದ ಘೋಷಣೆ ಮಾಡಿದಾಗ ಮೈಸೂರು ರಾಜ್ಯ ಎಂದು ಹೆಸರಿಟ್ಟರು. ಆಗ ನಮ್ಮ ರಾಜ್ಯದಲ್ಲಿ ಒಡೆಯರ್ ರಾಜರ ಆಳ್ವಿಕೆ ಇತ್ತು. ಅವರನ್ನು ಒಪ್ಪಿಸಿ ಕನ್ನಡ ರಾಜ್ಯ ಸ್ಥಾಪನೆ ಮಾಡಿ ರಾಜರನ್ನು ಮೊದಲ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. 
ಮೈಸೂರು ರಾಜ್ಯ ಎಂದರೆ ಬರೀ ದಕ್ಷಿಣ ಕರ್ನಾಟಕದ ಜನರಿಗೆ ಮನ್ನಣೆ ಕೊಟ್ಟಂತಾಗುತ್ತದೆ ಎಂದು ಉತ್ತರ ಕರ್ನಾಟಕದ ಜನರ ಮಾನ್ಯತೆಗಾಗಿ ಮೈಸೂರು ಎಂಬ ರಾಜ್ಯದ ಹೆಸರನ್ನು ನವೆಂಬರ್ 1, 1973ರಂದು "ಕರ್ನಾಟಕ" ಎಂದು ಬದಲಾಯಿಸಲಾಯಿತು. ಆಗ ದೇವರಾಜ ಅರಸ್ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದರು.

ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬವನ್ನಾಗಿ ಆಚರಿಸುತ್ತೇವೆ. ಅಂದು   ರಾಷ್ಟ್ರಕವಿ ಕುವೆಂಪು ವಿರಚಿತ "ಜಯ ಭಾರತ ಜನನಿಯ ತನುಜಾತೆ"ಯನ್ನು ನಾಡಗೀತೆಯನ್ನಾಗಿ ಹಾಡುತ್ತಾರೆ. ಕರ್ನಾಟಕದ ಧ್ವಜವನ್ನು ಹಾರಿಸಲಾಗುತ್ತದೆ.   ನಮ್ಮ ನಾಡಿನ ಧ್ವಜವು ಹಳದಿ ಹಾಗೂ ಕೆಂಪು ಬಣ್ಣವನ್ನು ಹೊಂದಿದೆ. ಇದು ಅರಿಶಿಣ ಹಾಗೂ ಕುಂಕುಮದ ಬಣ್ಣ ಎನ್ನುತ್ತಾರೆ. ಹಳದಿ ಬಣ್ಣವು ಮಂಗಳಕರ ಹಾಗೂ ಸಕಾರಾತ್ಮಕತೆಯ ಸಂಕೇತವಾದರೆ ಕೆಂಪು ಶುಭ ಹಾಗೂ ಧೈರ್ಯದ ಸಂಕೇತವಾಗಿದೆ.   ಕನ್ನಡ ರಾಜ್ಯೋತ್ಸವದಂದು ಕನ್ನಡಕ್ಕೆ ಸೇವೆ ಸಲ್ಲಿಸಿದ ಕವಿ , ಸಾಹಿತಿಗಳಿಗೆ "ರಾಜ್ಯೋತ್ಸವ ಪ್ರಶಸ್ತಿ" ಪ್ರದಾನ ಮಾಡಲಾಗುತ್ತದೆ

 ನಮ್ಮ ನಾಡಷ್ಟೇ ಅಲ್ಲದೆ ಮುಂಬಯಿ, ದೆಹಲಿ ಮುಂತಾದ ರಾಜ್ಯಗಳಲ್ಲಿರುವ ಕನ್ನಡ ಸಂಘಟನೆಗಳು ಕೂಡ ಆಚರಿಸುತ್ತವೆ. ಅಷ್ಟೇ ಅಲ್ಲದೇ ಹೊರ ದೇಶಗಳಲ್ಲಿರುವ ಕನ್ನಡಿಗರು ಸಹ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.


ಒಟ್ಟಿನಲ್ಲಿ ಹೇಳುವುದಾದರೆ ನವೆಂಬರ್ ತಿಂಗಳು ನಾಡಿನಾದ್ಯಂತ ಕನ್ನಡಮಯವಾಗಿರುತ್ತದೆ. ಆದರೆ ಇದು ಬರೀ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ಇಡೀ ವರ್ಷಪೂರ್ತಿ ಮುಂದುವರಿಯಲಿ ಎಂಬುದು ಪ್ರತಿಯೊಬ್ಬ ಕನ್ನಡಿಗನ ಆಶಯ.

ರಚನೆ : ಸೀಮಾ ಕಂಚೀಬೈಲು

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು 

ಹಚ್ಚೇವು ಕನ್ನಡದ ದೀಪ



ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ


ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ


ಕವಿ :  ಡಿ. ಎಸ್. ಕರ್ಕಿ

ಬಾರಿಸು ಕನ್ನಡ ಡಿಂಡಿಮವ




ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಕ್ಷಯಿಸಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಕವಿ : ಕುವೆಂಪು