ಯೋಗಾಭ್ಯಾಸದಿಂದಾಗುವ ಪ್ರಯೋಜನಗಳು

 

ಯೋಗ ಒಂದು ಸರಳವಾದ ಸುರಕ್ಷಿತವಾದ ಹಾಗೂ ಯಾವ ವಯಸ್ಸಿನವರೂ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ಮಾಡಬಹುದಾದಂತಹ ಸುಲಭವಾದ ಸಾಧನ. ಪ್ರತಿನಿತ್ಯವೂ ದೇಹ ಅಭ್ಯಾಸ ಹಾಗೂ ನಿಯಮಿತ ಉಸಿರಾಟದ ಅಭ್ಯಾಸವನ್ನು ಕಲಿತರೆ ಯೋಗವನ್ನು ಯಾರೂ ಸಹ ಮಾಡಬಹುದು. ಇದರಿಂದ ನಮ್ಮ ದೇಹ, ಮನಸ್ಸು ಹಾಗೂ ಆತ್ಮಗಳ ನಡುವಿನ ವ್ಯತ್ಯಾಸ ತಪ್ಪಿಸಿ ಒಂದಕ್ಕೊಂದನ್ನು ಜೋಡಿಸಬಹುದು. ಇದರಿಂದ ಅನಾರೋಗ್ಯವಾಗುವುದು ಹಾಗೂ ಮಾನಸಿಕ ಒತ್ತಡದ ಸಂದರ್ಭಗಳು ತಪ್ಪುತ್ತದೆ. ದೇಹ ಹಾಗೂ ಮಾನಸಿಕ ದೃಢತೆ ಮತ್ತು ಮಾನಸಿಕ ಶಾಂತಿ, ಜ್ಞಾನ ಪಡೆಯಬಹುದು. ಆಂತರಿಕ ಶಕ್ತಿಯಿಂದ ನಾವು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸ್ಥಿಮಿತ ಕಳೆದುಕೊಳ್ಳದೇ ಮುನ್ನುಗ್ಗಬಹುದು ಹಾಗೂ ಆರೋಗ್ಯ ಜೀವನ ನಡೆಸಬಹುದು.

ಪ್ರತಿದಿನವೂ ಯೋಗದ ಅಭ್ಯಾಸ ಮಾಡುವುದರಿಂದ ಬಾಹ್ಯ ಹಾಗೂ ಆಂತರಿಕವಾಗಿ ವಿಶ್ರಾಂತಿ ಸಿಗುತ್ತದೆ ಮತ್ತು ಅನೇಕ ತರಹದ ನೋವುಗಳಿಂದ ನಿವಾರಣೆ ಪಡೆಯಬಹುದಾಗಿದೆ. ವಿವಿಧ ಭಂಗಿಗಳು ಹಾಗೂ ಆಸನಗಳ ಅಭ್ಯಾಸದಿಂದ ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸಬಹುದು ಹಾಗೂ ನಮ್ಮ ಮೆದುಳನ್ನು ಚುರುಕುಗೊಳಿಸಿ ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಮ್ಮ ಭಾವನೆಗಳನ್ನು ನಮ್ಮ ಹಿಡಿತದಲ್ಲಿಡಲು ಸಹಕರಿಸುತ್ತದೆ. ನಾವು ನಿಸರ್ಗದೊಡನೆ ಬೆರೆತಂತೆ ಭಾಸವಾಗುತ್ತದೆ. ಆದ್ದರಿಂದ ನಾವು ಕೂಡ ಒಳ್ಳೆಯ ಯೋಜನೆಗಳನ್ನೇ ಮಾಡುತ್ತೇವೆ. ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗಿ ನಮ್ಮೊಳಗೆ ಶಾಂತಿ ನೆಲೆಸುತ್ತದೆ.

ಯೋಗದ ಅಭ್ಯಾಸದಿಂದ ನಾವು ಪ್ರಾಯೋಗಿಕವಾಗಿ ಆಧ್ಯಾತ್ಮದೆಡೆಗೆ ಸಾಗಿದಂತೆ ಆಗುತ್ತದೆ. ಆದ್ದರಿಂದ ನಾವು ಸ್ವಯಂ ಶಿಸ್ತು ಹಾಗೂ ಸ್ವಯಂ ಅರಿವಿನೆಡೆಗೆ ಸಾಗುತ್ತೇವೆ. ಯೋಗವನ್ನು ಅಭ್ಯಾಸ ಮಾಡುವುದಕ್ಕೆ ವಯಸ್ಸು, ಧರ್ಮ, ಮೇಲು ಕೀಳಿನ ಅಡೆತಡೆಗಳಿಲ್ಲ. ಯಾರು ಬೇಕಾದರೂ ಅಭ್ಯಸಿಸಬಹುದು. ಯಾವುದಾದರೂ ಆರೋಗ್ಯ ಸಂಬಂಧಿ ವ್ಯಾಧಿಯಿಂದ ನರಳುತ್ತಿರುವವರು ಕೂಡ ಸಂಬಂಧಿಸಿದ ಆಸನ ಅಭ್ಯಾಸ ಮಾಡಿದರೆ ಅವರು ಕೂಡ ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಆದ್ದರಿಂದ ನಮ್ಮ ದೇಶದ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರು ಇಪ್ಪತ್ತೊಂದು ಜೂನ್ 21 ರಂದು 'ವಿಶ್ವ ಯೋಗ ದಿನ'ವನ್ನಾಗಿ ಘೋಷಿಸಿ ಇದರ ಪ್ರಯೋಜನವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ.

ನಮ್ಮ ದೇಶದ ಪುರಾತನ ಅಭ್ಯಾಸವಾದ ಯೋಗವನ್ನು ಯೋಗಿಗಳು ಅಭ್ಯಾಸ ಮಾಡಿ ತಮ್ಮ ಆಯಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ಯೋಗವು ವಿಶ್ವಕ್ಕೆ ನಮ್ಮ ದೇಶ ನೀಡಿದ ಅದ್ಭುತ ಕೊಡುಗೆಯಾಗಿದೆ. ಇದರ ಅನುಕೂಲವನ್ನು ಎಲ್ಲರೂ ಪಡೆಯಬಹುದಾಗಿದೆ.

ಮಳೆಗಾಲದಲ್ಲಿ ಆರೋಗ್ಯ

 

ಮಳೆಗಾಲ ಶುರುವಾಯಿತೆಂದರೆ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಬಹಳಷ್ಟು ಖುಷಿ. ಮಳೆಯಲ್ಲಿ ನೆನೆದು ಆಟವಾಡುವುದೆಂದರೆ ಏನೋ ಒಂದು ರೀತಿಯ ಪುಳಕ. ಆದರೆ, ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಮಳೆಯಲ್ಲಿ ನೆನೆಯಲಿ ಅಥವಾ ನೆನೆಯದೆ ಇರಲಿ ನಮ್ಮ ದೇಹಕ್ಕೆ ಅನೇಕ ಸೋಂಕುಗಳು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀರಿನಿಂದ ಹಾಗೂ ಗಾಳಿಯಿಂದ ಹರಡುವಂತಹ ರೋಗಗಳಾದ ಸಾಮಾನ್ಯ ನೆಗಡಿ, ಅತಿಸಾರ, ಜಾಂಡೀಸ್ ಮತ್ತು ಮಲೇರಿಯಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. 

ಮಳೆಗಾಲದ ರೋಗಗಳಿಗೆ ಮೂಲ ಕಾರಣವೆಂದರೆ, ಶುದ್ಧವಲ್ಲದ ನೀರು ಕುಡಿಯುವುದರಿಂದ ರೋಗಗಳು ಬೇಗನೆ ನಮ್ಮ ದೇಹಕ್ಕೆ ಅಂಟಿಕೊಳ್ಳುತ್ತವೆ. ಹಾಗಾಗಿ ಮಳೆಗಾಲದಲ್ಲಿ ಕುದಿಸಿ ಆರಿಸಿದ, ಶುದ್ಧೀಕರಿಸಿದ ಅಥವಾ ಶೋಧಿಸಿದ ನೀರನ್ನು ಕುಡಿಯುವ ಮೂಲಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ನಾವು ಬೇರೆಡೆ ಪ್ರಯಾಣಿಸುವಾಗಲೂ ಮನೆಯಿಂದ ಶುದ್ಧೀಕರಿಸಿದ ಅಥವಾ ಕುದಿಸಿ ಆರಿಸಿದ ನೀರನ್ನು ತೆಗೆದುಕೊಂಡು ಹೋಗಬೇಕು. ಹಾಗೂ ಖನಿಜ ಯುಕ್ತ ನೀರನ್ನೇ ಬಳಸಬೇಕು.

ಬಹುತೇಕ ರೋಗಗಳು ನೀರಿನಿಂದ ಹರಡುವುದರಿಂದ, ಹೊರಗಡೆ ತಿನ್ನುವಂತಹ ಆಹಾರ ಪದಾರ್ಥಗಳನ್ನು ಸಿದ್ಧ ಪಡಿಸಲು ಅಥವಾ ಬೀದಿ ಬದಿಯ ಆಹಾರ ತಯಾರಿಕೆಗೆ ಯಾವ ನೀರನ್ನು ಬಳಸಿರುತ್ತಾರೆ ಎಂದು ನಾವು ತಿಳಿಯುವುದು ಕಷ್ಟ. ಆದ್ದರಿಂದ ಹೊರಗೆ ಹೋಗುವಾಗ ಮನೆಯ ಆಹಾರವನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಹೊರಗಡೆಯ ಆಹಾರ ಸೇವಿಸದಿರುವುದೇ ಆರೋಗ್ಯಕ್ಕೆ ಹಿತಕಾರಿ. ಮಳೆಗಾಲದಲ್ಲಿ ವಾತಾವರಣ ತೇವಾಂಶದಿಂದ ಕೂಡಿದ ಹಾಗೂ ಒದ್ದೆಯಿಂದ ಇರುತ್ತದೆ. ಇದು ಬ್ಯಾಕ್ಟೀರಿಯಾ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವನ್ನು ಒದಗಿಸುತ್ತದೆ. ಆದ್ದರಿಂದ ಯಾವುದೇ ಹಳೆಯ ಆಹಾರ ಅಥವಾ ಉಳಿದಂತಹ ಆಹಾರವನ್ನು ಸೇವಿಸದಿರುವುದು ಒಳ್ಳೆಯದು.

ತೆರೆದಿಟ್ಟ ಹಣ್ಣು ಅಥವಾ ತರಕಾರಿಗಳು ನೊಣ ಮತ್ತು ಇತರ ಕೀಟಗಳನ್ನು ಆಕರ್ಷಿಸುತ್ತವೆ. ಇದು ಸೋಂಕು ಅಥವಾ ರೋಗ ಹರಡಲು ಕಾರಣವಾಗಬಹುದು. ಹಾಗಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಮನೆಗೆ ತಂದು ಸ್ವಚ್ಚಗೊಳಿಸಿ ಸಾಕಷ್ಟು ಬೇಯಿಸಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಮಳೆಗಾಲದಲ್ಲಿ ಒದ್ದೆಯಾಗದಂತೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಸಾಧ್ಯವಿದ್ದಷ್ಟು ಬೆಚ್ಚಗಿನ ಬಟ್ಟೆಗಳನ್ನು ಹಾಗೂ ಒಣಗಿದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಒಂದು ವೇಳೆ ಒದ್ದೆಯಾದರೂ ತಕ್ಷಣ ಮನೆಗೆ ತೆರಳಿ ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಬಟ್ಟೆ ಬದಲಿಸಿ ಒಣಗಿದ ಬಟ್ಟೆಯನ್ನು ಧರಿಸುವುದು ಉತ್ತಮ. ಇದರಿಂದ ನೆಗಡಿಯಂತಹ ಸಾಮಾನ್ಯ ಸೋಂಕಿನಿಂದ ನಾವು ದೂರವಿರಬಹುದಾಗಿದೆ.