Showing posts with label ಶಿಶುಕಾವ್ಯ. Show all posts
Showing posts with label ಶಿಶುಕಾವ್ಯ. Show all posts

ಸ್ವಾಮಿ ದೇವನೆ ಲೋಕಪಾಲನೆ

 


 


ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ


ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ
ಕಾವರಿಲ್ಲವು ನಿನ್ನ ಬಿಟ್ಟರೆ ದೇವನೆ ಜಗದೀಶನೆ
ಜೀವ ಕೋಟಿಯು ನಿನ್ನ ದಯದಿಂದ ಜೀವಿಪುದಲ್ಲವೇ


ರಾತ್ರಿ ನಿದ್ರೆಯ ಗೈವ ಕಾಲದಿ ನೀನೆ ನಮ್ಮನು ಕಾಯ್ದೆಯೈ
ಸ್ತೋತ್ರ ಮಾಡುವ ಹಾಗೆ ನಿನ್ನನು ಪಕ್ಷಿಗಳು ಧ್ವನಿ ಗೈದುವೈ
ಮಿತ್ರನೆ೦ಬುವ ನಾಮಧೇಯವು ಸತ್ಯವಾದುದು ನಿನ್ನೊಳು
ಚಿತ್ರಭಾನುವೆ ನಿನ್ನ ನೋಡಿದದೆಲ್ಲಿ ಪೋದುದು ಕತ್ತಲೆ

ಮೂಡುವನು ರವಿ ಮೂಡುವನು

 


ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು;
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು.

ಬೆಳಕಿನ ಕಣ್ಣುಗಳಿಂದಾ ಸೂರ್ಯನು; ನೋಡುವನು, ಬಿಸಿಲೂಡುವನು;
ಚಿಳಿಪಿಳಿಹಾಡನು ಹಾಡಿಸಿ ಹಕ್ಕಿಯ, ಗೂಡಿನ ಹೊರ ಹೊರ ದೂಡುವನು.

ಬಂಗಾರದ ಚೆಲು ಬಿಸಿಲ ಕಿರೀಟದ; ಶೃಂಗಾರದ ತಲೆ ಎತ್ತುವನು;
ತೆಂಗಿನ ಕಂಗಿನ ತಾಳೆಯ ಬಾಳೆಯ, ಅಂಗಕೆ ರಂಗನು ಮೆತ್ತುವನು.

ಮಾಡಿನ ಹುಲ್ಲಲಿ ಚಿನ್ನದ ಗೆರೆಯನು; ಎಳೆಯುವನು ರವಿ ಎಳೆಯುವನು;
ಕೂಡಲೆ ಕೋಣೆಯ ಕತ್ತಲ ಕೊಳೆಯನು, ತೊಳೆಯುವನು ರವಿ ಹೊಳೆಯುವನು.

ಮಲಗಿದ ಕೂಸಿನ ನಿದ್ದೆಯ ಕಸವನು; ಗುಡಿಸುವನು ಕಣ್ ಬಿಡಿಸುವನು;
ಹುಲುಗಿಡ ಹೂವಿಗೆ ಪರಿಪರಿ ಬಣ್ಣವ ಉಡಿಸುವನು ಹನಿ ತೊಡಿಸುವನು.

ಏರುವನು ರವಿ ಏರುವನು; ಬಾನೊಳು ಸಣ್ಣಗೆ ತೋರುವನು;
ಏರಿದವರು ಚಿಕ್ಕವನಿರಬೇಕೆಲೆಎಂಬಾ ಮಾತನು ಸಾರುವನು.

ಕವಿಪಂಜೆ ಮಂಗೇಶ ರಾಯರು


ಇರುವೆ ಇರುವೆ ಕರಿಯ ಇರುವೆ

 



ಮಗು: ಇರುವೆ ಇರುವೆ ಕರಿಯ ಇರುವೆ

ನಾನು ಜೊತೆಗೆ ಬರುವೆ

ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ

ಇರುವೆ : ಮಳೆಯ ಕಾಲ ಬರುತಲಿಹುದು

ನನಗೆ ಸಮಯವಿಲ್ಲ

ಅನ್ನ ಕೂಡಿ ಹಾಕಿ ಇಟ್ಟು

ಕರೆಯ ಬರುವೆನಲ್ಲ !



ಮಗು : ನಾಯಿಮರಿ ನಾಯಿಮರಿ

ನಿನ್ನ ಜೊತೆಗೆ ಆಡುವೆ

ಕುಂಯ್ ಕುಂಯ್ ರಾಗ ಕಲಿಸು

ನಿನ್ನ ಹಾಗೆ ಹಾಡುವೆ

ನಾಯಿಮರಿ : ಆಡಲಿಕ್ಕೆ ಹಾಡಲಿಕ್ಕೆ

ನನಗೆ ಸಮಯವಿಲ್ಲ

ಅನ್ನ ಹಾಕಿದವನ ಮನೆಯ

ಕಾಯುತಿರುವೆನಲ್ಲ !

ಮಗು : ಜೇನು ಹುಳುವೆ ಜೇನು ಹುಳುವೆ

ಎಲ್ಲಿ ಹೋಗುತಿರುವೆ ?

ಕರೆದುಕೊಂಡು ಹೋಗು ನನ್ನ

ನಿನ್ನ ಜೊತೆಗೆ ಬರುವೆ

ಜೇನು ಹುಳ : ಬನವ ಸುತ್ತಿ ಸುಳಿದು ನಾನು

ಜೇನನರಸಿ ತರುವೆ

ಈಗ ಬೇಡ ಚೈತ್ರ ಬರಲಿ

ಆಗ ನಾನು ಕರೆವೆ !

ಮಗು : ಕುಹೂ ಕುಹೂ ಕೂಗುತಿರುವ

ಮಧುರ ಕಂಠ ಕೋಗಿಲೆ

ಎಲೆಯ ಬಲೆಯ ನೆಲೆಯೊಳಿರಲು

ನಾನು ಜೊತೆಗೆ ಬರುವೆ

ಕೋಗಿಲೆ : ಕಾಕ ದೃಷ್ಟಿ ತಪ್ಪಿಸಲ್ಕೆ

ಹೊಂಚಿನಲ್ಲಿ ಇರುವೆ

ಚೈತ್ರ ಕಳೆಯೆ ಒಂಟಿ ಇರುವೆ

ಆಗ ಕರೆಯ ಬರುವೆ

ಮಗುಯಾರು ಇವರು ನನ್ನ ಕೂಡೆ ಆಡಲಿಕ್ಕೆ ಒಲ್ಲರು

ತಮ್ಮ ತಮ್ಮ ಕೆಲಸದಲ್ಲಿ ವೇಳೆ ಕಳೆವರೆಲ್ಲರು

ಅವರ ಹಾಗೆ ಮೊದಲು ನನ್ನ ಕೆಲಸ ನಾನು ಮಾಡುವೆ

ಓದು ಬರಹ ಮುಗಿಸಿಕೊಂಡು ಸಮಯ ಉಳಿಯೆ ಆಡುವೆ !!

ಕವಿ : ಸಿಸು ಸಂಗಮೇಶ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

 


ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು |


ರಾಜನ್ಯರಿಪು ಪರಶುರಾಮನಾಳಿದ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರ ವೃಂದದ ನಾಡು |


ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು

ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು ||


ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರ ನಾರಾಯಣನ ಬೀಡು ||   


                                                          - ಹುಯಿಲುಗೋಳ ನಾರಾಯಣ ರಾವ್

ಹೂವಾಡಗಿತ್ತಿ




ಹೂವನು ಮಾರುತ ಹೂವಾಡಗಿತ್ತಿ
ಹಾಡುತ ಬರುತಿಹಳು
ಘಮಘಮ ಹೂಗಳು ಬೇಕೇಎನ್ನುತ
ಹಾಡುತ ಬರುತಿಹಳು
ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ
ಹಸುರಿನ ಹೊಸ ಮರುಗ;
ಹಾಕಿ ಕಟ್ಟಿರುವೆ ಬೇಕೇ ಎನುತ
ಹಾಡುತ ಬರುತಿಹಳು
ಹೊಸ ಸೇವಂತಿಗೆ ಹೊಸ ಇರುವಂತಿಗೆ
ಅರಸಿನ ತಾಳೆಯಿದೆ;
ಅಚ್ಚ ಮಲ್ಲೆಯಲಿ ಪಚ್ಚ ತೆನೆಗಳು
ಸೇರಿದ ಮಾಲೆಯಿದೆ
ಕಂಪನು ಚೆಲ್ಲುವ ಕೆಂಪು ಗುಲಾಬಿ
ಅರಳಿದ ಹೊಸ ಕಮಲ;
ಬಿಳುಪಿನ ಜಾಜಿ ಅರಳಿದ ಬಿಳಿ ಕಮಲ
ಬಗೆ ಬಗೆ ಹೂಗಳು ಬೇಕೇ ಎನುತ
ಹಾಡುತ ಬರುತಿಹಳು

ಸಾಹಿತ್ಯ: ಪ್ರೊ।। ಎಂ.ವಿ. ಸೀತಾರಾಮಯ್ಯ