ಯೋಗಾಭ್ಯಾಸದಿಂದಾಗುವ ಪ್ರಯೋಜನಗಳು

 

ಯೋಗ ಒಂದು ಸರಳವಾದ ಸುರಕ್ಷಿತವಾದ ಹಾಗೂ ಯಾವ ವಯಸ್ಸಿನವರೂ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ಮಾಡಬಹುದಾದಂತಹ ಸುಲಭವಾದ ಸಾಧನ. ಪ್ರತಿನಿತ್ಯವೂ ದೇಹ ಅಭ್ಯಾಸ ಹಾಗೂ ನಿಯಮಿತ ಉಸಿರಾಟದ ಅಭ್ಯಾಸವನ್ನು ಕಲಿತರೆ ಯೋಗವನ್ನು ಯಾರೂ ಸಹ ಮಾಡಬಹುದು. ಇದರಿಂದ ನಮ್ಮ ದೇಹ, ಮನಸ್ಸು ಹಾಗೂ ಆತ್ಮಗಳ ನಡುವಿನ ವ್ಯತ್ಯಾಸ ತಪ್ಪಿಸಿ ಒಂದಕ್ಕೊಂದನ್ನು ಜೋಡಿಸಬಹುದು. ಇದರಿಂದ ಅನಾರೋಗ್ಯವಾಗುವುದು ಹಾಗೂ ಮಾನಸಿಕ ಒತ್ತಡದ ಸಂದರ್ಭಗಳು ತಪ್ಪುತ್ತದೆ. ದೇಹ ಹಾಗೂ ಮಾನಸಿಕ ದೃಢತೆ ಮತ್ತು ಮಾನಸಿಕ ಶಾಂತಿ, ಜ್ಞಾನ ಪಡೆಯಬಹುದು. ಆಂತರಿಕ ಶಕ್ತಿಯಿಂದ ನಾವು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸ್ಥಿಮಿತ ಕಳೆದುಕೊಳ್ಳದೇ ಮುನ್ನುಗ್ಗಬಹುದು ಹಾಗೂ ಆರೋಗ್ಯ ಜೀವನ ನಡೆಸಬಹುದು.

ಪ್ರತಿದಿನವೂ ಯೋಗದ ಅಭ್ಯಾಸ ಮಾಡುವುದರಿಂದ ಬಾಹ್ಯ ಹಾಗೂ ಆಂತರಿಕವಾಗಿ ವಿಶ್ರಾಂತಿ ಸಿಗುತ್ತದೆ ಮತ್ತು ಅನೇಕ ತರಹದ ನೋವುಗಳಿಂದ ನಿವಾರಣೆ ಪಡೆಯಬಹುದಾಗಿದೆ. ವಿವಿಧ ಭಂಗಿಗಳು ಹಾಗೂ ಆಸನಗಳ ಅಭ್ಯಾಸದಿಂದ ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸಬಹುದು ಹಾಗೂ ನಮ್ಮ ಮೆದುಳನ್ನು ಚುರುಕುಗೊಳಿಸಿ ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಮ್ಮ ಭಾವನೆಗಳನ್ನು ನಮ್ಮ ಹಿಡಿತದಲ್ಲಿಡಲು ಸಹಕರಿಸುತ್ತದೆ. ನಾವು ನಿಸರ್ಗದೊಡನೆ ಬೆರೆತಂತೆ ಭಾಸವಾಗುತ್ತದೆ. ಆದ್ದರಿಂದ ನಾವು ಕೂಡ ಒಳ್ಳೆಯ ಯೋಜನೆಗಳನ್ನೇ ಮಾಡುತ್ತೇವೆ. ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗಿ ನಮ್ಮೊಳಗೆ ಶಾಂತಿ ನೆಲೆಸುತ್ತದೆ.

ಯೋಗದ ಅಭ್ಯಾಸದಿಂದ ನಾವು ಪ್ರಾಯೋಗಿಕವಾಗಿ ಆಧ್ಯಾತ್ಮದೆಡೆಗೆ ಸಾಗಿದಂತೆ ಆಗುತ್ತದೆ. ಆದ್ದರಿಂದ ನಾವು ಸ್ವಯಂ ಶಿಸ್ತು ಹಾಗೂ ಸ್ವಯಂ ಅರಿವಿನೆಡೆಗೆ ಸಾಗುತ್ತೇವೆ. ಯೋಗವನ್ನು ಅಭ್ಯಾಸ ಮಾಡುವುದಕ್ಕೆ ವಯಸ್ಸು, ಧರ್ಮ, ಮೇಲು ಕೀಳಿನ ಅಡೆತಡೆಗಳಿಲ್ಲ. ಯಾರು ಬೇಕಾದರೂ ಅಭ್ಯಸಿಸಬಹುದು. ಯಾವುದಾದರೂ ಆರೋಗ್ಯ ಸಂಬಂಧಿ ವ್ಯಾಧಿಯಿಂದ ನರಳುತ್ತಿರುವವರು ಕೂಡ ಸಂಬಂಧಿಸಿದ ಆಸನ ಅಭ್ಯಾಸ ಮಾಡಿದರೆ ಅವರು ಕೂಡ ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಆದ್ದರಿಂದ ನಮ್ಮ ದೇಶದ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರು ಇಪ್ಪತ್ತೊಂದು ಜೂನ್ 21 ರಂದು 'ವಿಶ್ವ ಯೋಗ ದಿನ'ವನ್ನಾಗಿ ಘೋಷಿಸಿ ಇದರ ಪ್ರಯೋಜನವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ.

ನಮ್ಮ ದೇಶದ ಪುರಾತನ ಅಭ್ಯಾಸವಾದ ಯೋಗವನ್ನು ಯೋಗಿಗಳು ಅಭ್ಯಾಸ ಮಾಡಿ ತಮ್ಮ ಆಯಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ಯೋಗವು ವಿಶ್ವಕ್ಕೆ ನಮ್ಮ ದೇಶ ನೀಡಿದ ಅದ್ಭುತ ಕೊಡುಗೆಯಾಗಿದೆ. ಇದರ ಅನುಕೂಲವನ್ನು ಎಲ್ಲರೂ ಪಡೆಯಬಹುದಾಗಿದೆ.

ಮಳೆಗಾಲದಲ್ಲಿ ಆರೋಗ್ಯ

 

ಮಳೆಗಾಲ ಶುರುವಾಯಿತೆಂದರೆ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಬಹಳಷ್ಟು ಖುಷಿ. ಮಳೆಯಲ್ಲಿ ನೆನೆದು ಆಟವಾಡುವುದೆಂದರೆ ಏನೋ ಒಂದು ರೀತಿಯ ಪುಳಕ. ಆದರೆ, ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಮಳೆಯಲ್ಲಿ ನೆನೆಯಲಿ ಅಥವಾ ನೆನೆಯದೆ ಇರಲಿ ನಮ್ಮ ದೇಹಕ್ಕೆ ಅನೇಕ ಸೋಂಕುಗಳು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀರಿನಿಂದ ಹಾಗೂ ಗಾಳಿಯಿಂದ ಹರಡುವಂತಹ ರೋಗಗಳಾದ ಸಾಮಾನ್ಯ ನೆಗಡಿ, ಅತಿಸಾರ, ಜಾಂಡೀಸ್ ಮತ್ತು ಮಲೇರಿಯಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. 

ಮಳೆಗಾಲದ ರೋಗಗಳಿಗೆ ಮೂಲ ಕಾರಣವೆಂದರೆ, ಶುದ್ಧವಲ್ಲದ ನೀರು ಕುಡಿಯುವುದರಿಂದ ರೋಗಗಳು ಬೇಗನೆ ನಮ್ಮ ದೇಹಕ್ಕೆ ಅಂಟಿಕೊಳ್ಳುತ್ತವೆ. ಹಾಗಾಗಿ ಮಳೆಗಾಲದಲ್ಲಿ ಕುದಿಸಿ ಆರಿಸಿದ, ಶುದ್ಧೀಕರಿಸಿದ ಅಥವಾ ಶೋಧಿಸಿದ ನೀರನ್ನು ಕುಡಿಯುವ ಮೂಲಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ನಾವು ಬೇರೆಡೆ ಪ್ರಯಾಣಿಸುವಾಗಲೂ ಮನೆಯಿಂದ ಶುದ್ಧೀಕರಿಸಿದ ಅಥವಾ ಕುದಿಸಿ ಆರಿಸಿದ ನೀರನ್ನು ತೆಗೆದುಕೊಂಡು ಹೋಗಬೇಕು. ಹಾಗೂ ಖನಿಜ ಯುಕ್ತ ನೀರನ್ನೇ ಬಳಸಬೇಕು.

ಬಹುತೇಕ ರೋಗಗಳು ನೀರಿನಿಂದ ಹರಡುವುದರಿಂದ, ಹೊರಗಡೆ ತಿನ್ನುವಂತಹ ಆಹಾರ ಪದಾರ್ಥಗಳನ್ನು ಸಿದ್ಧ ಪಡಿಸಲು ಅಥವಾ ಬೀದಿ ಬದಿಯ ಆಹಾರ ತಯಾರಿಕೆಗೆ ಯಾವ ನೀರನ್ನು ಬಳಸಿರುತ್ತಾರೆ ಎಂದು ನಾವು ತಿಳಿಯುವುದು ಕಷ್ಟ. ಆದ್ದರಿಂದ ಹೊರಗೆ ಹೋಗುವಾಗ ಮನೆಯ ಆಹಾರವನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಹೊರಗಡೆಯ ಆಹಾರ ಸೇವಿಸದಿರುವುದೇ ಆರೋಗ್ಯಕ್ಕೆ ಹಿತಕಾರಿ. ಮಳೆಗಾಲದಲ್ಲಿ ವಾತಾವರಣ ತೇವಾಂಶದಿಂದ ಕೂಡಿದ ಹಾಗೂ ಒದ್ದೆಯಿಂದ ಇರುತ್ತದೆ. ಇದು ಬ್ಯಾಕ್ಟೀರಿಯಾ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವನ್ನು ಒದಗಿಸುತ್ತದೆ. ಆದ್ದರಿಂದ ಯಾವುದೇ ಹಳೆಯ ಆಹಾರ ಅಥವಾ ಉಳಿದಂತಹ ಆಹಾರವನ್ನು ಸೇವಿಸದಿರುವುದು ಒಳ್ಳೆಯದು.

ತೆರೆದಿಟ್ಟ ಹಣ್ಣು ಅಥವಾ ತರಕಾರಿಗಳು ನೊಣ ಮತ್ತು ಇತರ ಕೀಟಗಳನ್ನು ಆಕರ್ಷಿಸುತ್ತವೆ. ಇದು ಸೋಂಕು ಅಥವಾ ರೋಗ ಹರಡಲು ಕಾರಣವಾಗಬಹುದು. ಹಾಗಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಮನೆಗೆ ತಂದು ಸ್ವಚ್ಚಗೊಳಿಸಿ ಸಾಕಷ್ಟು ಬೇಯಿಸಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಮಳೆಗಾಲದಲ್ಲಿ ಒದ್ದೆಯಾಗದಂತೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಸಾಧ್ಯವಿದ್ದಷ್ಟು ಬೆಚ್ಚಗಿನ ಬಟ್ಟೆಗಳನ್ನು ಹಾಗೂ ಒಣಗಿದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಒಂದು ವೇಳೆ ಒದ್ದೆಯಾದರೂ ತಕ್ಷಣ ಮನೆಗೆ ತೆರಳಿ ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಬಟ್ಟೆ ಬದಲಿಸಿ ಒಣಗಿದ ಬಟ್ಟೆಯನ್ನು ಧರಿಸುವುದು ಉತ್ತಮ. ಇದರಿಂದ ನೆಗಡಿಯಂತಹ ಸಾಮಾನ್ಯ ಸೋಂಕಿನಿಂದ ನಾವು ದೂರವಿರಬಹುದಾಗಿದೆ.

ಉಪಾಯ ಬಲ್ಲವನಿಗೆ ಅಪಾಯವಿಲ್ಲ

ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎನ್ನುವುದು ಬುದ್ಧಿವಂತಿಕೆಯ ಮಹತ್ವವನ್ನು ತಿಳಿಸುವ ಗಾದೆಮಾತಾಗಿದೆ.  ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು  ಸಮಸ್ಯೆಗಳು ಅಥವಾ ಅನೇಕ ರೀತಿಯ ಸಂಕಟದ ಪರಿಸ್ಥಿತಿಗಳು ಎದುರಾಗುತ್ತವೆ. ಈ ಗಾದೆಮಾತು,  ಉಪಾಯ ಗೊತ್ತಿದ್ದವನಿಗೆ ಅಪಾಯ ಬರುವುದೇ ಇಲ್ಲ ಎಂದು ಹೇಳುವುದಿಲ್ಲ. ಮನುಷ್ಯನೆಂದ ಮೇಲೆ ಸಮಸ್ಯೆಗಳು, ಅಪಾಯಗಳು ಇದ್ದದ್ದೇ. ಆದರೆ ಅವುಗಳನ್ನು ಉಪಾಯವಾಗಿ ನಿಭಾಯಿಸುವುದನ್ನು ಕಲಿಯಬೇಕು. ಹೀಗೆ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿರ್ವಹಿಸುವುದರಿಂದ ಅವುಗಳಿಂದ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದೆನ್ನುವುದು ನಿಜ.  ಎಷ್ಟೋ ಸಾರಿ ಉಪಾಯ ಮತ್ತು ಮುಂದಾಲೋಚನೆಯಿಂದ ನಡೆದುಕೊಂಡರೆ ಮುಂದೆ ಬರುವ ಅಪಾಯಗಳನ್ನೂ  ತಡೆಗಟ್ಟಬಹುದು. ಶಕ್ತಿಯಿಂದ ಅಥವಾ ಬಲಪ್ರಯೋಗದಿಂದ ಕೂಡ ಆಗದ ಕೆಲಸಗಳನ್ನು ಜಾಣತನದಿಂದ  ಸುಲಭವಾಗಿ ಮಾಡಬಹುದು.  

ಹೀಗೆ ಸಮಸ್ಯೆಗಳು ಎದುರಾದಾಗ ಬುದ್ಧಿವಂತ ವ್ಯಕ್ತಿಗಳು ಅದರಿಂದ ಗಾಬರಿಗೆ ಒಳಗಾಗುವುದಿಲ್ಲ. ಅವರು ಅನಗತ್ಯ ಒತ್ತಡಕ್ಕೆ ಸಿಲುಕಿ ವಿಷಮ ಪರಿಸ್ಥಿತಿಯಿಂದ ಹೊರಬರಲು ಆತುರ ಪಡುವುದಿಲ್ಲ.ಅದರ ಬದಲು ಅವರು ಜಾಣತನದಿಂದ ಹಾಗೂ ಸಮಾಧಾನ ಚಿತ್ತದಿಂದ   ಪರಿಹಾರ  ಮಾರ್ಗವನ್ನು ಕಂಡುಕೊಳ್ಳುತ್ತಾರೆ.  ಮನುಷ್ಯನು ತನ್ನ ಪ್ರತಿಕೂಲ ಪರಿಸ್ಥಿತಿಯಲ್ಲಿ ನಾವು ತಾಳ್ಮೆಯನ್ನು ಕಳೆದುಕೊಳ್ಳದೆ, ಶಾಂತವಾದ ಮನಸ್ಸಿನಿಂದ ಯೋಚಿಸಿದರೆ ಯಾವುದೇ ಸಮಸ್ಯೆ ಇರಲಿ ಬಗೆ ಹರಿಯದೆ ಇರದು.

ಪರಿಸರದ ಸಂರಕ್ಷಣೆ

ಪರಿಸರ ಎಂದರೆ ನಮ್ಮ ಸುತ್ತಮುತ್ತಲು ಇರುವ ವಾತಾವರಣ ಉದಾಹರಣೆಗೆ  ಕಾಡು, ಗುಡ್ಡಬೆಟ್ಟಗಳು, ಭೂಮಿ, ಆಕಾಶ, ಪಶು ಪಕ್ಷಿಗು ಇತ್ಯಾದಿ.  ಮಾನವನೂ ಸಹ ಇದೆ ಪರಿಸರದ ಒಂದು ಭಾಗ. ಇನ್ನು ಪರಿಸರ ಮಾಲಿನ್ಯ ಎಂದರೆ ಅಪಾಯಕಾರಿ ಹಾಗೂ ವಿಷಕಾರಕವಾದ ವಸ್ತುಗಳು ಪರಿಸರಕ್ಕೆ ಸೇರುವುದು. ಈ ವಸ್ತುಗಳು ಭೂಮಿಯ ಮೇಲಿನ ಎಲ್ಲ ಜೀವಿಗಳ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತವೆ ಹಾಗೂ ನೈಸರ್ಗಿಕವಾಗಿ ನಡೆಯುವ ಜೈವಿಕ ಚಕ್ರದ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಪರಿಸರ ಮಾಲಿನ್ಯಕ್ಕೆ ನೈಸರ್ಗಿಕ ಕಾರಣಗಳೂ ಇವೆ ಮತ್ತು ಮಾನವ ನಿರ್ಮಿತ ಕಾರಣಗಳೂ ಇವೆ.   

ಮಾನವ  ಪ್ರತಿಯೊಂದಕ್ಕೂ ಪ್ರಕೃತಿಯನ್ನೇ ಅವಲಂಬಿಸಿದ್ದಾನೆ. ನಾವು ನಮ್ಮ ದಿನನಿತ್ಯದ ಅಗತ್ಯಗಳಾದ ಆಹಾರ, ಬಟ್ಟೆ, ಗಾಳಿ, ಬೆಳಕು, ಔಷಧ ಮುಂತಾದ ಜೀವನಾವಶ್ಯಕ ಸಕಲ ಸೌಕರ್ಯಗಳಿಗೂ ಪ್ರಕೃತಿಯೇ ಜೀವನಾಧಾರವಾಗಿದೆ. ಮಾನವರಾದ ನಾವು ನಮ್ಮ ಅಜ್ಞಾನ, ದುರಾಸೆ, ದುಂದುಗಾರಿಕೆ ಹಾಗೂ ಮೋಜುಮಸ್ತಿಗಳಿಗಾಗಿ ಇಂತಹ ಅಮೂಲ್ಯವಾದ ಪರಿಸರವನ್ನು ನಾಶ ಮಾಡಿದರೆ ಅಸಮತೋಲನ ಉಂಟಾಗುತ್ತದೆ. ಆದ್ದರಿಂದ ಈ ಸುಂದರ ಪರಿಸರದ ಸಂರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ

  1. ಆಧುನಿಕ ಕೈಗಾರಿಕಾ ಸ್ಥಾವರದ ರಚನಾ ವಿನ್ಯಾಸದಲ್ಲಿ ಕಶ್ಮಲ ಕಳೆಯುವುದು ತುಂಬ ಮುಖ್ಯವಾದುದು. ಘನಪದಾರ್ಥಗಳಲ್ಲಿ ತೇಲುವಂಥವು, ಯಾಂತ್ರಿಕವಾಗಿ ಪ್ರತ್ಯೇಕಿಸಬೇಕು, ಮುಳುಗುವಂಥದನ್ನು ವಿಶಿಷ್ಟ ಕೋಶಗಳಲ್ಲಿ ಕೆಳಗಿಳಿಸಿ ಬೇರ್ಪಡಿಸಬೇಕು. ಕೈಗಾರಿಕಾ ಕಶ್ಮಲದ ದುಷ್ಪರಿಣಾಮಗಳ ಬಗ್ಗೆ ವಿಶೇಷ ಗಮನ ಕೊಡುವುದು ಅಗತ್ಯ
  2. ಅರಣ್ಯಗಳು ಜನರ ಶ್ವಾಸಕೋಶಗಳು. ಇವುಗಳು ಊನವಾದರೆ ಜನರ ಜೀವನ ದುಸ್ಸಾಹಸವೇ ಸರಿ. ಆದುದರಿಂದ ಅವುಗಳ ರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ. ಅರಣ್ಯನಾಶವನ್ನು ತಡೆಗಟ್ಟಬೇಕು
  3. ವನಮಹೋತ್ಸವದ ಮೂಲಕ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಅರಣ್ಯ ರಕ್ಷಣೆ ಮಾಡಿ ಇಡೀ ಜಗತ್ತನ್ನು ಅಪಾಯದಿಂದ ಮಾಡಬೇಕಾದ ಜವಾಬ್ದಾರಿ ನಮ್ಮ ಕೈಯಲ್ಲಿದೆ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  4. ನಮಗೆ ನೀರು ದೊರೆಯುವ ಮೂಲಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಕೆರೆ ಕಟ್ಟೆಗಳಲ್ಲಿನ ನೀರನ್ನು ಕೊಳಕು ಮಾಡಬಾರದು. ಬಾವಿಯನ್ನು ಸುತ್ತಲೂ ಕಟ್ಟೆ ಕಟ್ಟುವುದರ ಮೂಲಕ ರಕ್ಷಿಸಬೇಕು. ಆದಷ್ಟು ಕೊಳವೆ ಬಾವಿಯನ್ನು ತೋಡಿಸಬೇಕು. ಕುಡಿಯುವ ನೀರನ್ನು ಶುದ್ಧವಾಗಿಡುವುದು ಇಡೀ ಸಮುದಾಯದ ಜವಾಬ್ದಾರಿ.
  5. ನಮ್ಮ ಮನೆಯ  ಸುತ್ತಮುತ್ತಲಿನ ಜಾಗವನ್ನು ಸ್ವಚ್ಚವಾಗಿ ಇಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮನೆಯ ಹಿಂದೆ ಮುಂದೆ ಜಾಗವಿದ್ದರೆ ಕೈ ತೋಟ ಮಾಡುವುದುಉತ್ತಮ. ಸೂಕ್ತ ರೀತಿಯಲ್ಲಿ ಗೊಬ್ಬರದ ಗುಂಡಿಗಳನ್ನು ನಿರ್ಮಿಸಿ ಸಗಣಿ ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ಅದರಲ್ಲಿ ಹಾಕಬೇಕು.
  6. ಶೌಚಾಲಯಗಳ ಪಾತ್ರ ಅತಿ ಮುಖ್ಯ. ನೈರ್ಮಲ್ಯದಿಂದ ಕೂಡಿದ ಶೌಚಗೃಹಗಳಿಂದ ಅನೇಕ ರೋಗ ರುಜಿನಗಳು ಹರಡುವುದನ್ನು ತಡೆಗಟ್ಟಬಹುದು.

ಮ್ಮ ಭೂಮಿ ಮುಂದಿನ ಪೀಳಿಗೆಗೆ ಹಸಿರು ಕಾಡುಗಳನ್ನು, ಶುದ್ಧವಾದ ಗಾಳಿ, ನೀರನ್ನು ಹೊಂದಿರಬೇಕೆಂದರೆ ನಾವು ನಮ್ಮ ಪರಿಸರವನ್ನು ರಕ್ಷಿಸಿ ಕೊಳ್ಳಬೇಕು. ಈಗಲೇ ನಾವು ಎಚ್ಚೆತ್ತುಕೊಂಡು ನಮ್ಮ ಸುತ್ತ ಮುತ್ತಲಿನವರಲ್ಲೂ ಜಾಗೃತಿ ಮೂಡಿಸುವುದು ಅನಿವಾರ್ಯ. ನಮ್ಮ ನಡಿಗೆ ಸ್ವಚ್ಛ ಪರಿಸರದೆಡೆಗೆ ಇರಬೇಕು.

 

ಶಕ್ತಿಗಿಂತ ಯುಕ್ತಿ ಮೇಲು

 

ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆ ಇಂದಲ್ಲ, ಅಂದಿನ ಕಾಲದಿಂದಲೂ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಬೆಳೆದುಕೊಂದು ಬಂದಿದೆ. ಇವು ಚಿಕ್ಕ ವಾಕ್ಯಗಳಲ್ಲಿ ಹಿರಿದಾದ ಅರ್ಥವನ್ನು ನೀಡುವ ನುಡಿಮುತ್ತುಗಳಾಗಿವೆ. ಅದು ಜೀವನ ಅನುಭವಕ್ಕೆ ಹಿಡಿದ ಕೈಗನ್ನಡಿ. ಆದ್ದರಿಂದ ಗಾದೆಗಳು ಸತ್ಯಕ್ಕೆ ಹತ್ತಿರವಾಗಿವೆ. ಇಂದು ದೇಶ ವಿದೇಶಗಳಲ್ಲಿಯೂ ಸಹ ಹೆಚ್ಚು ಪ್ರಚಲಿತವಾಗಿ ಬೆಳೆದುಕೊಂಡು ಬಂದಿದೆ.

ಶಕ್ತಿಯಿಂದ ಸಾಧಿಸಲು ಸಾಧ್ಯವಾಗದ್ದನ್ನು ಯುಕ್ತಿಯಿಂದ ಸಾಧಿಸುವ ನಿಟ್ಟಿನಲ್ಲಿ ಶಕ್ತಿಗಿಂತ ಯುಕ್ತಿ ಮೇಲು ಎಂಬ ಗಾದೆ ಸೃಷ್ಟಿಯಾಗಿದೆ. ಶಕ್ತಿಯಿಂದ ಎಲ್ಲಾ ಕೆಲಸಗಳನ್ನು ಸಾಧಿಸಲು ಸಾಧ್ಯವಿಲ್ಲ. ಶಕ್ತಿಯಿಂದ ಸಾಧಿಸಲಾಗದ ಕೆಲಸವನ್ನು ಯುಕ್ತಿಯಿಂದ ಸಾಧಿಸಬೇಕು. ಸಂದರ್ಭೋಚಿತ ಉಪಾಯದಿಂದ ಎಂತಹ ಶತ್ರುವನ್ನಾದರೂ ಸೋಲಿಸಬಹುದು. ಅಪಾಯ ಬಂದಾಗ ಉಪಾಯದಿಂದ ಪಾರಾಗಬೇಕು. ಉದಾಹರಣೆಗೆ ಒಂದು ಪುಟ್ಟ ಮೊಲದ ಕತೆ ಇಲ್ಲಿ ಹೇಳಬಹುದು. ಒಂದು ಪುಟ್ಟ ಮೊಲ ಸಿಂಹಕ್ಕೆ ಆಹಾರವಾಗಲು ಹೊರಟಿತ್ತು. ಅದು ಆಟವಾಡಿಕೊಂಡು ಸಮಯಕ್ಕಿಂತ ತಡವಾಗಿ ಸಿಂಹದ ಬಳಿ ಬಂದಿತು. ಹಸಿವಿನಿಂದ ಕ್ರೋಧಗೊಂಡಿದ್ದ ಸಿಂಹ ಮೊಲವನ್ನು ನೋಡಿದ ತಕ್ಷಣ ತಿನ್ನಲು ಹಾರಿತು. ಆಗ ಮೊಲ ತನ್ನನ್ನು ಇನ್ನೊಂದು ಬಲವಾದ ಸಿಂಹ ತಡೆಯಿತೆಂದೂ ಕತೆ ಕಟ್ಟಿ ಹೇಳಿತು. ಅದನ್ನು ನಂಬಿದ ಸಿಂಹ ಮೊಲವನ್ನು ಇನ್ನೊಂದು ಸಿಂಹದ ಬಳಿ ಕರೆದೊಯ್ಯಲು ಹೇಳಿತು. ಆಗ ಮೊಲ ಸಿಂಹವನ್ನು ಬಾವಿಯ ಬಳಿ ಕರೆದುಕೊಂಡು ಬಂದಿತು. ಒಳಗೆ ನೋಡಿ ಘರ್ಜಿಸಿದ ಸಿಂಹಕ್ಕೆ ತನ್ನ ಧ್ವನಿಯೇ ಪ್ರತಿಧ್ವನಿಯಾಗಿ ದೊಡ್ಡ ಧ್ವನಿಯಲ್ಲಿ ಕೇಳಿಸಿತು. ಕ್ರೋಧಗೊಂಡ ಸಿಂಹ ಬಾವಿಗೆ ಹಾರಿ ತನ್ನ ಪ್ರಾಣ ಕಳೆದುಕೊಂಡಿತು. ಹೀಗೆ ಮೊಲ ತನ್ನ ಹಾಗೂ ಕಾಡಿನ ಬೇರೆ ಪ್ರಾಣಿಗಳ ಜೀವ ಕೂಡಾ ಉಳಿಸಿತು.

ಹಾಗೆಯೇ ಬುದ್ಧಿವಂತಿಕೆಯಲ್ಲಿ ಹೆಸರು ಮಾಡಿದ ತೆನಾಲಿ ರಾಮಕೃಷ್ಣನ ಹೆಸರನ್ನು ಕೇಳದವರಾರು? ಬೇರೆ ಪಂಡಿತರನ್ನು ವಾದದಲ್ಲಿ ಗೆದ್ದು ಬಂದ ಒಬ್ಬ ಮಹಾನ್ ಪಂಡಿತನನ್ನು ತಿಲಕಾಷ್ಟ ಮಹಿಷ ಬಂಧನ ಎಂಬ ಗ್ರಂಥವಿದೆ ಎಂದು ನಂಬಿಸಿ ಅವನನ್ನು ಯುಕ್ತಿಯಿಂದ ಸೋಲಿಸಿ ತನ್ನ ರಾಜ್ಯದ ಮರ್ಯಾದೆ ಉಳಿಸಿದ ಕತೆ ಎಲ್ಲರಿಗೂ ತಿಳಿದದ್ದೇ. ಹಾಗೆಯೇ ಬೀರಬಲ್ ಎಂಬ ಚತುರ ಮಂತ್ರಿ ಅಕ್ಬರ್ ಆಸ್ಥಾನದಲ್ಲಿ ದೊಡ್ಡ ಮಟ್ಟದ ಸ್ಥಾನವನ್ನು ಪಡೆದದ್ದು ಅವನ ಬುದ್ಧಿವಂತಿಕೆಯಿಂದಲೇ. ಇಂತಹ ಹಲವಾರು ಪ್ರಸಂಗಗಳು ನಮಗೆ ನಮ್ಮ ಸುತ್ತಲೂ ಕಾಣಸಿಗುತ್ತವೆ.

ಗಾದೆಯು ಚತುರನ ಯುಕ್ತಿಯು ಸಾವಿರಾರು ತೋಳ್ಬಲವನ್ನು ಸೋಲಿಸಬಹುದೆಂದು ಹೇಳಿದೆ. ಹೀಗೆ ಶಕ್ತಿಯಿಂದ ಸಾಧ್ಯವಾಗದ್ದನ್ನು ಯುಕ್ತಿಯಿಂದ ಸಾಧಿಸಬಹುದು ಎಂಬುದನ್ನು ಗಾದೆ ಮಾತು ನಿರೂಪಿಸಿದೆ.