ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

 


ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು |


ರಾಜನ್ಯರಿಪು ಪರಶುರಾಮನಾಳಿದ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರ ವೃಂದದ ನಾಡು |


ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು

ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು ||


ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರ ನಾರಾಯಣನ ಬೀಡು ||   


                                                          - ಹುಯಿಲುಗೋಳ ನಾರಾಯಣ ರಾವ್

ಕನ್ನಡ ಸಾಹಿತ್ಯ ನಿಮಗೆಷ್ಟು ಗೊತ್ತು ?

1. "ಶ್ರೀನಿವಾಸ"  ಇದು ಯಾರ ಕಾವ್ಯನಾಮ

ಮಾಸ್ತಿ ವೆಂಕಟೇಶ್ ಅಯ್ಯಂಗಾರ

 

2.ರಗಳೆ ಕವಿ ಯಾರು?

ಹರಿಹರ

 

3. "ಕಾವ್ಯಾನಂದ" ಯಾರ ಕಾವ್ಯನಾಮ ?

ಡಾ. ಸಿದ್ಧಯ್ಯ  ಪುರಾಣಿಕ

 

4. "ಕವಿಚಕ್ರವರ್ತಿ" ಎಂಬ ಬಿರುದು ಯಾರದು ?

ರನ್ನ

 

5. ತುಘಲಕ್, ಹಯವದನ ಇವು ಯಾರ ನಾಟಕಗಳು ?

ಗಿರೀಶ್ ಕಾರ್ನಾಡ್

 

6. "ಕನ್ನಡದ ಕಣ್ವ" ಯಾರು ?

 ಶ್ರೀ ಬಿ ಎಂ ಶ್ರೀಕಂಠಯ್ಯ

 

7. ಹರಿಹರನ ಅಳಿಯ ಹಾಗೂ ಶಿಷ್ಯನಾದಂತಹ ಕವಿ ಯಾರು ?

ರಾಘವಾಂಕ

 

8. "ಕನ್ನಡದ ಕುಲಪುರೋಹಿತ" ಎಂದು ಯಾರನ್ನು ಕರೆಯಲಾಗಿದೆ ?

ಆಲೂರ ವೆಂಕಟರಾವ್

 

9. "ಕಡಲ ತೀರ ಭಾರ್ಗವ" ಯಾರು ?

ಶಿವರಾಮ ಕಾರಂತ

 

10. "ಪಕ್ಷಿ ಕಾಶಿ" ಯಾರ ಕೃತಿ ?

ಕುವೆಂಪು