ನಮ್ಮ ಶಾಲೆ



    ಶಾಲೆ ಎಂದರೆ ಶಿಸ್ತು, ಶಿಕ್ಷಣ, ಶಿಕ್ಷಕರು, ಗೆಳೆಯರು ಮುಂತಾದ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ ಅತ್ಯಂತ ದೊಡ್ಡದು. ಪ್ರತಿಯೊಂದು ಮಕ್ಕಳಿಗೂ ತಮ್ಮ ತಮ್ಮ ಶಾಲೆಯ ಬಗ್ಗೆ ಹೆಮ್ಮೆ.

    ನಮ್ಮ ಶಾಲೆಯಲ್ಲಿ ಒಳ್ಳೆಯ ಹಾಗೂ ನುರಿತ ಶಿಕ್ಷಕರಿದ್ದಾರೆ. ನಮಗೆ ಅರ್ಥವಾಗುವ ಹಾಗೆ ಉದಾಹರಣೆಯೊಂದಿಗೆ ಪಾಠ ಮಾಡುತ್ತಾರೆ. ನಮ್ಮ ಶಾಲೆಯ ಫಲಿತಾಂಶ ರಾಜ್ಯಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟಿದೆ. ರಸಪ್ರಶ್ನೆ, ಪ್ರತಿಭಾ ಕಾರಂಜಿ, ಹಾಡಿನ ಸ್ಪರ್ಧೆ ಹೀಗೆ ಮುಂತಾದ ಸ್ಫರ್ಧೆಗಳಲ್ಲಿ ನಮ್ಮ ಶಾಲೆಯ ಮಕ್ಕಳು ಬಹುಮಾನ ತಂದಿದ್ದಾರೆ.

    ನಮ್ಮ ಶಾಲೆಯಲ್ಲಿ ದೊಡ್ಡದಾದ ಕೊಠಡಿಗಳು, ಆಟದ ಮೈದಾನ, ಪ್ರಯೋಗಾಲಯ, ಸ್ವಚ್ಛವಾದ ಶೌಚಾಲಯ, ದೊಡ್ಡದಾದ ಗ್ರಂಥಾಲಯಗಳಿವೆ. ಪುಟ್ಟ ಮಕ್ಕಳಿಗೆ ಆಟಿಕೆಗಳು ಇವೆ. ಹಾಗೆಯೇ ದೊಡ್ಡ ಮಕ್ಕಳಿಗೆ ಆಡಲು ಕ್ರಿಕೆಟ್ ಕಿಟ್, ಫುಟ್ಬಾಲ್, ವಾಲಿಬಾಲ್ ಮುಂತಾದ ಕ್ರೀಡಾ ಸಾಮಗ್ರಿಗಳಿವೆ. ಕಬಡ್ಡಿ, ಖೋ ಖೋ ಮುಂತಾದ ಕ್ರೀಡೆಗಳನ್ನು ದೈಹಿಕ ಶಿಕ್ಷಕರು ಹೇಳಿಕೊಡುತ್ತಾರೆ. ಹೀಗೆ ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ ನಮ್ಮ ಶಾಲೆಯು ಓದಿನಲ್ಲಷ್ಟೇ ಅಲ್ಲ ಕ್ರೀಡೆಯಲ್ಲು ಮುಂದಿದೆ. ಹಲವಾರು ಅಂತರ ಶಾಲೆಯ ಮಧ್ಯೆ  ನಡೆಯುವ ಸ್ಪರ್ಧೆಯಲ್ಲಿ ಬಹುಮಾನ ಗೆದ್ದುಕೊಂಡಿದೆ.

    ಓದು, ಕ್ರೀಡೆ ಮಾತ್ರವಲ್ಲದೆ ಮಕ್ಕಳ ಕೌಶಲ ಅಭಿವೃದ್ಧಿಗೂ ಕೂಡ ಹಲವು ಚಟುವಟಿಕೆಗಳನ್ನು ಹೇಳಿಕೊಡುತ್ತಾರೆ. ಹಾಗೂ ಮಾನಸಿಕ ಧೃಢತೆಗಾಗಿ ಯೋಗ ಮತ್ತು ಧ್ಯಾನ ಮಾಡಿಸುತ್ತಾರೆ. ಇದರಿಂದ ಓದಿನಲ್ಲೂ ಏಕಾಗ್ರತೆ ಲಭ್ಯವಾಗುತ್ತದೆ ಹಾಗೂ ಆಟದಲ್ಲಿ ಮುಂದುವರಿಯಲು ದೈಹಿಕ ಸಧೃಢತೆ ಕೂಡ ಲಭ್ಯವಾಗಿತ್ತದೆ.

    ನಮ್ಮ ಕಲಿಕೆಯನ್ನು ಪರೀಕ್ಷಿಸಲು ವರ್ಷಕ್ಕೆ ನಾಲ್ಕು ಕಿರು ಪರೀಕ್ಷೆ ಹಾಗೂ ಎರಡು ದೊಡ್ಡ ಪರೀಕ್ಷೆಗಳು ನಡೆಯುತ್ತವೆ. ಇದರಿಂದ ನಾವು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ. ಹಾಗೂ ನಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವ ನಡೆಸುತ್ತಾರೆ. ನಾಟಕ, ನೃತ್ಯ, ಹಾಡು ಹೀಗೆ ನಮಗೆ ಆಸಕ್ತಿ ಇರುವ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹಾಗೂ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ ಮುಂತಾದ ಆಚರಣೆಗಳನ್ನು ನಡೆಸುತ್ತಾರೆ. ಇವುಗಳಲ್ಲಿಯೂ ನಾವು ಸಕ್ರಿಯವಾಗಿ ಭಾಗವಹಿಸುತ್ತೇವೆ.

      ನಮ್ಮ ಶಾಲೆಗೆ ಮಾದರಿ ಶಾಲೆ ಎಂಬ ಪ್ರಶಸ್ತಿ ಕೂಡ ಬಂದಿದೆ. ಆದ್ದರಿಂದ ನಮ್ಮ ಶಾಲೆಯೇ ನಮಗೆ ನೆಚ್ಚಿನ ತಾಣ. ಶಾಲೆಗೆ ಬರಲು ನಮಗೆ ಹೆಮ್ಮೆ.

ರಚನೆ: ಸೀಮಾ ಕಂಚೀಬೈಲು



ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ನೇಗಿಲ ಯೋಗಿ




ಇವನೇ ನೋಡು ಅನ್ನದಾತ
 ಹೊಲದಿ ದುಡಿದೇ ದುಡಿವನು
 ನಾಡ ಜನರು ಬದುಕಲೆಂದು
 ದವಸ ಧಾನ್ಯ ಬೆಳೆವನು

 ಮಳೆಯ ಗುಡುಗು ಚಳಿಯ ನಡುಗು
 ಬಿಸಿಲ ಬೇಗೆಯ ಸಹಿಸುತಾ
 ಬೆವರು ಸುರಿಸಿ ಕಷ್ಟ ಸಹಿಸಿ
 ಒಂದೇ ಸಮನೆ ದುಡಿಯುತಾ

 ಗಟ್ಟಿ ದೇಹ ದೊಡ್ಡ ಮನಸು
 ದೇವನಿಂದ ಪಡೆವನು
 ಯೋಗಿಯಾಗಿ ತ್ಯಾಗಿಯಾಗಿ
 ಅನ್ನ ನೀಡುತಿರುವನು

 ಎತ್ತು ಎರಡು ಅವನ ಜೋಡು
 ಕೂಡಿ ದುಡಿವ ಗೆಳೆಯರು
 ಹಿಗ್ಗು ಕುಗ್ಗು ಏನೇ ಬರಲಿ
 ಹೊಂದಿಕೊಂಡು ನಡೆವರು


ಝಾನ್ಸಿ ರಾಣಿ ಲಕ್ಷ್ಮೀಬಾಯಿ



   
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದ ಕೂಡಲೇ ನಮ್ಮಲ್ಲಿನ ದೇಶಭಕ್ತಿ ಜಾಗೃತವಾಗುತ್ತದೆ. ಕಣ ಕಣದಲ್ಲೂ ಕೆಚ್ಚು ತುಂಬುತ್ತದೆ. ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ಕಾರಣವಾದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಬಗ್ಗೆ ತಿಳಿದುಕೊಳ್ಳೋಣ.

    ನವೆಂಬರ್ 19, 1828ರಂದು ಗ್ವಾಲಿಯರ್ ನಲ್ಲಿ ಇವರು ಜನಿಸಿದರು. ತಂದೆ ಮೋರೋಪಂತ್ ಥಂಬೆ ಆಸ್ಥಾನ ಸಲಹೆಗಾರರಾಗಿದ್ದರು. ತಾಯಿ ಭಾಗೀರಥಿ ಸಾಪ್ರೆ ಮಹಾನ್ ದೈವ ಭಕ್ತರಾಗಿದ್ದರು. ಇವರು ಮೂಲತಃ ಮಹಾರಾಷ್ಟ್ರದ ಬ್ರಾಹ್ಮಣ ಕುಟುಂಬದಿಂದ ಬಂದವರು. ಲಕ್ಷ್ಮೀಬಾಯಿಯ ಬಾಲ್ಯದ ಹೆಸರು ಮಣಿಕರ್ಣಿಕಾ (ಮನು) ಎಂದಾಗಿತ್ತು. ಇವರು ನಾಲ್ಕು ವರ್ಷದಲ್ಲೇ ತಾಯಿಯನ್ನು ಕಳೆದು ಕೊಂಡರು. ಇವರಿಗೆ ತಂದೆಯು ಯುದ್ಧದ ಕಲೆಗಳಾದ ಕುದುರೆ ಸವಾರಿ, ಬಿಲ್ವಿದ್ಯೆ ಹಾಗೂ ಕತ್ತಿ ವರಸೆ ಮುಂತಾದುವುಗಳನ್ನು ಕಲಿಸಿದರು. ಬಾಲ್ಯದಿಂದಲೇ ಲಕ್ಷ್ಮೀಬಾಯಿಯು ಧೈರ್ಯ ಸಾಹಸ ಪ್ರವೃತ್ತಿಯುಳ್ಳವಳಾಗಿದ್ದರು.

    1842ರಲ್ಲಿ ಇವರ ಮದುವೆ ಝಾನ್ಸಿಯ ರಾಜನಾದ 'ರಾಜಾ ಗಂಗಾಧರ ರಾವ್ ನೇವಾಳ್ಕರ್'ನೊಂದಿಗೆ ಆಯಿತು. ಆಗ ಇವರ ಹೆಸರು ಮಣಿಕರ್ಣಿಕಾ ಇಂದ ಲಕ್ಷ್ಮೀಬಾಯಿ ಎಂದು ಬದಲಿಸಲಾಯಿತು. ಇವರಿಗೆ ದಾಮೋದರ್ ರಾವ್ ಎಂಬ ಗಂಡು ಮಗು ಹುಟ್ಟಿತು. ಆದರೆ ಅದು ನಾಲ್ಕನೇ ತಿಂಗಳಲ್ಲಿ ತೀರಿಕೊಂಡಿತು. ನಂತರ ರಾಜನ ಸಂಬಂಧಿಯೊಬ್ಬರ ಮಗುವನ್ನು ದತ್ತು ತೆಗೆದುಕೊಂಡರು. ಅದಕ್ಕೆ ಕೂಡ ದಾಮೋದರ್ ರಾವ್ ಎಂದು ನಾಮಕರಣ ಮಾಡಿದರು. 1853ರಲ್ಲಿ ರಾಜಾ ಗಂಗಾಧರ ರಾವ್ ಸಾವನ್ನಪ್ಪಿದನು. ಈಗ ರಾಜ್ಯದ ಆಡಳಿತದ ಹೊಣೆ ಲಕ್ಷ್ಮೀಬಾಯಿಯ ಮೇಲೆ ಬಿದ್ದಿತು. ಅದರಿಂದ ಧೃತಿಗೆಡಲಿಲ್ಲ. ನಂತರ ಆಗಿನ ಬ್ರಿಟಿಷ್ ಗವರ್ನರ್ ಲಾರ್ಡ್ ಡಾಲ್ ಹೌಸಿಯು ದತ್ತುಪುತ್ರನಿಗೆ ರಾಜ್ಯವಿಲ್ಲ ಎಂಬ ಕಾನೂನನ್ನು ಜಾರಿಗೆ ತಂದು ಝಾನ್ಸಿಯನ್ನು ತನ್ನ ವಶ ಮಾಡಿಕೊಳ್ಳುವ ಕುತಂತ್ರ ಮಾಡಿದನು.

    ಮಾರ್ಚ್ 1854ರಲ್ಲಿ ಐವತ್ತು ಸಾವಿರ ರೂಪಾಯಿಗಳ್ಳನ್ನ ಪಡೆದು ಝಾನ್ಸಿಯನ್ನು ತೊರೆಯಲು ರಾಣಿಗೆ ಆಜ್ಞೆ ಮಾಡಿದನು. ಇದರ ವಿರುದ್ಧ ಹೋರಾಡಲು ರಾಣಿಯು ತನ್ನ ಸಿಪಾಯುಗಳನ್ನು ಒಗ್ಗೂಡಿಸಿ ಮೇ10, 1857ರಲ್ಲಿ ಮೀರತ್ ನಲ್ಲಿ ಸಿಪಾಯಿ ದಂಗೆ ನಡೆಸಿದರು. ಇದು ಬ್ರಿಟಿಷರ ವಿರುದ್ಧದ ಮೊದಲ ದಂಗೆ ಎಂದು ನಮೂದಾಗಿದೆ. ಇದಾದ ಮೇಲೆ ಝಾನ್ಸಿಯನ್ನು ಬ್ರಿಟಿಷರ ಮೇಲುಸ್ತುವಾರಿಯೊಂದಿಗೆ ಆಳಲು ರಾಣಿಗೆ ನೀಡಿದರು.

    ರಾಣಿಯ ಆಡಳಿತದ ಮೇಲೆ ಬ್ರಿಟಿಷರ ಒತ್ತಡ ಹೆಚ್ಚಾದಾಗ 1858ರಲ್ಲಿ ಮತ್ತೆ ಯುದ್ಧ ಸಾರಿದರು. ಬ್ರಿಟಿಷರಿಂದ ರಾಣಿಯನ್ನು ಕಾಪಾಡಲು ರಾಣಿಯ ಹಿಂಬಾಲಕರು ಅವರನ್ನು ಮತ್ತು ಮಗನನ್ನು 'ಕಲ್ಪಿ' ಎಂಬಲ್ಲಿಗೆ ಕಳಿಸಿದರು. ಅಲ್ಲಿ ಕೂಡ ರಾಣಿಯು ಸುಮ್ಮನೆ ಕೂಡಲಿಲ್ಲ. ತನ್ನ ಸೈನಿಕರನ್ನು ಸೇರಿಸಿ ತರಬೇತಿ ಕೊಡಲು ಆರಂಭಿಸಿದರು. ಇವರ ಜೊತೆ ತಾತ್ಯಾ ಟೋಪೆ ಕೂಡ ಇದ್ದರು. ಇದರ ಸುಳಿವು ಬ್ರಿಟಿಷರಿಗೆ ತಿಳಿಯಿತು. ಮೇ22, 1858ರಂದು ಬ್ರಿಟಿಷರು ಕಲ್ಪಿಯ ಮೇಲೆ ದಾಳಿ ಮಾಡಿದರು. ಆದರೆ ರಾಣಿಯ ಕಡೆಯವರೆಲ್ಲ ಗ್ವಾಲಿಯರ್ ಗೆ ವರ್ಗಾವಣೆಗೊಂಡಿದ್ದರು. ಅಲ್ಲಿಯೂ ಬ್ರಿಟಿಷರು ದಾಳಿ ಮಾಡಿದರು. ಆದರೆ ರಾಣಿ ಲಕ್ಷ್ಮೀಬಾಯಿಯು ಕುಗ್ಗದೆ ತನ್ನ ಸೈನಿಕರಿಗೆ ಧೈರ್ಯ ತುಂಬುತ್ತ ತನ್ನ ಪುಟ್ಟ ಮಗನನ್ನು ಬೆನ್ನ ಹಿಂದೆ ಕಟ್ಟಿಕೊಂಡು ಕೆಚ್ಚೆದೆಯಿಂದ ಹೋರಾಡಿದರು.  ಜೂನ್ 16, 1858ರಂದು ತನ್ನ 30ನೇ ವಯಸ್ಸಿಗೆ ನಮ್ಮ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಪ್ರಾಣತ್ಯಾಗ ಮಾಡಿದರು.

    ಇಂದಿಗೂ ನಾವು ರಾಣಿ ಲಕ್ಷ್ಮೀಬಾಯಿಯನ್ನು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸೇರಿಸುತ್ತೇವೆ. ಧೀರ ಮಹಿಳೆಯರ  ಸಾಲಿನಲ್ಲಿ ರಾಣಿ ಲಕ್ಷ್ಮೀಬಾಯಿ ಮೊದಲನೆಯವರಾಗಿ ನಿಲ್ಲುತ್ತಾರೆ.

ರಚನೆ: ಸೀಮಾ ಕಂಚೀಬೈಲು 


ಸಣ್ಣ ಪಾಪ



ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳಲು ಹೋದರದಕೆ ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು

ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು

ಪಾಪ ಅತ್ತರಮ್ಮ ತಾನೂ ಅತ್ತುಬಿಡುವಳು
ಅಯ್ಯೋ ಪಾಪಎಂದುಕೊಂಡು ಮುತ್ತು ಕೊಡುವಳು

ಪಾಪ ಪಟ್ಟು ಹಿಡಿದ ಹಟವು ಸಾರ್ಥಕವಾಯಿತು
ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು


ತತ್ಸಮ ತದ್ಭವಗಳ ಪಟ್ಟಿ



            ತತ್ಸಮ                 ತದ್ಭವ

1.           ಚಿತ್ರ                     ಚಿತ್ತಾರ

2.           ಯಮ                   ಜವ

3.           ಯುಗ                   ಜುಗ

4.          ಸುಧಾ                    ಸೋದೆ 

5.           ಸುಖ                    ಸೊಗ

6.           ಮುಕ್ತಾ                  ಮುತ್ತು

7.           ಚಂದ್ರ                   ಚಂದಿರ

8.           ಚೀರ                    ಸೀರೆ

9.           ತಪಸ್ವಿ                  ತವಸಿ

10.       ಪ್ರಸಾದ                 ಹಸಾದ

11.         ಶ್ರೀ                       ಸಿರಿ

12.       ಆರ್ಯ                  ಅಜ್ಜ

13.       ಕಾರ್ಯ                 ಕಜ್ಜ

14.       ಬ್ರಹ್ಮ                    ಬೊಮ್ಮ

15.       ವ್ಯಯ                   ಬೀಯ

16.       ಸ್ನುಷಾ                  ಸೊಸೆ

17.       ಆಕಾಶ                  ಆಗಸ

18.       ವೈಶಾಖ               ಬೇಸಗೆ

19.       ಹಂಸ                  ಅಂಚೆ

20.       ಅಕ್ಷರ                  ಅಕ್ಕರ

21.       ಸ್ಪಟಿಕ                   ಪಟಿಕ

22.       ಪ್ರಯಾಣ               ಪಯಣ

23.       ಗ್ರಾಮ                   ಗಾವ

24.       ಜಾವ                    ಯಾಮ

25.       ಜ್ಯೋತಿಷ್ಯ              ಜೋಯಿಸ

26.       ಪತಿವೃತಾ              ಹದಿಬದೆ

27.       ದೃಷ್ಟಿ                    ದಿಟ್ಟಿ

28.       ಭಿಕ್ಷಾ                    ಭಿಕ್ಕೆ

29.       ವಿನಾಯಕ             ಬೆನಕ

30.       ವ್ಯವಸಾಯ            ಬೇಸಾಯ

31.       ನಿತ್ಯ                    ನಿಚ್ಚ

32.       ಋಷಿ                    ರಿಸಿ

33.       ನಿಯಮ                ನೇಮ

34.       ಸ್ಪಟಿಕ                  ಪಳಿಗೆ

35.       ರತ್ನ                     ರನ್ನ

36.       ಪುಸ್ತಕ                  ಹೊತ್ತಗೆ

37.       ರಾಕ್ಷಸ                 ರಕ್ಕಸ

38.       ಶ್ಮಶಾನ                ಮಸಣ

39.       ವಿಜ್ಞಾನ                ಬಿನ್ನಣ

40.       ಮೃಗ                   ಮಿಗ








ಸುಬ್ಬಮ್ಮನ ಏಕಾದಶಿ ಉಪವಾಸ














ಆಚೆ ಮನೆಯ ಸುಬ್ಬಮ್ಮನಿಗೆ  
ಏಕಾದಶಿ ಉಪವಾಸ
ಎಲ್ಲೊ ಸ್ವಲ್ಪ ತಿಂತಾರಷ್ಟೇ
ಉಪ್ಪಿಟ್ಟು ಅವಲಕ್ಕಿ ಪಾಯಸ|| ||

ಮೂರೋ ನಾಲ್ಕೋ ಬಾಳೆಹಣ್ಣು
ಸ್ವಲ್ಪ ಚಕ್ಕುಲಿ ಕೋಡುಬಳೆ
ಘಂಟೆಗೆ ಎರಡೆ ಸೀಬೆ ಹಣ್ಣು
ಆಗಾಗ ಒಂದೊಂದು ಕಿತ್ತಳೆ

ಮಧ್ಯಾಹ್ನಕೆಲ್ಲ ರವೆ ಉಂಡೆ
ಹುರುಳಿ ಕಾಳಿನ ಉಸಲಿ
ಎಲ್ಲೊ ಸ್ವಲ್ಪ ಬಿಸಿ ಸಂಡಿಗೆ
ಐದೊ ಆರೋ ಇಡ್ಲಿ

ರಾತ್ರಿಗೆ ಪಾಪ ಉಪ್ಪಿಟ್ಟೇ ಗತಿ
ಒಂದ್ ಲೋಟದ ತುಂಬಾ ಹಾಲು
ಪಕ್ಕದ ಮನೆಯ ರಾಮೇ ಗೌಡರ
ಸೀಮೆ ಹಸುವಿನ ಹಾಲು ||

ಕೃಷ್ಣ ಜನ್ಮಾಷ್ಟಮಿ

   
 ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಆಚರಿಸಲಾಗುತ್ತದೆ. 

       ಕೃಷ್ಣನು ಶ್ರಾವಣ ಕೃಷ್ಣ ಅಷ್ಟಮಿಯಂದು ಮಥುರಾ ನಗರದ  ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ 8ನೇ ಮಗನಾಗಿ ಜನಿಸಿದನು. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಂದ ರಕ್ಷಿಸಲು  ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.

ಜನ್ಮಾಷ್ಟಮಿ ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಜನನದ ಆಚರಣೆಯ ಸಂಕೇತವಾಗಿದೆ. ಈ ದಿನದಂದು ಮನೆಗಳ ಬಾಗಿಲನ್ನು  ಮಾವಿನ ಎಲೆಗಳ ತೋರಣದಿಂದ  ಅಲಂಕರಿಸಿರುತ್ತಾರೆ ಮುಂಭಾಗದ ಅಂಗಳದಲ್ಲಿ   ರಂಗೋಲಿಯಿಂದ ಕೃಷ್ಣನ ಪುಟ್ಟ ಪುಟ್ಟ ಹೆಚ್ಚೆಯ ಗುರುತುಗಳನ್ನು ಮೂಡಿಸಿ ಕೃಷ್ಣನ ಆಗಮನವನ್ನು ಸಾಂಕೇತಿಕವಾಗಿ ಸೃಷ್ಟಿಸಲಾಗುತ್ತದೆ. ಮನೆಯೊಳಗೆ ಸಣ್ಣ ಮಂಟಪದಲ್ಲಿ ಬಾಲಕೃಷ್ಣನ  ಮೂರ್ತಿಯನ್ನಿಟ್ಟು ಪ್ರಾರ್ಥನೆಗಳಿಂದ, ಭಕ್ತಿಗೀತೆಗಳಿಂದ ಮತ್ತು ಹೂವುಹಣ್ಣುಗಳನ್ನು, ವಿಶೇಷ ಪ್ರಸಾದಗಳಿಂದ   ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಈ  ದಿನ ಜನರು ಉಪವಾಸ ಮಾಡುತ್ತಾರೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. ಜನರು  ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಮುದ್ದು ಕೃಷ್ಣನನ್ನು ಮನೆಯಲ್ಲಿಯೇ ನೋಡಿ ಖುಷಿಪಡುತ್ತಾರೆ. 

   ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಂತೂ ಸಂಭ್ರಮದ ಜಾತ್ರೆಯೇ ನಡೆಯುತ್ತದೆ. ಬೃಂದಾವನ ಮತ್ತು ಉಡುಪಿಯಲ್ಲಿ ಕೂಡ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿ ದಿನದಂದು ಬೀದಿ ಬೀದಿಗಳಲ್ಲಿ "ಆಲಾರೇ ಗೋವಿಂದ" ಎಂದು ಹಾಡಿಕೊಂಡು ಹುಡುಗ ಹುಡುಗಿಯರು ಗುಂಪು ಗುಂಪಾಗಿ ಹೋಗುವರು. ಅಲ್ಲಲ್ಲಿ ಕಟ್ಟಡಗಳ ಸಹಾಯದಿಂದ ಮೇಲೆ ಕಟ್ಟಿರುವ ಮೊಸರು ಗಡಿಗೆಯನ್ನು ಒಡೆಯುವರು. ಇದನ್ನು "ದಹಿಹಂಡಿ" ಎನ್ನುವರು. 

ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯನಾದ ಶ್ರೀಕೃಷ್ಣನನ್ನು ದೇಶದ ವಿವಿಧ ಪ್ರದೇಶಗಳಲ್ಲಿ ಜನರು ತಮ್ಮದೇ ವೈಖರಿಯಲ್ಲಿ ಆರಾಧಿಸುವರು. 

ಕಾಗದ ಬಂತು ಕಾಗದವು



ಓಲೆಯ ಹಂಚಲು ಹೊರಡುವೆ ನಾನು
ತೋರಲು ಆಗಸದಲಿ ಬಿಳಿ ಬಾನು
ಮನೆಯಲಿ ನೀವು ಬಿಸಿಲಲಿ ನಾನು
ಕಾಗದ ಬಂತು ಕಾಗದವು


ಓಲೆಯ ಕೊಡುವಧಿಕಾರಿಯು ನಾನು
ಆದರೂ ಅದರಲಿ ಬರೆದುದು ಏನು
ಎಂಬುದನರಿಯೆ ಬಲು ಸುಖಿ ನಾನು
ಕಾಗದ ಬಂತು ಕಾಗದವು