Showing posts with label proverb. Show all posts
Showing posts with label proverb. Show all posts

ಗಾದೆ ವಿಸ್ತರಣೆ: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ – ಅರ್ಥ, ವಿವರಣೆ ಮತ್ತು ಜೀವನ ಪಾಠಗಳು

 ಗಾದೆಯ ಅರ್ಥ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎಂದರೆ ಚಿಕ್ಕ ವಯಸ್ಸಿನಲ್ಲಿ ಸರಿಪಡಿಸದ ವ್ಯಕ್ತಿ, ದೊಡ್ಡವನಾದ ಮೇಲೆ ಸರಿಯಾಗುವುದು ಕಷ್ಟ ಎಂಬುದಾಗಿದೆ.

ವಿವರಣೆ

ಗಿಡವನ್ನು ನಾವು ಅದರ ಚಿಕ್ಕ ವಯಸ್ಸಿನಲ್ಲಿ ಸುಲಭವಾಗಿ ಬಗ್ಗಿಸಬಹುದು. ಆದರೆ ಅದು ದೊಡ್ಡ ಮರವಾದ ನಂತರ ಅದನ್ನು ಬಗ್ಗಿಸುವುದು ಬಹಳ ಕಷ್ಟ. ಇದೇ ರೀತಿಯಾಗಿ, ಮಕ್ಕಳನ್ನು ಅವರ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಮೌಲ್ಯಗಳನ್ನು ಕಲಿಸಬೇಕು. ಏಕೆಂದರೆ  ಬಾಲ್ಯವೇ ವ್ಯಕ್ತಿತ್ವ ನಿರ್ಮಾಣದ ಅಡಿಪಾಯ ಆಗಲೇ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿ ಕೆಟ್ಟ ಅಭ್ಯಾಸಗಳನ್ನು ತಿದ್ದಬೇಕು. ಇವುಗಳನ್ನು ಸಮಯದಲ್ಲಿ ಮಾಡದಿದ್ದರೆ, ದೊಡ್ಡವರಾದ ಮೇಲೆ ವ್ಯಕ್ತಿಯ ಸ್ವಭಾವವನ್ನು ಬದಲಿಸುವುದು ಕಷ್ಟವಾಗುತ್ತದೆ.

ಈ ಗಾದೆ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿದೆ: ಹೇಗೆಂದರೆ ಓದುವ ಅಭ್ಯಾಸವನ್ನು ಬಾಲ್ಯದಲ್ಲೇ ಬೆಳೆಸಿಕೊಳ್ಳಬೇಕು, ಸಮಯ ನಿರ್ವಹಣೆಯನ್ನು  (Time Management) ಕಲಿಯಬೇಕು  ಹಾಗೂ ಶಿಸ್ತು ಮತ್ತು ನಿಯಮಗಳನ್ನು ಪಾಲಿಸುವ ಗುಣ ಬೆಳೆಸಿಕೊಳ್ಳಬೇಕು. ಇವುಗಳನ್ನು ಚಿಕ್ಕ ವಯಸ್ಸಿನಲ್ಲಿ ರೂಢಿಸಿಕೊಳ್ಳುವವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ.

ಈ ಗಾದೆ ಪೋಷಕರಿಗೂ ಮಹತ್ವದ ಸಂದೇಶ ನೀಡುತ್ತದೆ: ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಬೇಕು, ಶಿಸ್ತು ಮತ್ತು ಸಂಸ್ಕಾರಗಳನ್ನು ಬಾಲ್ಯದಲ್ಲೇ ರೂಪಿಸಬೇಕು ಹಾಗೂ ಮಕ್ಕಳ ನಡೆ-ನುಡಿಯನ್ನು ಗಮನಿಸಿ ಸರಿಪಡಿಸಬೇಕು

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎಂಬ ಗಾದೆ ನಮ್ಮ ಜೀವನದಲ್ಲಿ ಸಮಯದ ಮಹತ್ವವನ್ನು ತಿಳಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆತರೆ, ವ್ಯಕ್ತಿ ಉತ್ತಮ ನಾಗರಿಕನಾಗಿ ಬೆಳೆಯುತ್ತಾನೆ. ಆದ್ದರಿಂದ, ಬಾಲ್ಯದಲ್ಲಿಯೇ ಒಳ್ಳೆಯ ಗುಣಗಳನ್ನು ಬೆಳೆಸುವುದು ಅತ್ಯಂತ ಅಗತ್ಯ. ಶಿಸ್ತು ಮತ್ತು ಸಂಸ್ಕಾರಗಳು ಯಶಸ್ಸಿನ ಗುಟ್ಟು

ಉಪಾಯ ಬಲ್ಲವನಿಗೆ ಅಪಾಯವಿಲ್ಲ

ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎನ್ನುವುದು ಬುದ್ಧಿವಂತಿಕೆಯ ಮಹತ್ವವನ್ನು ತಿಳಿಸುವ ಗಾದೆಮಾತಾಗಿದೆ.  ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು  ಸಮಸ್ಯೆಗಳು ಅಥವಾ ಅನೇಕ ರೀತಿಯ ಸಂಕಟದ ಪರಿಸ್ಥಿತಿಗಳು ಎದುರಾಗುತ್ತವೆ. ಈ ಗಾದೆಮಾತು,  ಉಪಾಯ ಗೊತ್ತಿದ್ದವನಿಗೆ ಅಪಾಯ ಬರುವುದೇ ಇಲ್ಲ ಎಂದು ಹೇಳುವುದಿಲ್ಲ. ಮನುಷ್ಯನೆಂದ ಮೇಲೆ ಸಮಸ್ಯೆಗಳು, ಅಪಾಯಗಳು ಇದ್ದದ್ದೇ. ಆದರೆ ಅವುಗಳನ್ನು ಉಪಾಯವಾಗಿ ನಿಭಾಯಿಸುವುದನ್ನು ಕಲಿಯಬೇಕು. ಹೀಗೆ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿರ್ವಹಿಸುವುದರಿಂದ ಅವುಗಳಿಂದ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದೆನ್ನುವುದು ನಿಜ.  ಎಷ್ಟೋ ಸಾರಿ ಉಪಾಯ ಮತ್ತು ಮುಂದಾಲೋಚನೆಯಿಂದ ನಡೆದುಕೊಂಡರೆ ಮುಂದೆ ಬರುವ ಅಪಾಯಗಳನ್ನೂ  ತಡೆಗಟ್ಟಬಹುದು. ಶಕ್ತಿಯಿಂದ ಅಥವಾ ಬಲಪ್ರಯೋಗದಿಂದ ಕೂಡ ಆಗದ ಕೆಲಸಗಳನ್ನು ಜಾಣತನದಿಂದ  ಸುಲಭವಾಗಿ ಮಾಡಬಹುದು.  

ಹೀಗೆ ಸಮಸ್ಯೆಗಳು ಎದುರಾದಾಗ ಬುದ್ಧಿವಂತ ವ್ಯಕ್ತಿಗಳು ಅದರಿಂದ ಗಾಬರಿಗೆ ಒಳಗಾಗುವುದಿಲ್ಲ. ಅವರು ಅನಗತ್ಯ ಒತ್ತಡಕ್ಕೆ ಸಿಲುಕಿ ವಿಷಮ ಪರಿಸ್ಥಿತಿಯಿಂದ ಹೊರಬರಲು ಆತುರ ಪಡುವುದಿಲ್ಲ.ಅದರ ಬದಲು ಅವರು ಜಾಣತನದಿಂದ ಹಾಗೂ ಸಮಾಧಾನ ಚಿತ್ತದಿಂದ   ಪರಿಹಾರ  ಮಾರ್ಗವನ್ನು ಕಂಡುಕೊಳ್ಳುತ್ತಾರೆ.  ಮನುಷ್ಯನು ತನ್ನ ಪ್ರತಿಕೂಲ ಪರಿಸ್ಥಿತಿಯಲ್ಲಿ ನಾವು ತಾಳ್ಮೆಯನ್ನು ಕಳೆದುಕೊಳ್ಳದೆ, ಶಾಂತವಾದ ಮನಸ್ಸಿನಿಂದ ಯೋಚಿಸಿದರೆ ಯಾವುದೇ ಸಮಸ್ಯೆ ಇರಲಿ ಬಗೆ ಹರಿಯದೆ ಇರದು.

ಶಕ್ತಿಗಿಂತ ಯುಕ್ತಿ ಮೇಲು

 

ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆ ಇಂದಲ್ಲ, ಅಂದಿನ ಕಾಲದಿಂದಲೂ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಬೆಳೆದುಕೊಂದು ಬಂದಿದೆ. ಇವು ಚಿಕ್ಕ ವಾಕ್ಯಗಳಲ್ಲಿ ಹಿರಿದಾದ ಅರ್ಥವನ್ನು ನೀಡುವ ನುಡಿಮುತ್ತುಗಳಾಗಿವೆ. ಅದು ಜೀವನ ಅನುಭವಕ್ಕೆ ಹಿಡಿದ ಕೈಗನ್ನಡಿ. ಆದ್ದರಿಂದ ಗಾದೆಗಳು ಸತ್ಯಕ್ಕೆ ಹತ್ತಿರವಾಗಿವೆ. ಇಂದು ದೇಶ ವಿದೇಶಗಳಲ್ಲಿಯೂ ಸಹ ಹೆಚ್ಚು ಪ್ರಚಲಿತವಾಗಿ ಬೆಳೆದುಕೊಂಡು ಬಂದಿದೆ.

ಶಕ್ತಿಯಿಂದ ಸಾಧಿಸಲು ಸಾಧ್ಯವಾಗದ್ದನ್ನು ಯುಕ್ತಿಯಿಂದ ಸಾಧಿಸುವ ನಿಟ್ಟಿನಲ್ಲಿ ಶಕ್ತಿಗಿಂತ ಯುಕ್ತಿ ಮೇಲು ಎಂಬ ಗಾದೆ ಸೃಷ್ಟಿಯಾಗಿದೆ. ಶಕ್ತಿಯಿಂದ ಎಲ್ಲಾ ಕೆಲಸಗಳನ್ನು ಸಾಧಿಸಲು ಸಾಧ್ಯವಿಲ್ಲ. ಶಕ್ತಿಯಿಂದ ಸಾಧಿಸಲಾಗದ ಕೆಲಸವನ್ನು ಯುಕ್ತಿಯಿಂದ ಸಾಧಿಸಬೇಕು. ಸಂದರ್ಭೋಚಿತ ಉಪಾಯದಿಂದ ಎಂತಹ ಶತ್ರುವನ್ನಾದರೂ ಸೋಲಿಸಬಹುದು. ಅಪಾಯ ಬಂದಾಗ ಉಪಾಯದಿಂದ ಪಾರಾಗಬೇಕು. ಉದಾಹರಣೆಗೆ ಒಂದು ಪುಟ್ಟ ಮೊಲದ ಕತೆ ಇಲ್ಲಿ ಹೇಳಬಹುದು. ಒಂದು ಪುಟ್ಟ ಮೊಲ ಸಿಂಹಕ್ಕೆ ಆಹಾರವಾಗಲು ಹೊರಟಿತ್ತು. ಅದು ಆಟವಾಡಿಕೊಂಡು ಸಮಯಕ್ಕಿಂತ ತಡವಾಗಿ ಸಿಂಹದ ಬಳಿ ಬಂದಿತು. ಹಸಿವಿನಿಂದ ಕ್ರೋಧಗೊಂಡಿದ್ದ ಸಿಂಹ ಮೊಲವನ್ನು ನೋಡಿದ ತಕ್ಷಣ ತಿನ್ನಲು ಹಾರಿತು. ಆಗ ಮೊಲ ತನ್ನನ್ನು ಇನ್ನೊಂದು ಬಲವಾದ ಸಿಂಹ ತಡೆಯಿತೆಂದೂ ಕತೆ ಕಟ್ಟಿ ಹೇಳಿತು. ಅದನ್ನು ನಂಬಿದ ಸಿಂಹ ಮೊಲವನ್ನು ಇನ್ನೊಂದು ಸಿಂಹದ ಬಳಿ ಕರೆದೊಯ್ಯಲು ಹೇಳಿತು. ಆಗ ಮೊಲ ಸಿಂಹವನ್ನು ಬಾವಿಯ ಬಳಿ ಕರೆದುಕೊಂಡು ಬಂದಿತು. ಒಳಗೆ ನೋಡಿ ಘರ್ಜಿಸಿದ ಸಿಂಹಕ್ಕೆ ತನ್ನ ಧ್ವನಿಯೇ ಪ್ರತಿಧ್ವನಿಯಾಗಿ ದೊಡ್ಡ ಧ್ವನಿಯಲ್ಲಿ ಕೇಳಿಸಿತು. ಕ್ರೋಧಗೊಂಡ ಸಿಂಹ ಬಾವಿಗೆ ಹಾರಿ ತನ್ನ ಪ್ರಾಣ ಕಳೆದುಕೊಂಡಿತು. ಹೀಗೆ ಮೊಲ ತನ್ನ ಹಾಗೂ ಕಾಡಿನ ಬೇರೆ ಪ್ರಾಣಿಗಳ ಜೀವ ಕೂಡಾ ಉಳಿಸಿತು.

ಹಾಗೆಯೇ ಬುದ್ಧಿವಂತಿಕೆಯಲ್ಲಿ ಹೆಸರು ಮಾಡಿದ ತೆನಾಲಿ ರಾಮಕೃಷ್ಣನ ಹೆಸರನ್ನು ಕೇಳದವರಾರು? ಬೇರೆ ಪಂಡಿತರನ್ನು ವಾದದಲ್ಲಿ ಗೆದ್ದು ಬಂದ ಒಬ್ಬ ಮಹಾನ್ ಪಂಡಿತನನ್ನು ತಿಲಕಾಷ್ಟ ಮಹಿಷ ಬಂಧನ ಎಂಬ ಗ್ರಂಥವಿದೆ ಎಂದು ನಂಬಿಸಿ ಅವನನ್ನು ಯುಕ್ತಿಯಿಂದ ಸೋಲಿಸಿ ತನ್ನ ರಾಜ್ಯದ ಮರ್ಯಾದೆ ಉಳಿಸಿದ ಕತೆ ಎಲ್ಲರಿಗೂ ತಿಳಿದದ್ದೇ. ಹಾಗೆಯೇ ಬೀರಬಲ್ ಎಂಬ ಚತುರ ಮಂತ್ರಿ ಅಕ್ಬರ್ ಆಸ್ಥಾನದಲ್ಲಿ ದೊಡ್ಡ ಮಟ್ಟದ ಸ್ಥಾನವನ್ನು ಪಡೆದದ್ದು ಅವನ ಬುದ್ಧಿವಂತಿಕೆಯಿಂದಲೇ. ಇಂತಹ ಹಲವಾರು ಪ್ರಸಂಗಗಳು ನಮಗೆ ನಮ್ಮ ಸುತ್ತಲೂ ಕಾಣಸಿಗುತ್ತವೆ.

ಗಾದೆಯು ಚತುರನ ಯುಕ್ತಿಯು ಸಾವಿರಾರು ತೋಳ್ಬಲವನ್ನು ಸೋಲಿಸಬಹುದೆಂದು ಹೇಳಿದೆ. ಹೀಗೆ ಶಕ್ತಿಯಿಂದ ಸಾಧ್ಯವಾಗದ್ದನ್ನು ಯುಕ್ತಿಯಿಂದ ಸಾಧಿಸಬಹುದು ಎಂಬುದನ್ನು ಗಾದೆ ಮಾತು ನಿರೂಪಿಸಿದೆ.

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ


ಒಬ್ಬ ಕುಂಬಾರ ಮಡಿಕೆ ಮಾಡಬೇಕೆಂದರೆ ಬಹಳ ಕಷ್ಟ ಪಡಬೇಕಾಗುತ್ತದೆ. ಮಡಕೆ ಮಾಡಲು ಬೇಕಾದ ಮಣ್ಣನ್ನು ಸರಿಯಾದ ಕಡೆಯಿಂದ ಹೊತ್ತು ತರಬೇಕು. ಅದಕ್ಕೆ ನೀರು ಹಾಕಿ ಚೆನ್ನಾಗಿ ತುಳಿದು ಹಸನು ಮಾಡಬೇಕು. ನಂತರ ಮಡಕೆ ಮಾಡುವ ಚಕ್ರದಲ್ಲಿ ಹಸನಾದ ಮಣ್ಣನ್ನು ಇಟ್ಟು ಚಕ್ರ ತಿರುಗಿಸಿ ಮಡಕೆ ಆಕಾರ ಕೊಡಬೇಕು. ಅದನ್ನೂ ಬಲು ಜಾಗರೂಕತೆಯಿಂದ, ತಾಳ್ಮೆಯಿಂದ ಗಮನವಿಟ್ಟು ಮಾಡಬೇಕು. ಇಲ್ಲವಾದಲ್ಲಿ ಮಡಕೆಯ ಆಕಾರ ಹಾಳಾಗಬಹುದು ಅಥವಾ ಮಡಕೆಗೆ ಸಣ್ಣ ತೂತು ಬಿದ್ದರೂ ಅಷ್ಟು ಮಣ್ಣು ಹಾಳಾಗುತ್ತದೆ. ನಂತರ ಆಕಾರ ಪಡೆದ ಹಸಿ ಮಡಕೆಯನ್ನು ಸ್ವಲ್ಪ ಒಣಗಿಸಿ, ಒಲೆಯಲ್ಲಿಟ್ಟು ಹದವಾಗಿ ಬೇಯಿಸಬೇಕು. ನಂತರವೇ ಒಂದು ಒಳ್ಳೆಯ ಮಡಕೆ ತಯಾರಾಗುತ್ತದೆ. ನಂತರ ಅದನ್ನು ಒಡೆಯದಂತೆ ಜೋಪಾನ ಮಾಡಬೇಕು. ಗ್ರಾಹಕರಿಗೆ ಆಕರ್ಷಿಸುವಂತೆ ಒಪ್ಪವಾಗಿ ಜೋಡಿಸಬೇಕು. ಇಷ್ಟೆಲ್ಲಾ ಕಷ್ಟ ಪಟ್ಟ ನಂತರವೇ ಕುಂಬಾರನಿಗೆ ಮಡಿಕೆಯ ವ್ಯಾಪಾರವಾಗಿ ಲಾಭವಾಗಲು ವರುಷವಾದರೂ ಬೇಕಾಗುತ್ತದೆ. ಆದರೆ ದೊಣ್ಣೆಯಿಂದ ಅದೇ ಮಡಿಕೆಯನ್ನು ಒಂದು ನಿಮಿಷದಲ್ಲಿ ಹೊಡೆದು ನಾಶ ಮಾಡಬಹುದು. 

ಈ ಗಾದೆಯಿಂದ ನಾವು ತಿಳಿದುಕೊಳ್ಳುವ ಅಂಶವೆಂದರೆ ತಾಳ್ಮೆಯಿಂದ ಎಂತಹ ಕೆಲಸವನ್ನು ಬೇಕಾದರೂ ಸಾಧಿಸಬಹುದು. ಆದರೆ ಅದೇ ಬುದ್ಧಿಯನ್ನು ಸಿಟ್ಟಿನ ಕೈಗೆ ಕೊಟ್ಟರೆ ಪಟ್ಟ ಶ್ರಮವೆಲ್ಲ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಯಾವುದೇ ಕೆಲಸವನ್ನು ಗಮನವಿಟ್ಟು, ತಾಳ್ಮೆವಹಿಸಿ, ಗೌರವಿಸಿ ಮಾಡಬೇಕು. ಹಾಗಾದಾಗ ಮಾತ್ರ ಅದರ ಫಲವನ್ನು ನಾವು ಅನುಭವಿಸಬಹುದು.

- ಸೀಮಾ ಕಂಚಿಬೈಲು

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ


 
  ಈ ಗಾದೆಯು ನಮ್ಮ ದೃಷ್ಟಿಕೋನವು ಹೇಗಿರಬೇಕೆಂದು ತಿಳಿಸುತ್ತದೆ. ದೂರದಲ್ಲಿ ಕಾಣುವ ಬೆಟ್ಟಗುಡ್ಡಗಳೆಲ್ಲ ನಾವು ನಿಂತ ಜಾಗದಿಂದ ಚಂದಾಗಿ ನುಣ್ಣಗಿರುವಂತೆ ಕಾಣುತ್ತದೆ. ನಾವಿರುವ ಜಾಗ ಕಲ್ಲುಮುಳ್ಳುಗಳಿಂದ ಕೂಡಿ ಬಲು ಕಠಿಣವಾಗಿರುವಂತೆ ಭಾಸವಾಗುತ್ತದೆ. ಈ ಜಾಗವೂ ಬೆಟ್ಟದ ರೀತಿ ಇದ್ದರೆ ಒಳ್ಳೆಯದು ಎಂದುಕೊಳ್ಳುತ್ತೇವೆ. ಆದರೆ ಬೆಟ್ಟದ ಹತ್ತಿರ ಹೋಗಿ ನೋಡಿದರೆ ಅಲ್ಲಿನ ವಾಸ್ತವದ ಪರಿಚಯವಾಗುತ್ತದೆ. ನಾವಿರುವ ಜಾಗಕ್ಕಿಂತ ಅಲ್ಲಿ ಕಲ್ಲುಗಳು, ದೊಡ್ಡ ದೊಡ್ಡ ಕಡಿದಾದ ಬಂಡೆಗಳು, ಮುಳ್ಳುಕಂಟಿಗಳು, ಹುಲ್ಲು ಪೊದೆಗಳು ಕಂಡು ನಮ್ಮ ಜಾಗವೇ ಒಳ್ಳೆಯದಿತ್ತೆಂಬ ಸತ್ಯದ ಅರಿವಾಗುತ್ತದೆ. 

  ಹಾಗೆಯೇ ನಮ್ಮ ಬದುಕಿಗಿಂತ ಬೇರೆಯವರ ಬದುಕು ಸುಖವಾಗಿ ಕಾಣುತ್ತದೆ. ಆದರೆ ವಾಸ್ತವವಾಗಿ ಅನ್ಯರ ಬದುಕಿನ ಒಳಹೊಕ್ಕಾಗ ಅವರ ಕಷ್ಟದ ಅರಿವು ನಮಗಾಗುತ್ತದೆ. ಆಗ ನಮ್ಮ ಜೀವನವೇ ಒಳ್ಳೆಯದೆಂದುಕೊಳ್ಳುತ್ತೇವೆ. ಒಟ್ಟಾರೆ ಈ ಗಾದೆಯ ಆಶಯವೆಂದರೆ, ಅನ್ಯರಿಗೆ ನಮ್ಮನ್ನು ಹೋಲಿಸುವುದಕ್ಕಿಂತ ನಮ್ಮ ಜೀವನಕ್ಕೆ ಹೊಂದಿಕೊಂಡು ಒಳ್ಳೆಯ ಬಾಳು ನಡೆಸಬೇಕು.

- ಸೀಮಾ ಕಂಚೀಬೈಲು

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು 

ಹಾಸಿಗೆ ಇದ್ದಷ್ಟು ಕಾಲು ಚಾಚು


     ಇದೊಂದು ಬಹು ಜನಪ್ರಿಯ ಗಾದೆ. ಹಾಸಿಗೆ ಇದ್ದಷ್ಟೇ ಏಕೆಕಾಲು  ಚಾಚಬೇಕೆಂದರೆ ಕಾಲು ನೆಲಕ್ಕೆ ತಾಗಿ ತಣ್ಣನೆ ಅನುಭವ ಆಗಿ ನಿದ್ದೆ ಬರದಿರಬಹುದು. ಇದೊಂದು ಉಪಮೇಯವಷ್ಟೇ. ಈ ಗಾದೆಯ ಒಳಾರ್ಥವೇನೆಂದರೆ, ನಮ್ಮ ದುಡಿಮೆಯಷ್ಟೇ ನಮ್ಮ ಖರ್ಚು ಇರಬೇಕೆಂಬುದು. ಇಲ್ಲದೇ ಹೋದಲ್ಲಿ ಚಿಂತೆಯಿಂದ ನಿದ್ದೆ ಬರದೇ ಇರಬಹುದು. ನಮ್ಮಲ್ಲಿ ಇರುವಷ್ಟರಲ್ಲೇ ತೃಪ್ತಿಕರ ಜೀವನ ನಡೆಸಬೇಕು. ಸುಂದರವಾಗಿ, ಸರಾಗವಾಗಿ ನಡೆಯುತ್ತಿರುವ ನಮ್ಮ ಜೀವನ ಹಳಿ ತಪ್ಪಿದ ಗಾಡಿಯಂತಾಗುತ್ತದೆ. 

    ಈ ಗಾದೆಯಲ್ಲಿ ಕೊಟ್ಟಿರುವ ಹಾಸಿಗೆ ಎಂದರೆ ನಮ್ಮ ಸಂಪಾದನೆಯೇ ಆಗಿರಬಹುದು ಅಥವಾ ನಮ್ಮ ಬಳಿ ಇರುವಂತಹ ಸವಲತ್ತುಗಳೇ ಆಗಿರಬಹುದು. ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳುವುದನ್ನೇ ಕಾಲುಚಾಚು ಎಂದು ನಮ್ಮ ಹಿರಿಯರು ಸಾಂಕೇತಿಕವಾಗಿ ಗಾದೆಯ ಮೂಲಕ ತಿಳಿಸಿದ್ದಾರೆ.


- ಸೀಮಾ ಕಂಚೀಬೈಲು 

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು


ಸಾಧಾರಣವಾಗಿ ನೋಡಲು ಸಣ್ಣ ಇದ್ದವರು ಅಥವಾ ಸಣ್ಣ ಮಕ್ಕಳು ಅಸಾಧಾರಣ ಸಾಧನೆ ಮಾಡಿದಾಗ ಹೆಚ್ಚಾಗಿ ಈ ಗಾದೆಯನ್ನು ಬಳಸುತ್ತಾರೆ. ಪ್ರಕೃತಿಯ ಸೃಷ್ಟಿಯಲ್ಲಿ ಪ್ರತಿಯೊಂದು ಸಣ್ಣಪುಟ್ಟ ಸೃಷ್ಟಿಗೂ ಅದರದ್ದೇ ಆದ ಮಹತ್ವವಿದೆ. ಉದಾಹರಣೆಗೆ ನೆಲದ ಮೇಲಿನ ಕೀಟಗಳು ಜೈವಿಕ ಕರಗುವಿಕೆಯಲ್ಲಿ ಸಹಕಾರಿ. ಹಾರಾಡುವ ಸಣ್ಣ ಸಣ್ಣ ಕೀಟಗಳು ಹೂವಿನ ಪರಾಗಸ್ಪರ್ಶದಲ್ಲಿ ಸಹಕಾರಿ. ಬಾವಲಿ ಮುಂತಾದ ಪಕ್ಷಿಗಳು ಬೀಜ ಪ್ರಸರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗೆ ನಾವು ಯಾವುದೇ ಜೀವಿಯ ಆಕಾರ ನೋಡಿ ಅವುಗಳ ಶಕ್ತಿಯನ್ನು ನಿರ್ಧರಿಸಬಾರದು.

ಇನ್ನು ಮನುಷ್ಯನ ವಿಷಯಕ್ಕೆ ಬಂದರೆ ಈ ತರಹದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಕ್ರಿಕೆಟ್ ದಿಗ್ಗಜನಾದ ಸಚಿನ್ ತೆಂಡೂಲ್ಕರ್, ಭಾರತದ ಶ್ರೇಷ್ಠ ವಿಜ್ಞಾನಿ ಹಾಗೂ ರಾಷ್ಟ್ರಪತಿಗಳಾಗಿದ್ದ ದಿವಂಗತ ಅಬ್ದುಲ್ ಕಲಾಂ ಅವರು, ದೇಶದ ಅತ್ಯುತ್ತಮ ಪ್ರಧಾನ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇವರ್ಯಾರೂ ದೈಹಿಕವಾಗಿ ಹೆಚ್ಚು ಎತ್ತರವಿರಲಿಲ್ಲ. ಆದರೆ ಇವರು ಮಾಡಿದ ಸಾಧನೆ ಯಾರೂ ಮರೆಯುವಂತಿಲ್ಲ. ಅಷ್ಟೇ ಏಕೆ ನಮ್ಮ ಪುರಾಣ ಕತೆಗಳಲ್ಲಿ ಬರುವ ವಿಷ್ಣುವಿನ ಅವತಾರವಾದ ವಾಮನ ಕೂಡ ಎತ್ತರವಿರಲಿಲ್ಲ. ಅವನನ್ನು ನೋಡಿ ಅಪಹಾಸ್ಯ ಕೂಡ ಮಾಡಿದರು. ಆದರೆ ಅವನು ಬಲಿ ಚಕ್ರವರ್ತಿಯಂತಹ ಮಹಾನ್ ವೀರನನ್ನೇ ತುಳಿದನಲ್ಲ!! 

ಇದೆಲ್ಲದರ ಒಳಾರ್ಥ ಏನೆಂದರೆ ನಾವು ನೋಡಲು ಹೇಗೆ ಇರಲಿ ನಮ್ಮಲ್ಲಿ ಸಾಧಿಸಬೇಕೆಂಬ ಛಲ, ಆತ್ಮವಿಶ್ವಾಸ, ನಂಬಿಕೆ ಹಾಗೂ ದೃಢಸಂಕಲ್ಪ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ. ಸಣ್ಣ ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ದೃಢ ಮನಸ್ಸಿನಿಂದ ಮುಂದುವರೆದರೆ ಗುರಿ ಮುಟ್ಟುವುದು ಖಚಿತ.

ರಚನೆ : ಸೀಮಾ ಕಂಚೀಬೈಲು

ನಿನಿ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು 

ಕೈ ಕೆಸರಾದರೆ ಬಾಯಿ ಮೊಸರು

ಈ ಸಾರಿ ನಾವು ಹೊಸ ಅಂಕಣ ಪ್ರಾರಂಭಿಸುತ್ತಿದ್ದೇವೆ. ಅದು ಗಾದೆಗಳ ವಿಸ್ತರಣೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನುಡಿಗಟ್ಟು ಇದೆ. ನಮ್ಮ ಹಿರಿಯರು ತಮ್ಮ ಜೀವನಾನುಭವದಿಂದ ಸಾವಿರಾರು ಗಾದೆಗಳನ್ನು  ಬರೆದರು. ಇತ್ತೀಚಿನ ದಿನಗಳಲ್ಲಿ ಗಾದೆಗಳನ್ನು ಬಳಸುವುದನ್ನು ಎಲ್ಲರೂ ಕಡಿಮೆ ಮಾಡಿದ್ದೇವೆ. ಹೀಗಾಗಿ ನಮಗೆ ಗೊತ್ತಿರುವ ಗಾದೆಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. 

ಕೈ ಕೆಸರಾದರೆ ಬಾಯಿ ಮೊಸರು
ರೈತನು ಕೆಸರು ಗದ್ದೆಯಲ್ಲಿ ಇಡೀ ವರ್ಷ ಕಷ್ಟ ಪಟ್ಟು ದುಡಿದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯ. ಇದೊಂದು ಉದಾಹರಣೆ ಅಷ್ಟೇ. ಹೀಗೆ  ನಾವು ಯಾವುದೇ ಕೆಲಸ ಫಲ ಕೊಡಬೇಕೆಂದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಹೇಗೆ ಒಬ್ಬ ಶಿಲ್ಪಿ ತನ್ನ ಪರಿಶ್ರಮದಿಂದ ಒಂದು ಬಂಡೆಗಲ್ಲನ್ನು ಕೆತ್ತಿ ಸುಂದರ ಶಿಲ್ಪ ಕಲಾಕೃತಿಯನ್ನಾಗಿ ಮಾಡುವನೋ ಹಾಗೆಯೇ ನಮ್ಮ ಕೆಲಸವನ್ನು ಗಮನವಿಟ್ಟು ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳಿಗೂ ಈ ಮಾತು ಅನ್ವಯಿಸುತ್ತದೆ. ಶಿಕ್ಷಕರು ಮಾಡಿದ ಪಾಠಗಳನ್ನು ಗಮನ ಇಟ್ಟು ಓದಿದರೆ ಒಂದು ಒಳ್ಳೆಯ ಗುರಿ ಸಾಧಿಸಬಹುದು. ಆಲಸಿಗಳಾಗದೆ ಶ್ರಮದಿಂದ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡರೆ ಗಮನೀಯ ಸಾಧನೆಗೆ ನಾಂದಿಯಾಗುತ್ತದೆ ಎಂಬುದು ಈ ಗಾದೆಯ ಅರ್ಥ.


ರಚನೆ : ಸೀಮಾ ಕಂಚೀಬೈಲು


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು