ಬಾರ್ಡೋಲಿಯ ಸರ್ದಾರ್

 
  ಹರಿದು ಹಂಚಿಹೋಗಿದ್ದ ಭಾರತದ ಸುಮಾರು 500 ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತಕ್ಕೆ ಒಂದು ದೇಶದ ಸ್ವರೂಪ ನೀಡಿದ ದೇಶದ ಮೊದಲ ಉಪಪ್ರಧಾನಿ, ಧೀಮಂತ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲರು. ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಪಟೇಲರು ಸದೃಢ ಭಾರತ ನಿರ್ಮಾಣಕ್ಕೆ ಜೀವನವನ್ನು ಮುಡಿಪಾಗಿಟ್ಟವರು.

ವಲ್ಲಭಭಾಯ್  ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ್ ಎಂಬಲ್ಲಿ. ಪಟೇಲರು ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದರು. ಅವರ ವಿದ್ಯಾಭ್ಯಾಸ ನಡಿಯಾದ್, ಪೇಟ್ಲಾಡ್, ಹಾಗೂ  ಬೋರ್ಸಾಡ್ ಎಂಬಲ್ಲಿ  ಮುಂದುವರಿಯಿತು.ತಮ್ಮ 36ನೆಯ ವಯಸ್ಸಿನಲ್ಲಿ ಇಂಗ್ಲೆಂಡ್ ಪ್ರಯಾಣ ಬೆಳೆಸಿದ ವಲ್ಲಭಭಾಯ್ ಲಂಡನ್ನಿನ ಮಿಡ್ಲ್ ಟೆಂಪಲ್ ಇನ್ನ್ ನಲ್ಲಿ ಪ್ರವೇಶ ಪಡೆದುಕೊಂಡರು. ಮೂವತ್ತಾರು ತಿಂಗಳುಗಳ ಕೋರ್ಸನ್ನು ಮೂವತ್ತೇ ತಿಂಗಳಲ್ಲಿ ಮುಗಿಸಿದರು. 

ಪಟೇಲರು 1918ರ ಸುಮಾರಿಗೆ ಕಾಂಗ್ರೆಸ್ ಪಕ್ಷ ಸೇರಿದರು. ನಂತರ ತಮ್ಮ ವಕೀಲಿ ವೃತ್ತಿ, ಮನೆ,ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಖೇಡಾ, ಬರ್ಸಾಡ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳೊಂದಿಗೆ ಪಟೇಲರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಬಾರ್ಡೋಲಿಯ ಸತ್ಯಾಗ್ರಹದಿಂದ ಪಟೇಲರಿಗೆ ಸರದಾರ್ ಎಂಬ ಬಿರುದು ಪ್ರಾಪ್ತವಾಯಿತು.

ಭಾರತವು ಸ್ವತಂತ್ರವಾದ ನಂತರ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಸರ್ದಾರ್ ಪಟೇಲ್‌ರವರೇ ಆಯ್ಕೆಯಾಗಿದ್ದರು. ಆದರೆ ಗಾಂಧೀಜಿಯವರ ಒತ್ತಾಯದ ಮೇಲೆ ಇವರು ಪ್ರಧಾನಿ ಹುದ್ದೆಯಿಂದ ಹಿಂದಕ್ಕೆ ಸರಿದು ಜವಾಹರ್ ಲಾಲ್ ನೆಹರುರವರಿಗೆ ದಾರಿ ಮಾಡಿಕೊಟ್ಟರು.ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ಸುಮಾರು 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ ಒಂದು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ  ಗುರುತರ ಕಾರ್ಯವನ್ನು ಯಶಸ್ವಿಯಾಗಿ ಪಟೇಲರು ಪೂರ್ಣಗೊಳಿಸಿದರು. 

ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಸಂಸ್ಥಾನಿಕ ರಾಜರನ್ನು ಮಾತುಕತೆಯ ಮೂಲಕ ಚಾಣಾಕ್ಷತನದಿಂದ ಒಲಿಸಿದರು. ವಿಲೀನಗೊಳಿಸಲು ಸಿದ್ಧರಿಲ್ಲದ ಸಂಸ್ಥಾನಗಳಿಗೆ   ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ,  ಭಾರತದ ಭಾಗವಾಗಿಸಿದರು.ಈ ಸಂಕೀರ್ಣವಾದ ಕಾರ್ಯವನ್ನು ಕೈಗೂಡಿಸುವ ಮನಃ ಸ್ಥೈರ್ಯ ,  ಹಾಗೂ ಅಚಲತೆ ಇದ್ದವರು ಪಟೇಲರು ಮಾತ್ರ. 

ಭಾರತದಲ್ಲಿದ್ದ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು 'ಉಕ್ಕಿನ ಮನುಷ್ಯ' ರೆಂದೇ ಅಮರರಾದರು. ಸರ್ದಾರ್ ಪಟೇಲರಿಗೆ ೧೯೯೧ ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪಟೇಲ್ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಆಚರಿಸ ಲಾಗುತ್ತಿದೆ. ಅಕ್ಟೋಬರ್‌ 31, 2018,  ಸರ್ದಾರ್ ಪಟೇಲ್ ಅವರ 142ನೇ ಜನ್ಮದಿನಾಚರಣೆಯಂದು ನರ್ಮದಾತೀರದಲ್ಲಿ ಪಟೇಲರ  182 ಮೀಟರ್‌ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈ ಪ್ರತಿಮೆಯು ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಿದೆ. 

ಭಾರತವನ್ನು ಒಟ್ಟುಗೂಡಿಸುವ ಅಸಾಧ್ಯ  ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸಿದ ಈ ಹಿರಿಯ  ಮುತ್ಸದ್ದಿಯನ್ನು ಭಾರತದ ಬಿಸ್ಮಾರ್ಕ್ ಎಂದರೆ ಸರಿ. 







ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ವಾಯು ಮಾಲಿನ್ಯ; ಕಾರಣಗಳು, ಪರಿಣಾಮಗಳು ಹಾಗೂ ನಿಯಂತ್ರಣ

ನಮ್ಮ ವಾತಾವರಣದಲ್ಲಿನ ನಮ್ಮ ಉಸಿರಾಟಕ್ಕೆ ಬೇಕಾಗುವಂತಹ ಆಮ್ಲಜನಕ, ಜಲಜನಕ ಹಾಗೂ ಇನ್ನಿತರ ಅನಿಲಗಳು ಕೆಲವು ವಿಷಯುಕ್ತ ಹಾಗೂ ಹಾನಿಕಾರಕ ಅನಿಲದೊಡನೆ ಬೆರೆತು ಮಾಲಿನವಾಗುತ್ತವೆ, ಇದನ್ನೇ ವಾಯು ಮಾಲಿನ್ಯ ಎನ್ನುತ್ತಾರೆ. 

ವಾಯು ಮಾಲಿನ್ಯದ ಕಾರಣಗಳು :-
  •  ಇಂತಹ ಹಾನಿಕಾರಕವಾದ ಕೆಲವು ಅನಿಲಗಳೆಂದರೆ, ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಕ್ಲೋರೋ ಫ್ಲೋರೋ ಕಾರ್ಬನ್, ನೈಟ್ರೋಜನ್ ಆಕ್ಸೈಡ್ ಇತ್ಯಾದಿ.


  •  ಮತ್ತೊಂದು ಅತಿ ಹಾನಿಕಾರಕ ಅಂಶವಾದ ಸೀಸವು ವಾಹನಗಳ ಹೊಗೆಯಿಂದ ವಾತಾವರಣಕ್ಕೆ ಬಿಡುಗಡೆ ಆಗುತ್ತದೆ. ಇದೊಂದು ಬಹು ವಿಷಕಾರಿ ಲೋಹ. ಮನೆಗಳಿಗೆ ಹಚ್ಚುವ ಬಣ್ಣಗಳು, ಸೀಸದ ಬ್ಯಾಟರಿಗಳು, ಕೂದಲಿಗೆ ಹಚ್ಚುವ ಕೆಲವು ಬಣ್ಣಗಳು ಹೀಗೆ ಅನೇಕ ವಸ್ತುಗಳ ಬಳಕೆಯ ಮೂಲಕ ಹೆಚ್ಚಿನ ಅಂಶದಲ್ಲಿ ಪರಿಸರಕ್ಕೆ ಸೇರ್ಪಡೆಯಾಗುತ್ತಿದೆ. 


  •  ಅತಿ ಮುಂದುವರಿದ ದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯವಾಗುತ್ತಿದೆ. ವಾಹನಗಳಿಂದ ಸೀಸದ ಅಂಶವಲ್ಲದೆ ನೈಟ್ರೋಜನ್ ಆಕ್ಸೈಡ್ ಎಂಬ ವಿಷಕಾರಿ ಅನಿಲ ಕೂಡ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ದೊಡ್ಡ ಕಾರ್ಖಾನೆಗಳು ಹಾಗೂ ವಿದ್ಯುತ್ ಉತ್ಪಾದನಾ ಸ್ಥಾವರಗಳಿಂದ ನೈಟ್ರೋಜನ್ ಅಲ್ಲದೆ, ಸಲ್ಫರ್ ಡೈ ಆಕ್ಸೈಡ್ ಕೂಡ ಬಿಡುಗಡೆಯಾಗುತ್ತಿದೆ. ಈ ವಿಷಕಾರಿ ಅನಿಲವು ಕಾಗದ ತಯಾರಿಸುವ ಕಾರ್ಖಾನೆಗಳಲ್ಲಿ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಉರಿಸುವಿಕೆಯಿಂದ ಹಾಗೂ ಲೋಹಗಳನ್ನು ಕರಗಿಸುವ ಕಾರ್ಖಾನೆಗಳಲ್ಲಿ ಹೆಚ್ಚು ಬಿಡುಗಡೆಯಾಗುತ್ತದೆ. 


  • ಅಡುಗೆ ಮಾಡಲು ಉರಿಸುವ ಕಟ್ಟಿಗೆಗಳಿಂದ ಬರುವ ಹೊಗೆಯಿಂದ ಕೂಡ ವಾತಾವರಣ ಮಾಲಿನ್ಯಗೊಳ್ಳುತ್ತಿದೆ. ಹಾಗೆಯೇ ಕೆಲವು ರಾಸಾಯನಿಕ ಸಿಂಪಡನೆಗಳಿಂದ ಕೂಡ ಮಾಲಿನ್ಯ ಹೆಚ್ಚುತ್ತಿದೆ. ಗಿಡಗಳಿಗೆ ಕೀಟನಾಶಕ ಸಿಂಪಡಣೆ ಮಾಡುವುದರಿಂದ ಕೀಟಗಳು ನಾಶವಾಗಬಹುದು ಆದರೆ ನಾವು ಉಸಿರಾಡುವ ಗಾಳಿಯ ಶುದ್ಧತೆ ಕೂಡ ಅದೇ ಪ್ರಮಾಣದಲ್ಲಿ ನಾಶವಾಗುತ್ತಿದೆ.


  ಮೇಲಿನ ಅಂಶಗಳು ಮಾನವ ನಿರ್ಮಿತವಾದ ಮಾಲಿನ್ಯಗಳಾದರೆ ನೈಸರ್ಗಿಕವಾಗಿ ಕೂಡ ಕೆಲವು ಕಾರಣಗಳಿವೆ. ಅವುಗಳೆಂದರೆ, 
  • ಕಾಡ್ಗಿಚ್ಚು
  • ಬಿರುಗಾಳಿ
  • ಜ್ವಾಲಾಮುಖಿಯ ಸ್ಫೋಟದಿಂದ ಬರುವಂತಹ ಹೊಗೆ
  • ಬ್ಯಾಕ್ಟೀರಿಯಾಗಳ ಕೊಳೆಯುವಿಕೆಯಿಂದ ಬಿಡುಗಡೆಯಾಗುವ ಅನಿಲ.

ಮಾಲಿನ್ಯದ ಪರಿಣಾಮಗಳು : - 

  • ವಾಯು ಮಾಲಿನ್ಯದಿಂದ ಹಲವು ಗಂಭೀರ ಕಾಯಿಲೆಗಳು ಬರುತ್ತವೆ. ಅಷ್ಟೇ ಅಲ್ಲದೆ ಭೂಮಿಯ ಮೇಲಿನ ಜೈವಿಕ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.
  • ಕಾರ್ಬನ್ ಡೈ ಆಕ್ಸೈಡ್ ಅನಿಲದ ಪ್ರಮಾಣ ಹೆಚ್ಚಾದಂತೆಲ್ಲ ಹಸಿರು ಮನೆಯ ಪರಿಣಾಮ ಹೆಚ್ಚಾಗುತ್ತದೆ.
  • ಸಲ್ಫರ್ ಮತ್ತು ನೈಟ್ರೋಜನ್ ಆಕ್ಸೈಡ್ ಗಳ ಸಂಯುಕ್ತಗಳು ವಾತಾವರಣದ ನೀರಿನ ಆವಿಯ ಜೊತೆ ಸೇರಿ ಆಮ್ಲ ಮಳೆ ಸುರಿಸುತ್ತವೆ.  ಇದರಿಂದ ವಾಯು ಮಾಲಿನ್ಯವಲ್ಲದೆ ಜಲ ಮಾಲಿನ್ಯ ಕೂಡ ಉಂಟಾಗುತ್ತದೆ.
  • ರೇಫ್ರಿಜೆರೇಟರ್ ನಲ್ಲಿ ಬಳಸುವ ಕ್ಲೋರೋ ಫ್ಲೋರೋ ಕಾರ್ಬನ್ ನಮ್ಮ ಭೂಮಿಯನ್ನು ಅತಿನೇರಳೆ ಕಿರಣದಿಂದ ರಕ್ಷಿಸುತ್ತಿರುವ ಓಜೋನ್ ಪದರಕ್ಕೆ ಹಾನಿ ಮಾಡುತ್ತಿದೆ.
  • ಹಾಗೆಯೇ ವಾಹನಗಳು ಉಗುಳುವ ಹೊಗೆ ಮತ್ತು ಕಟ್ಟಿಗೆ ಒಲೆಯಿಂದ ಬರುವಂತಹ ಹೊಗೆ ಶ್ವಾಸಕೋಶದ ದೀರ್ಘಕಾಲಿನ ಕಾಯಿಲೆಗಳನ್ನು ತರುತ್ತವೆ.
  • ಅತಿ ಗಂಭೀರ ಕಾಯಿಲೆಗಳಾದ ಕ್ಯಾನ್ಸರ್, ಮೆದುಳು ಹಾಗೂ ನರ ಸಂಬಂಧಿ ಕಾಯಿಲೆಗಳು ಹಾಗೂ ಹಲವಾರು ಜನ್ಮಜಾತ ಕಾಯಿಲೆಗಳಿಗೆ ವಾಯು ಮಾಲಿನ್ಯ ಕಾರಣವಾಗುತ್ತಿದೆ. 

ಮಾಲಿನ್ಯದ ನಿಯಂತ್ರಣದ ಬಗೆ :-
  • ಮನೆಗಳಲ್ಲಿ ಅಡುಗೆ ಮಾಡಲು ಕಟ್ಟಿಗೆಯ ಒಲೆಗಳ ಬದಲು ಹೊಗೆ ಬಾರದಂತಹ ಜೈವಿಕ ಅಡುಗೆ ಅನಿಲದ ಬಳಕೆ.
  • ಹೊರಗೆ ಹೋಗುವಾಗ ಖಾಸಗಿ ವಾಹನದ ಬದಲು ಸಾರ್ವಜನಿಕ ವಾಹನಗಳಿಗೆ ಹೆಚ್ಚು ಒತ್ತು ಕೊಡುವುದು.
  • ಸೀಸ ರಹಿತ ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ
  • ಕ್ಲೋರೋ ಫ್ಲೋರೋ ಕಾರ್ಬನ್ ಉಪಯೋಗಿ ವಸ್ತುಗಳ ನಿರ್ಬಂಧ.
  • ಮಾಲಿನ್ಯ ನಿಯಂತ್ರಣ ಕಾಯ್ದೆ, 1986ರ ಪ್ರಕಾರ ವಾಹನಗಳ ಹೊಗೆ ಉಗುಳಿವಿಕೆಯನ್ನು ಕಾಲಾನುಸಾರ ಪರಿಶೀಲನೆಗೆ ಒಳಪಡಿಸುವುದು ಹಾಗೂ ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು.
  • ಅತಿ ಮುಖ್ಯವಾದ ಅಂಶವೆಂದರೆ ನಮ್ಮ ಸುತ್ತಮುತ್ತಲಿನ ಜನಗಳಿಗೆ ಮಾಲಿನ್ಯದ ಬಗ್ಗೆ ಮಾಹಿತಿ ನೀಡಿ ಅವರನ್ನು ಜಾಗೃತರನ್ನಾಗಿಸುವುದು.


ರಚನೆ: ಸೀಮಾ ಕಂಚೀಬೈಲು 

ನಿಮ್ಮ  ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ಬಾ ಬಾ ಗಿಳಿಯೆ, ಬಣ್ಣದ ಗಿಳಿಯೇ








ಬಾ ಬಾ ಗಿಳಿಯೆ, ಬಣ್ಣದ ಗಿಳಿಯೇ
ಹಣ್ಣನು ಕೊಡುವೆನು ಬಾ ಬಾ,
ಹಸಿರು ಪುಕ್ಕದ ಚಂದದ ಗಿಳಿಯೆ
ನನ್ನೊಡನಾಡಲು ಬಾ ಬಾ.

ಕೆಂಪು ಮೂಗಿನ ಮುದ್ದಿನ ಗಿಳಿಯೆ
ಹಾಡನು ಕಲಿಸುವೆ ಬಾ ಬಾ,
ಮರದಲಿ ಕುಳಿತು ನೋಡುವೆ ಏಕೆ
ಹಾರುತ ಹತ್ತಿರ ಬಾ ಬಾ.

ಠಕ್ಕಿನ ಕಾಮಿ ಮನೆಯೊಳಗಿಲ್ಲ
ಹೆದರುವೆ ಏಕೆ ಬಾ ಬಾ,
ಸೊಕ್ಕಿನ ಟಾಮಿ ಹತ್ತಿರವಿಲ್ಲ
ಕುಣಿಕುಣಿದಾಡುತ ಬಾ ಬಾ.

ಹಾಡುವುದನ್ನು ಕಲಿಸುವೆ ನಿನಗೆ
ಹಾರಲು ಕಲಿಸಲು ಬಾ ಬಾ,
ಹಣ್ಣನು ತಿಂದು, ಹಾಲನು ಕುಡಿದು
ಮುಗಿಲಿಗೆ ಹಾರುವ ಬಾ ಬಾ.


ರಚನೆ : ಶಂಕರಗೌಡ ಗುರುಗೌಡ ಬಿರಾದಾರ

ನಮ್ಮ ನಾಡಹಬ್ಬ - ನವರಾತ್ರಿ

 
 ನವರಾತ್ರಿಯು  ದೇವಿಯನ್ನು ಆರಾಧಿಸುವ ಹಬ್ಬವಾಗಿದೆ. ಇದನ್ನು ಭಾರತದ ಉದ್ದಗಲಕ್ಕೂ ವಿವಿಧ ರೀತಿಯಲ್ಲಿ ನವರಾತ್ರಿ ಅಥವಾ ದಸರಾ ಎಂದು ಆಚರಿಸಲಾಗುತ್ತದೆ. ಜಗನ್ಮಾತೆಯನ್ನು ನವವಿಧವಾಗಿ ಪೂಜಿಸುವುದು ಈ ನವರಾತ್ರಿ ಹಬ್ಬದ ವಿಶೇಷತೆಯಾಗಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ. ಮುಂದೆ ಒಂಭತ್ತು ದಿನವೂ ಕೂಡ ದೇವಿಯನ್ನು ಆರಾಧಿಸಲಾಗುತ್ತದೆ

   ಈ ಪರ್ವವನ್ನು ಕುರಿತು ಕಥೆಗಳು ನಮ್ಮ ಪುರಾಣದಲ್ಲಿ ಸಿಗುತ್ತವೆ. ವಿಜಯದಶಮಿಯಂದು ರಾವಣನ ಮೇಲೆ ಶ್ರೀರಾಮ ವಿಜಯ ಸಾಧಿಸಿದನೆನ್ನಲಾಗಿದೆ. ಇದಲ್ಲದೆ  ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯದಶಮಿಯಾಗಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ಜನರು ತಮ್ಮದೇ ವೈಖರಿಯಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. 

     ನವರಾತ್ರಿ  ಕರ್ನಾಟಕದ ನಾಡಹಬ್ಬ ಆಗಿದ್ದು ಹತ್ತು ದಿನಗಳ ನಡೆಯುವ ವಿಶೇಷ ಹಬ್ಬದಲ್ಲಿ ಒಂಭತ್ತು ದಿನಗಳ ಕಾಲ ದೇವಿಪೂಜೆಯನ್ನು ಮಾಡಲಾಗುತ್ತದೆ. ಹತ್ತನೇಯ ದಿನವೇ ವಿಜಯ ದಶಮಿ, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ ಅಥವಾ ಬನ್ನಿಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ.ಇಲ್ಲಿಯ ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಮೈಸೂರಿನಲ್ಲಿ ವಿಜಯದಶಮಿಯಂದು ಚಾಮುಂಡಿ ಬೆಟ್ಟದಲ್ಲಿರುವ  ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಬಂಗಾರದ ಪಲ್ಲಕ್ಕಿಯಲ್ಲಿ  ಸಕಲ ಸರ್ಕಾರಿ ಹಾಗೂ ರಾಜ ಮರ್ಯಾದೆಯ ಮೂಲಕ ನಡೆಯುತ್ತದೆ. 

   ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯನ್ನು ದುರ್ಗಾ ಪೂಜೆಯಾಗಿ ಆಚರಿಸಲಾಗುತ್ತದೆ. ರಾಜ್ಯದ ಎಲ್ಲೆಡೆ ಈ ಹಬ್ಬವನ್ನು ದುರ್ಗಾ ಪೂಜಾ ಪೆಂಡಾಲುಗಳನ್ನು ಹಾಕಿ ಆಚರಿಸಲಾಗುತ್ತದೆ.  ದುರ್ಗಾ ದೇವಿಯನ್ನು ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರೊಂದಿಗೆ ಪೂಜಿಸಲಾಗುತ್ತದೆ.  ವಿಜಯದಶಮಿಯಲ್ಲಿ, ಭವ್ಯವಾದ ಮೆರವಣಿಗೆ ಯೊಂದಿಗೆ ಪ್ರತಿಮೆಗಳನ್ನು ವಿದ್ಯುಕ್ತವಾಗಿ ನೀರಿನಲ್ಲಿ  ವಿಸರ್ಜಿಸಲಾಗುತ್ತದೆ. 

   ಉತ್ತರ ಭಾರತದಲ್ಲಿ ದಸರಾ ಸಂಭ್ರಮದ ಹತ್ತು ದಿನಗಳೂ ರಾಮಲೀಲಾ ನಡೆಯುತ್ತದೆ. ರಾಮಾಯಣದ ವಿವಿಧ ಘಟನೆಗಳನ್ನು ನಾಟಕದ ಮೂಲಕ ಜನರಿಗೆ ತಿಳಿಸುತ್ತಾರೆ. ಹತ್ತನೆಯ ದಿನ ರಾವಣನ ಪ್ರತಿಕೃತಿಯನ್ನು ಸುಡಲಾಗುತ್ತದೆ. 

  ಗುಜರಾತಿನಲ್ಲಿ  ಗರ್ಭಾ ಎಂಬ  ಮಣ್ಣಿನ ಪಾತ್ರೆಯನ್ನಿಟ್ಟು ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಗರ್ಭಾದ ಜಾನಪದ ಕೋಲಾಟದ ನೃತ್ಯವನ್ನು ಮಾಡಲಾಗುತ್ತದೆ.  ಇದನ್ನು ದಾಂಡಿಯಾ ಎಂದು ಕರೆಯಲಾಗುತ್ತದೆ. 

ಹೀಗೆ ದೇವಿಯನ್ನು ದುರ್ಗಾ, ಕಾತ್ಯಾಯಿನಿ, ಗೌರಿ, ಅಂಬಿಕಾ, ಪಾರ್ವತಿ, ಶರ್ವಾಣಿ, ಶಿವೆ, ಪರಮೇಶ್ವರಿ ಎಂದು ಸ್ತುತಿಸಿ ಸಂಭ್ರಮ ಉತ್ಸಾಹದಿಂದ ನವರಾತ್ರಿಯನ್ನು ಆಚರಿಸಲಾಗುತ್ತದೆ. 


ಕನ್ನಡದ ಮೊದಲುಗಳು - 3


1. ಕನ್ನಡದ ಮೊದಲ ವಚನಕಾರ ಯಾರು?
ದೇವರದಾಸಿಮಯ್ಯ

2. ಹೊಸಗನ್ನಡದ ಮೊದಲ ಮಹಾಕಾವ್ಯ ಯಾವುದು?
ಶ್ರೀರಾಮಾಯಣ ದರ್ಶನಂ

3. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಯಾವುದು?
ಇಂದಿರಾಬಾಯಿ

4. ಕನ್ನಡದ ಮೊದಲ ರಾಷ್ಟ್ರಕವಿ ಯಾರು?
ಮಂಜೇಶ್ವರ ಗೋವಿಂದ ಪೈ

5.   ಕನ್ನಡದ ಮೊದಲ ಹಾಸ್ಯ ಲೇಖಕಿ ಯಾರು?
 ಟಿ ಸುನಂದಮ್ಮ

6.ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ ಯಾರು?
ಕುವೆಂಪು

7.ಕನ್ನಡದ ಮೊದಲ ವಾಕ್ಚಿತ್ರ ಯಾವುದು?
ಸತಿ ಸುಲೋಚನ

8.ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?
ರಣಧೀರ ಕಂಠೀರವ

9. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಯಾರು?
ಹೆಚ್.ವಿ.ನಂಜುಂಡಯ್ಯ

10.ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಯಾವುದು?
ಬೆಂಗಳೂರು (1915)


ಮಕ್ಕಳ ಚುಟುಕುಗಳು


ಇಗೋ ಇಲ್ಲಿವೆ ಚಿಕ್ಕವರಿದ್ದಾಗ ನಾವೆಲ್ಲ ಹೇಳಿಕೊಳ್ಳುತ್ತಿದ್ದ ಚುಟುಕುಗಳು; ಇಂದಿನ ಮಕ್ಕಳಿಗಾಗಿ :-

PC: internet


ಗಣೇಶ ಬಂದ
ಕಾಯಿಕಡಬು ತಿಂದ
ದೊಡ್ಕೆರೇಲಿ ಬಿದ್ದ
ಚಿಕ್ಕೆರೇಲಿ ಎದ್ದ
*******

ಅವ್ವಾ ಅವ್ವಾ ಗೆಣಸs
ಗಡಿಗ್ಯಾಗ ಹಾಕಿ ಕುದಸs
ತುತ್ತ ಮಾಡಿ ಉಣಸs
ಬಾಲವಾಡಿಗ ಕಳಸs

*******

ಉಂಡಾಡಿ ಗುಂಡ
ಅಜ್ಜಿ ಮನೇಗೆ ಹೋದ
ಎಂಟು ಲಾಡು ತಿಂದ
ಹೊಟ್ಟೆ ನೋವು ಎಂದ
ಕೈ ಕಟ್ ಬಾಯ್ ಮುಚ್

*******
ಕಣ್ಣೇ ಮುಚ್ಚೇ ಕಾಡೇಗೂಡೆ
ಉದ್ದಿನ ಮೂಟೆ
ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡ್ದು ಕೊಳ್ಳಿ

******

ಅವಳ ಹೆಸರು ಪದ್ದು
ಬುದ್ಧಿಯಿಲ್ಲ ಪೆದ್ದು
ಮನೆಯಲೆಲ್ಲ ಮುದ್ದು
ತಿನ್ನೋದೆಲ್ಲ ಕದ್ದು
ಒಮ್ಮೆ ಸಿಕ್ಕಿ ಬಿದ್ದು
ಬಿತ್ತು ನಾಲ್ಕು ಗುದ್ದು !

*******