ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ


1949ರಲ್ಲಿ  ಅಂದಿನ ಮದ್ರಾಸ್ ಸರ್ಕಾರದಿಂದ 'ರಾಷ್ಟ್ರಕವಿ' ಎಂದು ಸನ್ಮಾನಿಸಲ್ಪಟ್ಟ ಮಂಜೇಶ್ವರ ಗೋವಿಂದ ಪೈರವರು 23/3/1883ರಂದು ಮಂಜೇಶ್ವರದಲ್ಲಿ ಜನಿಸಿದರು. ಅವರ ತಂದೆ ತಿಮ್ಮಪ್ಪ ಪೈ ತಾಯಿ ಜಾನಕಿ ಪೈ.

ಇವರ ಮೊದಲ ಕವಿತೆ 'ಸುವಾಸಿನಿ' ಸುಮಾರು 1900ರಲ್ಲಿ ಪ್ರಕಟವಾಗಿದೆ. 'ವೈಶಾಖ' ಮತ್ತು 'ಗೊಲ್ಗೊಥಾ' - ಪೈಯವರು ರಚಿಸಿರುವ ಎರಡು ಖಂಡ ಕಾವ್ಯಗಳು. ಇವರು ನವೀನ್ ಚಂದ್ರಸೇನ್ ರ ಬಂಗಾಳಿ 'ಕೃಷ್ಣ ಚರಿತೆ' ಯ ಗದ್ಯಅನುವಾದವನ್ನು 1909ರಲ್ಲಿ ಪ್ರಕಟಿಸಿದರು. 1911ರಲ್ಲಿ ಬೌದ್ಧಸೂತ್ರಗಳ ಕನ್ನಡ ಅನುವಾದವನ್ನು ಪ್ರಕಟಿಸಿದರು. 'ಗಿಳಿವಿಂಡು', 'ಚಿತ್ರಭಾನು ಅಥವಾ 1942', 'ನಂದಾದೀಪ' ಇವು ಪೈಗಳ ಕೆಲವು ಕವನ ಸಂಕಲನಗಳು.

ಪೈಗಳು ಪ್ರಸಿದ್ಧ ಉರ್ದುಕವಿ 'ಉಮರ್ ಖಯ್ಯಂ'ನ ರುಬಾಯಿಗಳನ್ನು ಭಾಷಾಂತರಿಸಿದ್ದರು. ಜಪಾನಿನ 'ನೋ' ನಾಟಕಗಳ ಸವಿಯನ್ನು ತಮ್ಮ ಅನುವಾದಗಳ ಮೂಲಕ ಕನ್ನಡ ಓದುಗರಿಗೆ ಉಣಬಡಿಸಿದ್ದಾರೆ. ಮಹಮದ್ ಇಕ್ಬಾಲರ ಒಂದು ಪದವನ್ನು ಪ್ರಕಟಿಸಿದ್ದಾರೆ.

ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಕೇಶ್ವರ ಚರಿತೆ, ಭಗವಾನ್ ಬುದ್ಧ ಮಹಾಸಂತರನ್ನು ಕುರಿತು ಅವರು ರಚಿಸಿರುವ ಕೃತಿಗಳು. 'ಕನ್ನಡದ ಮೊರೆ' ವ್ಯಕ್ತಿಚಿತ್ರಗಳ ಸಂಕಲನ. ಪೈಗಳು ತಮ್ಮ ಆತ್ಮಕಥೆಯನ್ನು ಸಹಾ ಬರೆದಿದ್ದಾರೆ. ಅವರು ಸಂಪಾದಿಸಿದ ಕೃತಿ 'ಭಕ್ತಿವಾಣಿ'.

ರಾಷ್ಟ್ರಕವಿ ಎಂದು ಗೌರವಿಸಲ್ಪಟ್ಟ ಮೊದಲ ಕವಿ ಮಂಜೇಶ್ವರ ಗೋವಿಂದ ಪೈ1950ರಲ್ಲಿ ಮುಂಬೈಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಒಪ್ಪಲಿಲ್ಲ. ಇವರನ್ನು ಶಿವರಾಮ ಕಾರಂತರು, ಎಂ.ಆರ್.ಶ್ರೀನಿವಾಸ ಮೂರ್ತಿಗಳು ಮತ್ತು ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿ ಶ್ರೀಮಂಜಯ್ಯ ಹೆಗ್ಗಡೆಯವರು ಸಾಕಷ್ಟು ಒತ್ತಡವನ್ನು ಹೇರಿ ಒಪ್ಪಿಸಬೇಕಾಯಿತಂತೆ.

ಇವರ ಕಟ್ಟಕಡೆಯ ಲೇಖನವು 1962ರಲ್ಲಿ ಪ್ರಕಟವಾಯಿತು. ಗೋವಿಂದ ಪೈಗಳು ಸೆಪ್ಟೆಂಬರ್9 1963ರಲ್ಲಿ ಪಂಚಭೂತಗಳಲ್ಲಿ ಲೀನವಾದರು.


- ಸೀಮಾ ಕಂಚೀಬೈಲು

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

1 comment: