ಬಾರ್ಡೋಲಿಯ ಸರ್ದಾರ್

 
  ಹರಿದು ಹಂಚಿಹೋಗಿದ್ದ ಭಾರತದ ಸುಮಾರು 500 ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತಕ್ಕೆ ಒಂದು ದೇಶದ ಸ್ವರೂಪ ನೀಡಿದ ದೇಶದ ಮೊದಲ ಉಪಪ್ರಧಾನಿ, ಧೀಮಂತ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲರು. ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಪಟೇಲರು ಸದೃಢ ಭಾರತ ನಿರ್ಮಾಣಕ್ಕೆ ಜೀವನವನ್ನು ಮುಡಿಪಾಗಿಟ್ಟವರು.

ವಲ್ಲಭಭಾಯ್  ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ್ ಎಂಬಲ್ಲಿ. ಪಟೇಲರು ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದರು. ಅವರ ವಿದ್ಯಾಭ್ಯಾಸ ನಡಿಯಾದ್, ಪೇಟ್ಲಾಡ್, ಹಾಗೂ  ಬೋರ್ಸಾಡ್ ಎಂಬಲ್ಲಿ  ಮುಂದುವರಿಯಿತು.ತಮ್ಮ 36ನೆಯ ವಯಸ್ಸಿನಲ್ಲಿ ಇಂಗ್ಲೆಂಡ್ ಪ್ರಯಾಣ ಬೆಳೆಸಿದ ವಲ್ಲಭಭಾಯ್ ಲಂಡನ್ನಿನ ಮಿಡ್ಲ್ ಟೆಂಪಲ್ ಇನ್ನ್ ನಲ್ಲಿ ಪ್ರವೇಶ ಪಡೆದುಕೊಂಡರು. ಮೂವತ್ತಾರು ತಿಂಗಳುಗಳ ಕೋರ್ಸನ್ನು ಮೂವತ್ತೇ ತಿಂಗಳಲ್ಲಿ ಮುಗಿಸಿದರು. 

ಪಟೇಲರು 1918ರ ಸುಮಾರಿಗೆ ಕಾಂಗ್ರೆಸ್ ಪಕ್ಷ ಸೇರಿದರು. ನಂತರ ತಮ್ಮ ವಕೀಲಿ ವೃತ್ತಿ, ಮನೆ,ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಖೇಡಾ, ಬರ್ಸಾಡ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳೊಂದಿಗೆ ಪಟೇಲರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಬಾರ್ಡೋಲಿಯ ಸತ್ಯಾಗ್ರಹದಿಂದ ಪಟೇಲರಿಗೆ ಸರದಾರ್ ಎಂಬ ಬಿರುದು ಪ್ರಾಪ್ತವಾಯಿತು.

ಭಾರತವು ಸ್ವತಂತ್ರವಾದ ನಂತರ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಸರ್ದಾರ್ ಪಟೇಲ್‌ರವರೇ ಆಯ್ಕೆಯಾಗಿದ್ದರು. ಆದರೆ ಗಾಂಧೀಜಿಯವರ ಒತ್ತಾಯದ ಮೇಲೆ ಇವರು ಪ್ರಧಾನಿ ಹುದ್ದೆಯಿಂದ ಹಿಂದಕ್ಕೆ ಸರಿದು ಜವಾಹರ್ ಲಾಲ್ ನೆಹರುರವರಿಗೆ ದಾರಿ ಮಾಡಿಕೊಟ್ಟರು.ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ಸುಮಾರು 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ ಒಂದು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ  ಗುರುತರ ಕಾರ್ಯವನ್ನು ಯಶಸ್ವಿಯಾಗಿ ಪಟೇಲರು ಪೂರ್ಣಗೊಳಿಸಿದರು. 

ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಸಂಸ್ಥಾನಿಕ ರಾಜರನ್ನು ಮಾತುಕತೆಯ ಮೂಲಕ ಚಾಣಾಕ್ಷತನದಿಂದ ಒಲಿಸಿದರು. ವಿಲೀನಗೊಳಿಸಲು ಸಿದ್ಧರಿಲ್ಲದ ಸಂಸ್ಥಾನಗಳಿಗೆ   ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ,  ಭಾರತದ ಭಾಗವಾಗಿಸಿದರು.ಈ ಸಂಕೀರ್ಣವಾದ ಕಾರ್ಯವನ್ನು ಕೈಗೂಡಿಸುವ ಮನಃ ಸ್ಥೈರ್ಯ ,  ಹಾಗೂ ಅಚಲತೆ ಇದ್ದವರು ಪಟೇಲರು ಮಾತ್ರ. 

ಭಾರತದಲ್ಲಿದ್ದ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು 'ಉಕ್ಕಿನ ಮನುಷ್ಯ' ರೆಂದೇ ಅಮರರಾದರು. ಸರ್ದಾರ್ ಪಟೇಲರಿಗೆ ೧೯೯೧ ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪಟೇಲ್ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಆಚರಿಸ ಲಾಗುತ್ತಿದೆ. ಅಕ್ಟೋಬರ್‌ 31, 2018,  ಸರ್ದಾರ್ ಪಟೇಲ್ ಅವರ 142ನೇ ಜನ್ಮದಿನಾಚರಣೆಯಂದು ನರ್ಮದಾತೀರದಲ್ಲಿ ಪಟೇಲರ  182 ಮೀಟರ್‌ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈ ಪ್ರತಿಮೆಯು ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಿದೆ. 

ಭಾರತವನ್ನು ಒಟ್ಟುಗೂಡಿಸುವ ಅಸಾಧ್ಯ  ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸಿದ ಈ ಹಿರಿಯ  ಮುತ್ಸದ್ದಿಯನ್ನು ಭಾರತದ ಬಿಸ್ಮಾರ್ಕ್ ಎಂದರೆ ಸರಿ. 







ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

No comments:

Post a Comment