ನಮ್ಮ ನಾಡಹಬ್ಬ - ನವರಾತ್ರಿ

 
 ನವರಾತ್ರಿಯು  ದೇವಿಯನ್ನು ಆರಾಧಿಸುವ ಹಬ್ಬವಾಗಿದೆ. ಇದನ್ನು ಭಾರತದ ಉದ್ದಗಲಕ್ಕೂ ವಿವಿಧ ರೀತಿಯಲ್ಲಿ ನವರಾತ್ರಿ ಅಥವಾ ದಸರಾ ಎಂದು ಆಚರಿಸಲಾಗುತ್ತದೆ. ಜಗನ್ಮಾತೆಯನ್ನು ನವವಿಧವಾಗಿ ಪೂಜಿಸುವುದು ಈ ನವರಾತ್ರಿ ಹಬ್ಬದ ವಿಶೇಷತೆಯಾಗಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ. ಮುಂದೆ ಒಂಭತ್ತು ದಿನವೂ ಕೂಡ ದೇವಿಯನ್ನು ಆರಾಧಿಸಲಾಗುತ್ತದೆ

   ಈ ಪರ್ವವನ್ನು ಕುರಿತು ಕಥೆಗಳು ನಮ್ಮ ಪುರಾಣದಲ್ಲಿ ಸಿಗುತ್ತವೆ. ವಿಜಯದಶಮಿಯಂದು ರಾವಣನ ಮೇಲೆ ಶ್ರೀರಾಮ ವಿಜಯ ಸಾಧಿಸಿದನೆನ್ನಲಾಗಿದೆ. ಇದಲ್ಲದೆ  ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯದಶಮಿಯಾಗಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ಜನರು ತಮ್ಮದೇ ವೈಖರಿಯಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. 

     ನವರಾತ್ರಿ  ಕರ್ನಾಟಕದ ನಾಡಹಬ್ಬ ಆಗಿದ್ದು ಹತ್ತು ದಿನಗಳ ನಡೆಯುವ ವಿಶೇಷ ಹಬ್ಬದಲ್ಲಿ ಒಂಭತ್ತು ದಿನಗಳ ಕಾಲ ದೇವಿಪೂಜೆಯನ್ನು ಮಾಡಲಾಗುತ್ತದೆ. ಹತ್ತನೇಯ ದಿನವೇ ವಿಜಯ ದಶಮಿ, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ ಅಥವಾ ಬನ್ನಿಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ.ಇಲ್ಲಿಯ ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಮೈಸೂರಿನಲ್ಲಿ ವಿಜಯದಶಮಿಯಂದು ಚಾಮುಂಡಿ ಬೆಟ್ಟದಲ್ಲಿರುವ  ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಬಂಗಾರದ ಪಲ್ಲಕ್ಕಿಯಲ್ಲಿ  ಸಕಲ ಸರ್ಕಾರಿ ಹಾಗೂ ರಾಜ ಮರ್ಯಾದೆಯ ಮೂಲಕ ನಡೆಯುತ್ತದೆ. 

   ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯನ್ನು ದುರ್ಗಾ ಪೂಜೆಯಾಗಿ ಆಚರಿಸಲಾಗುತ್ತದೆ. ರಾಜ್ಯದ ಎಲ್ಲೆಡೆ ಈ ಹಬ್ಬವನ್ನು ದುರ್ಗಾ ಪೂಜಾ ಪೆಂಡಾಲುಗಳನ್ನು ಹಾಕಿ ಆಚರಿಸಲಾಗುತ್ತದೆ.  ದುರ್ಗಾ ದೇವಿಯನ್ನು ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರೊಂದಿಗೆ ಪೂಜಿಸಲಾಗುತ್ತದೆ.  ವಿಜಯದಶಮಿಯಲ್ಲಿ, ಭವ್ಯವಾದ ಮೆರವಣಿಗೆ ಯೊಂದಿಗೆ ಪ್ರತಿಮೆಗಳನ್ನು ವಿದ್ಯುಕ್ತವಾಗಿ ನೀರಿನಲ್ಲಿ  ವಿಸರ್ಜಿಸಲಾಗುತ್ತದೆ. 

   ಉತ್ತರ ಭಾರತದಲ್ಲಿ ದಸರಾ ಸಂಭ್ರಮದ ಹತ್ತು ದಿನಗಳೂ ರಾಮಲೀಲಾ ನಡೆಯುತ್ತದೆ. ರಾಮಾಯಣದ ವಿವಿಧ ಘಟನೆಗಳನ್ನು ನಾಟಕದ ಮೂಲಕ ಜನರಿಗೆ ತಿಳಿಸುತ್ತಾರೆ. ಹತ್ತನೆಯ ದಿನ ರಾವಣನ ಪ್ರತಿಕೃತಿಯನ್ನು ಸುಡಲಾಗುತ್ತದೆ. 

  ಗುಜರಾತಿನಲ್ಲಿ  ಗರ್ಭಾ ಎಂಬ  ಮಣ್ಣಿನ ಪಾತ್ರೆಯನ್ನಿಟ್ಟು ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಗರ್ಭಾದ ಜಾನಪದ ಕೋಲಾಟದ ನೃತ್ಯವನ್ನು ಮಾಡಲಾಗುತ್ತದೆ.  ಇದನ್ನು ದಾಂಡಿಯಾ ಎಂದು ಕರೆಯಲಾಗುತ್ತದೆ. 

ಹೀಗೆ ದೇವಿಯನ್ನು ದುರ್ಗಾ, ಕಾತ್ಯಾಯಿನಿ, ಗೌರಿ, ಅಂಬಿಕಾ, ಪಾರ್ವತಿ, ಶರ್ವಾಣಿ, ಶಿವೆ, ಪರಮೇಶ್ವರಿ ಎಂದು ಸ್ತುತಿಸಿ ಸಂಭ್ರಮ ಉತ್ಸಾಹದಿಂದ ನವರಾತ್ರಿಯನ್ನು ಆಚರಿಸಲಾಗುತ್ತದೆ. 


No comments:

Post a Comment