ಸಾಮಾನ್ಯ ಜ್ಞಾನ - ಸೌರಮಂಡಲ

 


ಆಕಾಶವು ಒಂದು ವಿಸ್ಮಯಕಾರಿ ವಿದ್ಯಮಾನಗಳ ಗೂಡು. ಅಸಂಖ್ಯ ನಕ್ಷತ್ರಗಳು, ಸೌರವ್ಯೂಹದ ಗ್ರಹಗಳು ಕ್ಷುದ್ರಗ್ರಹಗಳು ಹೀಗೆ ಇನ್ನೂ ಎಷ್ಟೋ ಆಕಾಶಕಾಯಗಳು ಈ ಆಗಸವೆಂಬ ಪರದೆಯ ಮೇಲೆ ಹರಡಿಕೊಂಡಿವೆ. ಚಿಕ್ಕ ಮಕ್ಕಳಿಂದ ಹಿಡಿದು ಖಗೋಳ ವಿಜ್ಞಾನಿಗಳವರೆಗೂ ಎಲ್ಲರನ್ನೂ ಈ ವಿಸ್ಮಯ ಆಕರ್ಷಿಸುತ್ತದೆ. ಬೆಳಕಿನ ಮಾಲಿನ್ಯ ಹಾಗೂ ವಾಯುಮಾಲಿನ್ಯಗಳ ಪರಿಣಾಮವಾಗಿ ಈ ಅದ್ಭುತ ನಮ್ಮ ದೃಷ್ಟಿಯಿಂದ ಮಸುಕಾಗುತ್ತಿದೆ.


 ನಮ್ಮ ಸೌರವ್ಯೂಹವು, ಸೂರ್ಯ ಆತನನ್ನು ಸುತ್ತುವ ಗ್ರಹಗಳು, ಅವುಗಳ ಉಪಗ್ರಹಗಳು, ಕುಬ್ಜ ಗ್ರಹಗಳು, ಧೂಮಕೇತುಗಳು ಅಲ್ಲದೆ ಅನೇಕ ನಿಗೂಢ ಕಾಯಗಳನ್ನೊಳಗೊಂಡ ಪರಿವಾರವಾಗಿದೆ. ಬನ್ನಿ ನಮ್ಮ ಸೌರಮಂಡಲದ ಬಗ್ಗೆ ಕೆಲವು ಸೋಜಿಗದ ವಿಷಯಗಳನ್ನು ತಿಳಿದುಕೊಳ್ಳೋಣ.

1. ಇಷ್ಟು ದೊಡ್ಡ ಸೌರಮಂಡಲದ ಶೇ 99.8 ರಷ್ಟು ದ್ರವ್ಯರಾಶಿ ನಮ್ಮ ನಕ್ಷತ್ರವಾದ ಸೂರ್ಯನೊಬ್ಬನಲ್ಲಿಯೇ ಇದೆ. ಅಂದರೆ ಉಳಿದ ಕಾಯಗಳು ಸೂರ್ಯನ ಲೆಕ್ಕಕ್ಕೆ ನಗಣ್ಯ.

2. ಗುರುಗ್ರಹದ ದ್ರವ್ಯರಾಶಿಯು ಉಳಿದ ಎಲ್ಲ ಗ್ರಹಗಳ ಒಟ್ಟು ದ್ರವ್ಯರಾಶಿಯ ಎರಡು ಪಟ್ಟು ಇದೆ.

3. ಗುರುಗ್ರಹದಲ್ಲಿ 1,300 ಕ್ಕೂ ಹೆಚ್ಚು ಭೂಮಿಗಳನ್ನು ಸೇರಿಸಬಹುದು ಅಷ್ಟು ಬೃಹದಾಕಾರ ವಾಗಿದೆ ಈ ಗ್ರಹ.

4. ಬುಧ ಸೂರ್ಯನಿಗೆ ಅತಿ ಸಮೀಪದ ಗ್ರಹವಾದರೂ, ಶುಕ್ರವು ಅತ್ಯಂತ ಹೆಚ್ಚು ತಾಪಮಾನವುಳ್ಳ ಗ್ರಹವಾಗಿದೆ. ಗ್ರಹದ ಸುತ್ತ ಇರುವ ದಟ್ಟ ವಾಯುಮಂಡಲ ಹಾಗೂ ಮೋಡಗಳ ದಪ್ಪ ಪದರವು ಉಷ್ಣವನ್ನು ಅಂತರಿಕ್ಷಕ್ಕೆ ಬಿಡದೇ ಹಸಿರುಮನೆ ಪರಿಣಾಮವನ್ನು ಉಂಟು ಮಾಡುತ್ತವೆ, ಆದ್ದರಿಂದ ಇದರ ವಾತಾವರಣದ ಉಷ್ಣತೆಯು ಸುಮಾರು 465 ಡಿಗ್ರಿ ಸೆ. ಇರುತ್ತದೆ.

5. ಶುಕ್ರವು ತನ್ನ ಅಕ್ಷದ ಸುತ್ತ 243 ಭೂ ದಿನಗಳಿಗೊಮ್ಮೆ ಸುತ್ತುತ್ತದೆ. ಹಾಗೂ ಸೂರ್ಯನ ಸುತ್ತಲು ತೆಗೆದುಕೊಳ್ಳುವ ಕಾಲ 224.7 ಭೂ ದಿನಗಳುು, ಅಂದರೆ ಶುಕ್ರನ ಒಂದು ವರ್ಷವು ಒಂದು ದಿನಕ್ಕಿಂತ ಚಿಕ್ಕದಾಗಿರುತ್ತದೆ.

6. ಶುಕ್ರವು ಸೂರ್ಯನನ್ನು ಪ್ರದಕ್ಷಿಣಾಕಾರವಾಗಿ ಸುತ್ತುವುದರಿಂದ, ಇಲ್ಲಿ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗುವಂತೆ ಕಾಣುತ್ತದೆ. 

7. ನಮ್ಮ ಭೂಮಿಗೆ ಚಂದ್ರನಿರುವಂತೆ, ಬುಧ ಗ್ರಹ ಮತ್ತು ಶುಕ್ರ ಗ್ರಹಗಳನ್ನು ಹೊರತುಪಡಿಸ  ಉಳಿದ ಎಲ್ಲ ಗ್ರಹಗಳಿಗೂ ನೈಸರ್ಗಿಕ ಉಪಗ್ರಹಗಳಿವೆ. ಸೌರಮಂಡಲದಲ್ಲಿ ಇವುಗಳ ಒಟ್ಟು ಸಂಖ್ಯೆ 200 ಕ್ಕೂ ಹೆಚ್ಚು.

8. ಶನಿ ತನ್ನ ಅಕ್ಷದ ಮೇಲೆ ಬಹಳ ವೇಗವಾಗಿ ತಿರುಗುತ್ತದೆ. ಶನಿಯ ಒಂದು ದಿನ 10 ಗಂಟೆ 14 ನಿಮಿಷಗಳು. ಇದು ಸೂರ್ಯನ ಸುತ್ತಲು ತುಂಬಾ ನಿಧಾನವಾಗಿ ಸುತ್ತುತ್ತದೆ ಶನಿಯ ಮೇಲೆ ಒಂದು ವರ್ಷವು 29 ಭೂ ವರ್ಷಗಳಿಗಿಂತ ಹೆಚ್ಚು.

9. ಯುರೇನಸ್ ತನ್ನ ಅಕ್ಷದ ಮೇಲೆ ವಿಶಿಷ್ಟವಾಗಿ ಓರೆಯಾಗಿದ್ದು, ಇದು ಸೂರ್ಯನ ಸುತ್ತಲೂ ಚೆಂಡಿನಂತೆ ಉರುಳುವಂತೆ ಭಾಸವಾಗುತ್ತದೆ ಆದ್ದರಿಂದ ಇದನ್ನು "ಉರುಳುವ ಗ್ರಹ" ಎನ್ನಲಾಗುತ್ತದೆ. 

10. ಟೆಲಿಸ್ಕೋಪ್ ಸಹಾಯದಿಂದ ಕಂಡುಹಿಡಿಯಲಾದ ಮೊದಲನೇ ಗ್ರಹ ಯುರೇನಸ್ ಆಗಿದೆ (1781 ರಲ್ಲಿ). 

11. 1930ರಲ್ಲಿ ಪ್ಲುಟೊವನ್ನು ಪತ್ತೆಮಾಡಿ, ಸೌರವ್ಯೂಹದ ಒಂಬತ್ತನೇ ಗ್ರಹ ಎಂದು ಪರಿಗಣಿಸಲಾಯಿತು.

12. ನಂತರ ಪ್ಲುಟೊವನ್ನು ಗ್ರಹ ಎಂದು ಒಪ್ಪುವಲ್ಲಿ ಒಮ್ಮತವಿರಲಿಲ್ಲ ಆದ್ದರಿಂದ 2006ರಲ್ಲಿ ಇದನ್ನು ಕುಬ್ಜ ಗ್ರಹ ಮರುವಿಂಗಡಿಸಲಾಯಿತು.