ಅಪ್ರತಿಮ ದೇಶಭಕ್ತ- ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೀವವನ್ನೇ ಅರ್ಪಿಸಿದ ಕ್ರಾಂತಿಕಾರಿಗಳಲ್ಲಿ ಕೇಳಿ ಬರುವ ಪ್ರಮುಖ ಹೆಸರೆಂದರೆ ಭಗತ್ ಸಿಂಗ್. ಭಗತ್ ಸಿಂಗ್ ಹುಟ್ಟಿದ್ದು ಪಂಜಾಬ್ ಪ್ರಾಂತದ ರಾಯಲ್ಪುರ ಎಂಬ ಜಿಲ್ಲೆಯ ಬಂಗಾ ಎಂಬ ಒಂದು ಹಳ್ಳಿಯಲ್ಲಿ. ಬ್ರಿಟಿಷರ ಕೈಯಿಂದ ಭಾರತವನ್ನು ಬಿಡುಗಡೆ ಮಾಡಲು ಭಗತ್ ಸಿಂಗ್ ಜನನಕ್ಕೂ ಮುಂಚೆಯೇ ಇವರ ವಂಶದ ಹಲವಾರು ವೀರರು ಹೋರಾಡಿದ್ದರು. ಅವರಲ್ಲಿ ಭಗತ್ ಸಿಂಗ್ ತಂದೆಯಾದ ಕಿಶನ್ ಸಿಂಗ್ ಹಾಗೂ ಚಿಕ್ಕಪ್ಪಂದಿರ ಅಜಿತ್ ಸಿಂಗ್ ಮತ್ತು ಸ್ವರ್ಣ ಸಿಂಗ್ ಎಂಬುವರು ಕೂಡ ಹೋರಾಡಿದ್ದರು. ಈ ಮೂವರನ್ನು ಸರ್ಕಾರ ಸೆರೆಗೆ ಹಾಕಿತ್ತು. ಆಗ ಭಾರತದಲ್ಲಿ ಎಲ್ಲ ಕಡೆ ಇಂಥ ಕ್ರಾಂತಿ ಹಬ್ಬಿತ್ತು. ಸ್ವಾತಂತ್ರ್ಯ ಪಡೆಯಬೇಕು ಎಂಬ ಹಠ ಜನಗಳಲ್ಲಿ ತುಂಬಿತ್ತು.


ಇಂಥ ಸಮಯದಲ್ಲಿ ಅಂದರೆ 1907ನೇ ಸೆಪ್ಟೆಂಬರ್ 28ರಂದು ಭಗತ್ ಸಿಂಗ್ ಹುಟ್ಟಿದ. ತಂದೆ ಕಿಶನ್ ಸಿಂಗ್ ಮತ್ತು ತಾಯಿ ವಿದ್ಯಾವತಿ. ಅದೇ ಸಮಯದಲ್ಲಿ ಸೆರೆಯಿಂದ ತಂದೆ ಹಾಗೂ ಚಿಕ್ಕಪ್ಪಂದಿರ ಬಿಡುಗಡೆಯಾಗುತ್ತಿತ್ತು. ಹೀಗಾಗಿ ಭಾಗ್ಯವಂತ ಮಗು ಎಂಬ ಅರ್ಥದಲ್ಲಿ ಆ ಮಗುವಿಗೆ 'ಭಗತ್ ಸಿಂಗ್' ಎಂದು ಹೆಸರಿಟ್ಟರು. ಭಗತ್ ಸಿಂಗ್ ತಾಯಿಯ ಕಣ್ಮಣಿಯಾಗಿ ಬೆಳೆಯತೊಡಗಿದ.

ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ಭಗತ್ ಸಿಂಗನಿಗೆ ವಿದ್ಯಾಭ್ಯಾಸವೆಂದರೆ ಮೊದಲಿನಿಂದಲೂ ಆಸಕ್ತಿ ಇತ್ತು. ಹಾಗೂ ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತಿದ್ದ. ಭಗತ್ ನಾಲ್ಕನೇ ತರಗತಿಯಲ್ಲಿದ್ದಾಗಲೇ "ನಾನು ದೊಡ್ಡವನಾದ ಮೇಲೆ ಇಂಗ್ಲಿಷರನ್ನು ಭಾರತದಿಂದ ಓಡಿಸುತ್ತೇನೆ" ಎಂದು ಹೇಳುತ್ತಿದ್ದ. ಹೀಗೆ ಚಿಕ್ಕಂದಿನಿಂದಲೇ ಅವನ ರಕ್ತದಲ್ಲಿ ದೇಶಪ್ರೇಮ ಹರಿಯುತ್ತಿತ್ತು. ಮಾಧ್ಯಮಿಕ ಶಾಲೆಯ ಓದನ್ನು ಮುಗಿಸುವಷ್ಟರಲ್ಲಿ ತನ್ನ ಮನೆತನದ ಕ್ರಾಂತಿಕಾರರ ವಿಚಾರಗಳನ್ನೆಲ್ಲ ತಿಳಿದುಕೊಂಡಿದ್ದ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಾನು ಹೋರಾಡಬೇಕು ಎಂದು ಮನಸ್ಸಿನಲ್ಲೇ ಗಟ್ಟಿಗೊಳ್ಳುತ್ತಿದ್ದ. ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ನಂತರ ಲಾಹೋರಿನಲ್ಲಿ ಒಂದು ಮಾಧ್ಯಮಿಕ ಶಾಲೆಗೆ ಸೇರಲು ಬಂದ. ಇಂಗ್ಲಿಷರ ಭಕ್ತರು ನಡೆಸುತ್ತಿದ್ದ ಶಾಲೆಗೆ ಸೇರಿಸಲು ಒಪ್ಪದೇ ಖಾಸಗಿ ಶಾಲೆಯೊಂದರಲ್ಲಿ ಭಗತ್ ಸಿಂಗನ ಓದು ಮುಂದುವರೆಯಿತು. ಉತ್ಸಾಹದಿಂದ ಪಾಠಗಳನ್ನು ಕಲಿಯತೊಡಗಿದ. ಇವನ ಚುರುಕು ಬುದ್ಧಿಗೆ ಅಧ್ಯಾಪಕರೇ ಅಚ್ಚರಿಪಡುತ್ತಿದ್ದರು. ಎಲ್ಲ ವಿಷಯಗಳಲ್ಲೂ ಹೆಚ್ಚಿನ ಅಂಕ ಬರುತ್ತಿದ್ದವು. ಆದರೆ ಇಂಗ್ಲಿಷಿನಲ್ಲಿ ಮಾತ್ರ ಕಡಿಮೆ ಅಂಕ ಪಡೆಯುತ್ತಿದ್ದ. ಇದಕ್ಕೆ ಮೊದಲಿನಿಂದ ಇಂಗ್ಲಿಷರ ಬಗ್ಗೆ ಇದ್ದ ಕೋಪವೇ ಕಾರಣವಾಗಿತ್ತು.

1919ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಯಿತು. ಈ ಘಟನೆಯಿಂದ ಹನ್ನೆರಡು ವರ್ಷದ ಬಾಲಕನ ಮನಸ್ಸು ಕಲಕಿ ಹೋಯಿತು. ಭಗತ್ ಹತ್ಯಾಕಾಂಡ ನಡೆದ ಸ್ಥಳಕ್ಕೆ ನುಸುಳಿ ಒಳಗೆ ಹೋಗಿ ಭಾರತೀಯರ ರಕ್ತದಿಂದ ನೆನೆದ ಮಣ್ಣನ್ನು ತಂದು ಸೀಸೆಯಲ್ಲಿ ತುಂಬಿ ಮನೆಯ ದೇವರ ಮುಂದೆ ಇಟ್ಟು ಪೂಜೆ ಮಾಡುತ್ತಿದ್ದ. ಒಂಬತ್ತನೆಯ ತರಗತಿಗೆ ಬರುವಷ್ಟರಲ್ಲಿ ಅಂದರೆ ತನ್ನ ಹದಿಮೂರನೇ ವರ್ಷದಲ್ಲೇ ಶಾಲೆಯನ್ನು ಬಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕಿಳಿದ. ಗಾಂಧೀಜಿಯವರ ಕೆಲವು ನಡೆಗಳಿಂದ ಅಹಿಂಸೆ ಮತ್ತು ಅಸಹಕಾರ ಚಳವಳಿಗಳಲ್ಲಿ ನಂಬಿಕೆಯನ್ನು ಕಳೆದುಕೊಂಡು ಕ್ರಾಂತಿಕಾರಿಯಾಗಿ ಬದಲಾದ. 

ಕ್ರಾಂತಿಕಾರಿಗಳ ಸಭೆಗೆ ದೆಹಲಿಗೆ ಬಂದ ಭಗತ್ ಸಿಂಗನಿಗೆ ಮತ್ತೊಬ್ಬ ಕ್ರಾಂತಿಕಾರಿ ಯುವಕ ಚಂದ್ರಶೇಖರ ಆಜಾದನ ಪರಿಚಯವಾಯಿತು. ಇವರ ಕ್ರಾಂತಿಯ ಚಟುವಟಿಕೆಗಳು ಹೆಚ್ಚಾದವು. ಕಲ್ಕತ್ತಗೆ ಹೋಗಿ ಬಾಂಬ್ ತಯಾರಿಕೆಯನ್ನು ಕಲಿತ. ಜೊತೆಗೆ ಜತೀಂದ್ರನಾಥ ದಾಸ್ ಎಂಬ ಕ್ರಾಂತಿಕಾರಿಯ ಬಳಿ ಬಾಂಬ್ ತಯಾರಿಕೆಯ ರಹಸ್ಯವನ್ನು ಕಲಿತುಕೊಂಡ. ಆಗ್ರಾದಲ್ಲಿ ಬಾಂಬ್ ತಯಾರಿಕೆಯ ಕಾರ್ಖಾನೆಯನ್ನು ಗುಪ್ತವಾಗಿ ಸ್ಥಾಪಿಸಿದರು. ಹಣಕ್ಕಾಗಿ ಕೆಲವೊಮ್ಮೆ ಸರ್ಕಾರಿ ಕಚೇರಿಗಳನ್ನು ಲೂಟಿ ಮಾಡುತ್ತಿದ್ದರು. 

1928ರ ಫೆಬ್ರವರಿಯಲ್ಲಿ ನಡೆದ ಸೈಮನ್ ಕಮಿಷನ್ ವಿರುದ್ಧದ ಪ್ರತಿಭಟನೆಯಲ್ಲಿ ಲಾಲಾ ಲಜಪತರಾಯ್ ಅವರಿಗೆ ಸ್ಯಾಂಡರ್ಸ್ ಎಂಬ ಪೊಲೀಸ್ ಅಧಿಕಾರಿ ಕೊಟ್ಟ ಪೆಟ್ಟಿನಿಂದ ಅವರು ತೀರಿಕೊಂಡರು. ಸೇಡು ತೀರಿಸಿಕೊಳ್ಳಬೇಕೆಂದು ಭಗತ್ ಸಿಂಗ್, ರಾಜಗುರು ಹಾಗೂ ಜಯಗೋಪಾಲ್ ಈ ಮೂರು ಜನ ಸೇರಿ ಸಾಂಡರ್ಸ್ ನ ಮೇಲೆ ಗುಂಡು ಹಾರಿಸಿ ಸಾಯಿಸಿದರು. ನಂತರ ಭಗತ್ ಸಿಂಗ್ ರಾಜಗುರು ಮತ್ತು ಚಂದ್ರಶೇಖರ ಆಜಾದ್ ಮೂವರು ಲಾಹೋರಿನಿಂದ ತಮ್ಮ ವೇಷ ಮರೆಸಿ ತಪ್ಪಿಸಿಕೊಂಡರು.

1929ರ ಏಪ್ರಿಲ್ 8ರಂದು ದೇಶದ ಹಿತಕ್ಕೆ ತೊಂದರೆ ಆಗಬಹುದಾದಂತಹ ಎರಡು ಶಾಸನಗಳನ್ನು ಶಾಸನ ಸಭೆಯಲ್ಲಿ ಇಂಗ್ಲಿಷ್ ಸರ್ಕಾರ ಇಡಲು ಬಯಸಿತು. ಈ ಸಭೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಆದರೆ ಸರ್ಕಾರದ ಗಮನ ಸೆಳೆಯುವಂತೆ ಮಾಡಲು ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ತ ಬಾಂಬ್ ಗಳನ್ನು ಸಿಡಿಸಿ ಸೆರೆಯಾದರು. ಈ ಘಟನೆಯ ನಂತರ ಸರ್ಕಾರಕ್ಕೆ ಲಾಹೋರಿನ ಬಾಂಬ್ ಕಾರ್ಖಾನೆ ಹಾಗೂ ಸಹರಾನ್ ಪುರದ ದೊಡ್ಡ ಬಾಂಬ್ ಕಾರ್ಖಾನೆಯೂ ಸಿಕ್ಕಿಬಿತ್ತು. ಭಗತ್ ಸಿಂಗ್ ಮತ್ತು ಸಂಗಡಿಗರನ್ನು ಲಾಹೋರಿನ ಜೈಲಿನಲ್ಲಿಟ್ಟರು. ಅಪರಾಧಿಗಳ ವಿಚಾರಣೆ ಆರಂಭವಾಯಿತು. ಆಗ ಜೈಲಿನಲ್ಲಿದ್ದ ರಾಜಕೀಯ ಕೈದಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಯಾವ ವ್ಯವಸ್ಥೆಗಳೂ ಚೆನ್ನಾಗಿರಲಿಲ್ಲ. ಇದರ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಇದಾದ ಎರಡು ತಿಂಗಳ ನಂತರ ಜೈಲಿನ ವ್ಯವಸ್ಥೆ ಸರಿಯಾಯಿತು.

ವಿಚಾರಣೆ ನಡೆದು ಕೊನೆಗೂ ತೀರ್ಪು ಹೊರಬಿತ್ತು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಗಲ್ಲಿನ ಶಿಕ್ಷೆ, ಉಳಿದ ಕೆಲವರಿಗೆ ಜೀವಾವಧಿ ಜೈಲು ಶಿಕ್ಷೆ. ಮತ್ತೆ ಕೆಲವರಿಗೆ ಆರು, ಏಳು, ಹತ್ತು ವರ್ಷಗಳ ಜೈಲುವಾಸವಾಯಿತು. ಭಗತ್ ಸಿಂಗನ ಮರಣದಂಡನೆಯನ್ನು ಬದಲಾಯಿಸಲು ಸಾವಿರಾರು ಮನವಿಗಳು ಬಂದವು. ಆದರೂ ಶಿಕ್ಷೆ ಬದಲಾಗಲಿಲ್ಲ.1931ನೇ ಮಾರ್ಚ್ 24ರಂದು ಗಲ್ಲಿಗೇರಿಸಬೇಕೆಂದು ನಿಶ್ಚಯವಾಯಿತು. ಆದರೆ ಅದಕ್ಕೂ ಒಂದು ದಿನ ಮೊದಲೇ ಅಂದರೆ 23ರಂದು ಸಂಜೆಯೇ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಗಲ್ಲಿಗೇರಿಸಿದರು. ಮೂವರು ನೇಣಿನ ಹಗ್ಗಕ್ಕೆ ಮುತ್ತು ಕೊಟ್ಟು ಕೊರಳಿಗೆ ಹಾಕಿಕೊಂಡರು. ಭಾರತ ಮಾತೆಯ ಹೆಸರನ್ನು ಘೋಷಿಸುತ್ತಾ ಪ್ರಾಣ ಬಿಟ್ಟರು. ಮೂವರು ಸ್ವಾತಂತ್ರ್ಯ ವೀರರ ಕೊನೆ ಹೀಗಾಯಿತು. 

ಸರ್ಕಾರವು ಹುತಾತ್ಮರ ಶವಗಳನ್ನು ಕುಟುಂಬಕ್ಕೆ ಕೊಡದೆ ಸಟ್ಲೇಜ್ ನದಿಯ ದಂಡೆಯ ಮೇಲೆ ಸುಟ್ಟು ಬಿಟ್ಟಿದ್ದರು. ಸುಳಿವು ತಿಳಿದು ಬಂದ ಸಾವಿರಾರು ಜನ ಅವರ ಬೂದಿಯನ್ನೇ ಕೈಗೆತ್ತಿಕೊಂಡು ಅತ್ತರು. ಹುತಾತ್ಮ ಸರ್ದಾರ್ ಭಗತ್ ಸಿಂಗನ ಮೇಲೆ ಜನ ನೂರಾರು ವೀರ ಗೀತೆಗಳನ್ನು ಕಟ್ಟಿ ಹಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣವನ್ನೇ ಅರ್ಪಿಸಿದ ಅವರ ಗುಣಗಾನ ಮಾಡಿದರು. ಅವನ ಧೈರ್ಯ, ಸಾಹಸ, ದೇಶ ಭಕ್ತಿಗಳು ನಮ್ಮ ಈಗಿನ ತರುಣರಿಗೆ ಮಾರ್ಗದರ್ಶಿಯಾಗಿವೆ.

- ಸೀಮಾ ಕಂಚಿಬೈಲು 

ಈ ಮಹಾನಾಯಕರ ಗುರುಗಳು ಯಾರು?

 ಶಿಕ್ಷಕರ ದಿನಾಚರಣೆಯ ಶುಭಾಶಯಗಳು 

ಎಲ್ಲರ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ.  ಮಹಾನ್ ಸಾಧಕರ ಹಿಂದೆ ಒಬ್ಬ ಪ್ರಭಾವಿ ಗುರು ಇರುತ್ತಾನೆ. ನಾವು ದೇವರೆಂದು ಪೂಜಿಸುವವರಿಗೂ ಗುರುಗಳು ಇದ್ದಾರೆ ಎಂದರೆ ಗುರುವಿನ ಸ್ಥಾನ ಎಷ್ಟು ದೊಡ್ಡದು, ಅಲ್ಲವೇ ? ಬನ್ನಿ ಈ ಮಹಾನಾಯಕರ ಗುರುಗಳು ಯಾರು ತಿಳಿದು ಕೊಳ್ಳೋಣ.  

  1. ಶ್ರೀ ರಾಮನ ಗುರು = ಮಹರ್ಷಿ ವಶಿಷ್ಠ 
  2. ಶ್ರೀ ಕೃಷ್ಣನ ಗುರು = ಸಾಂದೀಪನಿ ಮಹರ್ಷಿಗಳು 
  3. ಕೌರವರು ಹಾಗೂ ಪಾಂಡವರು = ಕೃಪಾಚಾರ್ಯರು ಹಾಗೂ ದ್ರೋಣಾಚಾರ್ಯರು 
  4. ಭೀಷ್ಮ = ಪರಶುರಾಮ 
  5. ಏಕಲವ್ಯ = ದ್ರೋಣಾಚಾರ್ಯರು (ಅಪ್ರತ್ಯಕ್ಷವಾಗಿ)
  6. ಕರ್ಣ = ಪರಶುರಾಮ 
  7. ಶಿವಾಜಿ ಮಹಾರಾಜ = ದಾದೋಜೀ ಕೊಂಡದೇವ್ , ಸಮರ್ಥ್ ರಾಮದಾಸರು 
  8. ಸ್ವಾಮಿ ವಿವೇಕಾನಂದ = ರಾಮಕೃಷ್ಣ ಪರಮಹಂಸರು 
  9. ಶಂಕರಾಚಾರ್ಯರು  = ಗೋವಿಂದ ಭಗವತ್ಪಾದರು 
  10. ಬ್ರಹ್ಮ ಚೈತನ್ಯ ಮಹಾರಾಜರು = ತುಕಮಾಯಿ  
  11. ಪರಮಹಂಸ ಯೋಗಾನಂದ = ಸ್ವಾಮಿ ಯುಕ್ತೇಶ್ವರ ಮಹಾರಾಜ
  12. ಸಂತ  ಶಿಶುನಾಳ ಷರೀಫ್ = ಗೋವಿಂದ ಭಟ್ಟರು 
  13. ಚಂದ್ರಗುಪ್ತ ಮೌರ್ಯ = ಚಾಣಕ್ಯ 
  14. ಹರಿಹರ ಬುಕ್ಕರು = ವಿದ್ಯಾರಣ್ಯರು 
  15. ಹೊಯ್ಸಳ ದೊರೆ ವಿಷ್ಣುವರ್ಧನ = ರಾಮಾನುಜಾಚಾರ್ಯರು 
  16. ಶ್ರೀನಿವಾಸ್ ರಾಮಾನುಜನ್ ಅವರ ಮಾರ್ಗದರ್ಶಕರು = ಜಿ ಎಚ್ ಹಾರ್ಡಿ 
  17. ಅಲೆಕ್ಸಾಂಡರ್ ನ ಗುರು = ಅರಿಸ್ಟಾಟಲ್ 
  18. ಅರಿಸ್ಟಾಟಲ್ ನ ಗುರು = ಪ್ಲೇಟೋ 
  19. ಹೆಲೆನ್ ಕೆಲ್ಲೆರ್ = ಆನ್ ಸುಲಿವನ್ 
  20. ಪಿ ಟಿ ಉಷಾ = ಎಂ ನಂಬಿಯಾರ್ 
  21. ಸಚಿನ್ ತೆಂಡುಲ್ಕರ್  ಅವರ  ತರಬೇತುದಾರರು = ರಮಾಕಾಂತ ಅಚ್ರೆಕರ್ 
  22. ಎಂ ಎಸ್ ಧೋನಿ = ಕೇಶವ ರಾಜನ್ ಬ್ಯಾನರ್ಜಿ 
  23. ಪಿ ವಿ ಸಿಂಧು ಅವರ ತರಬೇತುದಾರರು= ಪುಲ್ಲೇಲ ಗೋಪಿಚಂದ 
  24. ಸೈನಾ ನೆಹವಾಲ್ ಅವರ ತರಬೇತುದಾರರು = ಪುಲ್ಲೇಲ ಗೋಪಿಚಂದ
  25. ಗೀತಾ ಫೋಘಾಟ್  ಮತ್ತು ಬಬಿತಾ ಫೋಘಾಟ್ = ಮಹಾವೀರ ಸಿಂಗ್ ಫೋಘಾಟ್