ಕೃಷ್ಣ ಜನ್ಮಾಷ್ಟಮಿ

   
 ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಆಚರಿಸಲಾಗುತ್ತದೆ. 

       ಕೃಷ್ಣನು ಶ್ರಾವಣ ಕೃಷ್ಣ ಅಷ್ಟಮಿಯಂದು ಮಥುರಾ ನಗರದ  ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ 8ನೇ ಮಗನಾಗಿ ಜನಿಸಿದನು. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಂದ ರಕ್ಷಿಸಲು  ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.

ಜನ್ಮಾಷ್ಟಮಿ ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಜನನದ ಆಚರಣೆಯ ಸಂಕೇತವಾಗಿದೆ. ಈ ದಿನದಂದು ಮನೆಗಳ ಬಾಗಿಲನ್ನು  ಮಾವಿನ ಎಲೆಗಳ ತೋರಣದಿಂದ  ಅಲಂಕರಿಸಿರುತ್ತಾರೆ ಮುಂಭಾಗದ ಅಂಗಳದಲ್ಲಿ   ರಂಗೋಲಿಯಿಂದ ಕೃಷ್ಣನ ಪುಟ್ಟ ಪುಟ್ಟ ಹೆಚ್ಚೆಯ ಗುರುತುಗಳನ್ನು ಮೂಡಿಸಿ ಕೃಷ್ಣನ ಆಗಮನವನ್ನು ಸಾಂಕೇತಿಕವಾಗಿ ಸೃಷ್ಟಿಸಲಾಗುತ್ತದೆ. ಮನೆಯೊಳಗೆ ಸಣ್ಣ ಮಂಟಪದಲ್ಲಿ ಬಾಲಕೃಷ್ಣನ  ಮೂರ್ತಿಯನ್ನಿಟ್ಟು ಪ್ರಾರ್ಥನೆಗಳಿಂದ, ಭಕ್ತಿಗೀತೆಗಳಿಂದ ಮತ್ತು ಹೂವುಹಣ್ಣುಗಳನ್ನು, ವಿಶೇಷ ಪ್ರಸಾದಗಳಿಂದ   ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಈ  ದಿನ ಜನರು ಉಪವಾಸ ಮಾಡುತ್ತಾರೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. ಜನರು  ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಮುದ್ದು ಕೃಷ್ಣನನ್ನು ಮನೆಯಲ್ಲಿಯೇ ನೋಡಿ ಖುಷಿಪಡುತ್ತಾರೆ. 

   ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಂತೂ ಸಂಭ್ರಮದ ಜಾತ್ರೆಯೇ ನಡೆಯುತ್ತದೆ. ಬೃಂದಾವನ ಮತ್ತು ಉಡುಪಿಯಲ್ಲಿ ಕೂಡ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿ ದಿನದಂದು ಬೀದಿ ಬೀದಿಗಳಲ್ಲಿ "ಆಲಾರೇ ಗೋವಿಂದ" ಎಂದು ಹಾಡಿಕೊಂಡು ಹುಡುಗ ಹುಡುಗಿಯರು ಗುಂಪು ಗುಂಪಾಗಿ ಹೋಗುವರು. ಅಲ್ಲಲ್ಲಿ ಕಟ್ಟಡಗಳ ಸಹಾಯದಿಂದ ಮೇಲೆ ಕಟ್ಟಿರುವ ಮೊಸರು ಗಡಿಗೆಯನ್ನು ಒಡೆಯುವರು. ಇದನ್ನು "ದಹಿಹಂಡಿ" ಎನ್ನುವರು. 

ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯನಾದ ಶ್ರೀಕೃಷ್ಣನನ್ನು ದೇಶದ ವಿವಿಧ ಪ್ರದೇಶಗಳಲ್ಲಿ ಜನರು ತಮ್ಮದೇ ವೈಖರಿಯಲ್ಲಿ ಆರಾಧಿಸುವರು. 

2 comments: