ವರ್ಷಾ ಋತು


ವರ್ಷಾ ಋತು ಅಂದರೆ ಮಳೆಗಾಲದ ಕಾಲ. ಆಷಾಢ ಮಾಸ ಬಂತೆಂದರೆ ಮಳೆಗಾಲ ಆರಂಭವಾದಂತೆ. ಅಂದರೆ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜುಲೈ ತಿಂಗಳ ಅವಧಿಯಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಮಳೆಗಾಲದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಬೇಸಿಗೆಯ ಬಿಸಿಲಿಗೆ ಬಳಲಿ ಬೆಂಡಾಗಿರುವ ಜೀವ ಸಂಕುಲ ಮೊದಲ ಮಳೆಗೆ ಕುಣಿದು ಕುಪ್ಪಳಿಸುತ್ತವೆ. ಹಾಗೂ ಬೇಸಿಗೆಯಲ್ಲಿ ನೀರಿಗೆ ಬಾಯ್ತೆರೆದಂತೆ ಕಾಣುವ ಹೊಲ ಗದ್ದೆಗಳು, ಬರಿದಾಗಿರುವ ಹಳ್ಳ ಬಾವಿಗಳು ಇವೆಲ್ಲವೂ ಮಳೆಗಾಲದಲ್ಲಿ ಮೈದುಂಬಿಕೊಳ್ಳುತ್ತವೆ. ಇನ್ನು ಮೊದಲ ಮಳೆಯು ಭೂಮಿ ಮೇಲೆ ಬೀಳುತ್ತಿದ್ದನಂತೆ ಬರುವ ಮಣ್ಣಿನ ವಾಸನೆ ಎಂಥವರನ್ನೂ ಕಳೆದು ಹೋಗುವಂತೆ ಮಾಡುತ್ತದೆ.

ಮಳೆ ಎಂದರೆ ನಮಗೆ ಮೊದಲು ನೆನಪಾಗುವುದು ಮಲೆನಾಡು. ಅದರ ಅಂದಕ್ಕೆ ಮನ ಸೋಲದವರೇ ಇಲ್ಲ. ಇನ್ನು ಮಳೆಗಾಲದಲ್ಲಂತೂ ವನದೇವಿ ಹಸಿರು ಸೀರೆಯುಟ್ಟು ತಲೆತುಂಬಾ ಬಣ್ಣ ಬಣ್ಣದ ಹೂ ಮುಡಿದಂತೆ ಭಾಸವಾಗುತ್ತದೆ. ನೆಲವೆಲ್ಲ ಹಸಿರು ಹುಲ್ಲು ಹಾಸಿನಂತೆ ಕಾಣುತ್ತದೆ. ಇಡೀ ಪ್ರಕೃತಿಯಲ್ಲಿ ಜೀವಕಳೆ ತುಂಬುತ್ತದೆ. ನಮ್ಮ ವರಕವಿ ಬೇಂದ್ರೆಯವರು ಇದರ ಬಗ್ಗೆ ಹಲವು ಕವಿತೆಗಳನ್ನು ಬರೆದಿದ್ದಾರೆ. ಶ್ರಾವಣ ಬಂತು ಕವಿತೆಯಲ್ಲಂತೂ ಪ್ರಕೃತಿಯಲ್ಲಾಗಿವ ಹಲವಾರು ಬದಲಾವಣೆಗಳನ್ನು ವರ್ಣಿಸಿದ್ದಾರೆ. ಮತ್ತೊಂದು ಕವಿತೆ ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕುಂತೀವ ಇಳೆಯೊಡನೆ ಝಳಕ ಮಾಡೋಣ ನಾವೂನೂ ಮೋಡಗಳ ಆಟ ನೋಡೋಣ ಎಂದು ಮಳೆ ತರುವ ಸಂಭ್ರಮವನ್ನು ಹಾಗೆಯೇ ನಮ್ಮ ಮನ ಆಹ್ಲಾದವಾಗುವುದನ್ನು ಬಣ್ಣಿಸಿದ್ದಾರೆ.

ಇದೆಲ್ಲ ಪ್ರಕೃತಿಯಲ್ಲಾಗುವ ಬದಲಾವಣೆಗಳಾದರೆ ಧಾರ್ಮಿಕವಾಗಿ ಕೂಡ ವರ್ಷಾ ಋತು ಮಾನವ ಬದುಕಿನಲ್ಲಿ ತಳಕು ಹಾಕಿಕೊಂಡಿದೆ. ಶ್ರಾವಣ ಮಾಸ ಪ್ರಾರಂಭವಾಯಿತೆಂದರೆ ಹಬ್ಬಗಳ ಸಾಲು ಶುರು. ನಾಗರ ಪಂಚಮಿ, ಮಂಗಳ ಗೌರಿ, ವರ ಮಹಾಲಕ್ಷ್ಮಿ, ಗೌರಿ ಗಣೇಶ, ಉಪಾಕರ್ಮ, ರಕ್ಷಾ ಬಂಧನ ಹೀಗೆ ಹಬ್ಬಗಳು ಸಾಲುಗಟ್ಟಿ ಬರುತ್ತವೆ. ಹೆಣ್ಣುಮಕ್ಕಳಿಗಂತೂ ಸಂಭ್ರಮವೋ ಸಂಭ್ರಮ. ಇನ್ನು ರೈತಾಪಿ ವರ್ಗದವರಿಗೆ ಹೊಲವನ್ನು ಉತ್ತಿ ಬಿತ್ತುವ ಕಾಯಕ. ಮಳೆ ಚನ್ನಾಗಿ ಬಂದರೆ ಒಳ್ಳೆಯ ಫಸಲಿನ ನಿರೀಕ್ಷೆಯೊಂದಿಗೆ ರೈತರು ಕಷ್ಟಪಟ್ಟು ದುಡಿಯುತ್ತಾರೆ.

ಮಳೆಗಾಲದ ಅನುಕೂಲಗಳು ಬಹಳಷ್ಟಿವೆ. ಹಾಗೆಯೇ ಅನಾನುಕೂಲಗಳೂ ಇವೆ. ಮಳೆ ಹೆಚ್ಚಾಗಿ ನೆರೆ ಬಂದು ಎಲ್ಲಾ ಕೊಚ್ಚಿಕೊಂಡು ಹೋಗುವ ಪರಿಸ್ಥಿತಿ ಕೂಡ ನಿರ್ಮಾಣ ಆಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಮಳೆಗಾಲ ಎಂದರೆ ಚಟುವಟಿಕೆಯ ಕಾಲ. ಪ್ರಕೃತಿಯೊಡನೆ ಮಾನವ ಬೆರೆಯಲು ಪ್ರಶಸ್ತವಾದ ಕಾಲ. ಎಲ್ಲರೂ ಮಳೆಗಾಲದ ನೀರನ್ನು  ಮಳೆನೀರು ಕೊಯ್ಲಿನ ಮುಲಕ  ಸಂಗ್ರಹಿಸಿ ಮುಂದೆ ಬರಬಹುದಾದಂತ ನೀರಿನ ಬರವನ್ನು ತಗ್ಗಿಸಬಹುದು. ಬನ್ನಿ ಎಲ್ಲರಿಗೂ ಇದರ ಮಾಹಿತಿ ನೀಡಿ ನೀರನ್ನು ಉಳಿಸೋಣ.

ರಚನೆ: ಸೀಮಾ ಕಂಚೀಬೈಲು





No comments:

Post a Comment