ಆಗಸ್ಟ್ 15,1947ರಂದು ನಮ್ಮ ದೇಶಕ್ಕೆ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಸಿಕ್ಕ ದಿನ . ಆದ್ದರಿಂದ ಪ್ರತಿ ವರ್ಷವೂ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಾಗಿ ಆಚರಿಸುತ್ತೇವೆ. ಇದು ನಮ್ಮ ರಾಷ್ಟ್ರೀಯ ಹಬ್ಬವಾಗಿದೆ. ಭಾರತೀಯರಾದ ನಾವೆಲ್ಲರೂ ಹೆಮ್ಮೆಯಿಂದ
ಆಚರಿಸುವ ಹಬ್ಬ. ಮಹಾತ್ಮಾ ಗಾಂಧೀಜಿ,
ಸುಭಾಷ್ ಚಂದ್ರ ಬೋಸ್, ಭಗತ್
ಸಿಂಗ್, ಚಂದ್ರಶೇಖರ್ ಅಜಾದ್, ವೀರ ಸಾವರ್ಕರ್,
ಬಾಲಗಂಗಾಧರ ತಿಲಕ, ಹೀಗೆ ಅನೇಕ
ಮಹನೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಅಸಂಖ್ಯಾತ ಹೋರಾಟಗಾರರು ಪ್ರಾಣತ್ಯಾಗ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವದಂದು ಪ್ರತಿವರ್ಷ ನಮ್ಮ ದೇಶದ ಪ್ರಧಾನ ಮಂತ್ರಿಗಳು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನು ಕುರಿತು ಮಾತನಾಡುತ್ತಾರೆ. ನಂತರ ಮಕ್ಕಳು ದೇಶಭಕ್ತಿ ತುಂಬುವಂತಹ ಗಾಯನ ಹಾಗೂ ನೃತ್ಯದ ಪ್ರದರ್ಶನ ನೀಡುತ್ತಾರೆ. ಹಾಗೆಯೇ ದೇಶದ ಎಲ್ಲಾ ರಾಜ್ಯಗಳ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಶಾಲೆಗಳಲ್ಲಿ ಧ್ವಜಾರೋಹಣ ನಡೆಸುತ್ತಾರೆ. ಶಾಲೆಗಳಲ್ಲಿ ಕೂಡ ಮಕ್ಕಳ ಕಾರ್ಯಕ್ರಮ ಇರುತ್ತದೆ. ಕೊನೆಯಲ್ಲಿ ಸಿಹಿ ಹಂಚಿ ನಮ್ಮ ರಾಷ್ಟ್ರೀಯ ಹಬ್ಬವನ್ನು ಆಚರಿಸಲಾಗುತ್ತದೆ.
ಸ್ವಾತಂತ್ರ್ಯ ದಿನಾಚರಣೆ ಎಂಬುದು ದೊಡ್ಡ ಹಬ್ಬವೇ ಆಗಿದೆ. ಅದರಲ್ಲೂ ಮಕ್ಕಳಿಗೆ ಇದರ ಸಂಭ್ರಮ ಹೇಳತೀರದು. ಆದರೆ ಮಕ್ಕಳಿಗೆ ಕಿವಿಮಾತು ಏನೆಂದರೆ ದೇಶಭಕ್ತಿಯ ನೆಪದಲ್ಲಿ ಪ್ಲಾಸ್ಟಿಕ್ ಬಾವುಟಗಳನ್ನು ಖರೀದಿಸಿ ನಂತರ ಎಲ್ಲೆಂದರಲ್ಲಿ ಹಾಕುತ್ತಾರೆ. ಹೀಗೆ ಮಾಡುವುದು ನಮ್ಮ ದೇಶಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ನಾವು ಮಾಡುವ ಅವಮಾನ ಎಂಬ ಮಾತನ್ನು ತಿಳಿಸಬೇಕು.
ಹಾಗೆಯೇ ನಮ್ಮ ಹಿರಿಯರ ತ್ಯಾಗ ಸಾರ್ಥಕವಾಗಬೇಕಾದರೆ ನಮ್ಮ ದೇಶವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು.ಸರಿಯಾದ ಶಿಕ್ಷಣ ಪಡೆದು ಪ್ರತಿಭಾ ಪಲಾಯನ ಮಾಡದೆ ದೇಶದ ಏಳಿಗೆಗಾಗಿ ದುಡಿಯಬೇಕು. ಒಳ್ಳೆಯ ಆರೋಗ್ಯವಂತ ಸಮಾಜವನ್ನು ಸೃಷ್ಟಿಸಬೇಕು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ದೇಶಭಕ್ತರ ಕನಸೂ ಕೂಡ ಇದೇ ಆಗಿತ್ತು. ಬಲಿಷ್ಟ ಭಾರತ ನಮ್ಮದಾಗಲಿ.
ರಚನೆ: ಸೀಮಾ ಕಂಚೀಬೈಲು
No comments:
Post a Comment