ವರದಕ್ಷಿಣೆ, ಸಾಮಾಜಿಕ ಪಿಡುಗು


ವಿವಾಹದ ಸಮಯದಲ್ಲಿ ವಧುವಿನ ಕಡೆಯವರು ವರ ಅಥವಾ ಅವನ ಪಾಲಕರಿಗೆ ಕೊಡುವ ಅಥವಾ ವಿವಾಹ ಸಮಯದಲ್ಲಿ ಹುಡುಗಿ ಗಂಡನ ಮನೆಗೆ ತರುವ ಹಣ, ಒಡವೆ, ಭೂಮಿ, ಮನೆ ನಿವೇಶನ ಮತ್ತು ಇತರ ಆಸ್ತಿಗಳನ್ನು ವರದಕ್ಷಿಣೆ ಎನ್ನಲಾಗಿದೆ.ಇದು ಹುಡುಗಿಯ ಕಡೆಯವರು ಸ್ವಇಚ್ಛೆಯಿಂದ ನೀಡಿದ್ದಾಗಿರಬಹುದು ಅಥವಾ ಹುಡುಗನ ಬಂಧುಗಳು ಬೇಡಿಕೆಯ ಮೂಲಕ ಪಡೆದುದಾಗಿರಬಹುದು.

ವರದಕ್ಷಿಣೆಯ ಸಮರ್ಥನೆಗೆ ಅನೇಕ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರಣಗಳ ಪ್ರತಿಪಾದನೆಯಿದೆ. ಹಿಂದುಧರ್ಮದಲ್ಲಿ ಹಿಂದೆ ಇದನ್ನು ಸ್ತ್ರೀಧನ ಎಂದು ಕರೆಯಲಾಗು ತ್ತಿತ್ತು. ಅವಿಭಕ್ತ ಕುಟುಂಬದಲ್ಲಿ ಹೆಣ್ಣುಮಗಳಿಗೆ ಜೀವನಾಂಶ ತೆಗೆದಿಟ್ಟಾಗ ಅದನ್ನು ವಿವಾಹ ಮಾಡಿಕೊಡಲು ಅಥವಾ ಒಡವೆ, ಬಟ್ಟೆ, ಪಾತ್ರೆ, ದವಸಧಾನ್ಯ ಮತ್ತು ಸಾಕು ಪ್ರಾಣಿಗಳ ರೂಪದಲ್ಲಿ ನೀಡಲಾಗುತ್ತಿತ್ತು. ಭವಿಷ್ಯದಲ್ಲಿ ಮಗಳೇನಾದರೂ ಸಂಕಷ್ಟಕ್ಕೊಳಗಾದರೆ ಅಥವಾ ಸ್ವತಂತ್ರವಾಗಿ ಸಂಸಾರ ಹೂಡುವಾಗ ಸಹಾಯವಾಗಲಿ ಎಂದು ಸ್ತ್ರೀಧನವನ್ನು ನೀಡಲಾಗುತ್ತಿತ್ತು.

ಕ್ರಮೇಣ ಹುಡುಗಿಯ ಪಾಲಕರು ಸಂತೋಷದಿಂದ ನೀಡುತ್ತಿದ ಕಾಣಿಕೆ ಒತ್ತಾಯದಿಂದ ಕೇಳಿ, ಪೀಡಿಸಿ ಪಡೆಯುವ ವರದಕ್ಷಿಣೆಯಾಗಿ ಪರಿಣಮಿಸಿತು. ಕೊಡದಿದ್ದ ಸಂದರ್ಭದಲ್ಲಿ ಗಂಡನ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವ, ಕೊಲ್ಲುವ ಮಟ್ಟಕ್ಕೂ ಹೋಗಿ ಒಂದು ಸಾಮಾಜಿಕ ಪಿಡುಗಾಯಿತು.

ಇಂದು ಹುಡುಗಿಯರು ಶಿಕ್ಷಣ ಪಡೆದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ವರದಕ್ಷಿಣೆಯ ವಿರೋಧಿಗಳಾಗುತ್ತಿದ್ದಾರೆ. ಹಾಗಾಗಿ  ವರದಕ್ಷಿಣೆ ಪ್ರಕರಣ, ಅದಕ್ಕೆ ಸಂಬಂಧಿಸಿದ ಸಾವಿನ ಪ್ರಕರಣ ಕಡಿಮೆಯಾಗಿರಬಹುದು  ಎಂದುಕೊಂಡರೆ ಅದು ತಪ್ಪುಹಿಂದೆ ನಗದು ಹಾಗೂ  ಚಿನ್ನಾಭರಣದ  ರೂಪದಲ್ಲಿರುತ್ತಿದ್ದ  ವರದಕ್ಷಿಣೆ ,-ಈಗ ಮನೆ ನಿವೇಶನದೇಶದಲ್ಲಿ ನೆಲೆಸುವ ಅವಕಾಶ, ಕೆಲಸಗಳಂತಹ ಸ್ವರೂಪ ಪಡೆದುಕೊಂಡಿದೆ. ಉದ್ಯೋಗಸ್ಥ ಮಹಿಳೆಯನ್ನು ಮದುವೆಯಾಗಿ ಅವಳ ಸಂಬಳವನ್ನು ಅನುಭವಿಸಬಹುದೆಂಬ ಮನಸ್ಥಿತಿ ಉಳ್ಳವರೂ ಇದ್ದಾರೆ. ಇದಲ್ಲದೆ, ಹೆಣ್ಣುಮಕ್ಕಳನ್ನು ಹೊರೆ ಎಂದು ಭಾವಿಸುವ ಕೆಲ ಪಾಲಕರು ವರದಕ್ಷಿಣೆ ಕೊಟ್ಟಾದರೂ ಅವರಿಗೆ ಮದುವೆ ಮಾಡಿಬಿಡಬೇಕೆಂದು ಯೋಚಿಸುತ್ತಾರೆ.

1961ರಿಂದಲೇ ಕಾನೂನು ಜಾರಿಗೆ ಬಂದಿದೆ. ಹೀಗಿದ್ದೂ ಪಿಡುಗು ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ವರದಕ್ಷಿಣೆ ಸಾವಿನಂತಹ ಪ್ರಕರಣಗಳು ಕಡಿಮೆಯಾಗಬೇಕಿದ್ದರೆ ವರದಕ್ಷಿಣೆ ಕೊಡುವುದು, ಪಡೆಯುವುದು ನಿಲ್ಲಬೇಕು. ಕುರಿತು ಯುವಜನತೆಯಲ್ಲಿ ಅರಿವು ಮೂಡಿಸಬೇಕು.



2 comments: