ಝಾನ್ಸಿ ರಾಣಿ ಲಕ್ಷ್ಮೀಬಾಯಿ



   
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದ ಕೂಡಲೇ ನಮ್ಮಲ್ಲಿನ ದೇಶಭಕ್ತಿ ಜಾಗೃತವಾಗುತ್ತದೆ. ಕಣ ಕಣದಲ್ಲೂ ಕೆಚ್ಚು ತುಂಬುತ್ತದೆ. ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ಕಾರಣವಾದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಬಗ್ಗೆ ತಿಳಿದುಕೊಳ್ಳೋಣ.

    ನವೆಂಬರ್ 19, 1828ರಂದು ಗ್ವಾಲಿಯರ್ ನಲ್ಲಿ ಇವರು ಜನಿಸಿದರು. ತಂದೆ ಮೋರೋಪಂತ್ ಥಂಬೆ ಆಸ್ಥಾನ ಸಲಹೆಗಾರರಾಗಿದ್ದರು. ತಾಯಿ ಭಾಗೀರಥಿ ಸಾಪ್ರೆ ಮಹಾನ್ ದೈವ ಭಕ್ತರಾಗಿದ್ದರು. ಇವರು ಮೂಲತಃ ಮಹಾರಾಷ್ಟ್ರದ ಬ್ರಾಹ್ಮಣ ಕುಟುಂಬದಿಂದ ಬಂದವರು. ಲಕ್ಷ್ಮೀಬಾಯಿಯ ಬಾಲ್ಯದ ಹೆಸರು ಮಣಿಕರ್ಣಿಕಾ (ಮನು) ಎಂದಾಗಿತ್ತು. ಇವರು ನಾಲ್ಕು ವರ್ಷದಲ್ಲೇ ತಾಯಿಯನ್ನು ಕಳೆದು ಕೊಂಡರು. ಇವರಿಗೆ ತಂದೆಯು ಯುದ್ಧದ ಕಲೆಗಳಾದ ಕುದುರೆ ಸವಾರಿ, ಬಿಲ್ವಿದ್ಯೆ ಹಾಗೂ ಕತ್ತಿ ವರಸೆ ಮುಂತಾದುವುಗಳನ್ನು ಕಲಿಸಿದರು. ಬಾಲ್ಯದಿಂದಲೇ ಲಕ್ಷ್ಮೀಬಾಯಿಯು ಧೈರ್ಯ ಸಾಹಸ ಪ್ರವೃತ್ತಿಯುಳ್ಳವಳಾಗಿದ್ದರು.

    1842ರಲ್ಲಿ ಇವರ ಮದುವೆ ಝಾನ್ಸಿಯ ರಾಜನಾದ 'ರಾಜಾ ಗಂಗಾಧರ ರಾವ್ ನೇವಾಳ್ಕರ್'ನೊಂದಿಗೆ ಆಯಿತು. ಆಗ ಇವರ ಹೆಸರು ಮಣಿಕರ್ಣಿಕಾ ಇಂದ ಲಕ್ಷ್ಮೀಬಾಯಿ ಎಂದು ಬದಲಿಸಲಾಯಿತು. ಇವರಿಗೆ ದಾಮೋದರ್ ರಾವ್ ಎಂಬ ಗಂಡು ಮಗು ಹುಟ್ಟಿತು. ಆದರೆ ಅದು ನಾಲ್ಕನೇ ತಿಂಗಳಲ್ಲಿ ತೀರಿಕೊಂಡಿತು. ನಂತರ ರಾಜನ ಸಂಬಂಧಿಯೊಬ್ಬರ ಮಗುವನ್ನು ದತ್ತು ತೆಗೆದುಕೊಂಡರು. ಅದಕ್ಕೆ ಕೂಡ ದಾಮೋದರ್ ರಾವ್ ಎಂದು ನಾಮಕರಣ ಮಾಡಿದರು. 1853ರಲ್ಲಿ ರಾಜಾ ಗಂಗಾಧರ ರಾವ್ ಸಾವನ್ನಪ್ಪಿದನು. ಈಗ ರಾಜ್ಯದ ಆಡಳಿತದ ಹೊಣೆ ಲಕ್ಷ್ಮೀಬಾಯಿಯ ಮೇಲೆ ಬಿದ್ದಿತು. ಅದರಿಂದ ಧೃತಿಗೆಡಲಿಲ್ಲ. ನಂತರ ಆಗಿನ ಬ್ರಿಟಿಷ್ ಗವರ್ನರ್ ಲಾರ್ಡ್ ಡಾಲ್ ಹೌಸಿಯು ದತ್ತುಪುತ್ರನಿಗೆ ರಾಜ್ಯವಿಲ್ಲ ಎಂಬ ಕಾನೂನನ್ನು ಜಾರಿಗೆ ತಂದು ಝಾನ್ಸಿಯನ್ನು ತನ್ನ ವಶ ಮಾಡಿಕೊಳ್ಳುವ ಕುತಂತ್ರ ಮಾಡಿದನು.

    ಮಾರ್ಚ್ 1854ರಲ್ಲಿ ಐವತ್ತು ಸಾವಿರ ರೂಪಾಯಿಗಳ್ಳನ್ನ ಪಡೆದು ಝಾನ್ಸಿಯನ್ನು ತೊರೆಯಲು ರಾಣಿಗೆ ಆಜ್ಞೆ ಮಾಡಿದನು. ಇದರ ವಿರುದ್ಧ ಹೋರಾಡಲು ರಾಣಿಯು ತನ್ನ ಸಿಪಾಯುಗಳನ್ನು ಒಗ್ಗೂಡಿಸಿ ಮೇ10, 1857ರಲ್ಲಿ ಮೀರತ್ ನಲ್ಲಿ ಸಿಪಾಯಿ ದಂಗೆ ನಡೆಸಿದರು. ಇದು ಬ್ರಿಟಿಷರ ವಿರುದ್ಧದ ಮೊದಲ ದಂಗೆ ಎಂದು ನಮೂದಾಗಿದೆ. ಇದಾದ ಮೇಲೆ ಝಾನ್ಸಿಯನ್ನು ಬ್ರಿಟಿಷರ ಮೇಲುಸ್ತುವಾರಿಯೊಂದಿಗೆ ಆಳಲು ರಾಣಿಗೆ ನೀಡಿದರು.

    ರಾಣಿಯ ಆಡಳಿತದ ಮೇಲೆ ಬ್ರಿಟಿಷರ ಒತ್ತಡ ಹೆಚ್ಚಾದಾಗ 1858ರಲ್ಲಿ ಮತ್ತೆ ಯುದ್ಧ ಸಾರಿದರು. ಬ್ರಿಟಿಷರಿಂದ ರಾಣಿಯನ್ನು ಕಾಪಾಡಲು ರಾಣಿಯ ಹಿಂಬಾಲಕರು ಅವರನ್ನು ಮತ್ತು ಮಗನನ್ನು 'ಕಲ್ಪಿ' ಎಂಬಲ್ಲಿಗೆ ಕಳಿಸಿದರು. ಅಲ್ಲಿ ಕೂಡ ರಾಣಿಯು ಸುಮ್ಮನೆ ಕೂಡಲಿಲ್ಲ. ತನ್ನ ಸೈನಿಕರನ್ನು ಸೇರಿಸಿ ತರಬೇತಿ ಕೊಡಲು ಆರಂಭಿಸಿದರು. ಇವರ ಜೊತೆ ತಾತ್ಯಾ ಟೋಪೆ ಕೂಡ ಇದ್ದರು. ಇದರ ಸುಳಿವು ಬ್ರಿಟಿಷರಿಗೆ ತಿಳಿಯಿತು. ಮೇ22, 1858ರಂದು ಬ್ರಿಟಿಷರು ಕಲ್ಪಿಯ ಮೇಲೆ ದಾಳಿ ಮಾಡಿದರು. ಆದರೆ ರಾಣಿಯ ಕಡೆಯವರೆಲ್ಲ ಗ್ವಾಲಿಯರ್ ಗೆ ವರ್ಗಾವಣೆಗೊಂಡಿದ್ದರು. ಅಲ್ಲಿಯೂ ಬ್ರಿಟಿಷರು ದಾಳಿ ಮಾಡಿದರು. ಆದರೆ ರಾಣಿ ಲಕ್ಷ್ಮೀಬಾಯಿಯು ಕುಗ್ಗದೆ ತನ್ನ ಸೈನಿಕರಿಗೆ ಧೈರ್ಯ ತುಂಬುತ್ತ ತನ್ನ ಪುಟ್ಟ ಮಗನನ್ನು ಬೆನ್ನ ಹಿಂದೆ ಕಟ್ಟಿಕೊಂಡು ಕೆಚ್ಚೆದೆಯಿಂದ ಹೋರಾಡಿದರು.  ಜೂನ್ 16, 1858ರಂದು ತನ್ನ 30ನೇ ವಯಸ್ಸಿಗೆ ನಮ್ಮ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಪ್ರಾಣತ್ಯಾಗ ಮಾಡಿದರು.

    ಇಂದಿಗೂ ನಾವು ರಾಣಿ ಲಕ್ಷ್ಮೀಬಾಯಿಯನ್ನು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸೇರಿಸುತ್ತೇವೆ. ಧೀರ ಮಹಿಳೆಯರ  ಸಾಲಿನಲ್ಲಿ ರಾಣಿ ಲಕ್ಷ್ಮೀಬಾಯಿ ಮೊದಲನೆಯವರಾಗಿ ನಿಲ್ಲುತ್ತಾರೆ.

ರಚನೆ: ಸೀಮಾ ಕಂಚೀಬೈಲು 


No comments:

Post a Comment