ನುಡಿಗಟ್ಟುಗಳ ಸಂಗ್ರಹ

 ನಮ್ಮ ಹಿಂದಿನ ಪೋಸ್ಟಿನಲ್ಲಿ ದ್ವಿರುಕ್ತಿ, ನುಡಿಗಟ್ಟು ಮುಂತಾದ ಶಬ್ದ ಪ್ರಕಾರಗಳನ್ನು ತಿಳಿದುಕೊಂಡೆವು, ಈ ಸಾರಿ ನುಡಿಗಟ್ಟುಗಳ ಇನ್ನಷ್ಟು ಉದಾಹರಣೆಗಳನ್ನು ನೋಡೋಣ.

ನಿಮಗೆ ಗೊತ್ತಿರುವ ನುಡಿಗಟ್ಟುಗಳನ್ನು ಕಾಮೆಂಟಿನಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಬಹುದು.

  1. ಮೂಗು ತೂರಿಸು - ಬೇರೆಯವರ ವಿಷಯದಲ್ಲಿ ಮಧ್ಯಪ್ರವೇಶಿಸು
  2. ಆಷಾಢಭೂತಿ - ಕಪಟಿ, ನಯವಂಚಕ
  3. ಗಾಳಿ ಬಂದಾಗ ತೂರು - ಅವಕಾಶ ಉಪಯೋಗಿಸಿಕೊಳ್ಳುವುದು   
  4. ದಾರಿ ನೋಡು -  ಕಾಯುವಿಕೆ  
  5. ಬಂಗಾರದ ಪಂಜರ - ಸ್ವಾತಂತ್ರ್ಯ ಇಲ್ಲದಿರುವಿಕೆ  
  6. ಗಾಳಿಗೋಪುರ - ಸುಳ್ಳು ಭರವಸೆ  
  7. ಕಣ್ಣೀರಿನಲ್ಲಿ ಕೈತೊಳೆ - ಕಷ್ಟ ಅನುಭವಿಸು  
  8. ಮಂತ್ರಮುಗ್ಧ - ಆಶ್ಚರ್ಯ ಚಕಿತ  
  9. ಹೊಟ್ಟೆಉರಿ - ಅಸೂಯೆಪಡು  
  10. ಹೊಟ್ಟೆಗೆ ತಣ್ಣೀರು ಬಟ್ಟೆ - ಹಸಿವಿನಿಂದ ಉಪವಾಸವಿರುವುದು  
  11. ಹೊಟ್ಟೆಯ ಮೇಲೆ ಹೊಡೆ - ಪರರ ಕೆಲಸ ಕಿತ್ತುಕೊಳ್ಳುವುದು  
  12. ಮೊಸಳೆ ಕಣ್ಣೀರು - ತೋರಿಕೆಯ ಕಣ್ಣೀರು  
  13. ಗಾಯದ ಮೇಲೆ ಬರೆ - ನೋವಿನ ಜೊತೆ ಮತ್ತೊಂದು ನೋವು  
  14. ಗಾಯದ ಮೇಲೆ ಉಪ್ಪು ಸವರು - ನೋವಿನಲ್ಲಿರುವವರಿಗೆ ಮತ್ತೆ ನೋವು ಕೊಡುವುದು  
  15. ಹಿತ್ತಾಳೆ ಕಿವಿ - ಚಾಡಿಮಾತು ನಂಬುವುದು
  16. ಕೆಸರೆರಚು - ಅಪವಾದ ಮಾಡು  
  17. ಕಿವಿಮಾತು - ಬುದ್ಧಿವಾದ ಹೇಳು
  18. ಮನಸಲ್ಲೇ ಮಂಡಿಗೆ ಸವಿ -ಕಲ್ಪನೆಯಲ್ಲೇ ಸಂತೋಷ ಪಡು  
  19. ಕಾಲುಕೀಳು - ಪಲಾಯನ ಮಾಡು  
  20. ಕನ್ನಡಿಯೊಳಗಿನ ಗಂಟು -ಕೈಯಲ್ಲಿ ಇರದ ಅಥವಾ ಸದ್ಯಕ್ಕೆ ಇಲ್ಲದ ಅವಕಾಶ 
  21. ಕೈಕೊಡು - ಮೋಸ ಮಾಡು  
  22. ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ - ವ್ಯರ್ಥ ಕಾರ್ಯ 
  23. ನೀರಿನಲ್ಲಿ ಹೋಮ ಮಾಡಿದಂತೆ - ವ್ಯರ್ಥ ಕಾರ್ಯ 
  24. ಕೋಣನ ಮುಂದೆ ಕಿನ್ನರಿ ನುಡಿಸಿದಂತೆ - ಪ್ರಯೋಜನವಿಲ್ಲದ ಕೆಲಸ
  25. ದಾರಿದೀಪ - ಮಾರ್ಗದರ್ಶನ ಮಾಡು
  26. ತಲೆಕಾಯು - ರಕ್ಷಿಸು
  27. ಗಾಳಿಗೆ ತೂರು - ನಿರ್ಲಕ್ಷ್ಯಿಸು
  28. ಆನೆಬಲ - ಒತ್ತಾಸೆಯಾಗಿ ನಿಲ್ಲು
  29. ಕೈ ಒಡ್ಡು - ಬೇಡುವುದು
  30. ಕಣ್ಣು ಕೆಂಪಗಾಗು - ಸಿಟ್ಟಾಗು
  31. ಕಾಲಿಗೆ ಬುದ್ಧಿ ಹೇಳು - ಓಡಿ ಹೋಗು
  32. ಮುಖವಾಡ -ನಿಜವಾದ ಅಸ್ತಿತ್ವ ಮುಚ್ಚಿಡು
  33. ಬೆನ್ನುತಟ್ಟು - ಪ್ರೋತ್ಸಾಹಿಸು
  34. ತಲೆದೂಗು - ಮೆಚ್ಚಿಕೊಳ್ಳುವುದು
  35. ಆಕಾಶಕ್ಕೆ ಏಣಿ ಹಾಕು - ಸಿಗದುದಕ್ಕೆ ಆಸೆ ಪಡು
  36. ತಾಳಕ್ಕೆ ತಕ್ಕಂತೆ ಕುಣಿ - ಹೇಳಿದಂತೆ ಕೇಳು
  37. ನೀರ ಮೇಲಿನ ಗುಳ್ಳೆ - ಕ್ಷಣಿಕ
  38. ಕಣ್ ತೆರೆ - ಸತ್ಯ ತಿಳಿ
  39. ಕಡ್ಡಿಯನ್ನು ಗುಡ್ಡ ಮಾಡು - ಸಣ್ಣ ವಿಷಯವನ್ನು ದೊಡ್ಡದು ಮಾಡು 
  40. ವಿಷಕಾರು - ದ್ವೇಷಿಸು
  41. ಮುಖ ನೋಡಿ ಮಣೆ ಹಾಕು - ತಾರತಮ್ಯ ಮಾಡು
  42. ಕೈ ಮೇಲಾಗು - ವಿಜಯ ಸಾಧಿಸು
  43. ತಲೆ ಕೆಳಗಾಗು - ಯೋಜನೆ ಫಲಿಸದಿರುವುದು
  44. ಕಾಮಾಲೆ ಕಣ್ಣು - ಸಂಶಯ ಪಡು
  45. ಹೊಟ್ಟೆಗೆ ಹಾಕಿಕೋ - ಕ್ಷಮಿಸು
  46. ಹುಳಿ ಹಿಂಡು - ವಿಷಯ ಕೆಡಿಸು
  47. ಉರಿಯುವ ಬೆಂಕಿಗೆ ತುಪ್ಪ ಸುರಿ - ಪರಿಸ್ಥಿತಿ ಮತ್ತಷ್ಟು ವಿಷಮಗೊಳಿಸು
  48. ಗಾಯಕ್ಕೆ ಉಪ್ಪು ಸವರು - ನೋವಿನಲ್ಲಿರುವವರಿಗೆ ಮತ್ತಷ್ಟು ನೋವು ಕೊಡು
  49. ಹೊಟ್ಟೆ ತಣ್ಣಗಿರಲಿ - ಸುಖವಾಗಿರು
  50. ಎದೆ ಒಡಿ - ಆಘಾತಗೊಳ್ಳು
  51. ಎದೆಗುಂದು - ಧೈರ್ಯಗೆಡು
  52. ತಲೆ ತಗ್ಗಿಸು - ಅವಮಾನಗೊಳ್ಳು
  53. ಬಣ್ಣಗೆಡು - ಸತ್ಯಅನಾವರಣಗೊಳ್ಳು
  54. ಕಣ್ಣು ತೆರೆಸು - ಬುದ್ಧಿ ಕಲಿ
  55. ಕಾಲು ಕೆರಿದು ಜಗಳ ಮಾಡು - ವಿನಾ ಕಾರಣ ಜಗಳ ಮಾಡು
  56. ಗೋರಿ ಕಟ್ಟು - ವಿಷಯವನ್ನು ಮುಚ್ಚಿಹಾಕು
  57. ಕೈ ಹಾಕು - ಮಧ್ಯಸ್ಥಿಕೆ ವಹಿಸು
  58. ಕುತ್ತಿಗೆ ಕೊಯ್ಯಿ - ನಂಬಿಕೆದ್ರೋಹ
  59. ಬೆನ್ನಿಗೆ ಚೂರಿ ಹಾಕು - ನಂಬಿಕೆ ದ್ರೋಹ
  60. ಕೈ ಬಿಡು - ಮೋಸ ಮಾಡು
  61. ಅಜ್ಜನ ಕಾಲದ್ದು - ಪುರಾತನ
  62. ಅಪ್ಪ ನೆಟ್ಟ ಆಲದ ಮರ - ಹಳೆಯ ಶಾಸ್ತ್ರ ಸಂಪ್ರದಾಯಗಳು
  63. ಬಿಚ್ಚೋಲೆ ಗೌರಮ್ಮ - ನಿರಾಭರಣೆ
  64. ಮೊರೆ ಹೋಗು - ಶರಣಾಗು
  65. ಮುಗಿಲು ಹರಿದು ಬೀಳು - ದುರಂತ ಎದುರಿಸು
  66. ಬಾಯಿ ಮೇಲೆ ಬೆರಳು ಇಡು - ಆಶ್ಚರ್ಯ ಪಡು
  67. ಕಣ್ಣರಳಿಸು - ಅಚ್ಚರಿಪಡು
  68. ಬೆಲೆ ತೆರು - ಪಶ್ಚಾತ್ತಾಪ ಪಡು
  69. ಕಿವಿ ತುಂಬು - ಚಾಡಿ ಹೇಳು
  70. ಪಿಸುಮಾತು - ಮೆಲುದನಿಯ ಮಾತು
  71. ಗಾಳಿಮಾತು - ಸುಳ್ಳುಸುದ್ದಿ ಹರಡು
  72. ಮೊರೆ ಯಿಡು - ಬೇಡಿಕೊಳ್ಳು
  73. ಮುಗಿಬೀಳು - ದಾಳಿ ಮಾಡು
  74. ಸಂಬಂಧ ಹಳಸು - ಮನಸ್ತಾಪ
  75. ಕಡ್ಡಿ ತುಂಡು ಮಾಡು - ನೇರ ದಿಟ್ಟ ನುಡಿ
  76. ಬೆಂಕಿ ಹಚ್ಚು - ಚಾಡಿ ಹೇಳು
  77. ನಾಯಿ ಪಾಡು - ಗತಿ ಇಲ್ಲದಿರುವಿಕೆ
  78. ಮುಖಕ್ಕೆ ಮಂಗಳಾರತಿ - ಬೈಯ್ಯುವುದು 
  79. ಟೋಪಿ ಹಾಕು - ಮೋಸಮಾಡು
  80. ಅಂಗೈಯಲ್ಲಿ ಆಕಾಶ - ಹುಸಿ ನಿರೀಕ್ಷೆ ತೋರಿಸು
  81. ನೀರು ಕುಡಿದಂತೆ - ಸುಲಭವಾಗಿ ಸಾಧಿಸು
  82. ಬಲಗೈ ಬಂಟ - ನೆಚ್ಚಿನ ಕೆಲಸಗಾರ
  83. ತಾಳ ತಪ್ಪು -ಕೆಲಸ ಕೆಡುವುದು
  84. ಸೆರಗಿನ ಕೆಂಡ - ಅಪಾಯವನ್ನು ಜೊತೆಗಿಟ್ಟುಕೊಳ್ಳು
  85. ಹಾವಿಗೆ ಹಾಲೆರೆದಂತೆ - ಅಪಾಯವನ್ನು ಪೋಷಿಸು
  86. ಅನ್ನಕ್ಕೆ ದಾರಿ - ದುಡಿಮೆಗೆ ಮಾರ್ಗ
  87. ಕಣ್ಣಿದ್ದೂ ಕುರುಡರಂತೆ - ತಿಳಿದೂ ನಿರ್ಲಕ್ಷ್ಯ ವಹಿಸು
  88. ಕಾಲಿಗೆ ಚಕ್ರ - ಒಂದು ಕಡೆ ನಿಲ್ಲದಿರುವಿಕೆ
  89. ಬೇಳೆ ಬೇಯಿಸಿಕೊ - ತನ್ನ ಕೆಲಸ ಮಾತ್ರ ನೋಡಿಕೊ
  90. ಬಾಯಿ ಕಟ್ಟು - ಆಹಾರದಲ್ಲಿ ಹಿಡಿತ
  91. ಕಣ್ಣಲ್ಲಿ ಎಣ್ಣೆ - ಏಕಾಗ್ರತೆಯಿಂದ
  92. ಕುರುಡು ಕಾಂಚಾಣ - ಧನದಾಹ
  93. ಮೈ ಮರೆ - ಅಲಕ್ಷ್ಯ
  94. ಕಣ್ಣು ಹತ್ತು - ನಿದ್ದೆ ಮಾಡು
  95. ತೋಳೆರಿಸು - ಜಗಳಕ್ಕೆ ಹೋಗು
  96. ಟೊಂಕ ಕಟ್ಟಿ ನಿಲ್ಲು - ಕೆಲಸಕ್ಕೆ ಸಜ್ಜಾಗು
  97. ಕೈಗೂಡು - ನೆರವೇರು
  98. ಸೊಂಟ ಮುರಿ - ನಿಗ್ರಹಿಸು
  99. ಮೈಮುರಿದು ದುಡಿ - ಕಷ್ಟಪಟ್ಟು ದುಡಿ
  100. ಬೆವರಿಳಿಸು - ಬೈಯ್ಯುವುದು
  101. ಕೈ ಜೋಡಿಸು - ಸಹಕರಿಸು
  102. ಸೆರ ಗೊಡ್ಡು - ಬೇಡಿಕೋ
  103. ಮಾನ ಹರಾಜು ಹಾಕು - ಅವಮಾನ ಮಾಡು
  104. ನೀರು ಕುಡಿಸು - ಬುದ್ಧಿ ಕಲಿಸು
  105. ಏಳು ಕೆರೆ ನೀರು ಕುಡಿ - ಚೆನ್ನಾಗಿ ಪಳಗು
  106. ಕಂಬಿ ಕೀಳು - ಪಲಾಯನ ಮಾಡು
  107. ಕಣ್ಣಿಗೆ ಮಣ್ಣರಚು - ಮೋಸ ಮಾಡು 
  108. ಗತಿ ಕಾಣಿಸು - ಬುದ್ಧಿ ಕಲಿಸು
  109. ಗಗನ ಕುಸುಮ - ಕೈಗೆ ನಿಲುಕದ್ದು
  110. ಕಣ್ಣಳತೆ - ಕೈಗೆ ಸಿಗುವುದು/ಹತ್ತಿರದ 
  111. ಒರೆ ಹಚ್ಚು - ಪರೀಕ್ಷಿಸು
  112. ಕೈಮುರಿದಂತಾಗು - ಬಲಹೀನನಾಗು
  113. ಗಟ್ಟಿಕುಳ - ಶ್ರೀಮಂತ 
  114. ಪಳಗಿದ ಕೈ - ಅನುಭವಿ
  115. ಇಂಗಿ ಹೋಗು - ಒಣಗಿ ಹೋಗು
  116. ತಣ್ಣೀರೆರಚು - ನಿರಾಶೆ ಮಾಡು
  117. ಬೆನ್ನೆಲುಬು - ಆಧಾರ
  118. ತಲೆ ತಿನ್ನು - ಅನವಶ್ಯಕ ಮಾತಾಡು
  119. ತಲೆ ಬಿಸಿ ಮಾಡು - ಸಿಟ್ಟು ಬರಿಸು
  120. ತವಡು ಕುಟ್ಟು - ಅನಾವಶ್ಯಕ ಮಾತು
  121. ಮೊಳಕೆಒಡಿ - ಹೊಸ ವಿಷಯದ ಪ್ರಾರಂಭ
  122. ಅಳಿಲು ಸೇವೆ - ಸಣ್ಣ ಸಹಾಯ
  123. ತಲೆ ಮರೆಸು - ಬಚ್ಚಿಟ್ಟುಕೊಳ್ಳು
  124. ಕಣ್ಣು ತಪ್ಪಿಸು - ಸಿಗದೇ ತಪ್ಪಿಸಿಕೊಳ್ಳು

ದ್ವಿರುಕ್ತಿ, ಜೋಡುನುಡಿ, ಅನುಕರಣಾವ್ಯಯ ಮತ್ತು ನುಡಿಗಟ್ಟುಗಳು

 ದ್ವಿರುಕ್ತಿ 
ದ್ವಿರುಕ್ತಿ  ಪದದ ಶಬ್ದಶಃ ಅರ್ಥ ತಿಳಿದುಕೊಳ್ಳೋಣ. ಇಲ್ಲಿ 'ದ್ವಿ' ಅಂದರೆ 'ಎರಡು', 'ಉಕ್ತಿ' ಎಂದರೆ 'ಮಾತು'.
ಒಂದು ಪದವನ್ನೋ ಅಥವಾ ಒಂದು ವಾಕ್ಯವನ್ನೋ ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಎರಡು  ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ.
ಉದಾಹರಣೆ: ಓಡಿಓಡಿ, ಬಿದ್ದುಬಿದ್ದು , ಮನೆಮನೆ
ದ್ವಿರುಕ್ತಿಯನ್ನು ಸಂತೋಷ, ಅವಸರ, ಸಂಭ್ರಮ, ಕೋಪ, ಅಥವಾ  ಹತಾಶೆಯನ್ನು ವ್ಯಕ್ತಪಡಿಸಲು  ಬಳಸಲಾಗುತ್ತದೆ.  ಉದಾಹರಣೆಗೆ,
ಬೇಗ ಬೇಗ ಬಾ , ಹೊತ್ತಾಯಿಿತು. 
ಬನ್ನಿ ಬನ್ನಿ ! ನಿಮಗೆ ಸ್ವಾಗತ. 
ಅಬ್ಬಬ್ಬಾ! ಎಷ್ಟು ರಮಣೀಯ ದೃಶ್ಯ! 
 ಪ್ರತಿಯೊಂದು ಅಥವಾ ಅತಿ ಹೆಚ್ಚು , ಅತಿ ಕಡಿಮೆ ಎಂದು ಹೇಳಲೂ ಕೂಡ ದ್ವಿರುಕ್ತಿಯನ್ನು ಬಳಸುತ್ತಾರೆ. 
ಉದಾಹರಣೆಗೆ,
ಪುಟ್ಟಪುಟ್ಟ ಮಕ್ಕಳು ಆಟವಾಡುತಿದ್ದವು. 
ಊರೂರು ಅಲೆದರೂ ಅವನಿಗೆ ಕೆಲಸ ಸಿಗಲಿಲ್ಲ.
ಕೆಲವೊಂದು ದ್ವಿರುಕ್ತಿಗಳನ್ನು  ವಿಶೇಷ ರೂಪದಲ್ಲಿ, ಉದಾಹರಣೆಗೆ 'ಮೊದಲು ಮೊದಲು'  ಎಂದು ಹೇಳುವ ಬದಲು, 'ಮೊಟ್ಟಮೊದಲು' ಎಂದು ಹೇಳುತ್ತಾರೆ.
ದ್ವಿರುಕ್ತಿಯ ಇನ್ನಷ್ಟು ಉದಾಹರಣೆಗಳು:
  • ಮತ್ತೆ ಮತ್ತೆ
  • ಈಗೀಗ
  • ದೊಡ್ಡ ದೊಡ್ಡ
  • ಹಿಂದೆ ಹಿಂದೆ
  • ಮುಂದೆ ಮುಂದೆ
  • ಒಳಒಳಗೆ
  • ಬೇಡ ಬೇಡ
  • ಸಣ್ಣ ಸಣ್ಣ
  • ಮನೆ ಮನೆ
  • ಬಟ್ಟಬಯಲು
  • ನಟ್ಟನಡುವೆ
  • ನಿಲ್ಲು ನಿಲ್ಲು
  • ದೂರ ದೂರ
  • ಇರಲಿ ಇರಲಿ
  • ತುತ್ತತುದಿ
  • ಬಿಸಿ ಬಿಸಿ
  • ಅಬ್ಬಬ್ಬಾ
  • ಅಗೋ ಅಗೋ
  • ನಡೆ ನಡೆ
  • ಬೇರೆ ಬೇರೆ
  • ಬಣ್ಣಬಣ್ಣದ 
  • ಹೆಚ್ಹು ಹೆಚ್ಹು
  • ಹೌದು ಹೌದು
  • ಕಟ್ಟಕಡೆ

ಜೋಡು ನುಡಿಗಳು

ಜೋಡುನುಡಿಗಳು ದ್ವಿರುಕ್ತಿಯ ಹಾಗೆಯೇ ಕಾಣುತ್ತವೆ. ಇದರಲ್ಲೂ ಎರಡು ಪದಗಳಿದ್ದು ಅವುಗಳನ್ನು ಜೊತೆಯಾಗಿಯೇ ಉಚ್ಚರಿಸುತ್ತಾರೆ. ಆದರೆ, ಜೋಡುನುಡಿಗಳ ಪೂರ್ವಪದಕ್ಕೆ ಮಾತ್ರ ಅರ್ಥವಿರುತ್ತದೆ, ಉತ್ತರಪದಕ್ಕೆ ಅರ್ಥವಿರುವುದಿಲ್ಲ.

ಉದಾಹರಣೆಗೆ: ಬಟ್ಟೆಬರೆ, ದೇವರು ದಿಂಡರು, ಸಾಲಸೋಲ, ಸುತ್ತಮುತ್ತ, ಕೋಟೆಕೊತ್ತಲು, ಕೂಲಿನಾಲಿ, ಹುಳಹುಪ್ಪಡಿ, ಶಾಲೆಮೂಲೇ, ಹಾಳುಮೂಳು, ಸಂದಿಗೊಂದಿ, ಸೊಪ್ಪುಸದೆ , ಹಣ್ಣು ಹಂಪಲು, ಇತ್ಯಾದಿ.


ಅನುಕರಣಾವ್ಯಯಗಳು 
ಕೆಲವು ಅರ್ಥವಿಲ್ಲದ ಧ್ವನಿವಿಶೇಷಗಳನ್ನು, ಪುನ: ಉಚ್ಚರಣೆ ಮಾಡಿ ಹೇಳುತ್ತೇವೆ. ಇಂತಹ ಧ್ವನಿ ವಿಶೇಷಗಳನ್ನು ಅನುಕರಣಾವ್ಯಯ ಎಂದು ಕರೆಯಲಾಗುತ್ತದೆ. 
ಉದಾಹರಣೆಗೆ : ಪಟಪಟ, ಸರಸರ, ಜುಳುಜುಳು, ದಬದಬ, ಚುರುಚುರು,ಧಗಧಗ, ಗುಳುಗುಳು, ಥರಥರ, ಘಮಘಮ, ಚಟಚಟ, ಗುಡುಗುಡು, ಮಿಣಿಮಿಣಿ  ಇತ್ಯಾದಿ.


ನುಡಿಗಟ್ಟುಗಳು
ನಮ್ಮ ದಿನನಿತ್ಯದ ಮಾತಿನಲ್ಲಿ ನಾವು ಕೆಲವೊಂದು ಪದಪುಂಜಗಳನ್ನು ಬಳಸುತ್ತೇವೆ, ಮಾತಿನ ಸಂದರ್ಭದ ಮೇಲೆ ಅವುಗಳಿಗೆ ಹೊಸ ಅರ್ಥ ಬರುತ್ತದೆ. ಇಂತಹ ಪದಪುಂಜಗಳನ್ನು ನುಡಿಗಟ್ಟುಗಳು ಎನ್ನುತ್ತಾರೆ. 
ಉದಾಹರಣೆಗೆ, ಕೈಕೊಡು ಇದರ ಅರ್ಥ ಕೈಯನ್ನು ಕೊಡುವುದು ಎಂದು ಅಲ್ಲ, ಮೋಸಮಾಡು ಎಂದು ಆಗಿದೆ.
ಇದೆ ರೀತಿ ಮತ್ತಷ್ಟು ಉದಾಹರಣೆಗಳು: 
ಹೊಟ್ಟೆಗೆ ಹಾಕಿಕೋ – ಕ್ಷಮಿಸು 
ಗಾಳಿಸುದ್ದಿ – ಸುಳ್ಳು ಸುದ್ದಿ 
ತಲೆಗೆ ಕಟ್ಟು – ಜವಾಬ್ದಾರಿ ಹೊರಿಸು 
ಕತ್ತಿ  ಮಸೆ – ದ್ವೇಷ ಸಾಧಿಸು 
ಅಟ್ಟಕ್ಕೇರಿಸು – ಹೊಗಳು

ಅಸಾಮಾನ್ಯ ಗಣಿತಜ್ಞನ ನೆನಪಿನಲ್ಲಿ —ರಾಷ್ಟ್ರೀಯ ಗಣಿತ ದಿನ

 



"ಪ್ರತಿ ಧನಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು" 

ಎಸ್. ರಾಮಾನುಜನ್ ಭಾರತ ಕಂಡ ಅದ್ವಿತೀಯ ಗಣಿತಜ್ಞ. ಬದುಕಿದ್ದು ಸ್ವಲ್ಪ ಕಾಲವಾದರೂ ಅವರು ಗಣಿತದ ಬಗ್ಗೆ ನಡೆಸಿದ ಪ್ರಯೋಗಗಳು, ಸಂಶೋಧನೆಗಳು ಜಗದ್ವಿಖ್ಯಾತವಾಗಿವೆ. ಇಂದಿಗೂ ರಾಮಾನುಜನ್ ಅವರನ್ನು ಗಣಿತದ ಸಂಶೋಧನೆಗಳಿಗಾಗಿ ನೆನೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಮಾನುಜನ್ ಅವರು ಜನಿಸಿದ ದಿನ (ಡಿಸೆಂಬರ್ 22) ವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ.

ಶ್ರೀನಿವಾಸ ರಾಮಾನುಜನ್ ತಮಿಳುನಾಡಿನ ಈರೋಡ್ ನಲ್ಲಿ 1887ರಲ್ಲಿ ಜನಿಸಿದರು. ಇವರ ತಂದೆ ಬಟ್ಟೆ ವ್ಯಾಪಾರಿಯ ಬಳಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ. ರಾಮಾನುಜನ್ ಹುಟ್ಟಿದ ನಂತರ ಅವರ ಕುಟುಂಬ ಕುಂಭಕೋಣಂಗೆ ವಲಸೆ ಹೋಯಿತು. ಮನೆಯಲ್ಲಿ ಬಡತನವಿದ್ದರೂ ರಾಮಾನುಜನ್ ವಿದ್ಯಾಭ್ಯಾಸದಲ್ಲಿ ತುಂಬಾ ಮುಂದಿದ್ದರು. ಹತ್ತನೇ ವಯಸ್ಸಿಗೆ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದರು. 

ರಾಮಾನುಜನ್ ಅವರು ಕುಂಭಕೋಣಂ ಟೌನ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ತಾವಾಗಿಯೇ ಗಣಿತದ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಪ್ರತಿಭಾವಂತ ರಾಮಾನುಜನ್ ಅವರಿಗೆ ಸ್ಕಾಲರ್ ಶಿಪ್ ದೊರೆತಿದ್ದರಿಂದ ಕುಂಭಕೋಣಂನ ಗವರ್ನಮೆಂಟ್ ಆರ್ಟ್ಸ್ ಕಾಲೇಜಿಗೆ ಸೇರಿ ವಿದ್ಯಾಭ್ಯಾಸ ಮುಂದುವರೆಸಿದರು. ಆದರೆ ಗಣಿತದ ಮೇಲಿನ ಒಲವಿನಿಂದ ಬೇರೆ ವಿಷಯಗಳಲ್ಲಿ ಅನುತ್ತೀರ್ಣರಾದರು. ಪರಿಣಾಮ ಸ್ಕಾಲರ್ ಶಿಪ್ ಕೈತಪ್ಪಿ ಹೋಯಿತು. 1905ರಲ್ಲಿ ಮದ್ರಾಸಿಗೆ ತೆರಳಿದ ರಾಮಾನುಜನ್ ಪಚೈಯಪ್ಪ ಕಾಲೇಜಿಗೆ ಸೇರಿಕೊಂಡರು. ಅಲ್ಲಿಯೂ ಅದೇ ಕಥೆ ಪುನರಾವರ್ತನೆಯಾಯಿತು. 

ಹಿರಿಯರೊಬ್ಬರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ, ಅದು ಕೇವಲ ಎರಡು ತಿಂಗಳ ಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆ ಎದುರಾಯಿತು. ಈ ನಡುವೆ ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು. ಏತನ್ಮಧ್ಯೆ ಶ್ರೀನಿವಾಸ ರಾಮಾನುಜನ್ ಅವರ ಬೆಂಗಾವಲಾಗಿದ್ದ ಪ್ರೊ. ವಿ.ಪಿ. ಶೇಷು ಅಯ್ಯರ್ ಕಳುಹಿಸಲ್ಪಟ್ಟ ಪ್ರಶ್ನೋತ್ತರಗಳ ರೂಪದಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ನಿಯತಕಾಲಿಕ 1911ರಲ್ಲಿ ಪ್ರಕಟವಾಯಿತು. ಈ ಸಂಪುಟದ ಒಂದು ಸಂಚಿಕೆಯಿಂದ ರಾಮಾನುಜನ್ನರ ಬರ್ನೌಲಿ ಸಂಖ್ಯೆಗಳ ಕೆಲವು ಲಕ್ಷಣಗಳು ಪ್ರಕಟಗೊಂಡಿತು. 

ಪ್ರೊ ಪಿ.ವಿ. ಶೇಷು ಅಯ್ಯರ್ ಅವರು ಟ್ರಿನಿಟಿ ಕಾಲೇಜಿನ ಫೆಲೋ ಆಗಿದ್ದ ಪ್ರೊ. ಜಿ.ಎಚ್. ಹಾರ್ಡಿ ಮತ್ತು ಕೇಂಬ್ರಿಡ್ಜ್ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ರಾಮಾನುಜನ್ ತಮ್ಮ ಗಣಿತೀಯ ಶೋಧನೆಗಳನ್ನು ತಿಳಿಸಬೇಕೆಂದು ಒತ್ತಾಯಿಸಿದರು. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿತು. ತಮ್ಮ ಮೊದಲ ಪತ್ರದಲ್ಲೇ ರಾಮಾನುಜನ್ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು. ಕ್ರಮೇಣ ಶ್ರೀನಿವಾಸನ್ ಕೇಂಬ್ರಿಡ್ಜ್ ಗೆ ಬಂದಿಳಿದರು. 1916ಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದ ರಾಮಾನುಜನ್ 1918ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯರಾದರು. ರಾಮಾನುಜನ್ ಅವರು ನಂಬರ್ ಥಿಯರಿ, ಅವಿಭಾಜ್ಯ ಸಂಖ್ಯೆಗಳು , ಗಣಿತದ ಸೂತ್ರಗಳು ಮತ್ತು ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ ನಡೆಸಿದ್ದರು.

ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿತ್ತು. ರಾಮಾನುಜಂ ಆಸ್ಪತ್ರೆಯಲ್ಲಿ ಅವರ ಕೊನೆಯ ದಿನಗಳಲ್ಲಿದ್ದಾಗ. ಅವರ ಸ್ನೇಹಿತ ಹಾರ್ಡಿ ಅವರನ್ನು ಭೇಟಿ ಮಾಡಿದ. ಮತ್ತು ಅವರು ತೆಗೆದುಕೊಂಡ ಟ್ಯಾಕ್ಸಿ ಸಂಖ್ಯೆಯಲ್ಲಿ 1729 ಸಂಖ್ಯೆ ಇದೆ ಎಂದು ಹೇಳಿದರು. ಆಗ ರಾಮಾನುಜಮ್ ಇದು ತುಂಬಾ ವಿಶಿಷ್ಟವಾದ ಸಂಖ್ಯೆ ಎಂದು ಹೇಳಿದರು. 

1729 = 1x1x1 + 12x12x12

1729 = 9 × 9 × 9 + 10x10x10

ಇದು 2 ಘನಗಳ ಮೊತ್ತವಾದ ಚಿಕ್ಕ ಸಂಖ್ಯೆ.

1729 ಅನ್ನು ರಾಮಾನುಜಮ್ ಮತ್ತು ಹಾರ್ಡಿ ಸಂಖ್ಯೆ ಎಂದೂ ಕರೆಯುತ್ತಾರೆ

ಉತ್ತಮ ವೈದ್ಯಕೀಯ ಸೌಲಭ್ಯ ಗಳ ಹೊರತಾಗಿಯೂ ಅವರು ಏಪ್ರಿಲ್ 26, 1920 ರಂದು ತಮ್ಮ 32 ವರ್ಷಗಳ ಸಣ್ಣ ವಯಸ್ಸಿನಲ್ಲೇ ಇಹ ಲೋಕವನ್ನು ತ್ಯಜಿಸಿದರು. 

ಅದೃಷ್ಟ ಮತ್ತು ಪರಿಶ್ರಮ

 


ಬೇರೊಬ್ಬರ ಅದೃಷ್ಟವನ್ನು ತನ್ನ ಪರಿಸ್ಥಿತಿಗೆ ಹೋಲಿಸುವುದು ಮಾನವನ ಸಹಜ ಗುಣವಾಗಿದೆ. ತನ್ನಲ್ಲಿರುವ ಒಳ್ಳೆಯ ಸಾಧ್ಯತೆಗಳನ್ನು ಅವಗಣಿಸಿ ಬೇರೊಬ್ಬರ ಬಗ್ಗೆ ಯೋಚನೆ ಮಾಡುವುದು ನಮ್ಮಲ್ಲಿರುವ ಒಂದು ಅವಗುಣವೇ ಸರಿ. ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಗಾದೆಯಂತೆ ಬೇರೊಬ್ಬರಲ್ಲಿರುವ ಅನುಕೂಲಗಳೇ ನಮಗೆ ಕಾಣುತ್ತವೆ.  ಅದೂ ನಾವು ಕಷ್ಟದಲ್ಲಿದ್ದಾಗ ಹೀಗಾಗುವುದು ಹೆಚ್ಚು. ಅದೃಷ್ಟ ನಮ್ಮ ಕಡೆ ಇಲ್ಲ ಎಂದು ಎಷ್ಟೋ ಜನ ಕೊರಗುತ್ತಾ ತಮ್ಮ ಅಮೂಲ್ಯವಾದ ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಅದೇ ಅವರು ತಮಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಬೇರೆಯವರಂತೆ ತಾವೂ ಕೂಡ ಒಳ್ಳೆಯ ಜೀವನ ನಡೆಸಬಹುದು. ಇಲ್ಲಿ ಅದೃಷ್ಟವೆಂಬುದು ಏನೂ ಇರುವುದಿಲ್ಲ. ಅವರವರ ಪರಿಶ್ರಮದ ಮೇಲೆ ಅವಲಂಬಿತವಾಗಿರುತ್ತದೆ.

ನಾವು ಪ್ರಸ್ತುತ ನೋಡುತ್ತಿರುವ ಎಷ್ಟೋ ಜನಪ್ರಿಯ ವ್ಯಕ್ತಿಗಳು ಶೂನ್ಯದಿಂದಲೇ ತಮ್ಮ ಜೀವನದ ಪಯಣವನ್ನು ಆರಂಭಿಸಿದ್ದರು ಎಂಬುದು ಗಮನಾರ್ಹ. ನಮ್ಮ ಕರ್ನಾಟಕದವರೇ ಆದ ಖ್ಯಾತ ಇಂಜಿನಿಯರ್ ವಿಶ್ವೇಶ್ವರಯ್ಯನವರು ಯಾವುದೇ ಅದೃಷ್ಟ ನಂಬಿ ಕೂಡಲಿಲ್ಲ. ಅವರು ಬೀದಿ ದೀಪದಲ್ಲಿ ಓದಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ಅವರ ಪರಿಶ್ರಮ ಅವರ ಕೈಹಿಡಿಯಿತು. ಹಾಗೇ ಖ್ಯಾತ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ  ದಿವಂಗತ ಅಬ್ದುಲ್ ಕಲಾಂ ಅವರು ಕೂಡ ದಿನಪತ್ರಿಕೆ ಹಂಚಿ ಅದರಿಂದ ಬಂದ ಹಣದಿಂದ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಪೋಖ್ರಾನ್ ಅಣು ಪರೀಕ್ಷೆಯಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಇವರೂ ಕೂಡ ಅದೃಷ್ಟವನ್ನು ನಂಬಿ ಕೂಡಲಿಲ್ಲ. ಇನ್ನು ಸಿನಿಮಾರಂಗಕ್ಕೆ ಬರುವುದಾದರೆ ಖ್ಯಾತ ಸಿನಿಮಾ ನಟ ರಜನಿಕಾಂತ್ ಕೂಡ ಒಬ್ಬ ಸಾಧಾರಣ ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. ಇಂದು ಅವರು ನಮ್ಮ ಭಾರತೀಯ ಸಿನಿಮಾರಂಗದ ದಿಗ್ಗಜರೇ ಆಗಿದ್ದಾರೆ. 

ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಕೂಡ ಖ್ಯಾತನಾಮರಾದವರೆಲ್ಲ ಅದೃಷ್ಟ ನಂಬಿ ಕೂತವರಲ್ಲ. ತಮ್ಮ ಬಡತನಕ್ಕೆ ಬೇರೆಯವರನ್ನು ದೂರುತ್ತಾ ಕೂಡಲಿಲ್ಲ. ಬದಲಿಗೆ ತಮ್ಮಲ್ಲಿರುವ ವಿದ್ಯೆ, ಕಲೆ ಇವುಗಳನ್ನು ನಂಬಿ ಮುಂದಡಿ ಇಟ್ಟರು. ಹಾಗೇ ಅವರವರ ರಂಗದಲ್ಲಿ ತಮ್ಮ ಪರಿಶ್ರಮದಿಂದ ಯಶಸ್ಸು  ಗಳಿಸಿದರು. ಅಷ್ಟೇ ಅಲ್ಲದೆ ತಮ್ಮ ಮುಂದಿನ ಪೀಳಿಗೆಗೆ ಮಾದರಿ ಕೂಡ ಆಗಿದ್ದಾರೆ. ಈ ಖ್ಯಾತನಾಮರೆಲ್ಲ ತಮ್ಮ ಬಡತನಕ್ಕೆ ಅದೃಷ್ಟವನ್ನು ಹಳಿದು ಹಾಗೇ ಇರುತ್ತಿದ್ದರೆ ಇಂದಿಗೆ ಯಶಸ್ಸು ಪಡೆಯಲು  ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಪರಿಶ್ರಮವೇ ಎಲ್ಲ ಯಶಸ್ಸಿನ ಮೂಲಮಂತ್ರವಾಗಿದೆ ಎನ್ನಬಹುದು.


-- ಸೀಮಾ ಕಂಚೀಬೈಲು 

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

 


ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು |


ರಾಜನ್ಯರಿಪು ಪರಶುರಾಮನಾಳಿದ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರ ವೃಂದದ ನಾಡು |


ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು

ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು ||


ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರ ನಾರಾಯಣನ ಬೀಡು ||   


                                                          - ಹುಯಿಲುಗೋಳ ನಾರಾಯಣ ರಾವ್

ಕನ್ನಡ ಸಾಹಿತ್ಯ ನಿಮಗೆಷ್ಟು ಗೊತ್ತು ?

1. "ಶ್ರೀನಿವಾಸ"  ಇದು ಯಾರ ಕಾವ್ಯನಾಮ

ಮಾಸ್ತಿ ವೆಂಕಟೇಶ್ ಅಯ್ಯಂಗಾರ

 

2.ರಗಳೆ ಕವಿ ಯಾರು?

ಹರಿಹರ

 

3. "ಕಾವ್ಯಾನಂದ" ಯಾರ ಕಾವ್ಯನಾಮ ?

ಡಾ. ಸಿದ್ಧಯ್ಯ  ಪುರಾಣಿಕ

 

4. "ಕವಿಚಕ್ರವರ್ತಿ" ಎಂಬ ಬಿರುದು ಯಾರದು ?

ರನ್ನ

 

5. ತುಘಲಕ್, ಹಯವದನ ಇವು ಯಾರ ನಾಟಕಗಳು ?

ಗಿರೀಶ್ ಕಾರ್ನಾಡ್

 

6. "ಕನ್ನಡದ ಕಣ್ವ" ಯಾರು ?

 ಶ್ರೀ ಬಿ ಎಂ ಶ್ರೀಕಂಠಯ್ಯ

 

7. ಹರಿಹರನ ಅಳಿಯ ಹಾಗೂ ಶಿಷ್ಯನಾದಂತಹ ಕವಿ ಯಾರು ?

ರಾಘವಾಂಕ

 

8. "ಕನ್ನಡದ ಕುಲಪುರೋಹಿತ" ಎಂದು ಯಾರನ್ನು ಕರೆಯಲಾಗಿದೆ ?

ಆಲೂರ ವೆಂಕಟರಾವ್

 

9. "ಕಡಲ ತೀರ ಭಾರ್ಗವ" ಯಾರು ?

ಶಿವರಾಮ ಕಾರಂತ

 

10. "ಪಕ್ಷಿ ಕಾಶಿ" ಯಾರ ಕೃತಿ ?

ಕುವೆಂಪು

 

 

 

 

 


ಇತರರೊಂದಿಗೆ ಹೋಲಿಕೆ ಬೇಡ


  ನಮ್ಮಲ್ಲಿ ಕೆಲವರಿರುತ್ತಾರೆ ಅವರಿಗೆ ಯಾವಾಗಲೂ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದೇ ಕೆಲಸ. ತರಗತಿಯಲ್ಲಿ ಪಕ್ಕ ಕುಳಿತವನಿಗೆ ಒಂದು ಅಂಕ ಜಾಸ್ತಿ ಬಂದಿದ್ದರಿಂದ ಹಿಡಿದು ಪ್ರತಿಯೊಂದಕ್ಕೂ ಚಿಕ್ಕ ಚಿಕ್ಕ ವಿಷಯಕ್ಕೂ ಇತರರೊಂದಿಗೆ ಹೋಲಿಸಿಕೊಂಡು ಒಳಗೊಳಗೇ ಕುಗ್ಗುತ್ತಾರೆ. ಇದು ಕೇವಲ ವಿದ್ಯಾರ್ಥಿ ಜೀವನಕ್ಕೆ ಮಾತ್ರವಲ್ಲ ಮುಂದೆ ಜೀವನವಿಡೀ ಪ್ರತಿಯೊಂದಕ್ಕೂ ಅನ್ವಯಿಸಲು ಪ್ರಾರಂಭವಾಗುತ್ತದೆ. ಅದು ಅವರ ಉದ್ಯೋಗವಿರಲಿ ಅಥವಾ ಸಾಮಾಜಿಕ ಸ್ಥಾನಮಾನವಿರಲಿ ಎಲ್ಲ ಕಡೆ ಈ ಹೊಲಿಕೆ ಮಾಡಿಕೊಳ್ಳುವ ಸ್ವಭಾವದಿಂದ ಅವರು ಸದಾ ಅತೃಪ್ತರಾಗಿ ಇರುವರು. ಹೋಲಿಕೆ ಮಾಡಿಕೊಳ್ಳುವುದರಿಂದ ನಕಾರಾತ್ಮಕ ಮನೋಭಾವ ಮೂಡುತ್ತದೆ. ನಾನು ದಡ್ಡ ನನ್ನಿಂದ ಏನೂ ಸಾಧ್ಯವಿಲ್ಲವೆಂಬ ಮನೋಭಾವ ಕೂಡ ಮೂಡುತ್ತದೆ. ಇದು ಕೀಳರಿಮೆಗೆ ದಾರಿ ಮಾಡಿ ಕೊಡುತ್ತದೆ. ಕೊನೆಗೆ ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನೆಲ್ಲ ಕಳೆದುಕೊಳ್ಳಬೇಕಾಗುತ್ತದೆ. 

ಟೆಡ್ಡಿ ರೋಸ್ವೆಲ್ಟ್ ಎಂಬ ಅಮೆರಿಕದ ಲೇಖಕ 'ಹೋಲಿಕೆ ಎನ್ನುವುದು ಸಂತೋಷದ ಕಳ್ಳತನ' ಎಂದು ಬಣ್ಣಿಸುತ್ತಾರೆ. ಅವರ ಪ್ರಕಾರ ನಮ್ಮನ್ನು ನಾವು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವುದರಿಂದ ನಮಗೇ ನಮ್ಮ ಬಗ್ಗೆ ಅಹಂಕಾರವೋ ಅಥವಾ ಕೀಳರಿಮೆಯೋ ಉಂಟಾಗುತ್ತದೆ. ಈ ಎರಡೂ ಕೂಡ ಒಳ್ಳೆಯದಲ್ಲ ಎನ್ನುತ್ತಾರೆ. 

ಇತರರ  ಜೊತೆ ನಮ್ಮನ್ನು ನಾವು ಹೋಲಿಕೆ ಮಾಡಿಕೊಳ್ಳುವ ಬದಲು, ನಮ್ಮ ನಿನ್ನೆಯನ್ನು ನಮ್ಮ ಇಂದಿನ ಜೊತೆ ಹೋಲಿಸಿಕೊಳ್ಳೋಣ. ನಿನ್ನೆಗಿಂತ ಇಂದು ನಾವು ಎಷ್ಟು ಬದಲಾಗಿದ್ದೇವೆ ಎಷ್ಟು ಸಕಾರಾತ್ಮಕವಾಗಿ ಇದ್ದೇವೆ ಅನ್ನುವುದನ್ನು ಅಳೆದುಕೊಳ್ಳೋಣ. ನಮ್ಮನ್ನು ನಾವು ತಿಳಿದುಕೊಳ್ಳೋಣ.  ಇದರಿಂದ ನಮ್ಮ ಇಂದಿನ ದಿನ ನಿನ್ನೆಗಿಂತ ಉತ್ತಮವಾಗಿರುತ್ತದೆ ಮತ್ತು ನಮ್ಮ ನಾಳೆಗಳು ಇನ್ನೂ ಉತ್ತಮವಾಗಿರುತ್ತವೆ.

ಸಮಯದ ಸದ್ಬಳಕೆ: ಇಲ್ಲಿರುವ ಪ್ರತಿಯೊಬ್ಬರಿಗೂ ಒಂದೊಂದು ವಿಶೇಷವಾದ ಪ್ರತಿಭೆ ಇದ್ದೆ ಇರುತ್ತದೆ. ಒಬ್ಬರು ಆಟದಲ್ಲಿ ಮುಂದೆ ಇದ್ದರೆ ಇನ್ನೊಬ್ಬರು ಪಾಠದಲ್ಲಿ ಮುಂದೆ ಇರುತ್ತಾರೆ.  ಎಲ್ಲರಿಗೂ ಎಲ್ಲ ವಿಷಯಗಳೂ ತಿಳಿದಿರಬೇಕು, ಜಾಣರಾಗಬೇಕು ಎಂಬ ನಿಯಮವಿಲ್ಲ. ಆದರೆ ಸಿಕ್ಕ ಅವಕಾಶವನ್ನು ನೀವು ಹೇಗೆ ಸದುಪಯೋಗ ಮಾಡಿಕೊಳ್ಳುತ್ತೀರಿ ಎಂಬುದು ನಿಮ್ಮ ಕೈಯಲ್ಲೇ ಇದೆ. ಒಬ್ಬ ಗೆಳೆಯನದ್ದು ಓದಿಯಾಯಿತು, ಮತ್ತೊಬ್ಬ ಗೆಳತಿಯದ್ದು ರಿವಿಷನ್ ಕೂಡ ಮುಗಿಯಿತು, ನನ್ನದು ಒಮ್ಮೆಯೂ ಓದಿ ಮುಗಿದಿಲ್ಲ ಎಂದು ಯೋಚಿಸುತ್ತಾ ಕುಳಿತರೆ ಏನೂ ಪ್ರಯೋಜನವಿಲ್ಲ. ಅದರಿಂದ ಸಮಯ ನಷ್ಟವೇ ಹೊರತು ಬೇರೇನೂ ಲಾಭವಿಲ್ಲ. ಆದ್ದರಿಂದ ಇತರರ ಬಗ್ಗೆ ಯೋಚನೆ ಬಿಟ್ಟು ನಿಮ್ಮೊಂದಿಗೆ ನೀವು ಸ್ಪರ್ಧೆಗಿಳಿಯಿರಿ. ಇವತ್ತು ಇಷ್ಟನ್ನು ಓದಿ ಮುಗಿಸುತ್ತೇನೆ, ನಾಳೆ ಅದಕ್ಕಿಂತ ಹೆಚ್ಚು ಓದಬೇಕು ಅಥವಾ ಈ ಪರೀಕ್ಷೆಯಲ್ಲಿ ಇಷ್ಟು ಅಂಕ ಬಂದಿದೆ, ಮುಂದಿನ ಪರೀಕ್ಷೆಯಲ್ಲಿ ಇಷ್ಟು ಅಂಕ ತೆಗೆಯಲೇಬೇಕು ಎಂದು ನಿರ್ಧರಿಸಿ ಕ್ರಮಬದ್ಧವಾಗಿ ಅಧ್ಯಯನ ನಡೆಸಿ. ಹೀಗೆ ಮಾಡಿದಾಗ ನಿಮ್ಮೊಳಗಿನ ಚೈತನ್ಯ ಹೆಚ್ಚುತ್ತದೆ. ಅದೇ ಸಾಧನೆಗೆ ಸ್ಫೂರ್ತಿಯಾಗುತ್ತದೆ. ಗೆಲುವನ್ನು ತಂದುಕೊಡುತ್ತದೆ. 

ಹೀಗೆ ಮಾಡಿ:

  • ಧನಾತ್ಮಕವಾಗಿ ಯೋಚಿಸಿ. 
  • ಬೇರೆಯವರ ಬಗ್ಗೆ ಯೋಚಿಸುವುದನ್ನು ಬಿಟ್ಟು ಇರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. 
  • ಸೋಲಿನಿಂದ ಕುಗ್ಗಬೇಡಿ, ಪಾಠ ಕಲಿತು ಮುಂದಡಿಯಿಡಿ. ಅದೇ ಗೆಲುವಿಗೆ ಮುನ್ನಡೆಯಾಗುತ್ತದೆ.



ನಮ್ಮ ಹಬ್ಬಗಳು

 ನಮ್ಮ ನಾಡಹಬ್ಬ ದಸರಾ. ಕರ್ನಾಟಕದಲ್ಲಿ ಈ ಹಬ್ಬವನ್ನು ನವರಾತ್ರಿಯ ಒಂಬತ್ತು ದಿನಗಳು ಮತ್ತು ವಿಜಯದಶಮಿ ಹೀಗೆ ಅದ್ಧೂರಿಯಾಗಿ ಹತ್ತುದಿನ ಆಚರಿಸಲಾಗುತ್ತದೆ. ಮಹಾನವಮಿಯ ಆಯುಧಪೂಜೆ, ಮೈಸೂರಿನ ಜಂಬೂಸವಾರಿ, ವಿಜಯದಶಮಿಯ ಶಮಿ ಅಥವಾ ಬನ್ನಿಯ ಪೂಜೆ ಇವೆಲ್ಲ ಈ ಹಬ್ಬದ ವಿಶೇಷತೆಗಳು. ಉತ್ತರ ಕರ್ನಾಟಕದಲ್ಲಿ ಬನ್ನಿಯನ್ನು ಬಂಗಾರವೆಂದು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಾರೆ. 

ದುರ್ಗಾಮಾತೆಯಿಂದ ಮಹಿಷಾಸುರನ ವಧೆ , ಪಾಂಡವರ ಅಜ್ಞಾತವಾಸದ ಅಂತ್ಯ, ರಾವಣನ ವಧೆ ಹೀಗೆ ಹಲವಾರು ಪೌರಾಣಿಕ ಕಥೆಗಳು ದಸರಾ ಹಬ್ಬದ ಜೊತೆಗೆ ಹೆಣೆದುಕೊಂಡಿವೆ.

ನಮ್ಮ ದೇಶದ ಇತರ ರಾಜ್ಯಗಳ ಹಬ್ಬಗಳ ಬಗ್ಗೆ ತಿಳಿದುಕೊಳ್ಳೋಣ. 


1.ಗಣಗೌರ್ ಪೂಜಾ ಯಾವ ರಾಜ್ಯದಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತದೆ.?

ರಾಜಸ್ಥಾನ್

2. ಸೂರ್ಯನನ್ನು ಪೂಜಿಸುವ ಬಿಹಾರ್ ರಾಜ್ಯದ ಹಬ್ಬ ಯಾವುದು?

ಛಟ್ ಪೂಜಾ

3 ಲೋಹಡಿ ಯಾವ ರಾಜ್ಯದ ಹಬ್ಬವಾಗಿದೆ ?

ಪಂಜಾಬ್ 

4 ಹಾರ್ನ್ ಬಿಲ್ ಫೆಸ್ಟಿವಲ್ ಅನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?

ನಾಗಾಲ್ಯಾಂಡ್

5. ಪಂಜಾಬಿನ ಹೊಸ ವರ್ಷ ಮತ್ತು  ಸುಗ್ಗಿಯ ಹಬ್ಬ ಯಾವುದು?

ಬೈಸಾಖಿ

6. ಕಂಬಳ ಯಾವ ರಾಜ್ಯದ ವಿಶೇಷತೆ ಆಗಿದೆ?

ಕರ್ನಾಟಕ

7. ದೀಪಾವಳಿಯ ಪ್ರತಿಪದವನ್ನು ಉತ್ತರಪ್ರದೇಶದಲ್ಲಿ ಯಾವ ಹೆಸರಿನಿಂದ ಆಚರಿಸುವರು?

ಗೋವರ್ಧನ ಪೂಜಾ

8. ಮಹಾರಾಷ್ಟ್ರ ದಲ್ಲಿ ಹೊಸ ವರ್ಷವನ್ನು (ಯುಗಾದಿ) ಯಾವ ಹೆಸರಿನಿಂದ ಆಚರಿಸುತ್ತಾರೆ?

ಗುಡಿ ಪಾಡ್ವ

9. ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಜರಗುವ ಸೂರಜ್ ಕುಂಡ ಜಾತ್ರೆ ಯಾವ ರಾಜ್ಯದಲ್ಲಿ ನಡೆಯುತ್ತದೆ?

ಹರಿಯಾಣ

10.ಜಗನ್ನಾಥ್ ರಥಯಾತ್ರೆಯ ರಥಗಳನ್ನು ಮಾಡಲು ಪ್ರಾರಂಭಿಸುವ ದಿನ ಯಾವುದು?

ಅಕ್ಷಯ ತೃತೀಯ

11.ಬಂಗಾಳದಲ್ಲಿ ಜರಗುವ ದುರ್ಗಾಪೂಜೆ ಯಲ್ಲಿ ಸಿಂಧೂರಖೆಲಾ ಯಾವ ದಿನ ಇರುತ್ತದೆ?

ದಶಮಿ

12. ಬಿಹು ಯಾವ ರಾಜ್ಯದ ಹಬ್ಬವಾಗಿದೆ?

ಅಸ್ಸಾಂ

13. ಮಹಾಬಲಿ ಅಥವಾ ಬಲಿ ಚಕ್ರವರ್ತಿ ಗಾಗಿ ಆಚರಿಸಲ್ಪಡುವ ಹಬ್ಬ ಯಾವುದು?

ಓಣಂ

14. ಶ್ರಾವಣ ದಲ್ಲಿ ನಡೆಯುವ ಕಾವಡ್ ಯಾತ್ರಾ ದಲ್ಲಿ ಯಾವ ನದಿಯ ನೀರನ್ನು ತಂದು ಶಿವನಿಗೆ ಅಭಿಷಕ ಮಾಡುವರು?

ಗಂಗಾನದಿ

15. ತೆಲಂಗಾಣ ರಾಜ್ಯದ ನಾಡಹಬ್ಬ ಯಾವುದು?

ಬತುಕಮ್ಮ ಪಂಡುಗ

ಅಪ್ರತಿಮ ದೇಶಭಕ್ತ- ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೀವವನ್ನೇ ಅರ್ಪಿಸಿದ ಕ್ರಾಂತಿಕಾರಿಗಳಲ್ಲಿ ಕೇಳಿ ಬರುವ ಪ್ರಮುಖ ಹೆಸರೆಂದರೆ ಭಗತ್ ಸಿಂಗ್. ಭಗತ್ ಸಿಂಗ್ ಹುಟ್ಟಿದ್ದು ಪಂಜಾಬ್ ಪ್ರಾಂತದ ರಾಯಲ್ಪುರ ಎಂಬ ಜಿಲ್ಲೆಯ ಬಂಗಾ ಎಂಬ ಒಂದು ಹಳ್ಳಿಯಲ್ಲಿ. ಬ್ರಿಟಿಷರ ಕೈಯಿಂದ ಭಾರತವನ್ನು ಬಿಡುಗಡೆ ಮಾಡಲು ಭಗತ್ ಸಿಂಗ್ ಜನನಕ್ಕೂ ಮುಂಚೆಯೇ ಇವರ ವಂಶದ ಹಲವಾರು ವೀರರು ಹೋರಾಡಿದ್ದರು. ಅವರಲ್ಲಿ ಭಗತ್ ಸಿಂಗ್ ತಂದೆಯಾದ ಕಿಶನ್ ಸಿಂಗ್ ಹಾಗೂ ಚಿಕ್ಕಪ್ಪಂದಿರ ಅಜಿತ್ ಸಿಂಗ್ ಮತ್ತು ಸ್ವರ್ಣ ಸಿಂಗ್ ಎಂಬುವರು ಕೂಡ ಹೋರಾಡಿದ್ದರು. ಈ ಮೂವರನ್ನು ಸರ್ಕಾರ ಸೆರೆಗೆ ಹಾಕಿತ್ತು. ಆಗ ಭಾರತದಲ್ಲಿ ಎಲ್ಲ ಕಡೆ ಇಂಥ ಕ್ರಾಂತಿ ಹಬ್ಬಿತ್ತು. ಸ್ವಾತಂತ್ರ್ಯ ಪಡೆಯಬೇಕು ಎಂಬ ಹಠ ಜನಗಳಲ್ಲಿ ತುಂಬಿತ್ತು.


ಇಂಥ ಸಮಯದಲ್ಲಿ ಅಂದರೆ 1907ನೇ ಸೆಪ್ಟೆಂಬರ್ 28ರಂದು ಭಗತ್ ಸಿಂಗ್ ಹುಟ್ಟಿದ. ತಂದೆ ಕಿಶನ್ ಸಿಂಗ್ ಮತ್ತು ತಾಯಿ ವಿದ್ಯಾವತಿ. ಅದೇ ಸಮಯದಲ್ಲಿ ಸೆರೆಯಿಂದ ತಂದೆ ಹಾಗೂ ಚಿಕ್ಕಪ್ಪಂದಿರ ಬಿಡುಗಡೆಯಾಗುತ್ತಿತ್ತು. ಹೀಗಾಗಿ ಭಾಗ್ಯವಂತ ಮಗು ಎಂಬ ಅರ್ಥದಲ್ಲಿ ಆ ಮಗುವಿಗೆ 'ಭಗತ್ ಸಿಂಗ್' ಎಂದು ಹೆಸರಿಟ್ಟರು. ಭಗತ್ ಸಿಂಗ್ ತಾಯಿಯ ಕಣ್ಮಣಿಯಾಗಿ ಬೆಳೆಯತೊಡಗಿದ.

ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ಭಗತ್ ಸಿಂಗನಿಗೆ ವಿದ್ಯಾಭ್ಯಾಸವೆಂದರೆ ಮೊದಲಿನಿಂದಲೂ ಆಸಕ್ತಿ ಇತ್ತು. ಹಾಗೂ ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತಿದ್ದ. ಭಗತ್ ನಾಲ್ಕನೇ ತರಗತಿಯಲ್ಲಿದ್ದಾಗಲೇ "ನಾನು ದೊಡ್ಡವನಾದ ಮೇಲೆ ಇಂಗ್ಲಿಷರನ್ನು ಭಾರತದಿಂದ ಓಡಿಸುತ್ತೇನೆ" ಎಂದು ಹೇಳುತ್ತಿದ್ದ. ಹೀಗೆ ಚಿಕ್ಕಂದಿನಿಂದಲೇ ಅವನ ರಕ್ತದಲ್ಲಿ ದೇಶಪ್ರೇಮ ಹರಿಯುತ್ತಿತ್ತು. ಮಾಧ್ಯಮಿಕ ಶಾಲೆಯ ಓದನ್ನು ಮುಗಿಸುವಷ್ಟರಲ್ಲಿ ತನ್ನ ಮನೆತನದ ಕ್ರಾಂತಿಕಾರರ ವಿಚಾರಗಳನ್ನೆಲ್ಲ ತಿಳಿದುಕೊಂಡಿದ್ದ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಾನು ಹೋರಾಡಬೇಕು ಎಂದು ಮನಸ್ಸಿನಲ್ಲೇ ಗಟ್ಟಿಗೊಳ್ಳುತ್ತಿದ್ದ. ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ನಂತರ ಲಾಹೋರಿನಲ್ಲಿ ಒಂದು ಮಾಧ್ಯಮಿಕ ಶಾಲೆಗೆ ಸೇರಲು ಬಂದ. ಇಂಗ್ಲಿಷರ ಭಕ್ತರು ನಡೆಸುತ್ತಿದ್ದ ಶಾಲೆಗೆ ಸೇರಿಸಲು ಒಪ್ಪದೇ ಖಾಸಗಿ ಶಾಲೆಯೊಂದರಲ್ಲಿ ಭಗತ್ ಸಿಂಗನ ಓದು ಮುಂದುವರೆಯಿತು. ಉತ್ಸಾಹದಿಂದ ಪಾಠಗಳನ್ನು ಕಲಿಯತೊಡಗಿದ. ಇವನ ಚುರುಕು ಬುದ್ಧಿಗೆ ಅಧ್ಯಾಪಕರೇ ಅಚ್ಚರಿಪಡುತ್ತಿದ್ದರು. ಎಲ್ಲ ವಿಷಯಗಳಲ್ಲೂ ಹೆಚ್ಚಿನ ಅಂಕ ಬರುತ್ತಿದ್ದವು. ಆದರೆ ಇಂಗ್ಲಿಷಿನಲ್ಲಿ ಮಾತ್ರ ಕಡಿಮೆ ಅಂಕ ಪಡೆಯುತ್ತಿದ್ದ. ಇದಕ್ಕೆ ಮೊದಲಿನಿಂದ ಇಂಗ್ಲಿಷರ ಬಗ್ಗೆ ಇದ್ದ ಕೋಪವೇ ಕಾರಣವಾಗಿತ್ತು.

1919ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಯಿತು. ಈ ಘಟನೆಯಿಂದ ಹನ್ನೆರಡು ವರ್ಷದ ಬಾಲಕನ ಮನಸ್ಸು ಕಲಕಿ ಹೋಯಿತು. ಭಗತ್ ಹತ್ಯಾಕಾಂಡ ನಡೆದ ಸ್ಥಳಕ್ಕೆ ನುಸುಳಿ ಒಳಗೆ ಹೋಗಿ ಭಾರತೀಯರ ರಕ್ತದಿಂದ ನೆನೆದ ಮಣ್ಣನ್ನು ತಂದು ಸೀಸೆಯಲ್ಲಿ ತುಂಬಿ ಮನೆಯ ದೇವರ ಮುಂದೆ ಇಟ್ಟು ಪೂಜೆ ಮಾಡುತ್ತಿದ್ದ. ಒಂಬತ್ತನೆಯ ತರಗತಿಗೆ ಬರುವಷ್ಟರಲ್ಲಿ ಅಂದರೆ ತನ್ನ ಹದಿಮೂರನೇ ವರ್ಷದಲ್ಲೇ ಶಾಲೆಯನ್ನು ಬಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕಿಳಿದ. ಗಾಂಧೀಜಿಯವರ ಕೆಲವು ನಡೆಗಳಿಂದ ಅಹಿಂಸೆ ಮತ್ತು ಅಸಹಕಾರ ಚಳವಳಿಗಳಲ್ಲಿ ನಂಬಿಕೆಯನ್ನು ಕಳೆದುಕೊಂಡು ಕ್ರಾಂತಿಕಾರಿಯಾಗಿ ಬದಲಾದ. 

ಕ್ರಾಂತಿಕಾರಿಗಳ ಸಭೆಗೆ ದೆಹಲಿಗೆ ಬಂದ ಭಗತ್ ಸಿಂಗನಿಗೆ ಮತ್ತೊಬ್ಬ ಕ್ರಾಂತಿಕಾರಿ ಯುವಕ ಚಂದ್ರಶೇಖರ ಆಜಾದನ ಪರಿಚಯವಾಯಿತು. ಇವರ ಕ್ರಾಂತಿಯ ಚಟುವಟಿಕೆಗಳು ಹೆಚ್ಚಾದವು. ಕಲ್ಕತ್ತಗೆ ಹೋಗಿ ಬಾಂಬ್ ತಯಾರಿಕೆಯನ್ನು ಕಲಿತ. ಜೊತೆಗೆ ಜತೀಂದ್ರನಾಥ ದಾಸ್ ಎಂಬ ಕ್ರಾಂತಿಕಾರಿಯ ಬಳಿ ಬಾಂಬ್ ತಯಾರಿಕೆಯ ರಹಸ್ಯವನ್ನು ಕಲಿತುಕೊಂಡ. ಆಗ್ರಾದಲ್ಲಿ ಬಾಂಬ್ ತಯಾರಿಕೆಯ ಕಾರ್ಖಾನೆಯನ್ನು ಗುಪ್ತವಾಗಿ ಸ್ಥಾಪಿಸಿದರು. ಹಣಕ್ಕಾಗಿ ಕೆಲವೊಮ್ಮೆ ಸರ್ಕಾರಿ ಕಚೇರಿಗಳನ್ನು ಲೂಟಿ ಮಾಡುತ್ತಿದ್ದರು. 

1928ರ ಫೆಬ್ರವರಿಯಲ್ಲಿ ನಡೆದ ಸೈಮನ್ ಕಮಿಷನ್ ವಿರುದ್ಧದ ಪ್ರತಿಭಟನೆಯಲ್ಲಿ ಲಾಲಾ ಲಜಪತರಾಯ್ ಅವರಿಗೆ ಸ್ಯಾಂಡರ್ಸ್ ಎಂಬ ಪೊಲೀಸ್ ಅಧಿಕಾರಿ ಕೊಟ್ಟ ಪೆಟ್ಟಿನಿಂದ ಅವರು ತೀರಿಕೊಂಡರು. ಸೇಡು ತೀರಿಸಿಕೊಳ್ಳಬೇಕೆಂದು ಭಗತ್ ಸಿಂಗ್, ರಾಜಗುರು ಹಾಗೂ ಜಯಗೋಪಾಲ್ ಈ ಮೂರು ಜನ ಸೇರಿ ಸಾಂಡರ್ಸ್ ನ ಮೇಲೆ ಗುಂಡು ಹಾರಿಸಿ ಸಾಯಿಸಿದರು. ನಂತರ ಭಗತ್ ಸಿಂಗ್ ರಾಜಗುರು ಮತ್ತು ಚಂದ್ರಶೇಖರ ಆಜಾದ್ ಮೂವರು ಲಾಹೋರಿನಿಂದ ತಮ್ಮ ವೇಷ ಮರೆಸಿ ತಪ್ಪಿಸಿಕೊಂಡರು.

1929ರ ಏಪ್ರಿಲ್ 8ರಂದು ದೇಶದ ಹಿತಕ್ಕೆ ತೊಂದರೆ ಆಗಬಹುದಾದಂತಹ ಎರಡು ಶಾಸನಗಳನ್ನು ಶಾಸನ ಸಭೆಯಲ್ಲಿ ಇಂಗ್ಲಿಷ್ ಸರ್ಕಾರ ಇಡಲು ಬಯಸಿತು. ಈ ಸಭೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಆದರೆ ಸರ್ಕಾರದ ಗಮನ ಸೆಳೆಯುವಂತೆ ಮಾಡಲು ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ತ ಬಾಂಬ್ ಗಳನ್ನು ಸಿಡಿಸಿ ಸೆರೆಯಾದರು. ಈ ಘಟನೆಯ ನಂತರ ಸರ್ಕಾರಕ್ಕೆ ಲಾಹೋರಿನ ಬಾಂಬ್ ಕಾರ್ಖಾನೆ ಹಾಗೂ ಸಹರಾನ್ ಪುರದ ದೊಡ್ಡ ಬಾಂಬ್ ಕಾರ್ಖಾನೆಯೂ ಸಿಕ್ಕಿಬಿತ್ತು. ಭಗತ್ ಸಿಂಗ್ ಮತ್ತು ಸಂಗಡಿಗರನ್ನು ಲಾಹೋರಿನ ಜೈಲಿನಲ್ಲಿಟ್ಟರು. ಅಪರಾಧಿಗಳ ವಿಚಾರಣೆ ಆರಂಭವಾಯಿತು. ಆಗ ಜೈಲಿನಲ್ಲಿದ್ದ ರಾಜಕೀಯ ಕೈದಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಯಾವ ವ್ಯವಸ್ಥೆಗಳೂ ಚೆನ್ನಾಗಿರಲಿಲ್ಲ. ಇದರ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಇದಾದ ಎರಡು ತಿಂಗಳ ನಂತರ ಜೈಲಿನ ವ್ಯವಸ್ಥೆ ಸರಿಯಾಯಿತು.

ವಿಚಾರಣೆ ನಡೆದು ಕೊನೆಗೂ ತೀರ್ಪು ಹೊರಬಿತ್ತು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಗಲ್ಲಿನ ಶಿಕ್ಷೆ, ಉಳಿದ ಕೆಲವರಿಗೆ ಜೀವಾವಧಿ ಜೈಲು ಶಿಕ್ಷೆ. ಮತ್ತೆ ಕೆಲವರಿಗೆ ಆರು, ಏಳು, ಹತ್ತು ವರ್ಷಗಳ ಜೈಲುವಾಸವಾಯಿತು. ಭಗತ್ ಸಿಂಗನ ಮರಣದಂಡನೆಯನ್ನು ಬದಲಾಯಿಸಲು ಸಾವಿರಾರು ಮನವಿಗಳು ಬಂದವು. ಆದರೂ ಶಿಕ್ಷೆ ಬದಲಾಗಲಿಲ್ಲ.1931ನೇ ಮಾರ್ಚ್ 24ರಂದು ಗಲ್ಲಿಗೇರಿಸಬೇಕೆಂದು ನಿಶ್ಚಯವಾಯಿತು. ಆದರೆ ಅದಕ್ಕೂ ಒಂದು ದಿನ ಮೊದಲೇ ಅಂದರೆ 23ರಂದು ಸಂಜೆಯೇ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಗಲ್ಲಿಗೇರಿಸಿದರು. ಮೂವರು ನೇಣಿನ ಹಗ್ಗಕ್ಕೆ ಮುತ್ತು ಕೊಟ್ಟು ಕೊರಳಿಗೆ ಹಾಕಿಕೊಂಡರು. ಭಾರತ ಮಾತೆಯ ಹೆಸರನ್ನು ಘೋಷಿಸುತ್ತಾ ಪ್ರಾಣ ಬಿಟ್ಟರು. ಮೂವರು ಸ್ವಾತಂತ್ರ್ಯ ವೀರರ ಕೊನೆ ಹೀಗಾಯಿತು. 

ಸರ್ಕಾರವು ಹುತಾತ್ಮರ ಶವಗಳನ್ನು ಕುಟುಂಬಕ್ಕೆ ಕೊಡದೆ ಸಟ್ಲೇಜ್ ನದಿಯ ದಂಡೆಯ ಮೇಲೆ ಸುಟ್ಟು ಬಿಟ್ಟಿದ್ದರು. ಸುಳಿವು ತಿಳಿದು ಬಂದ ಸಾವಿರಾರು ಜನ ಅವರ ಬೂದಿಯನ್ನೇ ಕೈಗೆತ್ತಿಕೊಂಡು ಅತ್ತರು. ಹುತಾತ್ಮ ಸರ್ದಾರ್ ಭಗತ್ ಸಿಂಗನ ಮೇಲೆ ಜನ ನೂರಾರು ವೀರ ಗೀತೆಗಳನ್ನು ಕಟ್ಟಿ ಹಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣವನ್ನೇ ಅರ್ಪಿಸಿದ ಅವರ ಗುಣಗಾನ ಮಾಡಿದರು. ಅವನ ಧೈರ್ಯ, ಸಾಹಸ, ದೇಶ ಭಕ್ತಿಗಳು ನಮ್ಮ ಈಗಿನ ತರುಣರಿಗೆ ಮಾರ್ಗದರ್ಶಿಯಾಗಿವೆ.

- ಸೀಮಾ ಕಂಚಿಬೈಲು 

ಈ ಮಹಾನಾಯಕರ ಗುರುಗಳು ಯಾರು?

 ಶಿಕ್ಷಕರ ದಿನಾಚರಣೆಯ ಶುಭಾಶಯಗಳು 

ಎಲ್ಲರ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ.  ಮಹಾನ್ ಸಾಧಕರ ಹಿಂದೆ ಒಬ್ಬ ಪ್ರಭಾವಿ ಗುರು ಇರುತ್ತಾನೆ. ನಾವು ದೇವರೆಂದು ಪೂಜಿಸುವವರಿಗೂ ಗುರುಗಳು ಇದ್ದಾರೆ ಎಂದರೆ ಗುರುವಿನ ಸ್ಥಾನ ಎಷ್ಟು ದೊಡ್ಡದು, ಅಲ್ಲವೇ ? ಬನ್ನಿ ಈ ಮಹಾನಾಯಕರ ಗುರುಗಳು ಯಾರು ತಿಳಿದು ಕೊಳ್ಳೋಣ.  

  1. ಶ್ರೀ ರಾಮನ ಗುರು = ಮಹರ್ಷಿ ವಶಿಷ್ಠ 
  2. ಶ್ರೀ ಕೃಷ್ಣನ ಗುರು = ಸಾಂದೀಪನಿ ಮಹರ್ಷಿಗಳು 
  3. ಕೌರವರು ಹಾಗೂ ಪಾಂಡವರು = ಕೃಪಾಚಾರ್ಯರು ಹಾಗೂ ದ್ರೋಣಾಚಾರ್ಯರು 
  4. ಭೀಷ್ಮ = ಪರಶುರಾಮ 
  5. ಏಕಲವ್ಯ = ದ್ರೋಣಾಚಾರ್ಯರು (ಅಪ್ರತ್ಯಕ್ಷವಾಗಿ)
  6. ಕರ್ಣ = ಪರಶುರಾಮ 
  7. ಶಿವಾಜಿ ಮಹಾರಾಜ = ದಾದೋಜೀ ಕೊಂಡದೇವ್ , ಸಮರ್ಥ್ ರಾಮದಾಸರು 
  8. ಸ್ವಾಮಿ ವಿವೇಕಾನಂದ = ರಾಮಕೃಷ್ಣ ಪರಮಹಂಸರು 
  9. ಶಂಕರಾಚಾರ್ಯರು  = ಗೋವಿಂದ ಭಗವತ್ಪಾದರು 
  10. ಬ್ರಹ್ಮ ಚೈತನ್ಯ ಮಹಾರಾಜರು = ತುಕಮಾಯಿ  
  11. ಪರಮಹಂಸ ಯೋಗಾನಂದ = ಸ್ವಾಮಿ ಯುಕ್ತೇಶ್ವರ ಮಹಾರಾಜ
  12. ಸಂತ  ಶಿಶುನಾಳ ಷರೀಫ್ = ಗೋವಿಂದ ಭಟ್ಟರು 
  13. ಚಂದ್ರಗುಪ್ತ ಮೌರ್ಯ = ಚಾಣಕ್ಯ 
  14. ಹರಿಹರ ಬುಕ್ಕರು = ವಿದ್ಯಾರಣ್ಯರು 
  15. ಹೊಯ್ಸಳ ದೊರೆ ವಿಷ್ಣುವರ್ಧನ = ರಾಮಾನುಜಾಚಾರ್ಯರು 
  16. ಶ್ರೀನಿವಾಸ್ ರಾಮಾನುಜನ್ ಅವರ ಮಾರ್ಗದರ್ಶಕರು = ಜಿ ಎಚ್ ಹಾರ್ಡಿ 
  17. ಅಲೆಕ್ಸಾಂಡರ್ ನ ಗುರು = ಅರಿಸ್ಟಾಟಲ್ 
  18. ಅರಿಸ್ಟಾಟಲ್ ನ ಗುರು = ಪ್ಲೇಟೋ 
  19. ಹೆಲೆನ್ ಕೆಲ್ಲೆರ್ = ಆನ್ ಸುಲಿವನ್ 
  20. ಪಿ ಟಿ ಉಷಾ = ಎಂ ನಂಬಿಯಾರ್ 
  21. ಸಚಿನ್ ತೆಂಡುಲ್ಕರ್  ಅವರ  ತರಬೇತುದಾರರು = ರಮಾಕಾಂತ ಅಚ್ರೆಕರ್ 
  22. ಎಂ ಎಸ್ ಧೋನಿ = ಕೇಶವ ರಾಜನ್ ಬ್ಯಾನರ್ಜಿ 
  23. ಪಿ ವಿ ಸಿಂಧು ಅವರ ತರಬೇತುದಾರರು= ಪುಲ್ಲೇಲ ಗೋಪಿಚಂದ 
  24. ಸೈನಾ ನೆಹವಾಲ್ ಅವರ ತರಬೇತುದಾರರು = ಪುಲ್ಲೇಲ ಗೋಪಿಚಂದ
  25. ಗೀತಾ ಫೋಘಾಟ್  ಮತ್ತು ಬಬಿತಾ ಫೋಘಾಟ್ = ಮಹಾವೀರ ಸಿಂಗ್ ಫೋಘಾಟ್ 




ನಮ್ಮ ಪುರಾಣಗಳು ನಿಮಗೆಷ್ಟು ಗೊತ್ತು?

 1. ಗಣೇಶನಿಗೆ ವರ್ಜ್ಯವಾದ ಯಾವ ಪತ್ರ(ಎಲೆ)ವನ್ನು ಗಣೇಶ ಚತುರ್ಥಿಯಂದು ಮಾತ್ರ ಅರ್ಪಿಸಲಾಗುತ್ತದೆ? 

2. ರಾಮನ ಧನಸ್ಸಿನ ಹೆಸರು ಏನು ?

3. ವಾಲ್ಮೀಕಿಯ  ಮೊದಲ ಹೆಸರು ಏನು ? 

4. ಸತಿಯ ತಂದೆಯಾದ ದಕ್ಷ ಪ್ರಜಾಪತಿಯ ರಾಜಧಾನಿ ಯಾವುದಾಗಿತ್ತು?

5. ತ್ರಿಪುರಾಂತಕಾರಿ ಎಂದು ಯಾರನ್ನು ಕರೆಯಲಾಗುತ್ತದೆ ? 

6. ದಶರಥ ಮತ್ತು ಕೌಸಲ್ಯೆಯ ಮಗಳ ಹೆಸರೇನು?

7. ಕೃಷ್ಣನ ಮಗನಾದ ಸಾಂಬನ ತಾಯಿ ಯಾರು?

8. ಮಹಾಭಾರತದ ಮೂಲ ಹೆಸರು ಏನು ? 

9 ಮಹಾಭಾರತದಲ್ಲಿ ವ್ಯಾಸನಿಂದ ದಿವ್ಯ ದೃಷ್ಟಿಯನ್ನು ಪಡೆದವರು ಯಾರು ?

10. ಪುರಂಧರ ಯಾರ ಹೆಸರು?

11 ರಾಮಾಯಣದಲ್ಲಿ ಮಾಯಾಜಿಂಕೆಯಾಗಿ ವೇಷ ಮರೆಸಿಕೊಂದವರು ಯಾರು ? 

12. ಜನಕನ ರಾಜಧಾನಿ ಯಾವುದು?

13. ಭರತ ಚಕ್ರವರ್ತಿ ಯಾರ ಮಗ ?

14. ವೃಷಕೇತು ಯಾರು ?

15. ಲಕ್ಷ್ಮಣನನ್ನು ಯಾರ ಅವತಾರವೆನ್ನಲಾಗುತ್ತದೆ ?







ಸರಿ ಉತ್ತರಗಳು : 

 1. ತುಳಸಿ

2. ಕೋದಂಡ 

3 ರತ್ನಾಕರ

4. ಕಂಖಲ

5. ಶಿವ 

6. ಶಾಂತಾ 

7. ಜಾಂಬವತಿ 

8. ಜಯ ಸಂಹಿತ 

9. ಸಂಜಯ 

10. ಇಂದ್ರ 

11. ಮಾರೀಚ

12. ಮಿಥಿಲಾ 

13. ದುಷ್ಯಂತ ಮತ್ತು ಶಕುಂತಲೆ

14. ಕರ್ಣನ ಮಗ 

15. ಆದಿಶೇಷ 


ಸ್ವಾತಂತ್ರ್ಯ ದಿನಾಚರಣೆಯ ರಸಪ್ರಶ್ನೆಗಳು

 1. ನಮ್ಮ ರಾಷ್ಟ್ರಗೀತೆಯನ್ನು ಅಧಿಕೃತವಾಗಿ ಅಂಗಿಕರಿಸಿದ ವರ್ಷ ಯಾವುದು ?

a  1947

b 1942

c 1950

2. ಲೋಕಹಿತವಾದಿ ಎಂದು ಯಾರನ್ನು ಕರೆಯಲಾಗುತ್ತದೆ ?

a  ಗೋಪಾಲ್ ಕೃಷ್ಣಾ ಗೋಖಲೆ 

b ಗೋಪಾಲ ಹರಿ ದೇಶಮುಖ 

c  ವಿನಾಯಕ ದಾಮೋದರ್ ಸಾವರ್ಕರ್ 

3.ನಮ್ಮ ರಾಷ್ಟ್ರೀಯ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?

a  ಭಿಕಾಜಿ ಕಾಮಾ 

b ಅನ್ನಿ ಬೆಸಂಟ್

ಪಿಂಗಳಿ ವೆಂಕಯ್ಯ

4. 1957ರ ಸಿಪಾಹಿ ದಂಗೆಯನ್ನು "ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ" ಎಂದು ಕರೆದವರು ಯಾರು?

a ಬಾಲ ಗಂಗಾಧರ್ ತಿಲಕ 

b ರಬೀಂದ್ರನಾಥ್ ಟಾಗೋರ್ 

c ವಿನಾಯಕ ದಾಮೋದರ್ ಸಾವರ್ಕರ್ 

5ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯು ಯಾವ ವರ್ಷದಲ್ಲಿ ಕೊನೆಗೊಂಡಿತು?

a. 1947

 b 1858

 c 1857

6. ಫಾರ್ವರ್ಡ್ ಬ್ಲಾಕ್ ನ್ನು ಸ್ಥಾಪಿಸಿದವರು ಯಾರು?

a  ಮೋತಿಲಾಲ್ ನೆಹರು 

b ಚಂದ್ರಶೇಖರ್ ಆಜಾದ್ 

c ಸುಭಾಷ್ ಚಂದ್ರ ಬೋಸ್ 

7. ಭಗತ್ ಸಿಂಗ್ ಹುಟ್ಟಿದ ವರ್ಷಯಾವುದು ?

a  1907

b 1908

c  1923

8. 1922 ರ ಯಾವ ಘಟನೆ ಅಸಹಕಾರ ಚಳುವಳಿಯನ್ನು ಹಿಂದಕ್ಕೆ ಪಡೆಯಲು ಕಾರಣವಾಯಿತು ?

a ಜಲಿಯನ್ ವಾಲಾ  ಬಾಗ್ ಹತ್ಯಾಕಾಂಡ 

b ಚೌರಿ ಚೌರ ಘಟನೆ 

c ಕಾಕೋರಿ ರೈಲು ದರೋಡೆ 

9. ಯಾವಾಗ "ವಂದೇ ಮಾತರಂ"ಅನ್ನು  ಮೊದಲ ಬಾರಿಗೆ ಹಾಡಲಾಯಿತು?

a  1896 ರ ಕಾಂಗ್ರೆಸ್ ಅಧಿವೇಶನ 

b 1911 ರ ಕಾಂಗ್ರೆಸ್ ಅಧಿವೇಶನ 

c  1921 ರ ಕಾಂಗ್ರೆಸ್ ಅಧಿವೇಶನ 

10. ಅಸಹಕಾರ ಚಳುವಳಿ ಪ್ರಾರಂಭವಾದ ದಿನದಂದು  ( 1 ಆಗಸ್ಟ 1920) ನಿಧಾನ ಹೊಂದಿದ ಸ್ವತಂತ್ರ ಸೇನಾನಿ ಯಾರು ?

a ಚಿತ್ತರಂಜನ್ ದಾಸ್ 

b ಲೋಕಮಾನ್ಯ ಬಾಲ ಗಂಗಾಧರ ತಿಲಕ

c ಚಂದ್ರ ಶೇಖರ್ ಆಜಾದ್ 








ಸರಿ ಉತ್ತರಗಳು: 

1. c 1950  ( 24 ಜನೇವರಿ 1950)

2. b ಗೋಪಾಲ ಹರಿ ದೇಶಮುಖ್ 

3. c ಪಿಂಗಳಿ ವೆಂಕಯ್ಯ

4. c ವಿನಾಯಕ ದಾಮೋದರ್ ಸಾವರ್ಕರ್ (ಭಾರತೀಯ ಇತಿಹಾಸಗಾರ ಹಾಗು ವಿದ್ವಾಂಸ ವಿ. ಡಿ ಸರ್ವಕರ್ ತಮ್ಮ 1857' ಭಾರತ ಸ್ವಾತಂತ್ರ್ಯ ಸಂಗ್ರಾಮ' ಎಂಬ ಕೃತಿಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಿದ್ದಾರೆ.)

5. b 1858

6. c ಸುಭಾಷ್ ಚಂದ್ರ ಬೋಸ್ 

7. a  1907  (28 ಸಪ್ಟೆಂಬರ್  1907 ರಂದು  ಬ್ರಿಟಿಷ್ ಭಾರತದ ಪಂಜಾಬ್ ಪ್ರಾಂತ್ಯದ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ)

8. b ಚೌರಿ ಚೌರ ಘಟನೆ 

9. a  1896 ರ ಕಾಂಗ್ರೆಸ್ ಅಧಿವೇಶನ (ವಂದೇ ಮಾತರಂಅನ್ನು  ಮೊದಲ ಬಾರಿಗೆ 1896 ಕಲ್ಕಕತ್ತದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು)

10.  b ಲೋಕಮಾನ್ಯ ಬಾಲ ಗಂಗಾಧರ ತಿಲಕ







ಕರ್ನಾಟಕದ ರಾಜಮನೆತನಗಳು

 

ರಾಜಮನೆತನ : ಕದಂಬರು

ರಾಜಧಾನಿ : ಬನವಾಸಿ

ಸ್ಥಾಪಕರು : ಮಯೂರ ವರ್ಮ

ಅವಧಿ : ಕ್ರಿ.ಶ. 325 - ಕ್ರಿ.ಶ 540

ಪ್ರಮುಖ ಆಡಳಿತಗಾರರು : ಮಯೂರ ವರ್ಮ, ಕಾಕುಸ್ಥವರ್ಮ 

ಸಾಮ್ರಾಜ್ಯದ ವ್ಯಾಪ್ತಿ : ಮಧ್ಯ ಮತ್ತು ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ

 

ರಾಜಮನೆತನ : ಗಂಗರು

ರಾಜಧಾನಿ : ತಲಕಾಡು

ಸ್ಥಾಪಕರು : ಕೊಂಗುಣೀವರ್ಮ

ಅವಧಿ : ಕ್ರಿ.ಶ 325 - ಕ್ರಿ.ಶ.999

ಪ್ರಮುಖ ಆಡಳಿತಗಾರರು : ಅವಿನೀತ  ದುರ್ವಿನೀತ, ರಾಚಮಲ್ಲ

ಸಾಮ್ರಾಜ್ಯದ ವ್ಯಾಪ್ತಿ : ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳು

 

ರಾಜಮನೆತನ : ಚಾಲುಕ್ಯರು

ರಾಜಧಾನಿ : ವಾತಾಪಿ (ಬಾದಾಮಿ)

ಸ್ಥಾಪಕರು : ಪುಲಿಕೇಶೀ

ಅವಧಿ : ಕ್ರಿ.ಶ 500 - ಕ್ರಿ.ಶ.757

ಪ್ರಮುಖ ಆಡಳಿತಗಾರರು : ಎರಡನೇ ಪುಲಿಕೇಶೀ, ಎರಡನೇ ವಿಕ್ರಮಾದಿತ್ಯ

ಸಾಮ್ರಾಜ್ಯದ ವ್ಯಾಪ್ತಿ : ಕರ್ನಾಟಕ, ಮಹಾರಾಷ್ಟ್ರದ ಬಹು ಭಾಗ. 

ಮಧ್ಯಪ್ರದೇಶ, ಗುಜರಾತ್ ಮತ್ತು ಒರಿಸ್ಸಾದ ಕೆಲವು ಭಾಗಗಳು

 

ರಾಜಮನೆತನ : ರಾಷ್ಟ್ರಕೂಟರು

ರಾಜಧಾನಿ : ಮಾನ್ಯಖೇಟ (ಮಳಖೇಡ)

ಸ್ಥಾಪಕರು : ದಂತಿದುರ್ಗ

ಅವಧಿ : ಕ್ರಿ.ಶ 757 - ಕ್ರಿ.ಶ.973

ಪ್ರಮುಖ ಆಡಳಿತಗಾರರು : ಧ್ರುವ ಧಾರಾವರ್ಷ, ಮೊದಲನೇ ಕೃಷ್ಣಮುಮ್ಮಡಿ ಗೋವಿಂದ 

ಅಮೋಘವರ್ಷ ನೃಪತುಂಗ, ನಾಲ್ವಡಿ ಇಂದ್ರ, ಮುಮ್ಮಡಿ ಕೃಷ್ಣ,

ಸಾಮ್ರಾಜ್ಯದ ವ್ಯಾಪ್ತಿ : ಸಂಪೂರ್ಣ ಕರ್ನಾಟಕ ಮತ್ತು ಮಹಾರಾಷ್ಟ್ರ.ಮತ್ತು ಆಂಧ್ರಪ್ರದೇಶ,

 ತಮಿಳುನಾಡು ಮಧ್ಯಪ್ರದೇಶದ ಭಾಗಗಳು

 

ರಾಜಮನೆತನಚಾಲುಕ್ಯರು

ರಾಜಧಾನಿ : ಕಲ್ಯಾಣಿ

ಸ್ಥಾಪಕರು : ಎರಡನೆಯ ತೈಲಪ

ಅವಧಿ : ಕ್ರಿ.ಶ 973 - ಕ್ರಿ.ಶ.1198

ಪ್ರಮುಖ ಆಡಳಿತಗಾರರು : ಆರನೆಯ ವಿಕ್ರಮಾದಿತ್ಯ

ಸಾಮ್ರಾಜ್ಯದ ವ್ಯಾಪ್ತಿ : ಸಂಪೂರ್ಣ ಕರ್ನಾಟಕ ಮತ್ತು ಮಹಾರಾಷ್ಟ್ರ ಮತ್ತು

ಆಂಧ್ರಪ್ರದೇಶ ತಮಿಳುನಾಡು , ಮಧ್ಯಪ್ರದೇಶದ ಭಾಗಗಳು

 

ರಾಜಮನೆತನ : ಸೇವುಣರು

ರಾಜಧಾನಿ : ದೇವಗಿರಿ

ಸ್ಥಾಪಕರು : ದೃಢಪ್ರಹಾರ

ಅವಧಿ : ಕ್ರಿ.ಶ 1198 - ಕ್ರಿ.ಶ.1312

ಪ್ರಮುಖ ಆಡಳಿತಗಾರರು : ಇಮ್ಮಡಿ  ಶ್ರೀರಂಗ

ಸಾಮ್ರಾಜ್ಯದ ವ್ಯಾಪ್ತಿ : ಉತ್ತರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ

 

ರಾಜಮನೆತನ :ಹೊಯ್ಸಳರು

ರಾಜಧಾನಿ :ದ್ವಾರಸಮುದ್ರ (ಹಳೇಬೀಡು)

ಸ್ಥಾಪಕರು : ಸಳ

ಅವಧಿ :ಕ್ರಿ.ಶ 1000 - ಕ್ರಿ.ಶ.1346

ಪ್ರಮುಖ ಆಡಳಿತಗಾರರು : ವಿಷ್ಣುವರ್ಧನ, ಇಮ್ಮಡಿ ಬಲ್ಲಾಳ

ಸಾಮ್ರಾಜ್ಯದ ವ್ಯಾಪ್ತಿ : ಕರಾವಳಿ ಮತ್ತು ದಕ್ಷಿಣ ಕರ್ನಾಟಕ,

ಆಂಧ್ರಪ್ರದೇಶ, ತಮಿಳುನಾಡು

 

ರಾಜಮನೆತನ: ವಿಜಯನಗರ ಸಾಮ್ರಾಜ್ಯ

ರಾಜಧಾನಿ :ಹಂಪೆ

ಸ್ಥಾಪಕರು : ಹರಿಹರ  ಬುಕ್ಕರು

ಅವಧಿ :ಕ್ರಿ.ಶ 1336 - ಕ್ರಿ.ಶ.1565

ಪ್ರಮುಖ ಆಡಳಿತಗಾರರು : ಇಮ್ಮಡಿ ದೇವರಾಯ, ಕೃಷ್ಣದೇವರಾಯ

ಸಾಮ್ರಾಜ್ಯದ ವ್ಯಾಪ್ತಿ : ಸಂಪೂರ್ಣ ಕರ್ನಾಟಕ ಮತ್ತು

ಆಂಧ್ರಪ್ರದೇಶ, ತಮಿಳುನಾಡು

ಕೇರಳ

 

ರಾಜಮನೆತನ: ಬಹಮನಿ ಸಾಮ್ರಾಜ್ಯ

ರಾಜಧಾನಿ :ಕಲಬುರ್ಗಿ

ಬೀದರ್

ಸ್ಥಾಪಕರು : ಅಲ್ಲಾವುದ್ದೀನ್ ಬಹಮನ್ ಶಾಹ್ 

ಅವಧಿ :ಕ್ರಿ.ಶ 1347 - ಕ್ರಿ.ಶ 1527

ಪ್ರಮುಖ ಆಡಳಿತಗಾರರು : ಒಂದನೆಯ ಮೊಹಮ್ಮದ್ ಶಾಹ್ I

ಸಾಮ್ರಾಜ್ಯದ ವ್ಯಾಪ್ತಿ : ದಕ್ಷಿಣ ಭಾರತದ ಪ್ರದೇಶಗಳು

 

ರಾಜಮನೆತನ : ವಿಜಯಪುರದ ಸುಲ್ತಾನರು

ರಾಜಧಾನಿ :ವಿಜಯಪುರ

ಸ್ಥಾಪಕರು : ಯೂಸುಫ್ ಆದಿಲ್ ಖಾನ್

ಅವಧಿ :ಕ್ರಿ.ಶ 1490 - ಕ್ರಿ.ಶ.1686

ಪ್ರಮುಖ ಆಡಳಿತಗಾರರು : ಯೂಸುಫ್ ಆದಿಲ್ ಖಾನ್, ಇಬ್ರಾಹಿಂ ಆದಿಲ್ ಶಾಹ್ II

ಸಾಮ್ರಾಜ್ಯದ ವ್ಯಾಪ್ತಿ : ಬಿಜಾಪುರದ ಸುತ್ತಲಿನ ಪ್ರದೇಶಗಳು

 

ರಾಜಮನೆತನ : ನಾಯಕರು

ರಾಜಧಾನಿ :ಕೆಳದಿ

ಸ್ಥಾಪಕರು : ಚೌಡಗೌಡ ಮತ್ತು ಭದ್ರಪ್ಪ

ಅವಧಿ :ಕ್ರಿ.ಶ 1500 - ಕ್ರಿ.ಶ.1763

ಪ್ರಮುಖ ಆಡಳಿತಗಾರರು : ಶಿವಪ್ಪ ನಾಯಕ, ರಾಣಿ ಚೆನ್ನಮ್ಮ

ಸಾಮ್ರಾಜ್ಯದ ವ್ಯಾಪ್ತಿ : ಕರಾವಳಿ ಮತ್ತು ಮಧ್ಯ  ಕರ್ನಾಟಕ

 

ರಾಜಮನೆತನ: ಒಡೆಯರ್ ರಾಜವಂಶ

ರಾಜಧಾನಿ :ಮೈಸೂರು 

ಸ್ಥಾಪಕರು : ಯದುರಾಯ ಮತ್ತು  ಕೃಷ್ಣರಾಯ

ಅವಧಿ :ಕ್ರಿ.ಶ 1399 - ಕ್ರಿ.ಶ 1831

ಪ್ರಮುಖ ಆಡಳಿತಗಾರರು : ರಾಜ ಒಡೆಯರ್, ರಣಧೀರ ಕಂಠೀರವ,

ಸಾಮ್ರಾಜ್ಯದ ವ್ಯಾಪ್ತಿ : ಚಿಕ್ಕದೇವರಾಜ ಒಡೆಯರ್, ಮುಮ್ಮಡಿ ಕೃಷ್ಣದೇವರಾಜ ಒಡೆಯರ್

ಹಳೆಯ ಮೈಸೂರಿನ ಪ್ರದೇಶಗಳು