ಇತರರೊಂದಿಗೆ ಹೋಲಿಕೆ ಬೇಡ


  ನಮ್ಮಲ್ಲಿ ಕೆಲವರಿರುತ್ತಾರೆ ಅವರಿಗೆ ಯಾವಾಗಲೂ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದೇ ಕೆಲಸ. ತರಗತಿಯಲ್ಲಿ ಪಕ್ಕ ಕುಳಿತವನಿಗೆ ಒಂದು ಅಂಕ ಜಾಸ್ತಿ ಬಂದಿದ್ದರಿಂದ ಹಿಡಿದು ಪ್ರತಿಯೊಂದಕ್ಕೂ ಚಿಕ್ಕ ಚಿಕ್ಕ ವಿಷಯಕ್ಕೂ ಇತರರೊಂದಿಗೆ ಹೋಲಿಸಿಕೊಂಡು ಒಳಗೊಳಗೇ ಕುಗ್ಗುತ್ತಾರೆ. ಇದು ಕೇವಲ ವಿದ್ಯಾರ್ಥಿ ಜೀವನಕ್ಕೆ ಮಾತ್ರವಲ್ಲ ಮುಂದೆ ಜೀವನವಿಡೀ ಪ್ರತಿಯೊಂದಕ್ಕೂ ಅನ್ವಯಿಸಲು ಪ್ರಾರಂಭವಾಗುತ್ತದೆ. ಅದು ಅವರ ಉದ್ಯೋಗವಿರಲಿ ಅಥವಾ ಸಾಮಾಜಿಕ ಸ್ಥಾನಮಾನವಿರಲಿ ಎಲ್ಲ ಕಡೆ ಈ ಹೊಲಿಕೆ ಮಾಡಿಕೊಳ್ಳುವ ಸ್ವಭಾವದಿಂದ ಅವರು ಸದಾ ಅತೃಪ್ತರಾಗಿ ಇರುವರು. ಹೋಲಿಕೆ ಮಾಡಿಕೊಳ್ಳುವುದರಿಂದ ನಕಾರಾತ್ಮಕ ಮನೋಭಾವ ಮೂಡುತ್ತದೆ. ನಾನು ದಡ್ಡ ನನ್ನಿಂದ ಏನೂ ಸಾಧ್ಯವಿಲ್ಲವೆಂಬ ಮನೋಭಾವ ಕೂಡ ಮೂಡುತ್ತದೆ. ಇದು ಕೀಳರಿಮೆಗೆ ದಾರಿ ಮಾಡಿ ಕೊಡುತ್ತದೆ. ಕೊನೆಗೆ ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನೆಲ್ಲ ಕಳೆದುಕೊಳ್ಳಬೇಕಾಗುತ್ತದೆ. 

ಟೆಡ್ಡಿ ರೋಸ್ವೆಲ್ಟ್ ಎಂಬ ಅಮೆರಿಕದ ಲೇಖಕ 'ಹೋಲಿಕೆ ಎನ್ನುವುದು ಸಂತೋಷದ ಕಳ್ಳತನ' ಎಂದು ಬಣ್ಣಿಸುತ್ತಾರೆ. ಅವರ ಪ್ರಕಾರ ನಮ್ಮನ್ನು ನಾವು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವುದರಿಂದ ನಮಗೇ ನಮ್ಮ ಬಗ್ಗೆ ಅಹಂಕಾರವೋ ಅಥವಾ ಕೀಳರಿಮೆಯೋ ಉಂಟಾಗುತ್ತದೆ. ಈ ಎರಡೂ ಕೂಡ ಒಳ್ಳೆಯದಲ್ಲ ಎನ್ನುತ್ತಾರೆ. 

ಇತರರ  ಜೊತೆ ನಮ್ಮನ್ನು ನಾವು ಹೋಲಿಕೆ ಮಾಡಿಕೊಳ್ಳುವ ಬದಲು, ನಮ್ಮ ನಿನ್ನೆಯನ್ನು ನಮ್ಮ ಇಂದಿನ ಜೊತೆ ಹೋಲಿಸಿಕೊಳ್ಳೋಣ. ನಿನ್ನೆಗಿಂತ ಇಂದು ನಾವು ಎಷ್ಟು ಬದಲಾಗಿದ್ದೇವೆ ಎಷ್ಟು ಸಕಾರಾತ್ಮಕವಾಗಿ ಇದ್ದೇವೆ ಅನ್ನುವುದನ್ನು ಅಳೆದುಕೊಳ್ಳೋಣ. ನಮ್ಮನ್ನು ನಾವು ತಿಳಿದುಕೊಳ್ಳೋಣ.  ಇದರಿಂದ ನಮ್ಮ ಇಂದಿನ ದಿನ ನಿನ್ನೆಗಿಂತ ಉತ್ತಮವಾಗಿರುತ್ತದೆ ಮತ್ತು ನಮ್ಮ ನಾಳೆಗಳು ಇನ್ನೂ ಉತ್ತಮವಾಗಿರುತ್ತವೆ.

ಸಮಯದ ಸದ್ಬಳಕೆ: ಇಲ್ಲಿರುವ ಪ್ರತಿಯೊಬ್ಬರಿಗೂ ಒಂದೊಂದು ವಿಶೇಷವಾದ ಪ್ರತಿಭೆ ಇದ್ದೆ ಇರುತ್ತದೆ. ಒಬ್ಬರು ಆಟದಲ್ಲಿ ಮುಂದೆ ಇದ್ದರೆ ಇನ್ನೊಬ್ಬರು ಪಾಠದಲ್ಲಿ ಮುಂದೆ ಇರುತ್ತಾರೆ.  ಎಲ್ಲರಿಗೂ ಎಲ್ಲ ವಿಷಯಗಳೂ ತಿಳಿದಿರಬೇಕು, ಜಾಣರಾಗಬೇಕು ಎಂಬ ನಿಯಮವಿಲ್ಲ. ಆದರೆ ಸಿಕ್ಕ ಅವಕಾಶವನ್ನು ನೀವು ಹೇಗೆ ಸದುಪಯೋಗ ಮಾಡಿಕೊಳ್ಳುತ್ತೀರಿ ಎಂಬುದು ನಿಮ್ಮ ಕೈಯಲ್ಲೇ ಇದೆ. ಒಬ್ಬ ಗೆಳೆಯನದ್ದು ಓದಿಯಾಯಿತು, ಮತ್ತೊಬ್ಬ ಗೆಳತಿಯದ್ದು ರಿವಿಷನ್ ಕೂಡ ಮುಗಿಯಿತು, ನನ್ನದು ಒಮ್ಮೆಯೂ ಓದಿ ಮುಗಿದಿಲ್ಲ ಎಂದು ಯೋಚಿಸುತ್ತಾ ಕುಳಿತರೆ ಏನೂ ಪ್ರಯೋಜನವಿಲ್ಲ. ಅದರಿಂದ ಸಮಯ ನಷ್ಟವೇ ಹೊರತು ಬೇರೇನೂ ಲಾಭವಿಲ್ಲ. ಆದ್ದರಿಂದ ಇತರರ ಬಗ್ಗೆ ಯೋಚನೆ ಬಿಟ್ಟು ನಿಮ್ಮೊಂದಿಗೆ ನೀವು ಸ್ಪರ್ಧೆಗಿಳಿಯಿರಿ. ಇವತ್ತು ಇಷ್ಟನ್ನು ಓದಿ ಮುಗಿಸುತ್ತೇನೆ, ನಾಳೆ ಅದಕ್ಕಿಂತ ಹೆಚ್ಚು ಓದಬೇಕು ಅಥವಾ ಈ ಪರೀಕ್ಷೆಯಲ್ಲಿ ಇಷ್ಟು ಅಂಕ ಬಂದಿದೆ, ಮುಂದಿನ ಪರೀಕ್ಷೆಯಲ್ಲಿ ಇಷ್ಟು ಅಂಕ ತೆಗೆಯಲೇಬೇಕು ಎಂದು ನಿರ್ಧರಿಸಿ ಕ್ರಮಬದ್ಧವಾಗಿ ಅಧ್ಯಯನ ನಡೆಸಿ. ಹೀಗೆ ಮಾಡಿದಾಗ ನಿಮ್ಮೊಳಗಿನ ಚೈತನ್ಯ ಹೆಚ್ಚುತ್ತದೆ. ಅದೇ ಸಾಧನೆಗೆ ಸ್ಫೂರ್ತಿಯಾಗುತ್ತದೆ. ಗೆಲುವನ್ನು ತಂದುಕೊಡುತ್ತದೆ. 

ಹೀಗೆ ಮಾಡಿ:

  • ಧನಾತ್ಮಕವಾಗಿ ಯೋಚಿಸಿ. 
  • ಬೇರೆಯವರ ಬಗ್ಗೆ ಯೋಚಿಸುವುದನ್ನು ಬಿಟ್ಟು ಇರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. 
  • ಸೋಲಿನಿಂದ ಕುಗ್ಗಬೇಡಿ, ಪಾಠ ಕಲಿತು ಮುಂದಡಿಯಿಡಿ. ಅದೇ ಗೆಲುವಿಗೆ ಮುನ್ನಡೆಯಾಗುತ್ತದೆ.



No comments:

Post a Comment