ಅದೃಷ್ಟ ಮತ್ತು ಪರಿಶ್ರಮ

 


ಬೇರೊಬ್ಬರ ಅದೃಷ್ಟವನ್ನು ತನ್ನ ಪರಿಸ್ಥಿತಿಗೆ ಹೋಲಿಸುವುದು ಮಾನವನ ಸಹಜ ಗುಣವಾಗಿದೆ. ತನ್ನಲ್ಲಿರುವ ಒಳ್ಳೆಯ ಸಾಧ್ಯತೆಗಳನ್ನು ಅವಗಣಿಸಿ ಬೇರೊಬ್ಬರ ಬಗ್ಗೆ ಯೋಚನೆ ಮಾಡುವುದು ನಮ್ಮಲ್ಲಿರುವ ಒಂದು ಅವಗುಣವೇ ಸರಿ. ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಗಾದೆಯಂತೆ ಬೇರೊಬ್ಬರಲ್ಲಿರುವ ಅನುಕೂಲಗಳೇ ನಮಗೆ ಕಾಣುತ್ತವೆ.  ಅದೂ ನಾವು ಕಷ್ಟದಲ್ಲಿದ್ದಾಗ ಹೀಗಾಗುವುದು ಹೆಚ್ಚು. ಅದೃಷ್ಟ ನಮ್ಮ ಕಡೆ ಇಲ್ಲ ಎಂದು ಎಷ್ಟೋ ಜನ ಕೊರಗುತ್ತಾ ತಮ್ಮ ಅಮೂಲ್ಯವಾದ ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಅದೇ ಅವರು ತಮಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಬೇರೆಯವರಂತೆ ತಾವೂ ಕೂಡ ಒಳ್ಳೆಯ ಜೀವನ ನಡೆಸಬಹುದು. ಇಲ್ಲಿ ಅದೃಷ್ಟವೆಂಬುದು ಏನೂ ಇರುವುದಿಲ್ಲ. ಅವರವರ ಪರಿಶ್ರಮದ ಮೇಲೆ ಅವಲಂಬಿತವಾಗಿರುತ್ತದೆ.

ನಾವು ಪ್ರಸ್ತುತ ನೋಡುತ್ತಿರುವ ಎಷ್ಟೋ ಜನಪ್ರಿಯ ವ್ಯಕ್ತಿಗಳು ಶೂನ್ಯದಿಂದಲೇ ತಮ್ಮ ಜೀವನದ ಪಯಣವನ್ನು ಆರಂಭಿಸಿದ್ದರು ಎಂಬುದು ಗಮನಾರ್ಹ. ನಮ್ಮ ಕರ್ನಾಟಕದವರೇ ಆದ ಖ್ಯಾತ ಇಂಜಿನಿಯರ್ ವಿಶ್ವೇಶ್ವರಯ್ಯನವರು ಯಾವುದೇ ಅದೃಷ್ಟ ನಂಬಿ ಕೂಡಲಿಲ್ಲ. ಅವರು ಬೀದಿ ದೀಪದಲ್ಲಿ ಓದಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ಅವರ ಪರಿಶ್ರಮ ಅವರ ಕೈಹಿಡಿಯಿತು. ಹಾಗೇ ಖ್ಯಾತ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ  ದಿವಂಗತ ಅಬ್ದುಲ್ ಕಲಾಂ ಅವರು ಕೂಡ ದಿನಪತ್ರಿಕೆ ಹಂಚಿ ಅದರಿಂದ ಬಂದ ಹಣದಿಂದ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಪೋಖ್ರಾನ್ ಅಣು ಪರೀಕ್ಷೆಯಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಇವರೂ ಕೂಡ ಅದೃಷ್ಟವನ್ನು ನಂಬಿ ಕೂಡಲಿಲ್ಲ. ಇನ್ನು ಸಿನಿಮಾರಂಗಕ್ಕೆ ಬರುವುದಾದರೆ ಖ್ಯಾತ ಸಿನಿಮಾ ನಟ ರಜನಿಕಾಂತ್ ಕೂಡ ಒಬ್ಬ ಸಾಧಾರಣ ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. ಇಂದು ಅವರು ನಮ್ಮ ಭಾರತೀಯ ಸಿನಿಮಾರಂಗದ ದಿಗ್ಗಜರೇ ಆಗಿದ್ದಾರೆ. 

ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಕೂಡ ಖ್ಯಾತನಾಮರಾದವರೆಲ್ಲ ಅದೃಷ್ಟ ನಂಬಿ ಕೂತವರಲ್ಲ. ತಮ್ಮ ಬಡತನಕ್ಕೆ ಬೇರೆಯವರನ್ನು ದೂರುತ್ತಾ ಕೂಡಲಿಲ್ಲ. ಬದಲಿಗೆ ತಮ್ಮಲ್ಲಿರುವ ವಿದ್ಯೆ, ಕಲೆ ಇವುಗಳನ್ನು ನಂಬಿ ಮುಂದಡಿ ಇಟ್ಟರು. ಹಾಗೇ ಅವರವರ ರಂಗದಲ್ಲಿ ತಮ್ಮ ಪರಿಶ್ರಮದಿಂದ ಯಶಸ್ಸು  ಗಳಿಸಿದರು. ಅಷ್ಟೇ ಅಲ್ಲದೆ ತಮ್ಮ ಮುಂದಿನ ಪೀಳಿಗೆಗೆ ಮಾದರಿ ಕೂಡ ಆಗಿದ್ದಾರೆ. ಈ ಖ್ಯಾತನಾಮರೆಲ್ಲ ತಮ್ಮ ಬಡತನಕ್ಕೆ ಅದೃಷ್ಟವನ್ನು ಹಳಿದು ಹಾಗೇ ಇರುತ್ತಿದ್ದರೆ ಇಂದಿಗೆ ಯಶಸ್ಸು ಪಡೆಯಲು  ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಪರಿಶ್ರಮವೇ ಎಲ್ಲ ಯಶಸ್ಸಿನ ಮೂಲಮಂತ್ರವಾಗಿದೆ ಎನ್ನಬಹುದು.


-- ಸೀಮಾ ಕಂಚೀಬೈಲು 

No comments:

Post a Comment