ಉಪಾಯ ಬಲ್ಲವನಿಗೆ ಅಪಾಯವಿಲ್ಲ

ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎನ್ನುವುದು ಬುದ್ಧಿವಂತಿಕೆಯ ಮಹತ್ವವನ್ನು ತಿಳಿಸುವ ಗಾದೆಮಾತಾಗಿದೆ.  ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು  ಸಮಸ್ಯೆಗಳು ಅಥವಾ ಅನೇಕ ರೀತಿಯ ಸಂಕಟದ ಪರಿಸ್ಥಿತಿಗಳು ಎದುರಾಗುತ್ತವೆ. ಈ ಗಾದೆಮಾತು,  ಉಪಾಯ ಗೊತ್ತಿದ್ದವನಿಗೆ ಅಪಾಯ ಬರುವುದೇ ಇಲ್ಲ ಎಂದು ಹೇಳುವುದಿಲ್ಲ. ಮನುಷ್ಯನೆಂದ ಮೇಲೆ ಸಮಸ್ಯೆಗಳು, ಅಪಾಯಗಳು ಇದ್ದದ್ದೇ. ಆದರೆ ಅವುಗಳನ್ನು ಉಪಾಯವಾಗಿ ನಿಭಾಯಿಸುವುದನ್ನು ಕಲಿಯಬೇಕು. ಹೀಗೆ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿರ್ವಹಿಸುವುದರಿಂದ ಅವುಗಳಿಂದ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದೆನ್ನುವುದು ನಿಜ.  ಎಷ್ಟೋ ಸಾರಿ ಉಪಾಯ ಮತ್ತು ಮುಂದಾಲೋಚನೆಯಿಂದ ನಡೆದುಕೊಂಡರೆ ಮುಂದೆ ಬರುವ ಅಪಾಯಗಳನ್ನೂ  ತಡೆಗಟ್ಟಬಹುದು. ಶಕ್ತಿಯಿಂದ ಅಥವಾ ಬಲಪ್ರಯೋಗದಿಂದ ಕೂಡ ಆಗದ ಕೆಲಸಗಳನ್ನು ಜಾಣತನದಿಂದ  ಸುಲಭವಾಗಿ ಮಾಡಬಹುದು.  

ಹೀಗೆ ಸಮಸ್ಯೆಗಳು ಎದುರಾದಾಗ ಬುದ್ಧಿವಂತ ವ್ಯಕ್ತಿಗಳು ಅದರಿಂದ ಗಾಬರಿಗೆ ಒಳಗಾಗುವುದಿಲ್ಲ. ಅವರು ಅನಗತ್ಯ ಒತ್ತಡಕ್ಕೆ ಸಿಲುಕಿ ವಿಷಮ ಪರಿಸ್ಥಿತಿಯಿಂದ ಹೊರಬರಲು ಆತುರ ಪಡುವುದಿಲ್ಲ.ಅದರ ಬದಲು ಅವರು ಜಾಣತನದಿಂದ ಹಾಗೂ ಸಮಾಧಾನ ಚಿತ್ತದಿಂದ   ಪರಿಹಾರ  ಮಾರ್ಗವನ್ನು ಕಂಡುಕೊಳ್ಳುತ್ತಾರೆ.  ಮನುಷ್ಯನು ತನ್ನ ಪ್ರತಿಕೂಲ ಪರಿಸ್ಥಿತಿಯಲ್ಲಿ ನಾವು ತಾಳ್ಮೆಯನ್ನು ಕಳೆದುಕೊಳ್ಳದೆ, ಶಾಂತವಾದ ಮನಸ್ಸಿನಿಂದ ಯೋಚಿಸಿದರೆ ಯಾವುದೇ ಸಮಸ್ಯೆ ಇರಲಿ ಬಗೆ ಹರಿಯದೆ ಇರದು.

No comments:

Post a Comment