ಸಂಸ್ಕೃತ ವ್ಯಂಜನ ಸಂಧಿಗಳು

ಸಂಸ್ಕೃತ ವ್ಯಂಜನ ಸಂಧಿಗಳು

1. ಜಶ್ತ್ವ ಸಂಧಿ :-
ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಕೊನೆಯ ಕ, ಚ, ಟ, ತ, ಪ -ಅಕ್ಷರಗಳಿಗೆ ಬದಲಾಗಿ ಗ, ಜ, ಡ, ದ, ಬ ಅಕ್ಷರಗಳು ಅದೇಶವಾಗಿ ಬರುವುದನ್ನು  ಜಶ್ತ್ವ ಸಂಧಿ ಎನ್ನುವರು.
ಉದಾ:-
1) ವಾಕ್ + ಈಶ = ವಾಗೀಶ (ಕ ಬದಲಿಗೆ ಗ ಅಕ್ಷರ ಆದೇಶವಾಗಿದೆ)
2) ಬೃಹತ್ + ಆಕಾಶ = ಬೃಹದಾಕಾಶ (ತ ಬದಲಿಗೆ ದ ಆದೇಶವಾಗಿದೆ)
3) ದಿಕ್ + ಅಂತ = ದಿಗಂತ (ಕ ಬದಲಿಗೆ ಗ ಆದೇಶವಾಗಿದೆ)
4) ಷಟ್ + ಆನನ = ಷಡಾನನ (ಟ ಬದಲಿಗೆ ಡ ಆದೇಶವಾಗಿದೆ)
5) ವಾಕ್ + ದಾನ = ವಾಗ್ದಾನ (ಕ ಬದಲಿಗೆ ಗ ಆದೇಶವಾಗಿದೆ)

2. ಶ್ಚುತ್ವ ಸಂಧಿ :- 
 'ಶ್ಚು' ಎಂದರೆ 'ಶ' -ಕಾರ ಮತ್ತು 'ಚ' ವರ್ಗಾಕ್ಷರಗಳು. ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಕೊನೆಯಲ್ಲಿ 'ಸ' ಅಥವಾ 'ತ' ಅಕ್ಷರಗಳಿರುವಾಗ ಉತ್ತರ ಪದದ ಮೊದಲಿಗೆ 'ಶ' -ಕಾರ ಅಥವಾ 'ಚ' -ವರ್ಗದ ಅಕ್ಷರಗಳು ಬರುತ್ತವೆ. 'ಸ' -ಕಾರವಿದ್ದ ಕಡೆ 'ಶ' -ಕಾರವೂ ಮತ್ತು 'ತ' -ವರ್ಗದ ಅಕ್ಷರಗಳಿದ್ದ ಕಡೆ 'ಚ' -ವರ್ಗದ ಅಕ್ಷರಗಳೂ ಆದೇಶವಾಗಿ ಬರುವುದನ್ನು ಶ್ಚುತ್ವ ಸಂಧಿ ಎನ್ನುತ್ತೇವೆ.

1) ಮನಸ್ + ಶುದ್ಧಿ = ಮನಶ್ಶುದ್ಧಿ
2) ಯಶಸ್ + ಚಾರು = ಯಶಶ್ಚಾರು
3) ಸತ್ + ಚಿತ್ರ = ಸಚ್ಚಿತ್ರ
4) ಸತ್ + ಚಿದಾನಂದ = ಸಚ್ಚಿದಾನಂದ
5) ಯಶಸ್ + ಚಂದ್ರಿಕೆ = ಯಶಶ್ಚಂದ್ರಿಕೆ

3. ಅನುನಾಸಿಕ ಸಂಧಿ :- 
 ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಕೊನೆಯಲ್ಲಿ ಕ್, ಚ್, ಟ್, ತ್, ಪ್ ಅಕ್ಷರಗಳಿರುತ್ತವೆ ಉತ್ತರ ಪದದ ಮೊದಲಿಗೆ ಅನುನಾಸಿಕ ಅಕ್ಷರಗಳಿರುತ್ತವೆ. ವರ್ಗದ ಕ, ಚ, ಟ, ತ, ಪ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳು (ಙ, ಞ, ಣ, ನ, ಮ) ಆದೇಶವಾಗಿ ಬರುವುದನ್ನು ಅನುನಾಸಿಕ ಸಂಧಿ ಎನ್ನುವರು.

1) ವಾಕ್ + ಮಯ = ವಾಙ್ಮಯ( ಕ  ಅಕ್ಷರದ ಬದಲಿಗೆ ಙ ಆದೇಶವಾಗಿದೆ)
2) ಷಟ್ + ಮುಖ = ಷಣ್ಮುಖ (ಟ ಅಕ್ಷರದ ಬದಲಿಗೆ ಣ ಆದೇಶವಾಗಿದೆ)
3) ಸತ್ + ಮಾನ = ಸನ್ಮಾನ (ತ ಅಕ್ಷರದ ಬದಲಿಗೆ ನ ಆದೇಶವಾಗಿದೆ)
4) ಚಿತ್ + ಮಯಿ = ಚಿನ್ಮಯಿ (ತ ಅಕ್ಷರದ ಬದಲಿಗೆ ನ ಆದೇಶವಾಗಿದೆ)

5 comments: