ಶಕ್ತಿಗಿಂತ ಯುಕ್ತಿ ಮೇಲು

 

ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆ ಇಂದಲ್ಲ, ಅಂದಿನ ಕಾಲದಿಂದಲೂ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಬೆಳೆದುಕೊಂದು ಬಂದಿದೆ. ಇವು ಚಿಕ್ಕ ವಾಕ್ಯಗಳಲ್ಲಿ ಹಿರಿದಾದ ಅರ್ಥವನ್ನು ನೀಡುವ ನುಡಿಮುತ್ತುಗಳಾಗಿವೆ. ಅದು ಜೀವನ ಅನುಭವಕ್ಕೆ ಹಿಡಿದ ಕೈಗನ್ನಡಿ. ಆದ್ದರಿಂದ ಗಾದೆಗಳು ಸತ್ಯಕ್ಕೆ ಹತ್ತಿರವಾಗಿವೆ. ಇಂದು ದೇಶ ವಿದೇಶಗಳಲ್ಲಿಯೂ ಸಹ ಹೆಚ್ಚು ಪ್ರಚಲಿತವಾಗಿ ಬೆಳೆದುಕೊಂಡು ಬಂದಿದೆ.

ಶಕ್ತಿಯಿಂದ ಸಾಧಿಸಲು ಸಾಧ್ಯವಾಗದ್ದನ್ನು ಯುಕ್ತಿಯಿಂದ ಸಾಧಿಸುವ ನಿಟ್ಟಿನಲ್ಲಿ ಶಕ್ತಿಗಿಂತ ಯುಕ್ತಿ ಮೇಲು ಎಂಬ ಗಾದೆ ಸೃಷ್ಟಿಯಾಗಿದೆ. ಶಕ್ತಿಯಿಂದ ಎಲ್ಲಾ ಕೆಲಸಗಳನ್ನು ಸಾಧಿಸಲು ಸಾಧ್ಯವಿಲ್ಲ. ಶಕ್ತಿಯಿಂದ ಸಾಧಿಸಲಾಗದ ಕೆಲಸವನ್ನು ಯುಕ್ತಿಯಿಂದ ಸಾಧಿಸಬೇಕು. ಸಂದರ್ಭೋಚಿತ ಉಪಾಯದಿಂದ ಎಂತಹ ಶತ್ರುವನ್ನಾದರೂ ಸೋಲಿಸಬಹುದು. ಅಪಾಯ ಬಂದಾಗ ಉಪಾಯದಿಂದ ಪಾರಾಗಬೇಕು. ಉದಾಹರಣೆಗೆ ಒಂದು ಪುಟ್ಟ ಮೊಲದ ಕತೆ ಇಲ್ಲಿ ಹೇಳಬಹುದು. ಒಂದು ಪುಟ್ಟ ಮೊಲ ಸಿಂಹಕ್ಕೆ ಆಹಾರವಾಗಲು ಹೊರಟಿತ್ತು. ಅದು ಆಟವಾಡಿಕೊಂಡು ಸಮಯಕ್ಕಿಂತ ತಡವಾಗಿ ಸಿಂಹದ ಬಳಿ ಬಂದಿತು. ಹಸಿವಿನಿಂದ ಕ್ರೋಧಗೊಂಡಿದ್ದ ಸಿಂಹ ಮೊಲವನ್ನು ನೋಡಿದ ತಕ್ಷಣ ತಿನ್ನಲು ಹಾರಿತು. ಆಗ ಮೊಲ ತನ್ನನ್ನು ಇನ್ನೊಂದು ಬಲವಾದ ಸಿಂಹ ತಡೆಯಿತೆಂದೂ ಕತೆ ಕಟ್ಟಿ ಹೇಳಿತು. ಅದನ್ನು ನಂಬಿದ ಸಿಂಹ ಮೊಲವನ್ನು ಇನ್ನೊಂದು ಸಿಂಹದ ಬಳಿ ಕರೆದೊಯ್ಯಲು ಹೇಳಿತು. ಆಗ ಮೊಲ ಸಿಂಹವನ್ನು ಬಾವಿಯ ಬಳಿ ಕರೆದುಕೊಂಡು ಬಂದಿತು. ಒಳಗೆ ನೋಡಿ ಘರ್ಜಿಸಿದ ಸಿಂಹಕ್ಕೆ ತನ್ನ ಧ್ವನಿಯೇ ಪ್ರತಿಧ್ವನಿಯಾಗಿ ದೊಡ್ಡ ಧ್ವನಿಯಲ್ಲಿ ಕೇಳಿಸಿತು. ಕ್ರೋಧಗೊಂಡ ಸಿಂಹ ಬಾವಿಗೆ ಹಾರಿ ತನ್ನ ಪ್ರಾಣ ಕಳೆದುಕೊಂಡಿತು. ಹೀಗೆ ಮೊಲ ತನ್ನ ಹಾಗೂ ಕಾಡಿನ ಬೇರೆ ಪ್ರಾಣಿಗಳ ಜೀವ ಕೂಡಾ ಉಳಿಸಿತು.

ಹಾಗೆಯೇ ಬುದ್ಧಿವಂತಿಕೆಯಲ್ಲಿ ಹೆಸರು ಮಾಡಿದ ತೆನಾಲಿ ರಾಮಕೃಷ್ಣನ ಹೆಸರನ್ನು ಕೇಳದವರಾರು? ಬೇರೆ ಪಂಡಿತರನ್ನು ವಾದದಲ್ಲಿ ಗೆದ್ದು ಬಂದ ಒಬ್ಬ ಮಹಾನ್ ಪಂಡಿತನನ್ನು ತಿಲಕಾಷ್ಟ ಮಹಿಷ ಬಂಧನ ಎಂಬ ಗ್ರಂಥವಿದೆ ಎಂದು ನಂಬಿಸಿ ಅವನನ್ನು ಯುಕ್ತಿಯಿಂದ ಸೋಲಿಸಿ ತನ್ನ ರಾಜ್ಯದ ಮರ್ಯಾದೆ ಉಳಿಸಿದ ಕತೆ ಎಲ್ಲರಿಗೂ ತಿಳಿದದ್ದೇ. ಹಾಗೆಯೇ ಬೀರಬಲ್ ಎಂಬ ಚತುರ ಮಂತ್ರಿ ಅಕ್ಬರ್ ಆಸ್ಥಾನದಲ್ಲಿ ದೊಡ್ಡ ಮಟ್ಟದ ಸ್ಥಾನವನ್ನು ಪಡೆದದ್ದು ಅವನ ಬುದ್ಧಿವಂತಿಕೆಯಿಂದಲೇ. ಇಂತಹ ಹಲವಾರು ಪ್ರಸಂಗಗಳು ನಮಗೆ ನಮ್ಮ ಸುತ್ತಲೂ ಕಾಣಸಿಗುತ್ತವೆ.

ಗಾದೆಯು ಚತುರನ ಯುಕ್ತಿಯು ಸಾವಿರಾರು ತೋಳ್ಬಲವನ್ನು ಸೋಲಿಸಬಹುದೆಂದು ಹೇಳಿದೆ. ಹೀಗೆ ಶಕ್ತಿಯಿಂದ ಸಾಧ್ಯವಾಗದ್ದನ್ನು ಯುಕ್ತಿಯಿಂದ ಸಾಧಿಸಬಹುದು ಎಂಬುದನ್ನು ಗಾದೆ ಮಾತು ನಿರೂಪಿಸಿದೆ.

No comments:

Post a Comment