ನುಡಿಗಟ್ಟುಗಳ ಸಂಗ್ರಹ

 ನಮ್ಮ ಹಿಂದಿನ ಪೋಸ್ಟಿನಲ್ಲಿ ದ್ವಿರುಕ್ತಿ, ನುಡಿಗಟ್ಟು ಮುಂತಾದ ಶಬ್ದ ಪ್ರಕಾರಗಳನ್ನು ತಿಳಿದುಕೊಂಡೆವು, ಈ ಸಾರಿ ನುಡಿಗಟ್ಟುಗಳ ಇನ್ನಷ್ಟು ಉದಾಹರಣೆಗಳನ್ನು ನೋಡೋಣ.

ನಿಮಗೆ ಗೊತ್ತಿರುವ ನುಡಿಗಟ್ಟುಗಳನ್ನು ಕಾಮೆಂಟಿನಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಬಹುದು.

  1. ಮೂಗು ತೂರಿಸು - ಬೇರೆಯವರ ವಿಷಯದಲ್ಲಿ ಮಧ್ಯಪ್ರವೇಶಿಸು
  2. ಆಷಾಢಭೂತಿ - ಕಪಟಿ, ನಯವಂಚಕ
  3. ಗಾಳಿ ಬಂದಾಗ ತೂರು - ಅವಕಾಶ ಉಪಯೋಗಿಸಿಕೊಳ್ಳುವುದು   
  4. ದಾರಿ ನೋಡು -  ಕಾಯುವಿಕೆ  
  5. ಬಂಗಾರದ ಪಂಜರ - ಸ್ವಾತಂತ್ರ್ಯ ಇಲ್ಲದಿರುವಿಕೆ  
  6. ಗಾಳಿಗೋಪುರ - ಸುಳ್ಳು ಭರವಸೆ  
  7. ಕಣ್ಣೀರಿನಲ್ಲಿ ಕೈತೊಳೆ - ಕಷ್ಟ ಅನುಭವಿಸು  
  8. ಮಂತ್ರಮುಗ್ಧ - ಆಶ್ಚರ್ಯ ಚಕಿತ  
  9. ಹೊಟ್ಟೆಉರಿ - ಅಸೂಯೆಪಡು  
  10. ಹೊಟ್ಟೆಗೆ ತಣ್ಣೀರು ಬಟ್ಟೆ - ಹಸಿವಿನಿಂದ ಉಪವಾಸವಿರುವುದು  
  11. ಹೊಟ್ಟೆಯ ಮೇಲೆ ಹೊಡೆ - ಪರರ ಕೆಲಸ ಕಿತ್ತುಕೊಳ್ಳುವುದು  
  12. ಮೊಸಳೆ ಕಣ್ಣೀರು - ತೋರಿಕೆಯ ಕಣ್ಣೀರು  
  13. ಗಾಯದ ಮೇಲೆ ಬರೆ - ನೋವಿನ ಜೊತೆ ಮತ್ತೊಂದು ನೋವು  
  14. ಗಾಯದ ಮೇಲೆ ಉಪ್ಪು ಸವರು - ನೋವಿನಲ್ಲಿರುವವರಿಗೆ ಮತ್ತೆ ನೋವು ಕೊಡುವುದು  
  15. ಹಿತ್ತಾಳೆ ಕಿವಿ - ಚಾಡಿಮಾತು ನಂಬುವುದು
  16. ಕೆಸರೆರಚು - ಅಪವಾದ ಮಾಡು  
  17. ಕಿವಿಮಾತು - ಬುದ್ಧಿವಾದ ಹೇಳು
  18. ಮನಸಲ್ಲೇ ಮಂಡಿಗೆ ಸವಿ -ಕಲ್ಪನೆಯಲ್ಲೇ ಸಂತೋಷ ಪಡು  
  19. ಕಾಲುಕೀಳು - ಪಲಾಯನ ಮಾಡು  
  20. ಕನ್ನಡಿಯೊಳಗಿನ ಗಂಟು -ಕೈಯಲ್ಲಿ ಇರದ ಅಥವಾ ಸದ್ಯಕ್ಕೆ ಇಲ್ಲದ ಅವಕಾಶ 
  21. ಕೈಕೊಡು - ಮೋಸ ಮಾಡು  
  22. ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ - ವ್ಯರ್ಥ ಕಾರ್ಯ 
  23. ನೀರಿನಲ್ಲಿ ಹೋಮ ಮಾಡಿದಂತೆ - ವ್ಯರ್ಥ ಕಾರ್ಯ 
  24. ಕೋಣನ ಮುಂದೆ ಕಿನ್ನರಿ ನುಡಿಸಿದಂತೆ - ಪ್ರಯೋಜನವಿಲ್ಲದ ಕೆಲಸ
  25. ದಾರಿದೀಪ - ಮಾರ್ಗದರ್ಶನ ಮಾಡು
  26. ತಲೆಕಾಯು - ರಕ್ಷಿಸು
  27. ಗಾಳಿಗೆ ತೂರು - ನಿರ್ಲಕ್ಷ್ಯಿಸು
  28. ಆನೆಬಲ - ಒತ್ತಾಸೆಯಾಗಿ ನಿಲ್ಲು
  29. ಕೈ ಒಡ್ಡು - ಬೇಡುವುದು
  30. ಕಣ್ಣು ಕೆಂಪಗಾಗು - ಸಿಟ್ಟಾಗು
  31. ಕಾಲಿಗೆ ಬುದ್ಧಿ ಹೇಳು - ಓಡಿ ಹೋಗು
  32. ಮುಖವಾಡ -ನಿಜವಾದ ಅಸ್ತಿತ್ವ ಮುಚ್ಚಿಡು
  33. ಬೆನ್ನುತಟ್ಟು - ಪ್ರೋತ್ಸಾಹಿಸು
  34. ತಲೆದೂಗು - ಮೆಚ್ಚಿಕೊಳ್ಳುವುದು
  35. ಆಕಾಶಕ್ಕೆ ಏಣಿ ಹಾಕು - ಸಿಗದುದಕ್ಕೆ ಆಸೆ ಪಡು
  36. ತಾಳಕ್ಕೆ ತಕ್ಕಂತೆ ಕುಣಿ - ಹೇಳಿದಂತೆ ಕೇಳು
  37. ನೀರ ಮೇಲಿನ ಗುಳ್ಳೆ - ಕ್ಷಣಿಕ
  38. ಕಣ್ ತೆರೆ - ಸತ್ಯ ತಿಳಿ
  39. ಕಡ್ಡಿಯನ್ನು ಗುಡ್ಡ ಮಾಡು - ಸಣ್ಣ ವಿಷಯವನ್ನು ದೊಡ್ಡದು ಮಾಡು 
  40. ವಿಷಕಾರು - ದ್ವೇಷಿಸು
  41. ಮುಖ ನೋಡಿ ಮಣೆ ಹಾಕು - ತಾರತಮ್ಯ ಮಾಡು
  42. ಕೈ ಮೇಲಾಗು - ವಿಜಯ ಸಾಧಿಸು
  43. ತಲೆ ಕೆಳಗಾಗು - ಯೋಜನೆ ಫಲಿಸದಿರುವುದು
  44. ಕಾಮಾಲೆ ಕಣ್ಣು - ಸಂಶಯ ಪಡು
  45. ಹೊಟ್ಟೆಗೆ ಹಾಕಿಕೋ - ಕ್ಷಮಿಸು
  46. ಹುಳಿ ಹಿಂಡು - ವಿಷಯ ಕೆಡಿಸು
  47. ಉರಿಯುವ ಬೆಂಕಿಗೆ ತುಪ್ಪ ಸುರಿ - ಪರಿಸ್ಥಿತಿ ಮತ್ತಷ್ಟು ವಿಷಮಗೊಳಿಸು
  48. ಗಾಯಕ್ಕೆ ಉಪ್ಪು ಸವರು - ನೋವಿನಲ್ಲಿರುವವರಿಗೆ ಮತ್ತಷ್ಟು ನೋವು ಕೊಡು
  49. ಹೊಟ್ಟೆ ತಣ್ಣಗಿರಲಿ - ಸುಖವಾಗಿರು
  50. ಎದೆ ಒಡಿ - ಆಘಾತಗೊಳ್ಳು
  51. ಎದೆಗುಂದು - ಧೈರ್ಯಗೆಡು
  52. ತಲೆ ತಗ್ಗಿಸು - ಅವಮಾನಗೊಳ್ಳು
  53. ಬಣ್ಣಗೆಡು - ಸತ್ಯಅನಾವರಣಗೊಳ್ಳು
  54. ಕಣ್ಣು ತೆರೆಸು - ಬುದ್ಧಿ ಕಲಿ
  55. ಕಾಲು ಕೆರಿದು ಜಗಳ ಮಾಡು - ವಿನಾ ಕಾರಣ ಜಗಳ ಮಾಡು
  56. ಗೋರಿ ಕಟ್ಟು - ವಿಷಯವನ್ನು ಮುಚ್ಚಿಹಾಕು
  57. ಕೈ ಹಾಕು - ಮಧ್ಯಸ್ಥಿಕೆ ವಹಿಸು
  58. ಕುತ್ತಿಗೆ ಕೊಯ್ಯಿ - ನಂಬಿಕೆದ್ರೋಹ
  59. ಬೆನ್ನಿಗೆ ಚೂರಿ ಹಾಕು - ನಂಬಿಕೆ ದ್ರೋಹ
  60. ಕೈ ಬಿಡು - ಮೋಸ ಮಾಡು
  61. ಅಜ್ಜನ ಕಾಲದ್ದು - ಪುರಾತನ
  62. ಅಪ್ಪ ನೆಟ್ಟ ಆಲದ ಮರ - ಹಳೆಯ ಶಾಸ್ತ್ರ ಸಂಪ್ರದಾಯಗಳು
  63. ಬಿಚ್ಚೋಲೆ ಗೌರಮ್ಮ - ನಿರಾಭರಣೆ
  64. ಮೊರೆ ಹೋಗು - ಶರಣಾಗು
  65. ಮುಗಿಲು ಹರಿದು ಬೀಳು - ದುರಂತ ಎದುರಿಸು
  66. ಬಾಯಿ ಮೇಲೆ ಬೆರಳು ಇಡು - ಆಶ್ಚರ್ಯ ಪಡು
  67. ಕಣ್ಣರಳಿಸು - ಅಚ್ಚರಿಪಡು
  68. ಬೆಲೆ ತೆರು - ಪಶ್ಚಾತ್ತಾಪ ಪಡು
  69. ಕಿವಿ ತುಂಬು - ಚಾಡಿ ಹೇಳು
  70. ಪಿಸುಮಾತು - ಮೆಲುದನಿಯ ಮಾತು
  71. ಗಾಳಿಮಾತು - ಸುಳ್ಳುಸುದ್ದಿ ಹರಡು
  72. ಮೊರೆ ಯಿಡು - ಬೇಡಿಕೊಳ್ಳು
  73. ಮುಗಿಬೀಳು - ದಾಳಿ ಮಾಡು
  74. ಸಂಬಂಧ ಹಳಸು - ಮನಸ್ತಾಪ
  75. ಕಡ್ಡಿ ತುಂಡು ಮಾಡು - ನೇರ ದಿಟ್ಟ ನುಡಿ
  76. ಬೆಂಕಿ ಹಚ್ಚು - ಚಾಡಿ ಹೇಳು
  77. ನಾಯಿ ಪಾಡು - ಗತಿ ಇಲ್ಲದಿರುವಿಕೆ
  78. ಮುಖಕ್ಕೆ ಮಂಗಳಾರತಿ - ಬೈಯ್ಯುವುದು 
  79. ಟೋಪಿ ಹಾಕು - ಮೋಸಮಾಡು
  80. ಅಂಗೈಯಲ್ಲಿ ಆಕಾಶ - ಹುಸಿ ನಿರೀಕ್ಷೆ ತೋರಿಸು
  81. ನೀರು ಕುಡಿದಂತೆ - ಸುಲಭವಾಗಿ ಸಾಧಿಸು
  82. ಬಲಗೈ ಬಂಟ - ನೆಚ್ಚಿನ ಕೆಲಸಗಾರ
  83. ತಾಳ ತಪ್ಪು -ಕೆಲಸ ಕೆಡುವುದು
  84. ಸೆರಗಿನ ಕೆಂಡ - ಅಪಾಯವನ್ನು ಜೊತೆಗಿಟ್ಟುಕೊಳ್ಳು
  85. ಹಾವಿಗೆ ಹಾಲೆರೆದಂತೆ - ಅಪಾಯವನ್ನು ಪೋಷಿಸು
  86. ಅನ್ನಕ್ಕೆ ದಾರಿ - ದುಡಿಮೆಗೆ ಮಾರ್ಗ
  87. ಕಣ್ಣಿದ್ದೂ ಕುರುಡರಂತೆ - ತಿಳಿದೂ ನಿರ್ಲಕ್ಷ್ಯ ವಹಿಸು
  88. ಕಾಲಿಗೆ ಚಕ್ರ - ಒಂದು ಕಡೆ ನಿಲ್ಲದಿರುವಿಕೆ
  89. ಬೇಳೆ ಬೇಯಿಸಿಕೊ - ತನ್ನ ಕೆಲಸ ಮಾತ್ರ ನೋಡಿಕೊ
  90. ಬಾಯಿ ಕಟ್ಟು - ಆಹಾರದಲ್ಲಿ ಹಿಡಿತ
  91. ಕಣ್ಣಲ್ಲಿ ಎಣ್ಣೆ - ಏಕಾಗ್ರತೆಯಿಂದ
  92. ಕುರುಡು ಕಾಂಚಾಣ - ಧನದಾಹ
  93. ಮೈ ಮರೆ - ಅಲಕ್ಷ್ಯ
  94. ಕಣ್ಣು ಹತ್ತು - ನಿದ್ದೆ ಮಾಡು
  95. ತೋಳೆರಿಸು - ಜಗಳಕ್ಕೆ ಹೋಗು
  96. ಟೊಂಕ ಕಟ್ಟಿ ನಿಲ್ಲು - ಕೆಲಸಕ್ಕೆ ಸಜ್ಜಾಗು
  97. ಕೈಗೂಡು - ನೆರವೇರು
  98. ಸೊಂಟ ಮುರಿ - ನಿಗ್ರಹಿಸು
  99. ಮೈಮುರಿದು ದುಡಿ - ಕಷ್ಟಪಟ್ಟು ದುಡಿ
  100. ಬೆವರಿಳಿಸು - ಬೈಯ್ಯುವುದು
  101. ಕೈ ಜೋಡಿಸು - ಸಹಕರಿಸು
  102. ಸೆರ ಗೊಡ್ಡು - ಬೇಡಿಕೋ
  103. ಮಾನ ಹರಾಜು ಹಾಕು - ಅವಮಾನ ಮಾಡು
  104. ನೀರು ಕುಡಿಸು - ಬುದ್ಧಿ ಕಲಿಸು
  105. ಏಳು ಕೆರೆ ನೀರು ಕುಡಿ - ಚೆನ್ನಾಗಿ ಪಳಗು
  106. ಕಂಬಿ ಕೀಳು - ಪಲಾಯನ ಮಾಡು
  107. ಕಣ್ಣಿಗೆ ಮಣ್ಣರಚು - ಮೋಸ ಮಾಡು 
  108. ಗತಿ ಕಾಣಿಸು - ಬುದ್ಧಿ ಕಲಿಸು
  109. ಗಗನ ಕುಸುಮ - ಕೈಗೆ ನಿಲುಕದ್ದು
  110. ಕಣ್ಣಳತೆ - ಕೈಗೆ ಸಿಗುವುದು/ಹತ್ತಿರದ 
  111. ಒರೆ ಹಚ್ಚು - ಪರೀಕ್ಷಿಸು
  112. ಕೈಮುರಿದಂತಾಗು - ಬಲಹೀನನಾಗು
  113. ಗಟ್ಟಿಕುಳ - ಶ್ರೀಮಂತ 
  114. ಪಳಗಿದ ಕೈ - ಅನುಭವಿ
  115. ಇಂಗಿ ಹೋಗು - ಒಣಗಿ ಹೋಗು
  116. ತಣ್ಣೀರೆರಚು - ನಿರಾಶೆ ಮಾಡು
  117. ಬೆನ್ನೆಲುಬು - ಆಧಾರ
  118. ತಲೆ ತಿನ್ನು - ಅನವಶ್ಯಕ ಮಾತಾಡು
  119. ತಲೆ ಬಿಸಿ ಮಾಡು - ಸಿಟ್ಟು ಬರಿಸು
  120. ತವಡು ಕುಟ್ಟು - ಅನಾವಶ್ಯಕ ಮಾತು
  121. ಮೊಳಕೆಒಡಿ - ಹೊಸ ವಿಷಯದ ಪ್ರಾರಂಭ
  122. ಅಳಿಲು ಸೇವೆ - ಸಣ್ಣ ಸಹಾಯ
  123. ತಲೆ ಮರೆಸು - ಬಚ್ಚಿಟ್ಟುಕೊಳ್ಳು
  124. ಕಣ್ಣು ತಪ್ಪಿಸು - ಸಿಗದೇ ತಪ್ಪಿಸಿಕೊಳ್ಳು

ದ್ವಿರುಕ್ತಿ, ಜೋಡುನುಡಿ, ಅನುಕರಣಾವ್ಯಯ ಮತ್ತು ನುಡಿಗಟ್ಟುಗಳು

 ದ್ವಿರುಕ್ತಿ 
ದ್ವಿರುಕ್ತಿ  ಪದದ ಶಬ್ದಶಃ ಅರ್ಥ ತಿಳಿದುಕೊಳ್ಳೋಣ. ಇಲ್ಲಿ 'ದ್ವಿ' ಅಂದರೆ 'ಎರಡು', 'ಉಕ್ತಿ' ಎಂದರೆ 'ಮಾತು'.
ಒಂದು ಪದವನ್ನೋ ಅಥವಾ ಒಂದು ವಾಕ್ಯವನ್ನೋ ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಎರಡು  ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ.
ಉದಾಹರಣೆ: ಓಡಿಓಡಿ, ಬಿದ್ದುಬಿದ್ದು , ಮನೆಮನೆ
ದ್ವಿರುಕ್ತಿಯನ್ನು ಸಂತೋಷ, ಅವಸರ, ಸಂಭ್ರಮ, ಕೋಪ, ಅಥವಾ  ಹತಾಶೆಯನ್ನು ವ್ಯಕ್ತಪಡಿಸಲು  ಬಳಸಲಾಗುತ್ತದೆ.  ಉದಾಹರಣೆಗೆ,
ಬೇಗ ಬೇಗ ಬಾ , ಹೊತ್ತಾಯಿಿತು. 
ಬನ್ನಿ ಬನ್ನಿ ! ನಿಮಗೆ ಸ್ವಾಗತ. 
ಅಬ್ಬಬ್ಬಾ! ಎಷ್ಟು ರಮಣೀಯ ದೃಶ್ಯ! 
 ಪ್ರತಿಯೊಂದು ಅಥವಾ ಅತಿ ಹೆಚ್ಚು , ಅತಿ ಕಡಿಮೆ ಎಂದು ಹೇಳಲೂ ಕೂಡ ದ್ವಿರುಕ್ತಿಯನ್ನು ಬಳಸುತ್ತಾರೆ. 
ಉದಾಹರಣೆಗೆ,
ಪುಟ್ಟಪುಟ್ಟ ಮಕ್ಕಳು ಆಟವಾಡುತಿದ್ದವು. 
ಊರೂರು ಅಲೆದರೂ ಅವನಿಗೆ ಕೆಲಸ ಸಿಗಲಿಲ್ಲ.
ಕೆಲವೊಂದು ದ್ವಿರುಕ್ತಿಗಳನ್ನು  ವಿಶೇಷ ರೂಪದಲ್ಲಿ, ಉದಾಹರಣೆಗೆ 'ಮೊದಲು ಮೊದಲು'  ಎಂದು ಹೇಳುವ ಬದಲು, 'ಮೊಟ್ಟಮೊದಲು' ಎಂದು ಹೇಳುತ್ತಾರೆ.
ದ್ವಿರುಕ್ತಿಯ ಇನ್ನಷ್ಟು ಉದಾಹರಣೆಗಳು:
  • ಮತ್ತೆ ಮತ್ತೆ
  • ಈಗೀಗ
  • ದೊಡ್ಡ ದೊಡ್ಡ
  • ಹಿಂದೆ ಹಿಂದೆ
  • ಮುಂದೆ ಮುಂದೆ
  • ಒಳಒಳಗೆ
  • ಬೇಡ ಬೇಡ
  • ಸಣ್ಣ ಸಣ್ಣ
  • ಮನೆ ಮನೆ
  • ಬಟ್ಟಬಯಲು
  • ನಟ್ಟನಡುವೆ
  • ನಿಲ್ಲು ನಿಲ್ಲು
  • ದೂರ ದೂರ
  • ಇರಲಿ ಇರಲಿ
  • ತುತ್ತತುದಿ
  • ಬಿಸಿ ಬಿಸಿ
  • ಅಬ್ಬಬ್ಬಾ
  • ಅಗೋ ಅಗೋ
  • ನಡೆ ನಡೆ
  • ಬೇರೆ ಬೇರೆ
  • ಬಣ್ಣಬಣ್ಣದ 
  • ಹೆಚ್ಹು ಹೆಚ್ಹು
  • ಹೌದು ಹೌದು
  • ಕಟ್ಟಕಡೆ

ಜೋಡು ನುಡಿಗಳು

ಜೋಡುನುಡಿಗಳು ದ್ವಿರುಕ್ತಿಯ ಹಾಗೆಯೇ ಕಾಣುತ್ತವೆ. ಇದರಲ್ಲೂ ಎರಡು ಪದಗಳಿದ್ದು ಅವುಗಳನ್ನು ಜೊತೆಯಾಗಿಯೇ ಉಚ್ಚರಿಸುತ್ತಾರೆ. ಆದರೆ, ಜೋಡುನುಡಿಗಳ ಪೂರ್ವಪದಕ್ಕೆ ಮಾತ್ರ ಅರ್ಥವಿರುತ್ತದೆ, ಉತ್ತರಪದಕ್ಕೆ ಅರ್ಥವಿರುವುದಿಲ್ಲ.

ಉದಾಹರಣೆಗೆ: ಬಟ್ಟೆಬರೆ, ದೇವರು ದಿಂಡರು, ಸಾಲಸೋಲ, ಸುತ್ತಮುತ್ತ, ಕೋಟೆಕೊತ್ತಲು, ಕೂಲಿನಾಲಿ, ಹುಳಹುಪ್ಪಡಿ, ಶಾಲೆಮೂಲೇ, ಹಾಳುಮೂಳು, ಸಂದಿಗೊಂದಿ, ಸೊಪ್ಪುಸದೆ , ಹಣ್ಣು ಹಂಪಲು, ಇತ್ಯಾದಿ.


ಅನುಕರಣಾವ್ಯಯಗಳು 
ಕೆಲವು ಅರ್ಥವಿಲ್ಲದ ಧ್ವನಿವಿಶೇಷಗಳನ್ನು, ಪುನ: ಉಚ್ಚರಣೆ ಮಾಡಿ ಹೇಳುತ್ತೇವೆ. ಇಂತಹ ಧ್ವನಿ ವಿಶೇಷಗಳನ್ನು ಅನುಕರಣಾವ್ಯಯ ಎಂದು ಕರೆಯಲಾಗುತ್ತದೆ. 
ಉದಾಹರಣೆಗೆ : ಪಟಪಟ, ಸರಸರ, ಜುಳುಜುಳು, ದಬದಬ, ಚುರುಚುರು,ಧಗಧಗ, ಗುಳುಗುಳು, ಥರಥರ, ಘಮಘಮ, ಚಟಚಟ, ಗುಡುಗುಡು, ಮಿಣಿಮಿಣಿ  ಇತ್ಯಾದಿ.


ನುಡಿಗಟ್ಟುಗಳು
ನಮ್ಮ ದಿನನಿತ್ಯದ ಮಾತಿನಲ್ಲಿ ನಾವು ಕೆಲವೊಂದು ಪದಪುಂಜಗಳನ್ನು ಬಳಸುತ್ತೇವೆ, ಮಾತಿನ ಸಂದರ್ಭದ ಮೇಲೆ ಅವುಗಳಿಗೆ ಹೊಸ ಅರ್ಥ ಬರುತ್ತದೆ. ಇಂತಹ ಪದಪುಂಜಗಳನ್ನು ನುಡಿಗಟ್ಟುಗಳು ಎನ್ನುತ್ತಾರೆ. 
ಉದಾಹರಣೆಗೆ, ಕೈಕೊಡು ಇದರ ಅರ್ಥ ಕೈಯನ್ನು ಕೊಡುವುದು ಎಂದು ಅಲ್ಲ, ಮೋಸಮಾಡು ಎಂದು ಆಗಿದೆ.
ಇದೆ ರೀತಿ ಮತ್ತಷ್ಟು ಉದಾಹರಣೆಗಳು: 
ಹೊಟ್ಟೆಗೆ ಹಾಕಿಕೋ – ಕ್ಷಮಿಸು 
ಗಾಳಿಸುದ್ದಿ – ಸುಳ್ಳು ಸುದ್ದಿ 
ತಲೆಗೆ ಕಟ್ಟು – ಜವಾಬ್ದಾರಿ ಹೊರಿಸು 
ಕತ್ತಿ  ಮಸೆ – ದ್ವೇಷ ಸಾಧಿಸು 
ಅಟ್ಟಕ್ಕೇರಿಸು – ಹೊಗಳು

ಅಸಾಮಾನ್ಯ ಗಣಿತಜ್ಞನ ನೆನಪಿನಲ್ಲಿ —ರಾಷ್ಟ್ರೀಯ ಗಣಿತ ದಿನ

 



"ಪ್ರತಿ ಧನಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು" 

ಎಸ್. ರಾಮಾನುಜನ್ ಭಾರತ ಕಂಡ ಅದ್ವಿತೀಯ ಗಣಿತಜ್ಞ. ಬದುಕಿದ್ದು ಸ್ವಲ್ಪ ಕಾಲವಾದರೂ ಅವರು ಗಣಿತದ ಬಗ್ಗೆ ನಡೆಸಿದ ಪ್ರಯೋಗಗಳು, ಸಂಶೋಧನೆಗಳು ಜಗದ್ವಿಖ್ಯಾತವಾಗಿವೆ. ಇಂದಿಗೂ ರಾಮಾನುಜನ್ ಅವರನ್ನು ಗಣಿತದ ಸಂಶೋಧನೆಗಳಿಗಾಗಿ ನೆನೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಮಾನುಜನ್ ಅವರು ಜನಿಸಿದ ದಿನ (ಡಿಸೆಂಬರ್ 22) ವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ.

ಶ್ರೀನಿವಾಸ ರಾಮಾನುಜನ್ ತಮಿಳುನಾಡಿನ ಈರೋಡ್ ನಲ್ಲಿ 1887ರಲ್ಲಿ ಜನಿಸಿದರು. ಇವರ ತಂದೆ ಬಟ್ಟೆ ವ್ಯಾಪಾರಿಯ ಬಳಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ. ರಾಮಾನುಜನ್ ಹುಟ್ಟಿದ ನಂತರ ಅವರ ಕುಟುಂಬ ಕುಂಭಕೋಣಂಗೆ ವಲಸೆ ಹೋಯಿತು. ಮನೆಯಲ್ಲಿ ಬಡತನವಿದ್ದರೂ ರಾಮಾನುಜನ್ ವಿದ್ಯಾಭ್ಯಾಸದಲ್ಲಿ ತುಂಬಾ ಮುಂದಿದ್ದರು. ಹತ್ತನೇ ವಯಸ್ಸಿಗೆ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದರು. 

ರಾಮಾನುಜನ್ ಅವರು ಕುಂಭಕೋಣಂ ಟೌನ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ತಾವಾಗಿಯೇ ಗಣಿತದ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಪ್ರತಿಭಾವಂತ ರಾಮಾನುಜನ್ ಅವರಿಗೆ ಸ್ಕಾಲರ್ ಶಿಪ್ ದೊರೆತಿದ್ದರಿಂದ ಕುಂಭಕೋಣಂನ ಗವರ್ನಮೆಂಟ್ ಆರ್ಟ್ಸ್ ಕಾಲೇಜಿಗೆ ಸೇರಿ ವಿದ್ಯಾಭ್ಯಾಸ ಮುಂದುವರೆಸಿದರು. ಆದರೆ ಗಣಿತದ ಮೇಲಿನ ಒಲವಿನಿಂದ ಬೇರೆ ವಿಷಯಗಳಲ್ಲಿ ಅನುತ್ತೀರ್ಣರಾದರು. ಪರಿಣಾಮ ಸ್ಕಾಲರ್ ಶಿಪ್ ಕೈತಪ್ಪಿ ಹೋಯಿತು. 1905ರಲ್ಲಿ ಮದ್ರಾಸಿಗೆ ತೆರಳಿದ ರಾಮಾನುಜನ್ ಪಚೈಯಪ್ಪ ಕಾಲೇಜಿಗೆ ಸೇರಿಕೊಂಡರು. ಅಲ್ಲಿಯೂ ಅದೇ ಕಥೆ ಪುನರಾವರ್ತನೆಯಾಯಿತು. 

ಹಿರಿಯರೊಬ್ಬರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ, ಅದು ಕೇವಲ ಎರಡು ತಿಂಗಳ ಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆ ಎದುರಾಯಿತು. ಈ ನಡುವೆ ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು. ಏತನ್ಮಧ್ಯೆ ಶ್ರೀನಿವಾಸ ರಾಮಾನುಜನ್ ಅವರ ಬೆಂಗಾವಲಾಗಿದ್ದ ಪ್ರೊ. ವಿ.ಪಿ. ಶೇಷು ಅಯ್ಯರ್ ಕಳುಹಿಸಲ್ಪಟ್ಟ ಪ್ರಶ್ನೋತ್ತರಗಳ ರೂಪದಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ನಿಯತಕಾಲಿಕ 1911ರಲ್ಲಿ ಪ್ರಕಟವಾಯಿತು. ಈ ಸಂಪುಟದ ಒಂದು ಸಂಚಿಕೆಯಿಂದ ರಾಮಾನುಜನ್ನರ ಬರ್ನೌಲಿ ಸಂಖ್ಯೆಗಳ ಕೆಲವು ಲಕ್ಷಣಗಳು ಪ್ರಕಟಗೊಂಡಿತು. 

ಪ್ರೊ ಪಿ.ವಿ. ಶೇಷು ಅಯ್ಯರ್ ಅವರು ಟ್ರಿನಿಟಿ ಕಾಲೇಜಿನ ಫೆಲೋ ಆಗಿದ್ದ ಪ್ರೊ. ಜಿ.ಎಚ್. ಹಾರ್ಡಿ ಮತ್ತು ಕೇಂಬ್ರಿಡ್ಜ್ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ರಾಮಾನುಜನ್ ತಮ್ಮ ಗಣಿತೀಯ ಶೋಧನೆಗಳನ್ನು ತಿಳಿಸಬೇಕೆಂದು ಒತ್ತಾಯಿಸಿದರು. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿತು. ತಮ್ಮ ಮೊದಲ ಪತ್ರದಲ್ಲೇ ರಾಮಾನುಜನ್ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು. ಕ್ರಮೇಣ ಶ್ರೀನಿವಾಸನ್ ಕೇಂಬ್ರಿಡ್ಜ್ ಗೆ ಬಂದಿಳಿದರು. 1916ಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದ ರಾಮಾನುಜನ್ 1918ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯರಾದರು. ರಾಮಾನುಜನ್ ಅವರು ನಂಬರ್ ಥಿಯರಿ, ಅವಿಭಾಜ್ಯ ಸಂಖ್ಯೆಗಳು , ಗಣಿತದ ಸೂತ್ರಗಳು ಮತ್ತು ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ ನಡೆಸಿದ್ದರು.

ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿತ್ತು. ರಾಮಾನುಜಂ ಆಸ್ಪತ್ರೆಯಲ್ಲಿ ಅವರ ಕೊನೆಯ ದಿನಗಳಲ್ಲಿದ್ದಾಗ. ಅವರ ಸ್ನೇಹಿತ ಹಾರ್ಡಿ ಅವರನ್ನು ಭೇಟಿ ಮಾಡಿದ. ಮತ್ತು ಅವರು ತೆಗೆದುಕೊಂಡ ಟ್ಯಾಕ್ಸಿ ಸಂಖ್ಯೆಯಲ್ಲಿ 1729 ಸಂಖ್ಯೆ ಇದೆ ಎಂದು ಹೇಳಿದರು. ಆಗ ರಾಮಾನುಜಮ್ ಇದು ತುಂಬಾ ವಿಶಿಷ್ಟವಾದ ಸಂಖ್ಯೆ ಎಂದು ಹೇಳಿದರು. 

1729 = 1x1x1 + 12x12x12

1729 = 9 × 9 × 9 + 10x10x10

ಇದು 2 ಘನಗಳ ಮೊತ್ತವಾದ ಚಿಕ್ಕ ಸಂಖ್ಯೆ.

1729 ಅನ್ನು ರಾಮಾನುಜಮ್ ಮತ್ತು ಹಾರ್ಡಿ ಸಂಖ್ಯೆ ಎಂದೂ ಕರೆಯುತ್ತಾರೆ

ಉತ್ತಮ ವೈದ್ಯಕೀಯ ಸೌಲಭ್ಯ ಗಳ ಹೊರತಾಗಿಯೂ ಅವರು ಏಪ್ರಿಲ್ 26, 1920 ರಂದು ತಮ್ಮ 32 ವರ್ಷಗಳ ಸಣ್ಣ ವಯಸ್ಸಿನಲ್ಲೇ ಇಹ ಲೋಕವನ್ನು ತ್ಯಜಿಸಿದರು. 

ಅದೃಷ್ಟ ಮತ್ತು ಪರಿಶ್ರಮ

 


ಬೇರೊಬ್ಬರ ಅದೃಷ್ಟವನ್ನು ತನ್ನ ಪರಿಸ್ಥಿತಿಗೆ ಹೋಲಿಸುವುದು ಮಾನವನ ಸಹಜ ಗುಣವಾಗಿದೆ. ತನ್ನಲ್ಲಿರುವ ಒಳ್ಳೆಯ ಸಾಧ್ಯತೆಗಳನ್ನು ಅವಗಣಿಸಿ ಬೇರೊಬ್ಬರ ಬಗ್ಗೆ ಯೋಚನೆ ಮಾಡುವುದು ನಮ್ಮಲ್ಲಿರುವ ಒಂದು ಅವಗುಣವೇ ಸರಿ. ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಗಾದೆಯಂತೆ ಬೇರೊಬ್ಬರಲ್ಲಿರುವ ಅನುಕೂಲಗಳೇ ನಮಗೆ ಕಾಣುತ್ತವೆ.  ಅದೂ ನಾವು ಕಷ್ಟದಲ್ಲಿದ್ದಾಗ ಹೀಗಾಗುವುದು ಹೆಚ್ಚು. ಅದೃಷ್ಟ ನಮ್ಮ ಕಡೆ ಇಲ್ಲ ಎಂದು ಎಷ್ಟೋ ಜನ ಕೊರಗುತ್ತಾ ತಮ್ಮ ಅಮೂಲ್ಯವಾದ ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಅದೇ ಅವರು ತಮಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಬೇರೆಯವರಂತೆ ತಾವೂ ಕೂಡ ಒಳ್ಳೆಯ ಜೀವನ ನಡೆಸಬಹುದು. ಇಲ್ಲಿ ಅದೃಷ್ಟವೆಂಬುದು ಏನೂ ಇರುವುದಿಲ್ಲ. ಅವರವರ ಪರಿಶ್ರಮದ ಮೇಲೆ ಅವಲಂಬಿತವಾಗಿರುತ್ತದೆ.

ನಾವು ಪ್ರಸ್ತುತ ನೋಡುತ್ತಿರುವ ಎಷ್ಟೋ ಜನಪ್ರಿಯ ವ್ಯಕ್ತಿಗಳು ಶೂನ್ಯದಿಂದಲೇ ತಮ್ಮ ಜೀವನದ ಪಯಣವನ್ನು ಆರಂಭಿಸಿದ್ದರು ಎಂಬುದು ಗಮನಾರ್ಹ. ನಮ್ಮ ಕರ್ನಾಟಕದವರೇ ಆದ ಖ್ಯಾತ ಇಂಜಿನಿಯರ್ ವಿಶ್ವೇಶ್ವರಯ್ಯನವರು ಯಾವುದೇ ಅದೃಷ್ಟ ನಂಬಿ ಕೂಡಲಿಲ್ಲ. ಅವರು ಬೀದಿ ದೀಪದಲ್ಲಿ ಓದಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ಅವರ ಪರಿಶ್ರಮ ಅವರ ಕೈಹಿಡಿಯಿತು. ಹಾಗೇ ಖ್ಯಾತ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ  ದಿವಂಗತ ಅಬ್ದುಲ್ ಕಲಾಂ ಅವರು ಕೂಡ ದಿನಪತ್ರಿಕೆ ಹಂಚಿ ಅದರಿಂದ ಬಂದ ಹಣದಿಂದ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಪೋಖ್ರಾನ್ ಅಣು ಪರೀಕ್ಷೆಯಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಇವರೂ ಕೂಡ ಅದೃಷ್ಟವನ್ನು ನಂಬಿ ಕೂಡಲಿಲ್ಲ. ಇನ್ನು ಸಿನಿಮಾರಂಗಕ್ಕೆ ಬರುವುದಾದರೆ ಖ್ಯಾತ ಸಿನಿಮಾ ನಟ ರಜನಿಕಾಂತ್ ಕೂಡ ಒಬ್ಬ ಸಾಧಾರಣ ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. ಇಂದು ಅವರು ನಮ್ಮ ಭಾರತೀಯ ಸಿನಿಮಾರಂಗದ ದಿಗ್ಗಜರೇ ಆಗಿದ್ದಾರೆ. 

ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಕೂಡ ಖ್ಯಾತನಾಮರಾದವರೆಲ್ಲ ಅದೃಷ್ಟ ನಂಬಿ ಕೂತವರಲ್ಲ. ತಮ್ಮ ಬಡತನಕ್ಕೆ ಬೇರೆಯವರನ್ನು ದೂರುತ್ತಾ ಕೂಡಲಿಲ್ಲ. ಬದಲಿಗೆ ತಮ್ಮಲ್ಲಿರುವ ವಿದ್ಯೆ, ಕಲೆ ಇವುಗಳನ್ನು ನಂಬಿ ಮುಂದಡಿ ಇಟ್ಟರು. ಹಾಗೇ ಅವರವರ ರಂಗದಲ್ಲಿ ತಮ್ಮ ಪರಿಶ್ರಮದಿಂದ ಯಶಸ್ಸು  ಗಳಿಸಿದರು. ಅಷ್ಟೇ ಅಲ್ಲದೆ ತಮ್ಮ ಮುಂದಿನ ಪೀಳಿಗೆಗೆ ಮಾದರಿ ಕೂಡ ಆಗಿದ್ದಾರೆ. ಈ ಖ್ಯಾತನಾಮರೆಲ್ಲ ತಮ್ಮ ಬಡತನಕ್ಕೆ ಅದೃಷ್ಟವನ್ನು ಹಳಿದು ಹಾಗೇ ಇರುತ್ತಿದ್ದರೆ ಇಂದಿಗೆ ಯಶಸ್ಸು ಪಡೆಯಲು  ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಪರಿಶ್ರಮವೇ ಎಲ್ಲ ಯಶಸ್ಸಿನ ಮೂಲಮಂತ್ರವಾಗಿದೆ ಎನ್ನಬಹುದು.


-- ಸೀಮಾ ಕಂಚೀಬೈಲು