ಜಲ ಮಾಲಿನ್ಯ



Ganga In Varanasi , PC: Sudarshan Desai
ಭೂಮಿಯ ಮೇಲಿನ ಶುಧ್ಧ ನೀರನ್ನು ಮಾನವ ತನ್ನ ದುರಾಸೆ ಫಲವಾಗಿ ಮಾಲಿನ್ಯಗೊಳಿಲುತ್ತಿದ್ದಾನೆ. ಮಾಲಿನ್ಯಕ್ಕೆ ಮುಖ್ಯ ಕಾರಣಗಳೆಂದರೆ, ಕೈಗಾರಿಕಾ ಕೊಳೆ ನದಿ, ಸರೋವರಗಳ ನೀರಿನಲ್ಲಿ ಸೇರಿದಾಗ ಅದರಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅಂಶ ಅಧಿಕವಾಗಿ ನೀರು ಗಡುಸಾಗುತ್ತದೆ. ಇಂಥ ನೀರು ಕುಡಿಯಲು, ಕೈಗಾರಿಕೆಗಳಲ್ಲಿ ಬಳಸಲು ಬರುವುದಿಲ್ಲ. ಕರ್ನಾಟಕದ ಅನೇಕ ಕಾರ್ಖಾನೆಗಳು ಕೊಳೆಯನ್ನು ಸಾಗಿಸಲು ತುಂಗಭದ್ರಾ, ಕಾವೇರಿ ಇತ್ಯಾದಿ ನದಿಗಳನ್ನು ಉಪಯೋಗಿಸುತ್ತವೆ. ದುರ್ಗಾಪುರದ ಕೈಗಾರಿಕಾ ಕೊಳೆ ದಾಮೋದರ ನದಿಯ ನೀರನ್ನು ಮಲಿನಗೊಳಿಸುತ್ತದೆ. ೧೯೬೯ರಲ್ಲಿ ಗಂಗಾ ನದಿಯ ನೀರಿಗೆ ಹರಿದ ತೈಲಾಂಶ ಹೆಚ್ಚಾ ನೀರಿನ ಮೇಲೆ ಎಣ್ಣೆ ಹೊತ್ತಿಕೊಂಡು ಅನೇಕ ದಿನಗಳವರೆಗೆ ಉರಿಯಿತು. ಸಂಸ್ಕರಿಸದ ಯಮುನಾ ನದಿಯ ನೀರು ಕುಡಿದು ದೆಹಲಿಯ ನಾಗರಿಕರು ಕಾಮಾಲೆ ರೋಗದಿಂದ ನರಳಿದರು. ಟನ್ ಗಟ್ಟಲೆ ಮೀನುಗಳು ಸತ್ತು ನೀರಿನ ಮೇಲೆ ತೇಲಿದವು. ಇಂತಹ ಹಲವಾರು ಉದಾಹರಣೆಗಳು ನಮಗೆ ಕಾಣಸಿಗುತ್ತವೆ.

ಜಲಮಾಲಿನ್ಯವನ್ನು ತಡೆಗಟ್ಟುವುದು ಈಗಿನ ಅಗತ್ಯಗಳಲ್ಲಿ ಒಂದಾಗಿದೆ. ವಿಷಯುಕ್ತ ನೀರು ಜಲಮೂಲ ಸೇರದಂತೆ  ಸಂರಕ್ಷಿಸಬೇಕು. ಜಲ ಮೂಲಗಳ ಬಳಿ ಮಲ ಮೂತ್ರ ವಿಸರ್ಜಿಸುವುದು, ದನಕರುಗಳ ಮೈ ತೊಳೆಯುವುದು, ಬಟ್ಟೆ ಮತ್ತು ಪಾತ್ರೆ ಸ್ವಚ್ಛ ಮಾಡುವುದು, ಶೌಚ ಗೃಹಗಳನ್ನು ನಿರ್ಮಿಸುವುದು, ಇವುಗಳಿಂದ ನೀರು ಅಶುದ್ಧವಾಗುತ್ತದೆ. ಆದ್ದರಿಂದ ಇವುಗಳನ್ನು ತಡೆಗಟ್ಟಬೇಕು. ಸಾಮಾನ್ಯವಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ರೋಗಾಣುಗಳ ಮೂಲಸ್ಥಾನವಾಗುತ್ತದೆ. ಇದರಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಬಚ್ಚಲ ನೀರು, ಮೋರಿಯ ನೀರು, ಸುಗಮವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಹೀರುಗುಂಡಿಗಳನ್ನು ನಿರ್ಮಿಸಿ ಕಲುಷಿತ ನೀರು ಭೂಮಿಗೆ ಸೇರುವಂತೆ ಮಾಡಬೇಕು.

ನಮಗೆ ನೀರು ದೊರೆಯುವ ಮೂಲಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಕೆರೆ ಕಟ್ಟೆಗಳಲ್ಲಿನ ನೀರನ್ನು ಕೊಳಕು ಮಾಡಬಾರದು. ಬಾವಿಯನ್ನು ಸುತ್ತಲೂ ಕಟ್ಟೆ ಕಟ್ಟುವುದರ ಮೂಲಕ ರಕ್ಷಿಸಬೇಕು. ಆದಷ್ಟು ಕೊಳವೆ ಬಾವಿಯನ್ನು ತೋಡಿಸಬೇಕು. ನೀರನ್ನು ಶುದ್ಧ ಮಾಡಲು ಅನೇಕ ಮಾರ್ಗಗಳಿವೆ. ಕುದಿಸುವುದು, ಬ್ಲೀಚಿಂಗ್ ಪೌಡರ್ ಸೇರಿಸುವುದು, ಶೋಧಿಸುವುದು ಇತ್ಯಾದಿ ಕೆಲವು ಕ್ರಮಗಳಿಂದ ನೀರು ಶುದ್ಧವಾಗುತ್ತದೆ. ಮನೆಗಳಲ್ಲಿ ನೀರು ತುಂಬಿರುವ ಪಾತ್ರೆಯನ್ನು ಮುಚ್ಚಿರಬೇಕು. ಕುಡಿಯುವ ನೀರನ್ನು ಶುದ್ಧವಾಗಿಡುವುದು ಇಡೀ ಸಮುದಾಯದ ಜವಾಬ್ದಾರಿ.

ಮನೆಯ ಹಿಂದೆ ಮುಂದೆ ಜಾಗವಿದ್ದರೆ ಕೈ ತೋಟ ಮಾಡುವುದುಉತ್ತಮ. ಸೂಕ್ತ ರೀತಿಯಲ್ಲಿ ಗೊಬ್ಬರದ ಗುಂಡಿಗಳನ್ನು ನಿರ್ಮಿಸಿ ಸಗಣಿ ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ಅದರಲ್ಲಿ ಹಾಕಬೇಕು. ಶೌಚಾಲಯಗಳ ಪಾತ್ರ ಅತಿ ಮುಖ್ಯ. ನೈರ್ಮಲ್ಯದಿಂದ ಕೂಡಿದ ಶೌಚಗೃಹಗಳಿಂದ ಅನೇಕ ರೋಗ ರುಜಿನಗಳು ಹರಡುವುದನ್ನು ತಡೆಗಟ್ಟಬಹುದು.


- ಸೀಮಾ ಕಂಚಿಬೈಲು



ಇತರ ಸಂಬಂಧಿತ ಪ್ರಬಂಧಗಳು
ಪರಿಸರ ಮಾಲಿನ್ಯ,
 ವಾಯುಮಾಲಿನ್ಯ

2 comments:

  1. ಚೆನ್ನಾಗಿ ವಿವರಿಸಲಾಗಿದೆ

    ReplyDelete