ವಾಯು ಮಾಲಿನ್ಯ; ಕಾರಣಗಳು, ಪರಿಣಾಮಗಳು ಹಾಗೂ ನಿಯಂತ್ರಣ

ನಮ್ಮ ವಾತಾವರಣದಲ್ಲಿನ ನಮ್ಮ ಉಸಿರಾಟಕ್ಕೆ ಬೇಕಾಗುವಂತಹ ಆಮ್ಲಜನಕ, ಜಲಜನಕ ಹಾಗೂ ಇನ್ನಿತರ ಅನಿಲಗಳು ಕೆಲವು ವಿಷಯುಕ್ತ ಹಾಗೂ ಹಾನಿಕಾರಕ ಅನಿಲದೊಡನೆ ಬೆರೆತು ಮಾಲಿನವಾಗುತ್ತವೆ, ಇದನ್ನೇ ವಾಯು ಮಾಲಿನ್ಯ ಎನ್ನುತ್ತಾರೆ. 

ವಾಯು ಮಾಲಿನ್ಯದ ಕಾರಣಗಳು :-
  •  ಇಂತಹ ಹಾನಿಕಾರಕವಾದ ಕೆಲವು ಅನಿಲಗಳೆಂದರೆ, ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಕ್ಲೋರೋ ಫ್ಲೋರೋ ಕಾರ್ಬನ್, ನೈಟ್ರೋಜನ್ ಆಕ್ಸೈಡ್ ಇತ್ಯಾದಿ.


  •  ಮತ್ತೊಂದು ಅತಿ ಹಾನಿಕಾರಕ ಅಂಶವಾದ ಸೀಸವು ವಾಹನಗಳ ಹೊಗೆಯಿಂದ ವಾತಾವರಣಕ್ಕೆ ಬಿಡುಗಡೆ ಆಗುತ್ತದೆ. ಇದೊಂದು ಬಹು ವಿಷಕಾರಿ ಲೋಹ. ಮನೆಗಳಿಗೆ ಹಚ್ಚುವ ಬಣ್ಣಗಳು, ಸೀಸದ ಬ್ಯಾಟರಿಗಳು, ಕೂದಲಿಗೆ ಹಚ್ಚುವ ಕೆಲವು ಬಣ್ಣಗಳು ಹೀಗೆ ಅನೇಕ ವಸ್ತುಗಳ ಬಳಕೆಯ ಮೂಲಕ ಹೆಚ್ಚಿನ ಅಂಶದಲ್ಲಿ ಪರಿಸರಕ್ಕೆ ಸೇರ್ಪಡೆಯಾಗುತ್ತಿದೆ. 


  •  ಅತಿ ಮುಂದುವರಿದ ದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯವಾಗುತ್ತಿದೆ. ವಾಹನಗಳಿಂದ ಸೀಸದ ಅಂಶವಲ್ಲದೆ ನೈಟ್ರೋಜನ್ ಆಕ್ಸೈಡ್ ಎಂಬ ವಿಷಕಾರಿ ಅನಿಲ ಕೂಡ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ದೊಡ್ಡ ಕಾರ್ಖಾನೆಗಳು ಹಾಗೂ ವಿದ್ಯುತ್ ಉತ್ಪಾದನಾ ಸ್ಥಾವರಗಳಿಂದ ನೈಟ್ರೋಜನ್ ಅಲ್ಲದೆ, ಸಲ್ಫರ್ ಡೈ ಆಕ್ಸೈಡ್ ಕೂಡ ಬಿಡುಗಡೆಯಾಗುತ್ತಿದೆ. ಈ ವಿಷಕಾರಿ ಅನಿಲವು ಕಾಗದ ತಯಾರಿಸುವ ಕಾರ್ಖಾನೆಗಳಲ್ಲಿ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಉರಿಸುವಿಕೆಯಿಂದ ಹಾಗೂ ಲೋಹಗಳನ್ನು ಕರಗಿಸುವ ಕಾರ್ಖಾನೆಗಳಲ್ಲಿ ಹೆಚ್ಚು ಬಿಡುಗಡೆಯಾಗುತ್ತದೆ. 


  • ಅಡುಗೆ ಮಾಡಲು ಉರಿಸುವ ಕಟ್ಟಿಗೆಗಳಿಂದ ಬರುವ ಹೊಗೆಯಿಂದ ಕೂಡ ವಾತಾವರಣ ಮಾಲಿನ್ಯಗೊಳ್ಳುತ್ತಿದೆ. ಹಾಗೆಯೇ ಕೆಲವು ರಾಸಾಯನಿಕ ಸಿಂಪಡನೆಗಳಿಂದ ಕೂಡ ಮಾಲಿನ್ಯ ಹೆಚ್ಚುತ್ತಿದೆ. ಗಿಡಗಳಿಗೆ ಕೀಟನಾಶಕ ಸಿಂಪಡಣೆ ಮಾಡುವುದರಿಂದ ಕೀಟಗಳು ನಾಶವಾಗಬಹುದು ಆದರೆ ನಾವು ಉಸಿರಾಡುವ ಗಾಳಿಯ ಶುದ್ಧತೆ ಕೂಡ ಅದೇ ಪ್ರಮಾಣದಲ್ಲಿ ನಾಶವಾಗುತ್ತಿದೆ.


  ಮೇಲಿನ ಅಂಶಗಳು ಮಾನವ ನಿರ್ಮಿತವಾದ ಮಾಲಿನ್ಯಗಳಾದರೆ ನೈಸರ್ಗಿಕವಾಗಿ ಕೂಡ ಕೆಲವು ಕಾರಣಗಳಿವೆ. ಅವುಗಳೆಂದರೆ, 
  • ಕಾಡ್ಗಿಚ್ಚು
  • ಬಿರುಗಾಳಿ
  • ಜ್ವಾಲಾಮುಖಿಯ ಸ್ಫೋಟದಿಂದ ಬರುವಂತಹ ಹೊಗೆ
  • ಬ್ಯಾಕ್ಟೀರಿಯಾಗಳ ಕೊಳೆಯುವಿಕೆಯಿಂದ ಬಿಡುಗಡೆಯಾಗುವ ಅನಿಲ.

ಮಾಲಿನ್ಯದ ಪರಿಣಾಮಗಳು : - 

  • ವಾಯು ಮಾಲಿನ್ಯದಿಂದ ಹಲವು ಗಂಭೀರ ಕಾಯಿಲೆಗಳು ಬರುತ್ತವೆ. ಅಷ್ಟೇ ಅಲ್ಲದೆ ಭೂಮಿಯ ಮೇಲಿನ ಜೈವಿಕ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.
  • ಕಾರ್ಬನ್ ಡೈ ಆಕ್ಸೈಡ್ ಅನಿಲದ ಪ್ರಮಾಣ ಹೆಚ್ಚಾದಂತೆಲ್ಲ ಹಸಿರು ಮನೆಯ ಪರಿಣಾಮ ಹೆಚ್ಚಾಗುತ್ತದೆ.
  • ಸಲ್ಫರ್ ಮತ್ತು ನೈಟ್ರೋಜನ್ ಆಕ್ಸೈಡ್ ಗಳ ಸಂಯುಕ್ತಗಳು ವಾತಾವರಣದ ನೀರಿನ ಆವಿಯ ಜೊತೆ ಸೇರಿ ಆಮ್ಲ ಮಳೆ ಸುರಿಸುತ್ತವೆ.  ಇದರಿಂದ ವಾಯು ಮಾಲಿನ್ಯವಲ್ಲದೆ ಜಲ ಮಾಲಿನ್ಯ ಕೂಡ ಉಂಟಾಗುತ್ತದೆ.
  • ರೇಫ್ರಿಜೆರೇಟರ್ ನಲ್ಲಿ ಬಳಸುವ ಕ್ಲೋರೋ ಫ್ಲೋರೋ ಕಾರ್ಬನ್ ನಮ್ಮ ಭೂಮಿಯನ್ನು ಅತಿನೇರಳೆ ಕಿರಣದಿಂದ ರಕ್ಷಿಸುತ್ತಿರುವ ಓಜೋನ್ ಪದರಕ್ಕೆ ಹಾನಿ ಮಾಡುತ್ತಿದೆ.
  • ಹಾಗೆಯೇ ವಾಹನಗಳು ಉಗುಳುವ ಹೊಗೆ ಮತ್ತು ಕಟ್ಟಿಗೆ ಒಲೆಯಿಂದ ಬರುವಂತಹ ಹೊಗೆ ಶ್ವಾಸಕೋಶದ ದೀರ್ಘಕಾಲಿನ ಕಾಯಿಲೆಗಳನ್ನು ತರುತ್ತವೆ.
  • ಅತಿ ಗಂಭೀರ ಕಾಯಿಲೆಗಳಾದ ಕ್ಯಾನ್ಸರ್, ಮೆದುಳು ಹಾಗೂ ನರ ಸಂಬಂಧಿ ಕಾಯಿಲೆಗಳು ಹಾಗೂ ಹಲವಾರು ಜನ್ಮಜಾತ ಕಾಯಿಲೆಗಳಿಗೆ ವಾಯು ಮಾಲಿನ್ಯ ಕಾರಣವಾಗುತ್ತಿದೆ. 

ಮಾಲಿನ್ಯದ ನಿಯಂತ್ರಣದ ಬಗೆ :-
  • ಮನೆಗಳಲ್ಲಿ ಅಡುಗೆ ಮಾಡಲು ಕಟ್ಟಿಗೆಯ ಒಲೆಗಳ ಬದಲು ಹೊಗೆ ಬಾರದಂತಹ ಜೈವಿಕ ಅಡುಗೆ ಅನಿಲದ ಬಳಕೆ.
  • ಹೊರಗೆ ಹೋಗುವಾಗ ಖಾಸಗಿ ವಾಹನದ ಬದಲು ಸಾರ್ವಜನಿಕ ವಾಹನಗಳಿಗೆ ಹೆಚ್ಚು ಒತ್ತು ಕೊಡುವುದು.
  • ಸೀಸ ರಹಿತ ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ
  • ಕ್ಲೋರೋ ಫ್ಲೋರೋ ಕಾರ್ಬನ್ ಉಪಯೋಗಿ ವಸ್ತುಗಳ ನಿರ್ಬಂಧ.
  • ಮಾಲಿನ್ಯ ನಿಯಂತ್ರಣ ಕಾಯ್ದೆ, 1986ರ ಪ್ರಕಾರ ವಾಹನಗಳ ಹೊಗೆ ಉಗುಳಿವಿಕೆಯನ್ನು ಕಾಲಾನುಸಾರ ಪರಿಶೀಲನೆಗೆ ಒಳಪಡಿಸುವುದು ಹಾಗೂ ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು.
  • ಅತಿ ಮುಖ್ಯವಾದ ಅಂಶವೆಂದರೆ ನಮ್ಮ ಸುತ್ತಮುತ್ತಲಿನ ಜನಗಳಿಗೆ ಮಾಲಿನ್ಯದ ಬಗ್ಗೆ ಮಾಹಿತಿ ನೀಡಿ ಅವರನ್ನು ಜಾಗೃತರನ್ನಾಗಿಸುವುದು.


ರಚನೆ: ಸೀಮಾ ಕಂಚೀಬೈಲು 

ನಿಮ್ಮ  ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

8 comments:

  1. ತುಂಬು ಹೃದಯದ ಅಭಿನಂದನೆಗಳು

    ReplyDelete
  2. ಮೇಲಿನ ಲೇಖನವನ್ನು ಓದುವ ಮೂಲಕ ನನಗೆ ತುಂಬಾ ಸಂತೋಷವಾಗಿದೆ.

    ReplyDelete
  3. ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು

    ReplyDelete
  4. Thank you so much for your help because it is not found in web it is so helpful

    ReplyDelete
  5. Super and thank you 😍

    ReplyDelete