ಹೇಮಂತ ಋತು

ಮೊದಲೆಲ್ಲಾ ದಸರೆಯ ಹಬ್ಬ ಪ್ರಾರಂಭವಾಗುವ ಹತ್ತು ಹದಿನೈದು ದಿನಗಳ ಮುಂಚೆಯೇ ಚಳಿಯ ಆಗಮನವಾಗುತಿತ್ತು. ಜಾಗತೀಕ ತಾಪಮಾನದಲ್ಲಿ ಏರಿಕೆಯ ಪ್ರಭಾವದಿಂದ ಈ ನಡುವೆ  ಚಳಿಗಾಲವು ಸ್ವಲ್ಪ ತಡವಾಗಿ ಅಂದರೆ ನವಂಬರ್ ವರೆಗೆ ಪ್ರಾರಂಭವಾಗುವುದು .  ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಈ ನಾಲ್ಕು ಮಾಸಗಳು ಚಳಿಗಾಲದ ಅವಧಿಯೇ. ಚಳಿಗಾಲ ಹೆಚ್ಚುತ್ತಿದ್ದಂತೆ ಉದ್ದು, ಹಾಗೂ ಬಟಾಣಿ ಗಿಡಗಳಲ್ಲಿ ಕೆಂಪು-ಹಳದಿ ಹೂವುಗಳು ಅರಳ ತೊಡಗುತ್ತವೆ. ಅಗಸೆಯ ಮರಗಳಲ್ಲಿ ನೀಲಿಯ ಹೂವುಗಳು ನಳನಳಿಸುತ್ತವೆ. ಕಬ್ಬಿನ ತೋಟಗಳು ಆಳೆತ್ತರದ ಕಬ್ಬಿನ ಜಲ್ಲೆಗಳಿಂದ ತುಂಬಿ ಹೋಗುತ್ತವೆ. ಅಂದರೆ ಚಳಿಗಾಲ ಜನರಿಗೆ ಚಳಿಯ ನಡುಕವನ್ನು ಕಂಡರೂ, ಪ್ರಕೃತಿಯ ಸೊಬಗಿಗೆ ಬಾಧಕ ಎನಿಸುವುದಿಲ್ಲ.

ಇಷ್ಟೆಲ್ಲಾ ಲಕ್ಷಣ ಹೊಂದಿದ ಹೇಮಂತ ಋತುವಿನ ಪ್ರಾರಂಭವಾಗುತ್ತಿದ್ದಂತೆಯೇ, ಮನೆಯ ಮಾಳಿಗೆಯ ಮೇಲೆ ತೆರೆದ ಗಾಳಿಗೆ ಮಲಗುತ್ತಿದ್ದವರು ಮನೆಯೊಳಗಿನ ಕೋಣೆಯೊಳಗೆ ಮಲಗಲು ತವಕಿಸುತ್ತಾರೆ. ಪೆಟ್ಟಿಗೆಗಳಲ್ಲಿ ಇಟ್ಟಿದ್ದ ಸ್ವೆಟರ್ ಗಳೆಲ್ಲ ಹೊರಬಂದು ಮೈಯನ್ನು ಬೆಚ್ಚಗಾಗಿಸುತ್ತವೆ. ಹಿರಿಯರು ಶಾಲು ಹೊದೆಯದೆ ಹೊರಗೆಲ್ಲೂ ಹೋಗುವುದಿಲ್ಲ. ಚಳಿಗಾಲದಲ್ಲಿ ಹಗಲ ವೇಳೆ ಕಡಿಮೆ ಕತ್ತಲು ಬೇಗನೆ ಆವರಿಸುತ್ತದೆ.

ಚಳಿಯೂ ಹೆಚ್ಚಾದಾಗ, ಹೊದಿಕೆ ಹೊದ್ದು ಮಲಗಿದ್ದರೂ ಅದರಲ್ಲಿಯೇ ಚಳಿಗಾಳಿಯು ತೂರಿ ಬರುವಂತೆ ಭಾಸವಾಗುತ್ತದೆ. ಆಗ ಜನರು ಇನ್ನೂ ಬೆಚ್ಚಗಿರುವ ಕಂಬಳಿಗಳನ್ನು ಹೊದ್ದು ಮಲಗುವರು. ಚಳಿಯ ಬಾಧೆಯನ್ನು ತಾಳಲಾರದೆ ಕಟಕಟನೆ ಹಲ್ಲುಗಳನ್ನು ಕಡೆಯುತ್ತಿರುತ್ತಾರೆ. ಮುಂಜಾನೆ ಎದ್ದ ಕೂಡಲೇ ಬಿಸಿಬಿಸಿ ಕಾಫಿ ಕುಡಿಯ ಬಯಸುತ್ತಾರೆ. ಚಳಿಗಾಲದಲ್ಲಿ ಹಸಿವು ಕೂಡ ಹೆಚ್ಚಾಗುತ್ತದೆ. ಹಾಗೆಯೇ ಸಂಜೆಯ ಚಳಿಯಲ್ಲಿ ಎಣ್ಣೆಯಲ್ಲಿ ಕರಿದ ಬಿಸಿಬಿಸಿ ಬಜ್ಜಿ, ಬೋಂಡಾ ಇಂಥವುಗಳನ್ನು ತಿನ್ನಲು ಜನರು ಹಪಹಪಿಸುತ್ತಿರುತ್ತಾರೆ. ನಗರಗಳಲ್ಲಿ ಉಣ್ಣೆಯ ಉಡುಪುಗಳನ್ನು ಧರಿಸಿ ಕೆಲಸಕ್ಕೆ ಹೋಗುತ್ತಿದ್ದರೆ, ಹಳ್ಳಿಗಳಲ್ಲಿ ಕೆಲಸ ಮಾಡುವ ಹೊಲಗಳ ಬಳಿಯೇ ಇರುವಂತಹ ಒಣಕಡ್ಡಿಗಳನ್ನು ಗುಡ್ಡೆ ಮಾಡಿ, ಬೆಂಕಿ ಹೊತ್ತಿಸಿ, ಮೈ ಕೈಗಳಿಗೆ ಶಾಖ ಕೊಡುತ್ತಿರುತ್ತಾರೆ.

ಚಳಿಯಲ್ಲಿ ಶೇಂಗಾ ಮತ್ತು  ಬೆಲ್ಲದ ಮಿಠಾಯಿ 
ನಮ್ಮ ದೇಶದಲ್ಲಿ ದೀಪಾವಳಿ ಚಳಿಗಾಲದಲ್ಲಿ ಆಚರಿಸಲ್ಪಡುವ ಸಂಭ್ರಮದ  ಹಬ್ಬವಾಗಿದೆ. ಹಬ್ಬದ ಅಭ್ಯಂಜನ ಚಳಿಗಾಲದಲ್ಲಿ ಒಣಗಿದ ತ್ವಚೆಗೆ ಹಿತಕಾರಿಯಾದರೆ, ಕರಿದ ತಿಂಡಿಗಳು ಮತ್ತು ಸಿಹಿ ತಿನಿಸುಗಳು ದೇಹಕ್ಕೆ ಬೇಕಾದ ಕೊಬ್ಬಿನ ಅಂಶವನ್ನು ಒದಗಿಸುತ್ತವೆ.  ಡಿಸೆಂಬರ್ ನಂತರ ಸುಗ್ಗಿಯೂ ಮುಗಿದು ರೈತರಿಗೆಲ್ಲ ವಿಶ್ರಾಂತಿಯ ಕಾಲವಾಗಿರುತ್ತದೆ ಆದ್ದರಿಂದ ಜಾತ್ರೆ ಹಾಗೂ ರಥೋತ್ಸವಗಳು ಕಳೆಗಟ್ಟುತ್ತವೆ.  ಶಾಲಾಮಕ್ಕಳ ಪ್ರವಾಸಕ್ಕೆ ಕೂಡ ಇದು ಸಕಾಲ. ಸಂಕ್ರನ್ತಿಯೊಂದಿಗ್ಗೆ ಚಳಿ ಇಳಿಮುಖವಾಗತೊಡಗುತ್ತದೆ.

ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಚಳಿಯ ಪ್ರಭಾವ ಹೆಚ್ಚು. ಅಲ್ಲಿ ಮುಂಜಾನೆ ಮತ್ತು ರಾತ್ರಿ  ದಟ್ಟವಾದ ಮಂಜು ಕವಿದಿರುತ್ತದೆ. ಅಂಥಹ ಮರಗಟ್ಟುವ ವಾತಾವರಣದಲ್ಲಿಯೇ ಮಕ್ಕಳು ಶಾಲೆಗೆ ಮತ್ತು  ಜನರು ತಮ್ಮ ತಮ್ಮ ಕೆಲಸಗಳಿಗೆ ದಪ್ಪನೆಯ ಉಣ್ಣೆಯ ವಸ್ತ್ರಗಳನ್ನು ಧರಿಸಿ ಹೊರಡುತ್ತಾರೆ. ರಾತ್ರಿಯ ವೇಳೆ ತುಂಬಾ ಚಳಿ ಇರುವುದರಿಂದ ಕೆಲಸಕಾರ್ಯಗಳನ್ನು ಹಗಲೇ ಮಾಡಿ ಮುಗಿಸಿಕೊಳ್ಳುತ್ತಾರೆ.

ಮುಂಜಾನೆಯ ಮಂಜಿನಲ್ಲಿ ಶಾಲೆಗೆ 
 ಆದರೆ ಎಷ್ಟೇ ಚಳಿ ಇದ್ದರೂ ಆಡುವ ಹುಡುಗರಿಗೆ ಮಾತ್ರ ಇದರ ಪರಿವೆಯೇ ಇರುವುದಿಲ್ಲ. ಎಷ್ಟೇ ಚಳಿಯಿದ್ದರೂ ಗಂಟೆಗಟ್ಟಲೆ ಮೈದಾನದಲ್ಲಿ ಆಡುತ್ತಲೇ ಇರುತ್ತಾರೆ. ಇವರಿಗೆ ದಣಿವೇ ಇರುವುದಿಲ್ಲ. ಚಳಿಗಾಲದಲ್ಲಿ ಬಾದಾಮಿ, ಪಿಸ್ತಾ, ಗೋಡಂಬಿ, ಖರ್ಜೂರ, ಕಡಲೆಕಾಯಿ ತಿನ್ನಲು ಬಲು ರುಚಿ ಹಾಗೂ ಮೈಗೂ ಹಿತಕರ. ಶೀತ ಕಾಲ ವ್ಯಾಸಂಗಕ್ಕೆ ತುಂಬಾ ಉತ್ಸಾಹದಾಯಕ.


No comments:

Post a Comment