![]() |
PC: Kirti Sharma |
ನಮ್ಮ ಭಾರತದಲ್ಲಿ ಒಂದು ವರ್ಷವನ್ನು ಆರು ಋತುಗಳಿಗೆ ವಿಂಗಡಿಸಿದ್ದಾರೆ. ಅವುಗಳೆಂದರೆ: ಹೇಮಂತ, ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರದ್ ಋತುಗಳು. ಈ ಆರು ಋತುಗಳಲ್ಲಿ ವಸಂತ ಋತು ತುಂಬಾ ಹಿತಕಾರಿ ಎನಿಸಿದೆ. ಇದನ್ನು 'ಋತುಗಳ ರಾಜ' ಎಂದೇ ಕರೆಯುತ್ತಾರೆ. ಆದ್ದರಿಂದಲೇ ನಮ್ಮ ಪ್ರಸಿದ್ಧ ಕವಿ ಬಿ.ಎಂ.ಶ್ರೀ.ಯವರು "ವಸಂತ ಬಂದ ಋತುಗಳ ರಾಜ ತಾ ಬಂದ" ಎಂಬ ಕವಿತೆಯಲ್ಲಿ ವಸಂತ ಋತುವಿನ ಸೌಂದರ್ಯವನ್ನು ಬಣ್ಣಿಸಿದ್ದಾರೆ.
ವಸಂತ ಕಾಲದಲ್ಲಿ
ಪ್ರಕೃತಿಯು ಅತ್ಯಂತ ಸುಂದರವಾಗಿ ಕಾಣುತ್ತದೆ. ಎಲ್ಲೆಡೆ ಗಿಡ ಮರಗಳಲ್ಲಿ ಚಿಗುರೆಲೆಗಳು ಪ್ರಕೃತಿ ದೇವಿಗೆ
ಹಸಿರು ಸೀರೆಯನ್ನು ಉಡಿಸಿದಂತೆ ಕಾಣುತ್ತದೆ. ವಿವಿಧ ವರ್ಣದ ಎಲೆಗಳ ಮರೆಯಲ್ಲಿ ನಗುವ ಹೂಗಳು ನೇತ್ರಾನಂದಕರವಾಗಿ
ಕಾಣುತ್ತವೆ. ಮಾಮರಗಳಿಂದ ಹರಡುವಂತಹ ಸುವಾಸನೆಯ ಎಲ್ಲರನ್ನೂ ಸೆಳೆಯುತ್ತದೆ. ಮರದ ಟೊಂಗೆಗಳು ಪತ್ರ-ಪುಷ್ಪಗಳೊಂದಿಗೆ
ತಲೆದೂಗುತ್ತಾ ಆನಂದವನ್ನು ಹಂಚುತ್ತವೆ. ಟೊಂಗೆಗಳ ಮೇಲೆ ಕೋಗಿಲೆಗಳು ಕುಳಿತು 'ಕುಹು' ರಾಗವನ್ನು ತಮ್ಮದೇ
ಆದ ರೀತಿಯಲ್ಲಿ ಹಾಡುತ್ತಿರುತ್ತವೆ. ಇದನ್ನು ಕೇಳಲು ಹಾಗೂ ನೋಡಲು ನಮ್ಮ ಆನಂದಕ್ಕೆ ಪಾರವೇ ಇಲ್ಲ.
ವಸಂತ ಋತುವಿನಲ್ಲಿ
ಉದಾಸೀನ ಭಾವನೆಗಳೆಲ್ಲವೂ ಮಾಯವಾಗುತ್ತದೆ. ಈ ಋತುವಿನಲ್ಲಿ ಪ್ರಕೃತಿಯಲ್ಲಿ ಸಂಚರಿಸುತ್ತಿದ್ದರೆ ನಾವು
ಮನ್ಮಥ ದೇವರೊಂದಿಗೇ ತಿರುಗಾಡುತ್ತಿದ್ದೇವೆ ಎಂದು ಭಾಸವಾಗುತ್ತದೆ. ಇಂತಹ ಹಾವ-ಭಾವ ಬೇರೆ ಯಾವ ಋತುವಿನಲ್ಲೂ
ಇಲ್ಲ. ಶರೀರದಲ್ಲಿ ಅಗೋಚರ ರೂಪದ ಶಕ್ತಿ ಸಂಚಾರವಾಗಿ ಮನಸ್ಸಿನಲ್ಲಿ ಆನಂದದ ಅಲೆಗಳು ಮೂಡಿಸುತ್ತವೆ.
ವಸಂತ ಸಮಯದಲ್ಲಿ ಪಶು-ಪಕ್ಷಿಗಳು ಅಪೂರ್ವ ಆನಂದದ ಸ್ವಾದವನ್ನು ಸವಿಯುತ್ತವೆ. ಅವುಗಳ ಓಡಾಟ-ಹಾರಾಟದಲ್ಲಿ
ಎಲ್ಲಿಲ್ಲದ ಉತ್ಸಾಹ, ಉಲ್ಲಾಸ. ಪಕ್ಷಿಗಳು ಆನಂದದಲ್ಲಿ ಮುಳುಗಿ, ಸುಮಧುರ ಸಂಗೀತದ ಧ್ವನಿಯನ್ನು ಹೊರಡಿಸುತ್ತವೆ.
ದುಂಬಿಗಳು ಸಹ ಹೂವುಗಳ ಮೇಲೆ ಸುತ್ತುತ್ತಿರುತ್ತವೆ. ಬಣ್ಣ ಬಣ್ಣದ ಭ್ರಮರಗಳು ಹೂವಿಂದ ಹೂವಿಗೆ ಹಾರಾಡುತ್ತ
ಪರಾಗಸ್ಪರ್ಶ ಮಾಡುತ್ತಿರುತ್ತವೆ.
ಇಂತಹ ಮಧುರ ಭಾವವನ್ನು
ತರುವಂತಹ ವಸಂತ ವರ್ಷಪೂರ್ತಿ ಇರಬಾರದೇ ಎಂದು ನಿಮಗೆ ಅನ್ನಿಸದಿರದು.